ಹದಗೆಟ್ಟ ರಸ್ತೆಯಿಂದ ಜನರಿಗೆ ಸಂಕಷ್ಟ

ಕೈಲಾಂಚ: ಹೋಬಳಿಯ ವಿಭೂತಿಕೆರೆ-ಚಕ್ಕೆರೆದೊಡ್ಡಿ ಸಂಪರ್ಕ ರಸ್ತೆಯಲ್ಲಿ ವಾಹನಗಳ ಸಂಚಾರವಿರಲಿ ಜನರ ಓಡಾಟವೂ ದುಸ್ತರವಾಗಿದೆ.

ರಾಮನಗರದಿಂದ ಅಂಜನಾಪುರ-ವಿಭೂತಿಕೆರೆ ಮಾರ್ಗವಾಗಿ ಹೊಸೂರುದೊಡ್ಡಿ, ಕಾವೇರಿದೊಡ್ಡಿ ಮುಖಾಂತರ ಚಕ್ಕೆರೆದೊಡ್ಡಿ ಮಾರ್ಗವಾಗಿ ಚನ್ನಪಟ್ಟಣ ರಸ್ತೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿದೆ. ಹಲವಾರು ವರ್ಷಗಳ ಹಿಂದೆ ರಸ್ತೆಗೆ ಡಾಂಬರೀಕರಣ ಮಾಡಿದ್ದು ಬಿಟ್ಟರೆ, ಇಲ್ಲಿಯವರೆಗೂ ರಸ್ತೆ ನಿರ್ವಹಣೆ ಮಾಡದೆ ಹದಗೆಟ್ಟಿದೆ. ರಸ್ತೆ ಗುಂಡಿಮಯವಾಗಿ ಡಾಂಬರು ಕಿತ್ತು ಬಂದಿದ್ದು, ಜಲ್ಲಿ ಕಲ್ಲು ರಸ್ತೆಗೆ ಚೆಲ್ಲಿ ಮಣ್ಣಿನ ರಸ್ತೆಯಾದಂತಾಗಿದೆ. ವಾಹನ ಸವಾರರಿಗೆ ಗುಂಡಿಗಳು ಕಾಣಿಸದೆ ಬಿದ್ದು ಗಾಯಗೊಂಡಿರುವ ನಿದರ್ಶನಗಳು ಸಾಕಷ್ಟಿವೆ. ಕೆಲವು ಕಡೆಯಂತೂ ಆಳವಾದ ಗುಂಡಿಗಳು ನಿರ್ವಣವಾಗಿದೆ. ವಾಹನ ಸವಾರರಿಗೆ ಈ ರಸ್ತೆಯಲ್ಲಿ ಸಂಚರಿಸುವುದು ಸವಾಲಾಗಿದೆ.

ರಸ್ತೆ ಸಮಸ್ಯೆ ಬಗೆಹರಿಸುವಂತೆ ಜನಪ್ರತಿನಿಧಿಗಳು, ಸಂಬಂಧಫಟ್ಟ ಇಲಾಖೆಗೆ ಮನವಿ ಮಾಡುತ್ತಿದ್ದರೂ ಯಾವುದೇ ಪ್ರಯೂಜನವಾಗಿಲ್ಲ. ಕೂಡಲೇ ರಸ್ತೆ ದುರಸ್ತೆಗೆ ಕ್ರಮ ಕೈಗೊಳ್ಳಬೇಕೆಂದು ಹೊಸೂರು ದೊಡ್ಡಿಯ ಬೀರಯ್ಯ, ದೊಳ್ಳಯ್ಯ, ಶಿವಪ್ರಸಾದ್, ಕರಿಯಪ್ಪ ಕಾವೇರಿದೊಡ್ಡಿಯ ಆಟೋ ಸಿದ್ದಪ್ಪ, ಬೀರಣ್ಣ, ಜೋಗಯ್ಯ, ಶ್ರೀನಿವಾಸ್, ಕಾಳಮ್ಮ, ಶ್ರೇಯಸ್, ಪ್ರಜ್ವಲ್, ಯತೀಶ್, ಚಕ್ಕೆರೆದೊಡ್ಡಿಯ ವೆಂಕಟೇಶ್, ನಿಂಗಮ್ಮ, ಕುಮಾರ್, ಸುರೇಶ್ ಒತ್ತಾಯಿಸಿದ್ದಾರೆ.

ರೈತರ ಕಷ್ಟ: ಲಕ್ಕೋಜನಹಳ್ಳಿ, ನಂಜಾಪುರ, ಹೊಸದೊಡ್ಡಿ ಮತ್ತು ಚನ್ನಪಟ್ಟಣ ತಾಲ್ಲೂಕಿನ ವಿಠಲೇನಹಳ್ಳಿ, ತರಿಗೆದೊಡ್ಡಿ, ಬ್ರಹ್ಮಣೀಪುರ, ತಗಚಗೆರೆ, ಗ್ರಾಮಸ್ಥರಿಗೆ ಜಿಲ್ಲಾ ಕೇಂದ್ರ ರಾಮನಗರ ಹತ್ತಿರವಾಗುವುದರಿಂದ ಮಾರುಕಟ್ಟೆಗೆ ಹೋಗುವ ರೈತರು, ಶಾಲಾ ಕಾಲೇಜು ವಿದ್ಯಾಥಿಗಳು ಸಾರ್ವಜನಿಕರು ಈ ರಸ್ತೆಯನ್ನು ಹೆಚ್ಚಾಗಿ ಬಳಸುತ್ತಾರೆ. ತರಕಾರಿ, ರೇಷ್ಮೆ, ತೆಂಗಿನಕಾಯಿ, ಬಾಳೆ ಮುಂತಾದ ಬೆಳೆಗಳನ್ನು ಮಾರುಕಟ್ಟೆಗೆ ಸಾಗಿಸಲು ರಸ್ತೆ ಸರಿಯಿಲ್ಲದ ಕಾರಣ ವಾಹನಗಳು ಬರುವುದಿಲ್ಲ. ಇದರಿಂದ ಬೆಳೆಗಾರರು ದ್ವಿಚಕ್ರ ವಾಹನ ಅಥವಾ ಸೈಕಲ್, ಎತ್ತಿನ ಗಾಡಿಯಲ್ಲಿ ಬೆಳೆಗಳನ್ನು ಬನ್ನಿಕುಪ್ಪೆ ಅಥವಾ ವಿಭೂತಿಕೆರೆಗೆ ಸಾಗಿಸಿ ಅಲ್ಲಿಂದ ವಾಹನ ಹಿಡಿದು ಮಾರುಕಟ್ಟೆಗೆ ಸಾಗಿಸಬೇಕಾಗಿದೆ ಎಂದು ರೈತರು ಕಷ್ಟ ಹೇಳಿಕೊಳ್ಳುತ್ತಾರೆ.

 

ಕ್ಷೇತ್ರದ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಕಾಲ ಕೂಡಿ ಬಂದಿದೆ. ಸರ್ಕಾರದಿಂದ ಟೆಂಡರ್ ಪ್ರಕ್ರಿಯೆ ಚಾಲನೆಯಲ್ಲಿದ್ದು, ಒಂದೆರಡು ತಿಂಗಳಲ್ಲಿ ರಸ್ತೆಗಳು ಅಭಿವೃದ್ಧಿ ಕಾಣಲಿವೆ.

| ಪ್ರಭಾವತಿ ಕೆ. ಶಿವಲಿಂಗಯ್ಯ, ಜಿಪಂ ಸದಸ್ಯರು, ಕೈಲಾಂಚ ಕ್ಷೇತ್ರ

.

ಚನ್ನಪಟ್ಟಣ – ರಾಮನಗರ ಮಾರ್ಗವಾಗಿ ಕಳೆದ ವರ್ಷ ಹೊಸೂರುದೊಡ್ಡಿ – ಕಾವೇರಿದೊಡ್ಡಿ ಮುಖಾಂತರ ಅಂಜನಾಪುರ ಮಾರ್ಗವಾಗಿ ಸಾರಿಗೆ ಬಸ್ ಓಡಾಟ ನಡೆಸುತ್ತಿತ್ತು. ಆದರೆ ರಸ್ತೆ ಸಮಸ್ಯೆಯಿಂದ ಕೆಲವು ತಿಂಗಳಿಂದ ಬಸ್ ಸಂಚರಿಸುತ್ತಿಲ್ಲ. ಹೀಗಾಗಿ ಈ ಭಾಗದ ಜನರಿಗೆ ತೊಂದರೆಯಾಗಿದೆ. ವಿಭೂತಿಕೆರೆವರೆಗೆ ನಡೆದು ಹೋಗಿ ವಾಹನ ಏರಬೇಕಾಗಿದೆ.

| ಶಿವಬೀರಯ್ಯ, ಹೊಸೂರುದೊಡ್ಡಿ

 

ಜೀವನ ನಿರ್ವಹಣೆಗೆ ಈ ಭಾಗದ ಜನರು ಕೂಲಿ ಕೆಲಸಕ್ಕೆ ರಾಮನಗರವನ್ನು ಆಶ್ರಯಿಸಿದ್ದಾರೆ. ಸುತ್ತಮುತ್ತಲ ಗ್ರಾಮಗಳಿಗೆ ಯಾವುದೇ ಬಸ್ ವ್ಯವಸ್ಥೆ ಇಲ್ಲದಿರುವುದರಿಂದ ವಿಭೂತಿಕೆರೆಯಿಂದ ನಡೆದೆ ಊರು ಸೇರಬೇಕು. ರಸ್ತೆ ಹದಗೆಟ್ಟಿರುವುದಲ್ಲದೆ, ಈ ಭಾಗದಲ್ಲಿ ಕಾಡು ಪ್ರಾಣಿಗಳ ಉಪಟಳ ಇರುವುದರಿಂದ ಸಂಜೆ ವೇಳೆ ಮನೆ ಸೇರುವ ತನಕ ಜೀವ ಕೈಯಲ್ಲಿ ಹಿಡಿದು ಬರಬೇಕು.

| ಮಧು, ಚಕ್ಕೆರೆದೊಡ್ಡಿ

Leave a Reply

Your email address will not be published. Required fields are marked *