ಹೂವಿನಹಡಗಲಿ: ತಾಲೂಕಿನಾದ್ಯಂತರ ವರ್ಷದ ಮೊದಲ ಹಬ್ಬ ಸಂಕ್ರಾಂತಿಯನ್ನು ಮಂಗಳವಾರ ಸಡಗರದಿಂದ ಆಚರಿಸಲಾಯಿತು.
ತಾಲೂಕಿನ ರೈತರು ಬೆಳಿಗ್ಗೆಯೇ ಜಾನುವಾರುಗಳಿಗೆ ವಿಶೇಷ ಪೂಜೆ ಸಲ್ಲಿಸಿ ಮೆರವಣಿಗೆ ನಡೆಸಿದರು. ಕುಟುಂಬದ ಸದಸ್ಯರು ಎತ್ತಿನ ಬಂಡಿ ಹಾಗೂ ಇತರ ವಾಹನಗಳಲ್ಲಿ ತುಂಗಭದ್ರಾ ನದಿ ತಟಕ್ಕೆ ತೆರಳಿ ಪವಿತ್ರ ಸ್ನಾನ ಮಾಡಿ ಬಳಿಕ ಬುತ್ತಿ ಸವಿದರು.
ತಾಲೂಕಿನ ಪುಣ್ಯ ಕ್ಷೇತ್ರಗಳಾದ ಮೈಲಾರ, ಮದಲಗಟ್ಟ, ಬೆಟ್ಟದ ಮಲ್ಲೇಶ್ವರ, ಕುರುವತ್ತಿ ಸೇರಿದಂತೆ ಇತರ ಕ್ಷೇತ್ರಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಮಹಿಳೆಯರು ಹಾಗೂ ಪುಟ್ಟ ಮಕ್ಕಳು ವಿಶೇಷ ಉಡುಗೆಗಳನ್ನು ಧರಿಸಿ ಸಂಭ್ರಮಿಸಿದರು. ನದಿ ತೀರದಲ್ಲಿ ಯುವಕ, ಯುವತಿಯರು ಡಿಜೆ ಹಾಡುಗಳಿಗೆ ಹೆಜ್ಜೆ ಹಾಕಿದರು. ತಾಲೂಕಿನ ದೇವಾಲಯಗಳಲ್ಲಿ ದೇವರುಗಳಿಗೆ ಬೆಳಿಗ್ಗೆಯಿಂದಲೇ ವಿಶೇಷ ಪೂಜೆಗಳು ಜರುಗಿದವು.