ಹರಿಜನ ಕೇರಿಗೆ ಸಿಗದ ‘ಆಶ್ರಯ’

ಕರಿಯಪ್ಪ ಅರಳಿಕಟ್ಟಿ ರಾಣೆಬೆನ್ನೂರ

ಸರ್ಕಾರ ನಮಗೆ ನಿಗದಿಪಡಿಸಿದ ಜಾಗದಲ್ಲಿ ಆಶ್ರಯ ಮನೆ ನಿರ್ವಿುಸಿಕೊಡುವಂತೆ ಹತ್ತಾರು ಬಾರಿ ಸಂಬಂಧಪಟ್ಟ ಕಚೇರಿಗೆ ಅಲೆದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ತಾಲೂಕಿನ ಅಂತರವಳ್ಳಿ ಗ್ರಾಮದ ಹರಿಜನ ಕೇರಿಯ ಬಡವರು ಅಳಲು ತೋಡಿಕೊಂಡಿದ್ದಾರೆ.

ಮನೆ ನಿರ್ವಿುಸಿಕೊಡುವಂತೆ ಗ್ರಾಪಂಗೆ ಅಲೆದು ಸುಸ್ತಾಗಿ ಈಗ ತಮಗೆ ನೀಡಬೇಕಾದ ಜಾಗದಲ್ಲಿ ಗುಡಿಸಲು ನಿರ್ವಿುಸಿಕೊಳ್ಳಲು ಮುಂದಾಗಿದ್ದಾರೆ. ಆದರೆ, ಗ್ರಾಮಸ್ಥರು ಹಾಗೂ ಅಧಿಕಾರಿಗಳು ಅದಕ್ಕೂ ಕುತ್ತು ತಂದಿದ್ದಾರೆ.

ಹರಿಜನ ಕೇರಿಯಲ್ಲಿ 70ಕ್ಕೂ ಅಧಿಕ ಮನೆಗಳಿದ್ದು, ಒಂದೊಂದು ಮನೆಯಲ್ಲಿ ಮೂರ್ನಾಲ್ಕು ಕುಟುಂಬಗಳು ವಾಸವಾಗಿವೆ. ಮನೆಯಲ್ಲಿ ಸ್ನಾನ, ಅಡುಗೆ ಮಾಡುವುದನ್ನು ಬಿಟ್ಟರೆ ಬೇರೆ ಯಾವುದಕ್ಕೂ ಸ್ಥಳಾವಕಾಶವಿಲ್ಲ.

ಮೀಸಲಿದೆಯೇ ಜಾಗ?: 1985ರಲ್ಲಿ ಸರ್ಕಾರವು ಗ್ರಾಮದ ಸಮೀಪ 5 ಎಕರೆ ಜಾಗ ಖರೀದಿಸಿ ನಿವೇಶನ ರಹಿತರಿಗೆ ನೀಡಿತ್ತು. ಆಗ ಹರಿಜನರಿಗೆ ನಿವೇಶನ ವಿತರಿಸಿರಲಿಲ್ಲ. ಇದರಿಂದ ಬೇಸತ್ತ ಹರಿಜನ ಕೇರಿಯ ದೇವೇಂದ್ರಪ್ಪ, ಮರಿಯಪ್ಪ ಸೇರಿ 3 ಮೂವರು ರೈತರು ಅಂತರವಳ್ಳಿ ಕ್ರಾಸ್ ಬಳಿಯಿರುವ ತಮ್ಮ ಜಮೀನಿನಲ್ಲಿ ತಲಾ ಒಬ್ಬರು 1 ಎಕರೆಯಂತೆ 3 ಎಕರೆಯನ್ನು ಸರ್ಕಾರಕ್ಕೆ ಬಿಟ್ಟು ಕೊಟ್ಟು, ಹರಿಜನರಿಗೆ ಆಶ್ರಯ ಮನೆ ನಿರ್ವಿುಸಿಕೊಡುವಂತೆ ಮನವಿ ಮಾಡಿದ್ದರು. ಅದರಂತೆ ಸರ್ಕಾರ ಕೂಡ ರೈತರ ಜಮೀನಿನನ್ನು ಭೂ ಸ್ವಾಧೀನಪಡಿಸಿಕೊಂಡಿತ್ತು.

ಇದಾದ ಕೆಲ ವರ್ಷದಲ್ಲಿ ಜಮೀನು ಬಿಟ್ಟು ಕೊಟ್ಟ ಒಬ್ಬ ರೈತ ವಾಪಸ್ ಜಮೀನು ಬೇಕು ಎಂದು ನ್ಯಾಯಾಲಯದ ಮೊರೆ ಹೋಗಿದ್ದರು. ಇದೀಗ ನ್ಯಾಯಾಲಯದಲ್ಲೂ ಜಮೀನು ಸರ್ಕಾರದ ಪರವಾಗಿ ಆಗಿದೆ. ಆದ್ದರಿಂದ ನಮಗೆ ಆಶ್ರಯ ಮನೆ ನಿರ್ವಿುಸಿಕೊಡಿ ಎಂದು ಅಲ್ಲಿನ ಜನರು ಒತ್ತಾಯಿಸುತ್ತಿದ್ದಾರೆ. ಆದರೆ, ಅಧಿಕಾರಿಗಳು ‘ಅದು ನಿಮಗೆ ಮಾತ್ರ ಮೀಸಲಿಲ್ಲ. ಎಲ್ಲ ಸಮುದಾಯದವರಿಗೂ ಇದೆ’ ಎನ್ನುತ್ತಿದ್ದಾರಂತೆ.

‘ಗ್ರಾಮದ ಕೆಲ ಜನರು ಇಲ್ಲಿ ಮನೆ ನಿರ್ವಿುಸಿಕೊಳ್ಳಲು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಕುರಿತು ದಾಖಲೆ ಕೇಳಿದರೆ ಯಾವ ಅಧಿಕಾರಿಗಳೂ ತೋರಿಸುತ್ತಿಲ್ಲ. ಆದ್ದರಿಂದ ನಮಗೆ ಮೀಸಲಿರುವ ಜಾಗದಲ್ಲಿ ಮನೆ ನಿರ್ವಿುಸಿಕೊಳ್ಳುತ್ತಿದ್ದೇವೆ’ ಎಂದು ಹರಿಜನ ಕೇರಿಯ ಮುಖಂಡ ಜಗದೀಶ ಮುದೇನೂರ ‘ವಿಜಯವಾಣಿ’ ಎದುರು ಅಳಲು ತೋಡಿಕೊಂಡಿದ್ದಾರೆ.

ಕೂಲಿಗಾಗಿ ಬಿಟ್ಟುಕೊಡುತ್ತಿಲ್ಲವಂತೆ: ಗ್ರಾಮದ ಎಲ್ಲ ಹರಿಜನರು ಉಳ್ಳವರ ಮನೆ ಹಾಗೂ ಜಮೀನುಗಳಲ್ಲಿ ಕೆಲಸ ಮಾಡಿಕೊಂಡಿದ್ದೇವೆ. ನಮಗೆ ಮೀಸಲಿರುವ ಜಾಗ ಗ್ರಾಮದಿಂದ 2.5 ಕಿ.ಮೀ.ನಷ್ಟು ದೂರವಿದೆ. ನಾವೆಲ್ಲರೂ ಇಲ್ಲಿಗೆ ಬಂದರೆ, ನಿತ್ಯವೂ ನಮ್ಮನ್ನು ಕೆಲಸಕ್ಕೆ ಕರೆದುಕೊಂಡು ಹೋಗುವುದು ಅವರಿಗೆ ಕಷ್ಟವಾಗುತ್ತದೆ. ಜತೆಗೆ ಹರಿಜನರಿಗೆ ಮಾತ್ರವೇಕೆ ಹೊಸ ನಿವೇಶನ ಕೊಡಬೇಕು ಎಂಬ ವಾದವನ್ನು ಕೆಲವರು ಮಾಡುತ್ತಿದ್ದಾರೆ. ಕೆಲ ಉಳ್ಳವರ ತಾಳಕ್ಕೆ ಅಧಿಕಾರಿಗಳು ಕುಣಿಯುತ್ತಿರುವ ಕಾರಣ ನಿವೇಶನ ಹಂಚಿಕೆ ಮಾಡುತ್ತಿಲ್ಲ ಎಂದು ಹರಿಜನ ಮುಖಂಡರು ಆರೋಪಿಸಿದ್ದಾರೆ.

ಗ್ರಾಮದಲ್ಲಿ 70 ಹರಿಜನ ಕುಟುಂಬಗಳಿವೆ. ನಮಗೆ ಮೀಸಲಿಟ್ಟ ಜಾಗವನ್ನು ಬೇರೆಯವರಿಗೆ ನೀಡಲು ಬಿಡುವುದಿಲ್ಲ. ಅಧಿಕಾರಿಗಳು ನಮಗೆ ನಿವೇಶನ ಹಂಚಿಕೆ ಮಾಡಿದರೆ ಸರಿ. ಇಲ್ಲವಾದರೆ ಮುಂದಿನ ದಿನದಲ್ಲಿ ತೀವ್ರ ಸ್ವರೂಪದ ಹೋರಾಟ ಎದುರಿಸಬೇಕಾಗುತ್ತದೆ.

| ಜಗದೀಶ ಮುದೇನೂರ, ಹರಿಜನ ಕೇರಿಯ ಮುಖಂಡ

ಅಂತರವಳ್ಳಿ ಕ್ರಾಸ್ ಬಳಿಯಿರುವ 3 ಎಕರೆ ಜಾಗವು ನಿವೇಶನ ರಹಿತರಿಗೆ ನೀಡಲು ಮೀಸಲಿಟ್ಟ ಜಾಗ. ಸ್ಥಳ ಪರಿಶೀಲಿಸಿದ್ದು, ಗುಡಿಸಲು ನಿರ್ವಿುಸದಂತೆ ಹರಿಜನರಿಗೆ ಸೂಚಿಸಿದ್ದೇನೆ. ಆ ಜಾಗ ಹರಿಜನರಿಗೆ ಮಾತ್ರ ಮೀಸಲಿಲ್ಲ. ಅಲ್ಲಿ 46 ನಿವೇಶನ ನಿರ್ವಿುಸಲು ಸಿಬ್ಬಂದಿಗೆ ಸೂಚಿಸಲಾಗಿದೆ. ಗ್ರಾಮಸಭೆ ಮೂಲಕ ಫಲಾನುಭವಿಗಳ ಆಯ್ಕೆ ಮಾಡುತ್ತೇವೆ.

| ಎಸ್.ಎಂ. ಕಾಂಬಳೆ, ತಾಪಂ ಇಒ ರಾಣೆಬೆನ್ನೂರ

Leave a Reply

Your email address will not be published. Required fields are marked *