ಹರಹರ ಮಹಾದೇವ..


ನರೇಗಲ್ಲ: ಸಮೀಪದ ಹಾಲಕೆರೆಯ ಶ್ರೀಅನ್ನದಾನೇಶ್ವರ ಸಂಸ್ಥಾನ ಮಠದ 168ನೇ ಮಹಾರಥೋತ್ಸವ ಸಹಸ್ರಾರು ಭಕ್ತರ ಜಯಕಾರದ ಮಧ್ಯೆ ಗುರುವಾರ ಸಂಜೆ ಅದ್ದೂರಿಯಾಗಿ ನೆರವೇರಿತು.

ಹಾಲಕೆರೆಯ ಡಾ. ಅಭಿನವ ಅನ್ನದಾನ ಸ್ವಾಮೀಜಿ ರಥೋತ್ಸವಕ್ಕೆ ಚಾಲನೆ ನೀಡಿದರು. ಲಿಂಗನಾಯಕ ನಹಳ್ಳಿಯ ಚನ್ನವೀರ ಸ್ವಾಮೀಜಿ, ನರಗುಂದ ಪಂಚಗೃಹಗುಡ್ಡದ ಹಿರೇಮಠದ ಸಿದ್ಧಲಿಂಗ ಸ್ವಾಮೀಜಿ, ಹರಿಹರ ವಿರಕ್ತಮಠದ ಗುರುಶಾಂತೇಶ್ವರ ಸ್ವಾಮೀಜಿ, ಯಲಬುರ್ಗಾ ಶ್ರೀಧರ ಮುರಡಿಮಠದ ಬಸವಲಿಂಗ ಸ್ವಾಮೀಜಿ, ವಳಬಳ್ಳಾರಿ ಸುವರ್ಣಗಿರಿ ವಿರಕ್ತಮಠದ ಸಿದ್ಧಲಿಂಗ ಸ್ವಾಮೀಜಿ, ನೇರಡಗಂಬ ಪಶ್ಚಿಮಾದ್ರಿಮಠದ ಪಂಚಮಸಿದ್ಧಲಿಂಗ ಸ್ವಾಮೀಜಿ, ಕೊಟ್ಟೂರು ದೇಶಿಕರು, ನಿಡಗುಂದಿಕೊಪ್ಪ ಶಾಖಾ ಶಿವಯೋಗಮಂದಿರದ ಸಿದ್ಧರಾಮ ದೇವರು ಸೇರಿ ಇತರೆ ಮಠಾಧಿಶರು ಪಾಲ್ಗೊಂಡಿದ್ದರು.

ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ಮಹಾ ಮಂಗಳಾರತಿ, ಮಹಾ ಗಣರಾಧನೆ ಸೇರಿದಂತೆ ಅನೇಕ ಧಾರ್ವಿುಕ ಕಾರ್ಯಕ್ರಮಗಳು ಜರುಗಿದವು. ಅಬ್ಬಿಗೇರಿ, ಜಕ್ಕಲಿ, ಕರಮುಡಿ, ಮಾರನಬಸರಿ, ಬೂದಿಹಾಳ, ತೋಟಗಂಟಿ, ಡ.ಸ. ಹಡಗಲಿ, ಗಜೇಂದ್ರಗಡ, ಕುಷ್ಟಗಿ, ಹನಮಸಾಗರ, ಬಂಡಿಹಾಳ, ತೊಂಡಿಹಾಳ, ಕೋಟಮಚಗಿ, ನಾರಾಯಣಪೂರ, ಯರೇಬೇಲೇರಿ, ಕುರಡಗಿ, ನಿಡಗುಂದಿ, ನಿಡಗುಂದಿಕೊಪ್ಪ, ಹೊಸಳ್ಳಿ, ರೋಣ, ಬಾಗಲಕೋಟಿ, ವಿಜಯಪುರ, ಹೊಸಪೇಟಿ, ಬಳ್ಳಾರಿ ಸೇರಿ ಸುತ್ತಲಿನ ಗ್ರಾಮಗಳ ಸಹಸ್ರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡರು. ಅನ್ನದಾನೇಶ್ವರ ಮಹಾರಾಜ್ ಕೀ ಜೈ, ಹರಹರ ಮಹಾದೇವ ಘೊಷಣೆಯೊಂದಿಗೆ ರಥ ಎಳೆದು ಸಂಭ್ರಮಿಸಿದರು. ಭಜನಾ ತಂಡಗಳು, ಕರಡಿ ಮಜಲು, ಡೊಳ್ಳು ಕುಣಿತ, ರಥೋತ್ಸವಕ್ಕೆ ಮೆರಗು ನೀಡಿದವು.