ಹರಾಜು ಕಟ್ಟೆ, ಕುಡಿಯುವ ನೀರಿನ ಘಟಕ ಉದ್ಘಾಟನೆ

ಹಾವೇರಿ: ನಗರದ ಜಾನುವಾರು ಮಾರುಕಟ್ಟೆ ಪ್ರಾಂಗಣದಲ್ಲಿ ಸ್ಥಳೀಯ ಎಪಿಎಂಸಿ ವತಿಯಿಂದ ಕೈಗೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಬುಧವಾರ ನೆರವೇರಿಸಿದರು.

ಎಪಿಎಂಸಿಯ ಜಾನುವಾರು ಮಾರುಕಟ್ಟೆ ಪ್ರಾಂಗಣದಲ್ಲಿ ರಾಜ್ಯ ಆಯವ್ಯಯದಲ್ಲಿ ಮಂಜೂರಾದ 2 ಜಾನುವಾರು ಶೆಡ್​ಗಳು, ಆರ್​ಕೆವಿವೈ ಯೋಜನೆಯಡಿ 1 ಮುಚ್ಚು ಹರಾಜುಕಟ್ಟೆ ಮತ್ತು ವಾರ್ಷಿಕ ಕ್ರಿಯಾ ಯೋಜನೆಯಡಿ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಆಹಾರ ಧಾನ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ದ್ವಾರ ಬಾಗಿಲು ಕಾಮಗಾರಿಯನ್ನು ಸಚಿವ ಜಮೀರ್ ಅಹ್ಮದ್ ಉದ್ಘಾಟಿಸಿದರು.

ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕ ನೆಹರು ಓಲೇಕಾರ ಅಧ್ಯಕ್ಷತೆ ವಹಿಸಿದ್ದರು. ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಮಾಜಿ ಸಚಿವರಾದ ಬಸವರಾಜ ಶಿವಣ್ಣನವರ, ರುದ್ರಪ್ಪ ಲಮಾಣಿ, ಮಾಜಿ ಮುಖ್ಯಸಚೇತಕ ಸಲೀಂ ಅಹ್ಮದ್, ಜಿ.ಪಂ. ಅಧ್ಯಕ್ಷ ಎಸ್.ಕೆ. ಕರಿಯಣ್ಣನವರ, ಎಪಿಎಂಸಿ ಅಧ್ಯಕ್ಷ ರಮೇಶ ಚಾವಡಿ, ಉಪಾಧ್ಯಕ್ಷ ಸಣ್ಣಪ್ಪ ಮಾಳಿ, ಸದಸ್ಯರಾದ ಮಲ್ಲಿಕಾರ್ಜುನ ಹಾವೇರಿ, ರುದ್ದೇಶ ಚಿನ್ನಣ್ಣನವರ, ಗೌಡಪ್ಪಗೌಡ ಪಾಟೀಲ, ಕೃಷ್ಣರಡ್ಡಿ ಮೈದೂರ, ಚನ್ನಬಸಪ್ಪ ಕೋಡಿಹಳ್ಳಿ, ಉಮೇಶ ಮಾಗಳ, ಎಪಿಎಂಸಿ ಕಾರ್ಯದರ್ಶಿ ಪರಮೇಶ್ವರಪ್ಪ ನಾಯಕ, ಉಪಕಾರ್ಯದರ್ಶಿ ಮನೋಹರ ರ್ಬಾ ಇತರರಿದ್ದರು.

ನನೆಗುದಿಗೆ ಬಿದ್ದ ಕಾಮಗಾರಿಗಳ ಚಾಲನೆಗೆ ಮನವಿ: ಎಪಿಎಂಸಿ ಜಾನುವಾರು ಮಾರುಕಟ್ಟೆಯಲ್ಲಿ 1.82 ಕೋಟಿ ರೂ. ವೆಚ್ಚದಲ್ಲಿ ನಿರ್ವಿುಸಿರುವ ಸೈಲೋ ಘಟಕ ಕಾಮಗಾರಿ ನನೆಗುದಿಗೆ ಬಿದ್ದಿದೆ. ಇದು ರೈತರು ಬೆಳೆದ ಉತ್ಪನ್ನಗಳಿಗೆ ಬೆಲೆ ಕುಸಿತ ಕಂಡಾಗ ಧಾನ್ಯಗಳನ್ನು ಸಂಗ್ರಹಿಸಲು ಅನುಕೂಲವಾಗಲಿ ಎಂಬ ಉದ್ದೇಶದಿಂದ ನಾನು ಅಧ್ಯಕ್ಷನಾಗಿದ್ದ ಅವಧಿಯಲ್ಲಿ ನಿರ್ವಿುಸಿದ್ದೆ. ಆದರೆ, ಕಳೆದೊಂದು ವರ್ಷದಿಂದ ಕಾಮಗಾರಿ ನನೆಗುದಿಗೆ ಬಿದ್ದಿದೆ. ನೀವಾದರೂ ಇದನ್ನು ಸರಿಪಡಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವರೆದರು ಎಪಿಎಂಸಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಾವೇರಿ ವಿನಂತಿಸಿದರು. ಸದಸ್ಯ ರುದ್ರೇಶ ಚಿನ್ನಣ್ಣನವರ, ಎಪಿಎಂಸಿಗಳಿಂದ ರಸ್ತೆ ಅಭಿವೃದ್ಧಿಗೆ ಅನುದಾನ ನೀಡುವುದನ್ನು ಸ್ಥಗಿತಗೊಳಿಸಲಾಗಿದೆ. ದಾವಣಗೆರೆ ಜಿಲ್ಲೆಗೆ ನೀಡಿರುವ ಮಾದರಿಯಲ್ಲಿ ಹಾವೇರಿ ಎಪಿಎಂಸಿಗೂ ಅನುದಾನ ಕೊಡಿಸಿ ಎಂದು ವಿನಂತಿಸಿದರು.