ಹಬ್ಬಗಳಿಂದ ಸಂಸ್ಕೃತಿ, ಸಂಘಟನೆಗೆ ಶಕ್ತಿ

ಹುಬ್ಬಳ್ಳಿ: ಹಬ್ಬಗಳು ಸಂಸ್ಕೃತಿ ಹಾಗೂ ಸಂಘಟನೆ ವೃದ್ಧಿಗೆ ಸಹಕಾರಿ ಎಂದು ಮೂರುಸಾವಿರ ಮಠದ ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಹೇಳಿದರು. ಬಮ್ಮಾಪುರ ಓಣಿ ಶ್ರೀ ಗುರುಸಿದ್ಧೇಶ್ವರ ಕಲ್ಯಾಣಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ಹುಬ್ಬಳ್ಳಿ ಹಲಗಿ ಹಬ್ಬ -2019ರ ಪೂರ್ವಭಾವಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಸಂಸ್ಕೃತಿ ಮತ್ತು ಜನರನ್ನು ಸಂಘಟಿಸುವ ಉದ್ದೇಶಗಳನ್ನಿಟ್ಟುಕೊಂಡು ಹಬ್ಬಗಳು ಸಮಾಜಕ್ಕೆ ಶಕ್ತಿ ತುಂಬುತ್ತವೆ. ಹೋಳಿ ಹಬ್ಬಕ್ಕೆ ಸಾಂಸ್ಕೃತಿಕ ಹಿನ್ನೆಲೆಯಿದ್ದು, ಸಂಘಟನೆಗೆ ಒತ್ತು ನೀಡಿ ಸಮಾಜ ಬಲಪಡಿಸುತ್ತಿದೆ ಎಂದರು.

ಹುಬ್ಬಳ್ಳಿ ಹಲಗಿ ಹಬ್ಬ ನಾಡಿನಲ್ಲಿ ಹೆಸರುವಾಸಿಯಾಗಿದೆ. ಇಡೀ ಹುಬ್ಬಳ್ಳಿ ಸೇರಿ ಈ ಹಬ್ಬ ಆಚರಿಸುತ್ತದೆ. ಗಂಡು ಮಕ್ಕಳಷ್ಟೇ ಅಲ್ಲ. ಹೆಣ್ಣು ಮಕ್ಕಳೂ ಹೆಚ್ಚಾಗಿ ಪಾಲ್ಗೊಳ್ಳುತ್ತಿರುವುದರಿಂದ ಇದಕ್ಕೆ ಒಳ್ಳೆಯ ಸ್ವರೂಪ ಬಂದಿದೆ. ಕೆಲವೇ ವರ್ಷಗಳಲ್ಲಿ ಹುಬ್ಬಳ್ಳಿ ಹಲಗಿ ಹಬ್ಬ ಇಡೀ ರಾಜ್ಯದ ಗಮನ ಸೆಳೆಯುತ್ತದೆ ಎಂದರು.

ಸಂಘಟಕ ಮಹೇಶ ಟೆಂಗಿನಕಾಯಿ ಮಾತನಾಡಿ, ಪ್ರತಿವರ್ಷ ಹುಬ್ಬಳ್ಳಿ ಹಲಗಿ ಹಬ್ಬದ ಮೆರುಗು ಹೆಚ್ಚುತ್ತಿದೆ. ಈ ಬಾರಿ ಹೆಚ್ಚು ತಂಡಗಳು ಭಾಗವಹಿಸುತ್ತಿವೆ. ಮಾ. 23ರಂದು ಮಧ್ಯಾಹ್ನ 3 ಗಂಟೆಗೆ ಮೂರುಸಾವಿರ ಮಠ ಶಾಲೆ ಆವರಣದಿಂದ ಹಲಗಿ ಹಬ್ಬ ಆರಂಭವಾಗಿ ಎಸ್.ಟಿ. ಭಂಡಾರಿ, ಪದ್ಮಾಚಿತ್ರಮಂದಿರ, ಬಾನಿ ಓಣಿ, ರೈಲ್ವೆ ಸ್ಟೇಶನ್, ಗಣೇಶಪೇಟೆ, ಮರಾಠ ಗಲ್ಲಿ, ಬ್ರಾಡವೇ, ದುರ್ಗದಬೈಲ್, ಶಾಹ ಬಜಾರ್, ಮಂಗಳವಾರ ಪೇಟೆ ಮೂಲಕ ಗಂಗಾಧರನಗರದ ಸಮುದಾಯ ಭವನದಲ್ಲಿ ಸಮಾವೇಶಗೊಂಡು ಕೊನೆಗೊಳ್ಳುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳಬೇಕು ಎಂದರು.

ಹು-ಧಾ ಮಹಾನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಗೇಶ ಕಲಬುರ್ಗಿ ಮಾತನಾಡಿ, ಹುಬ್ಬಳ್ಳಿ ಧಾರವಾಡದ ಭವಿಷ್ಯ ಯುವಕರ ಕೈಯಲ್ಲಿದೆ. ಹಲಗಿ ಹಬ್ಬದಲ್ಲಿ ಪಾಲ್ಗೊಳ್ಳುವವರು ಅಹಿತಕರ ಘಟನೆಗಳಿಗೆ ಆಸ್ಪದ ನೀಡದೇ ಶಾಂತಿಯುತವಾಗಿ ಹಬ್ಬ ಆಚರಿಸಬೇಕು ಎಂದರು.

ಇದೇ ವೇಳೆ ಹುಬ್ಬಳ್ಳಿ ಹಲಗಿ ಹಬ್ಬದ ಟೀಸರ್ ಬಿಡುಗಡೆ ಮಾಡಲಾಯಿತು. ಮಾಜಿ ಮಹಾಪೌರರಾದ ಡಿ.ಕೆ. ಚವ್ಹಾಣ, ರಾಧಾಭಾಯಿ ಸಫಾರೆ, ಬಿಜೆಪಿ ಮುಖಂಡರಾದ ಚಂದ್ರಶೇಖರ ಗೋಕಾಕ್, ದತ್ತಮೂರ್ತಿ ಕುಲಕರ್ಣಿ, ಶಿವು ಮೆಣಸಿನಕಾಯಿ, ಸತೀಶ್ ಶೇಜವಾಡಕರ ಹಾಗೂ ಪ್ರಕಾಶ ಬೆಂಡಿಗೇರಿ, ನಿಂಗಪ್ಪ ಚಕ್ಕಲಿ ವೇದಿಕೆಯಲ್ಲಿದ್ದರು.

ತಪ್ಪು ಮಾಡಿದರೆ ನಿರ್ದಾಕ್ಷಿಣ್ಯ ಕ್ರಮ: ಧಾರವಾಡ: ಹೋಳಿ ಹುಣ್ಣಿಮೆ ಅಂಗವಾಗಿ ನಗರದ ಶಹರ ಪೊಲೀಸ್ ಠಾಣೆ ಸಭಾಂಗಣದಲ್ಲಿ ಭಾನುವಾರ ವಿವಿಧ ಸಮುದಾಯಗಳ ಮುಖಂಡರೊಂದಿಗೆ ಶಾಂತಿ ಸಭೆ ನಡೆಸಲಾಯಿತು. ಸಭೆ ಅಧ್ಯಕ್ಷತೆ ವಹಿಸಿದ್ದ ಪೊಲೀಸ್ ಆಯುಕ್ತ ಎಂ.ಎನ್. ನಾಗರಾಜ ಮಾತನಾಡಿ, ಮಾ. 22ರಂದು ನಡೆಯುವ ಬಣ್ಣದಾಟದಲ್ಲಿ ಯಾರಿಗೂ ಬಲವಂತವಾಗಿ ಬಣ್ಣ ಹಾಕದೆ ಶಾಂತ ರೀತಿಯಲ್ಲಿ ಆಚರಣೆ ಮಾಡಬೇಕು. ನಮಗಿರುವ ಸ್ವಾತಂತ್ರ್ಯ ಸ್ವೇಚ್ಛಾಚಾರವಾಗದಂತೆ ಸಂಭ್ರಮದಿಂದ ಬಣ್ಣದಾಟವಾಡಬೇಕು ಎಂದರು.

ಶಾಂತಿಯುತ ಹೋಳಿ ಹುಣ್ಣಿಮೆಗೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಸೇರಿದಂತೆ ಸಂಬಂಧಪಟ್ಟ ಎಲ್ಲರೂ ಸಹಕಾರ ನೀಡುತ್ತಾರೆ. ಇದೇ ರೀತಿ ಜನರೂ ಸಹ ಯಾವುದೇ ಗಲಾಟೆ ನಡೆಸದೆ ಇಲಾಖೆಗೆ ಸಹಕಾರ ನೀಡಬೇಕು. ಈ ಸಂದರ್ಭದಲ್ಲಿ ತಪ್ಪು ಮಾಡಿದವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಇದಕ್ಕೂ ಪೂರ್ವದಲ್ಲಿ ತಮ್ಮ ಅನಿಸಿಕೆ ಹಂಚಿಕೊಂಡ ಸುಭಾಷ ಶಿಂಧೆ, ಬಣ್ಣದಾಟದಲ್ಲಿ ಸುನೇರಿ, ಡಾಂಬರನಂತಹ ಬಣ್ಣಗಳನ್ನು ಬಳಸದೆ ನೈಸರ್ಗಿಕ ಬಣ್ಣ ಬಳಸಬೇಕು. ಇದಲ್ಲದೆ ಪರೀಕ್ಷೆಗೆ ತೆರಳುವ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಹಬ್ಬವನ್ನು ಆಚರಣೆ ಮಾಡಬೇಕು ಎಂದರು.

ಅರವಿಂದ ಏಗನಗೌಡರ, ಜಯಸಿಂಗ್ ನಾಯಕ, ರಮೇಶ ತಲಗೇರಿ ಮಾತನಾಡಿ, ಈವರೆಗೆ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಈ ಬಾರಿ ಸಹ ಅಂತಹ ಘಟನೆಗಳನ್ನು ನಡೆಯದಂತೆ ಹಬ್ಬ ಆಚರಿಸಲಾಗುವುದು. ಯಾವುದೇ ಧರ್ಮದ ಜನರಿಗೆ ತೊಂದರೆಯಾಗದಂತೆ ಹಬ್ಬ ಆಚರಿಸಲಾಗುವುದು ಎಂದು ಭರವಸೆ ನೀಡಿದರು.

ಬಸವರಾಜ ಜಾಧವ, ಶಂಕರ ಶೆಳಕೆ, ರಾಜು ಕೋಟೆಣ್ಣವರ, ರಾಕೇಶ ನಾಝುರೆ, ಬಸವರಾಜ ಹುಡೇದ, ಇತರರು ಮಾತನಾಡಿದರು. ಕಾನೂನು ಸುವ್ಯವಸ್ಥೆ ಡಿಸಿಪಿ ನಾಗೇಶ ಡಿ.ಎಲ್ ಪ್ರಾಸ್ತಾವಿಕವಾಗಿ ಮಾತನಾಡಿ, ಕಾನೂನು ಸುವ್ಯವಸ್ಥೆ ಕಾಪಾಡಲು ಜನರ ಸಹಕಾರವೂ ಮುಖ್ಯ. ಅನ್ಯ ಧರ್ಮದವರ ಭಾವನೆಯನ್ನು ಮನಸ್ಸಿನಲ್ಲಿಟ್ಟುಕೊಂಡು ಹಬ್ಬ ಆಚರಿಸಿ. ಯಾವುದೇ ಗಲಾಟೆಗೆ ಆಸ್ಪದ ನೀಡಬೇಡಿ ಎಂದರು.

ಎಸಿಪಿ ಎಂ.ಎನ್. ರುದ್ರಪ್ಪ, ಪ್ರೊಬೆಷನರಿ ಡಿವೈಎಸ್ಪಿ ರವಿ ನಾಯಕ, ವಿದ್ಯಾಗಿರಿ ಠಾಣೆ ಪೊಲೀಸ್ ಇನ್ಸ್​ಪೆಕ್ಟರ್ ರಮಾಕಾಂತ ವೈ.ಎಚ್., ಉಪನಗರ ಠಾಣೆ ಇನ್ಸ್​ಪೆಕ್ಟರ್ ಎಂ.ಐ. ಬಸಾಪುರ, ಪಾಲಿಕೆ ವಲಯ ಕಚೇರಿ 3ರ ಸಹಾಯಕ ಆಯುಕ್ತ ಸಂತೋಷ ಆನಿಶೆಟ್ಟರ್, ಇತರರು ಇದ್ದರು. ಶಹರ ಠಾಣೆ ಪೊಲೀಸ್ ಇನ್ಸ್​ಪೆಕ್ಟರ್ ಲಕ್ಷ್ಮೀಕಾಂತ ತಳವಾರ ಸ್ವಾಗತಿಸಿದರು.