ಹನುಮ ಜಯಂತಿ ಸಂಭ್ರಮ

ಹಳೇಬೀಡು: ವೇದಮಂತ್ರ ಪಠಣದ ನಡುವೆ ಮೊಳಗಿದ ಜೈ ಶ್ರೀರಾಮ್, ಜೈ ಬಜರಂಗ ಬಲಿ ಘೋಷಣೆಯೊಂದಿಗೆ ಪಟ್ಟಣದಲ್ಲಿ ಶನಿವಾರ ಹನುಮ ಜಯಂತಿ ಸಂಭ್ರಮದಿಂದ ಜರುಗಿತು.
ವಿಶ್ವ ಹಿಂದು ಪರಿಷತ್, ಬಜರಂಗದಳ ಹೋಬಳಿ ಘಟಕ ಹಾಗೂ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಆಯೋಜಿಸಿದ್ದ ಹನುಮ ಜಯಂತಿ ಉತ್ಸವದ ಪ್ರಯುಕ್ತ ಪಟ್ಟಣದ ಬೀದಿಗಳು ಬಾವುಟ, ಬಂಟಿಗ್ಸ್‌ಗಳಿಂದ ತುಂಬಿ ಕೇಸರಿಮಯವಾಗಿತ್ತು. ಮುಂಜಾನೆ ಕೋಟೆ ಆಂಜನೇಯ ದೇಗುಲದಲ್ಲಿ ಮೂಲ ದೇವರಿಗೆ ಪಂಚಾಮೃತ ಅಭಿಷೇಕ ನೆರವೇರಿಸಲಾಯಿತು. ಮೈಕೊರೆಯುವ ಚಳಿ ಲೆಕ್ಕಿಸದೆ ಸಾವಿರಾರು ಭಕ್ತರು ಪೂಜಾ ಕಾರ್ಯದಲ್ಲಿ ಭಾಗವಹಿಸಿದ್ದರು.
ಬಳಿಕ ಹೋಬಳಿಯ ಹುಲಿಕೆರೆ ಗ್ರಾಮದಿಂದ ತಂದಿದ್ದ ಆಂಜನೇಯ ಉತ್ಸವ ಮೂರ್ತಿಯನ್ನು ಬೆಳ್ಳಿರಥದಲ್ಲಿ ಆರೋಹಣ ಮಾಡಲಾಯಿತು. ಪುಷ್ಪಗಿರಿ ಮಠದ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಶೋಭಾಯತ್ರೆಗೆ ಚಾಲನೆ ನೀಡಿ ತಾವೂ ರಥದಲ್ಲಿ ಆಸೀನರಾದರು. ಬಳಿಕ ವಿವಿಧ ಜಾನಪದ ಕಲಾತಂಡಗಳ ಪ್ರದರ್ಶನ ಹಾಗೂ ಯವಕರ ಉತ್ಸಾಹದ ಕುಣಿತದೊಂದಿಗೆ ಯಾತ್ರೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.
ರಾಮ, ಸೀತೆ ಹಾಗೂ ಹನುಮನ ವೇಷ ಧರಿಸಿದ್ದ ಚಿಣ್ಣರ ಸ್ತಬ್ಧಚಿತ್ರ ಗಮನ ಸೆಳೆಯಿತು. ಪಟ್ಟಣದ ಬ್ರಾಹ್ಮಣರ ಬೀದಿ, ಕರಿಯಮ್ಮನ ಬೀದಿ, ಬೇಲೂರು ರಸ್ತೆ ಹಾಗೂ ಹೊಯ್ಸಳೇಶ್ವರ ದೇವಸ್ಥಾನದ ರಸ್ತೆ ಮೂಲಕ ಸಾಗಿದ ಶೋಭಾಯಾತ್ರೆ ಬೆಣ್ಣೆಗುಡ್ಡದ ಆಂಜನೇಯ ದೇಗುಲದ ತಪ್ಪಲನ್ನು ತಲುಪಿದಾಗ ಮಧ್ಯಾಹ್ನ ಆಗಿತ್ತು. ಬಳಿಕ ಸ್ವಾಮೀಜಿ ಸಮ್ಮುಖದಲ್ಲಿ ಬೆಣ್ಣೆಗುಡ್ಡದ ಆಂಜನೇಯ ದೇವರಿಗೆ ಮಹಾಮಂಗಳಾರತಿ ನೆರವೇರಿಸಿ ತೀರ್ಥ ಪ್ರಸಾದ ವಿತರಿಸಲಾಯಿತು. ಸರ್ಕಾರಿ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಅನ್ನದಾನ ಕಾರ್ಯಕ್ರಮದಲ್ಲಿ ಸಾವಿರಾರು ಜನರು ಭಾಗವಹಿಸಿ ಪ್ರಸಾದ ಸ್ವೀಕರಿಸಿದರು.