ಹಟ್ಟಿಚಿನ್ನದಗಣಿ: ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರ ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೆ ಏರಬೇಕಾಗಿತ್ತು. ಆದರೆ, ಪ್ರಾಥಮಿಕ ಆರೋಗ್ಯ ಕೇಂದ್ರವಾಗಿ ಎಂಟು ವರ್ಷಗಳಾದರೂ ಪೂರ್ಣ ಪ್ರಮಾಣದಲ್ಲಿ ಕಾಯಂ ವೈದ್ಯರಿಲ್ಲದಂತಾಗಿದೆ.
ಪಟ್ಟಣದಲ್ಲಿ ಆರು ವರ್ಷಗಳ ಹಿಂದೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸುಸಜ್ಜಿತ ಕಟ್ಟಡ ನಿರ್ಮಿಸಲಾಗಿದೆ. ಆದರೆ, ಸಾರ್ವಜನಿಕರಿಗೆ ಸೂಕ್ತ ಆರೋಗ್ಯ ಸೌಲಭ್ಯಗಳು ಸಿಗುತ್ತಿಲ್ಲ. ಪಟ್ಟಣದಲ್ಲಿ 30 ಸಾವಿರಕ್ಕೂ ಅಧಿಕ ಜನಸಂಖ್ಯೆ ಇದ್ದು, ತಿಂಗಳಿಗೆ ಮೂರು ಸಾವಿರದಷ್ಟು ರೋಗಿಗಳು ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡುತ್ತಾರೆ.
ಸುತ್ತಮುತ್ತಲ ಗ್ರಾಮಗಳ ಜನತೆಗೆ ಹಟ್ಟಿ ಪ್ರಾಥಮಿಕ ಆರೋಗ್ಯ ಕೇಂದ್ರವೇ ಆಧಾರವಾಗಿದೆ. ತಿಂಗಳಿಗೆ 25 ರಿಂದ 30 ಹೆರಿಗೆಗಳು ಆಗುತ್ತವೆ. ಆದರೆ ಆಸ್ಪತ್ರೆಯಲ್ಲಿ ಮಹಿಳಾ ವೈದ್ಯರಿಲ್ಲ. ತಜ್ಞ ವೈದ್ಯರಿಲ್ಲದಿರುವುದು, ಆಧುನಿಕ ಸವಲತ್ತುಗಳಿಲ್ಲದಿರುವುದು ಹಾಗೂ ಅಗತ್ಯ ಔಷಧಗಳಿಲ್ಲದ ಪರಿಣಾಮ ಜನರು ಖಾಸಗಿ ಆಸ್ಪತ್ರೆಗಳ ಕಡೆಗೆ ಮುಖಮಾಡುವಂತಾಗಿದೆ.
ಆಸ್ಪತ್ರೆಯಲ್ಲಿ ಒಬ್ಬ ವೈದ್ಯ, ನಾಲ್ಕು ಜನ ನರ್ಸ್, ಒಬ್ಬ ಪ್ರಯೋಗಾಲಯ ತಂತ್ರಜ್ಞ ಹಾಗೂ ಇಬ್ಬರು ಡಿ ಗ್ರೂಪ್ ನೌಕರರು ಗುತ್ತಿಗೆ ಆಧಾರದ ಮೇರೆಗೆ ಕಾರ್ಯನಿರ್ವಹಿಸುತ್ತಿದ್ದಾರೆ. ವೈದ್ಯ ರಜೆ ಅಥವಾ ಅನ್ಯ ಕಾರ್ಯಕ್ರಮಗಳಿಗೆ ತೆರಳಿದರೆ ರೋಗಿಗಳು ಕಾದು ಕುಳಿತು ಖಾಸಗಿ ಆಸ್ಪತ್ರೆಗೆ ಹೋಗಬೇಕಾದ ಸ್ಥಿತಿ ಇದೆ.