ವಿಜಯಪುರ: ಮಾರುಕಟ್ಟೆಯಲ್ಲಿ ಹತ್ತು ಮತ್ತು ಇಪ್ಪತ್ತು ರೂಪಾಯಿ ನಾಣ್ಯ ಚಲಾವಣೆಯಲ್ಲಿಲ್ಲ ಎಂಬುದು ಕೇವಲ ವದಂತಿ, ಇಂಥ ಊಹಾಪೋಹಗಳಿಗೆ ಕಿವಿಗೊಡಬಾರದು ಎಂದು ಲೀಡ್ ಬ್ಯಾಂಕ್ ಮ್ಯಾನೇಜರ್ ನರೇಂದ್ರಬಾಬು ಸಾರ್ವಜನಿಕರು ಮತ್ತು ವ್ಯಾಪಾರಸ್ಥರಿಗೆ ಕರೆ ನೀಡಿದರು.
ಇತ್ತೀಚೆಗೆ ಹತ್ತು ಮತ್ತು ಇಪ್ಪತ್ತು ರೂಪಾಯಿ ನಾಣ್ಯ ತಿರಸ್ಕರಿಸುತ್ತಿರುವುದು ಕಂಡು ಬಂದಿದೆ. ಇದರಿಂದ ಸಾರ್ವಕನಿಕರಿಗೂ ಹಾಗೂ ವ್ಯಾಪಾರ- ಉದ್ಯಮಪತಿಗಳಿಗೆ ತೀವ್ರ ತಲೆನೋವಾಗಿದೆ. ಆದರೆ, ನಾಣ್ಯಗಳು ಅಧಿಕೃತವಾಗಿದ್ದು ಬ್ಯಾಂಕ್ ಗಳು ಅವುಗಳನ್ನು ಅನುಮೋದಿಸುತ್ತವೆ. ಹೀಗಾಗಿ ಎಲ್ಲರೂ ನಾಣ್ಯಗಳ ಚಲಾವಣೆಗೆ ಸಹಕರಿಸಬೇಕೆಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ನಾಣ್ಯಗಳ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿ ವರ್ಷ ಹಾಗೂ ಎರಡು ವರ್ಷಕ್ಕೊಮ್ಮೆ ಆರ್ ಬಿಐ ನೋಟಿಫಿಕೇಶನ್ ಹೊರಡಿಸುತ್ತಲೇ ಬಂದಿದೆ. ಯಾವ ನಾಣ್ಯ ಹಾಗೂ ನೋಟು ಚಲಾವಣೆಯಲ್ಲಿದೆ ಎಂಬ ವಿವರ ನೀಡುತ್ತಲೇ ಇದೆ.
ಆರ್ ಬಿಐ ವೆಬ್ ಸೈಟ್ ನಲ್ಲಿ ಯಾವ ನೋಟು ಮತ್ತು ನಾಣ್ಯ ಚಾಲ್ತಿಯಲ್ಲಿದೆ ಎಂಬುದು ಗೊತ್ತಾಗಲಿದೆ. ಇತ್ತೀಚೆಗೆ
ಮೇ 17, 2024 ರಂದು ಹೊರಡಿಸಿದ ಸುತ್ತೋಲೆಯಲ್ಲಿ ಹತ್ತು ಮತ್ತು ಇಪ್ಪತ್ತು ರೂಪಾಯಿ ನಾಣ್ಯಗಳು ಚಾಲ್ತಿಯಲ್ಲಿವೆ ಎಂದು ತಿಳಿಸಲಾಗಿದೆ. ಆದರೂ ಮಾರುಕಟ್ಟೆಯಲ್ಲಿ ವದಂತಿ ಹರಡುವುದು ಸರಿಯಲ್ಲ. ಜನರು ಕೂಡ ಇಂಥ ವದಂತಿಗೆ ಕಿವಿಗೊಡಬಾರದು ಎಂದರು.
ಭಾರತ ಸರ್ಕಾರ ನಾಣ್ಯ ಮತ್ತು ನೋಟು ಮುದ್ರಿಸಲಿದೆ. ಆರ್ ಬಿಐ ಅದನ್ನು ಚಲಾವಣೆಗೆ ತರುತ್ತದೆ. ಇಂಥ ನಾಣ್ಯಗಳನ್ನು ಕಾನೂನು ಬದ್ಧವಾಗಿ ಸ್ವೀಕರಿಸಬೇಕು. ಹಾಗೊಂದು ವೇಳೆ ತಿರಸ್ಕರಿಸಿದರೆ ಶಿಕ್ಷಾರ್ಹ ಅಪರಾಧವಾಗಲಿದೆ. ಹೀಗಾಗಿ ಸಾರ್ವಜನಿಕರು ಮತ್ತು ವ್ಯಾಪಾರಸ್ಥರು ಊಹಾಪೋಹಗಳಿಗೆ ಕಿವಿಗೊಡದೆ ನಾಣ್ಯಗಳನ್ನು ಸ್ವೀಕರಿಸಬೇಕು ಎಂದರು.
ನಾಣ್ಯಗಳನ್ನು ನಕಲಿಯಾಗಿ ತಯಾರಿಸಲು ಸಾಧ್ಯವಿಲ್ಲ.
ಹತ್ತು ರೂಪಾಯಿಯ ಒಂದು ನೋಟ್ ಮುದ್ರಿಸಲು ತಗಲುವ ಖರ್ಚು ನಾಣ್ಯಕ್ಕಿಂತಲೂ ಕಡಿಮೆ. ಹೀಗಾಗಿ ಯಾರೂ ನಾಣ್ಯವನ್ನು ಹೆಚ್ಚಿನ ಬೆಲೆ ತೆತ್ತು ನಕಲಿಯಾಗಿ ತಯಾರಿಸಲು ಸಾಧ್ಯವಿಲ್ಲ ಎಂದರು.
ಹೀಗಾಗಿ ವಾಹನ ಚಾಲಕರು, ಆಟೋ- ಟ್ಯಾಕ್ಸಿಗಳ ಚಾಲಕರು, ಹೊಟೇಲ್ ಉದ್ಯಮಿಗಳು ಹಾಗೂ ಮತ್ತಿತರ ವ್ಯಾಪಾರಸ್ಥರು ಸರ್ಕಾರದ ನಾಣ್ಯಗಳನ್ನು ಚಲಾವಣೆಗೊಳಿಸಿ ಎಂದು ಮನವಿ ಮಾಡಿದರು.
ಹೊಟೇಲ್ ಅಸೋಸಿಯೇಷನ್ ಕಾರ್ಯದರ್ಶಿ ವಿಜಯಕುಮಾರ ಡೋಣಿ, ರುಡ್ ಸೆಟ್ ಸಂಸ್ಥೆ ನಿರ್ದೇಶಕ ಮುತ್ತಣ್ಣ ಧನಗರ ಇದ್ದರು.