ಹಣ ಡಬ್ಲಿಂಗ್ ಮೋಸದ ಜಾಲ

ಶಿರಸಿ:ಬ್ಲೇಡ್ ಕಂಪನಿಗಳ ಹಾವಳಿಯ ನಡುವೆ ಹಣ ದ್ವಿಗುಣ ಮಾಡುವ ಕಂಪನಿಗಳು ನಿಂತಿಲ್ಲ ಎಂಬ ವಿಷಯ ‘ದಿಗ್ವಿಜಯ ವಾಹಿನಿ ಹಾಗೂ ವಿಜಯವಾಣಿ’ ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಬಯಲಾಗಿದೆ. ಶಿರಸಿಯಲ್ಲಿ ವ್ಯಕ್ತಿಯೊಬ್ಬರು ಹಣ ದ್ವಿಗುಣಗೊಳಿಸುವುದಾಗಿ ಜನರಿಗೆ ಆಮಿಷ ಒಡ್ಡುತ್ತಿರುವುದರ ಸ್ಟಿಂಗ್ ಮಾಡಲಾಗಿದೆ.

ಕಾರ್ಯಾಚರಣೆ ಹೇಗೆ?: ಕೆಲವು ದಿನಗಳ ಹಿಂದೆ ವ್ಯಕ್ತಿಯೊಬ್ಬರು ಸ್ಥಳೀಯ ಪತ್ರಿಕೆಯಲ್ಲಿ ‘ಕೇವಲ 10 ತಿಂಗಳಲ್ಲಿ ಹಣ ಡಬಲ್ ಮಾಡಿಕೊಡಲಾಗುವುದು’ ಎಂದು ಜಾಹೀರಾತು ನೀಡಿದ್ದರು. ಇದನ್ನು ಗಮನಿಸಿದ ‘ದಿಗ್ವಿಜಯ ವಾಹಿನಿ ಹಾಗೂ ವಿಜಯವಾಣಿ’ ಪ್ರತಿನಿಧಿಗಳು ಗ್ರಾಹಕರಂತೆ ‘ಆ ವ್ಯಕ್ತಿ’ (ದಿವಸ್ಪತಿ ಹೆಗಡೆ ಕಂಚಿಕೈ- ಸದ್ಯ ಚೆನ್ನೈ ವಾಸಿ) ಇರುವಲ್ಲಿಗೆ ಹೋಗಿ, ‘ನಾವೂ ಹಣ ಹೂಡಿಕೆ ಮಾಡುತ್ತೇವೆ. ಕಂಪನಿಯ ಕುರಿತು ತಿಳಿಸಿ’ ಎಂದು ಕೇಳಿದಾಗ ಎಲ್ಲವನ್ನೂ ಹಂಚಿಕೊಂಡಿದ್ದಾನೆ.

ಚೆನ್ನೈ ಮೂಲ: ಇದು ಚೆನ್ನೈ ಮೂಲದ ಕಂಪನಿಯಾಗಿದ್ದು, ಒಂಬತ್ತು ವರ್ಷದಿಂದ ಕೆಲಸ ಮಾಡುತ್ತಿದೆ. ಹೆಸರು ‘ವಿನ್ನರ್ ಸ್ಟಾರ್’. ಹೆಲ್ತ್ ಪ್ರಾಡಕ್ಟ್ ಗಳನ್ನು ತಯಾರಿಸಿ ಮಾರುತ್ತಿದೆ. ಈ ಹೆಸರಿನಲ್ಲಿ ನೋಂದಣಿ ಕೂಡಾ ಮಾಡಿಕೊಂಡಿದ್ದೇವೆ. ಓಡಿ ಹೋಗುವ ಕಂಪನಿ ಅಲ್ಲ. ಕಂಪನಿಯಲ್ಲಿ ಒಂದು ಲಕ್ಷ ರೂ. ತೊಡಗಿಸಿದರೆ, ಕೇವಲ 10 ತಿಂಗಳಲ್ಲಿ ಹಣ ಡಬಲ್ ಮಾಡಿಕೊಡಲಾಗುತ್ತದೆ. ಪ್ರತಿ ವಾರ 1800 ರೂ. ನಿಮ್ಮ ಖಾತೆಗೆ ಜಮಾ ಆಗುತ್ತದೆ. ಇದಕ್ಕೆ ಆಧಾರವಾಗಿ ಬಾಂಡ್ ನೀಡುತ್ತೇವೆ’ ಎನ್ನುವುದಾಗಿ ಒಂದನೇ ಆಫರ್ ಇಟ್ಟಿದ್ದಾನೆ.

ಎರಡನೇ ಆಫರ್ ಆಗಿ, ‘25000 ರೂ. ತೊಡಗಿಸಿದಲ್ಲಿ ಪ್ರತಿ ವಾರ 450 ರೂ. ನೀಡುತ್ತೇವೆ. ಆದ್ರೆ ಬಾಂಡ್ ನೀಡುವುದಿಲ್ಲ. ಈಗಾಗಲೇ ನಮ್ಮ ಸಂಪರ್ಕಕ್ಕೆ ಬಹಳ ಜನ ಬರುತ್ತಿದ್ದಾರೆ. ನೀವು ಬರುವುದಕ್ಕಿಂತ ಮುಂಚೆ ಒಂಬತ್ತು ಜನ ಬಂದು ಮಾಹಿತಿ ಪಡೆದಿದ್ದಾರೆ.’ ಎಂದು ತಿಳಿಸಿದ್ದಾನೆ. ಈತ ತಾನು ಕಂಪನಿಯ ಏಜೆಂಟ್ ಎಂದು ಹೇಳಿಕೊಂಡಿದ್ದಾನೆ.

ವಾಹಿನಿಯಲ್ಲಿ ಪ್ರಸಾರ: ಹಣ ದ್ವಿಗುಣಗೊಳಿಸುವ ಈ ಕಂಪನಿಯ ಕುರಿತು ದಿಗ್ವಿಜಯ ವಾಹಿನಿ ಸುದ್ದಿ ಪ್ರಸಾರ ಮಾಡಿ ಜನರನ್ನು ಎಚ್ಚರಿಸುವ ಕೆಲಸ ಮಾಡಿದೆ.

ದಿಗ್ವಿಜಯ ವಾಹಿನಿ ಪ್ರಸಾರ ಮಾಡಿದ ಸ್ಟಿಂಗ್ ಕಾರ್ಯಾಚರಣೆ ವರದಿಯಿಂದ, ಮೇಲ್ನೋಟಕ್ಕೆ ಇದು ಐಎಂಎ ಪ್ರಕರಣದಂತೆ ಕಂಡುಬಂದಿದೆ. ಈ ಬಗ್ಗೆ ಡಿವೈಎಸ್​ಪಿ ಅವರಿಗೆ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡ್ತೇನೆ. ಅಲ್ಲದೆ, ಜನರು ಇದರ ಬಗ್ಗೆ ಎಚ್ಚರಿಕೆಯಿಂದ ಇರಬೇಕು.

| ಈಶ್ವರ ಉಳ್ಳಾಗಡ್ಡಿ, ಉಪ ವಿಭಾಗಾಧಿಕಾರಿ ಶಿರಸಿ

Leave a Reply

Your email address will not be published. Required fields are marked *