ಹಗ್ಗ ಹಿಡ್ಕೊಂಡು ಮ್ಯಾಲ ಬಂದೆರೀ..

ಶಿಗ್ಗಾಂವಿ: ಎಲ್ಲಾರೂ ಕೂಡೆ ಮಾತಾಡಕೋಂತ ಹೊಳ್ಳಿ ಬರಾಕತ್ತಿದ್ವಿ.. ದೋಣಿ ಮುಳಾಗಕತ್ತಿತ್ತು. ಆದ್ರ ನಾ ಮುಂದೆ ಕುಂತಿದ್ದೆ. ಅಲ್ಲಿದ್ದ ಹಗ್ಗ ನನಗ ಕುತ್ತಿಗಿಗೆ ಸಿಕ್ಕೊಂತು ಹಿಂಗಾಗಿ ಅದ ಹಗ್ಗ ಹಿಡಕೊಂಡು ಮ್ಯಾಲ ಬಂದೆರೀ.. ಹಿಂಗಾಗಿ ನಾ ಒಬ್ಬವ್ನ ಬದುಕೀನಿ.. ಎಲ್ಲಾರೂ ಎಲ್ಲಿ ಅದಾರಂತ ಹುಡುಕಬೇಕಾರ ಯಾರೂ ಇಲ್ಲ.. ಅಪ್ಪನೂ ಇಲ್ಲ, ಅವ್ವನೂ ಇಲ್ಲ. ಎಲ್ಲಿ ಅದಾರ ಅಂತ ಕೇಳಿದ್ರ ಯಾರೂ ಹೇಳವಲ್ರು…

ಇದು ಕಾರವಾರದ ಕೂರ್ಮಗಡ ದ್ವೀಪದ ನರಸಿಂಹ ದೇವರ ಜಾತ್ರೆಗೆ ತೆರಳಿದ ದೋಣಿ ದುರಂತದಲ್ಲಿ ಬದುಕಿ ಬಂದ ಗಣೇಶ ಘಟನೆ ದೃಶ್ಯಾವಳಿ ಬಿಚ್ಚಿಟ್ಟ ರೀತಿ.

ತಾಲೂಕಿನ ಹೊಸೂರು ಗ್ರಾಮದ ಒಂದೇ ಕುಟುಂಬದ 10 ಜನ ಸೋಮವಾರ ಕಾರವಾರದ ಕೂರ್ಮಗಡ ದ್ವೀಪದ ನರಸಿಂಹ ದೇವರ ಜಾತ್ರೆ ಮುಗಿಸಿ ವಾಪಸಾಗುತ್ತಿದ್ದ ವೇಳೆ ನಡೆದ ದೋಣಿ ದುರಂತದಲ್ಲಿ ಇಡೀ ಕುಟುಂಬ ಕಳೆದುಕೊಂಡು ಗಣೇಶ ಒಂಟಿಯಾಗಿದ್ದಾನೆ. ಅಲ್ಲಿ ಅನುಭವಿಸಿದ ಯಾತನೆಯನ್ನು 8 ವರ್ಷದ ಗಣೇಶ ಬೆಳವಲಕೊಪ್ಪ ಜನರ ಮುಂದೆ ಎಳೆಎಳೆಯಾಗಿ ಬಿಚ್ಚಿಟ್ಟಾಗ, ಅಂತಹ ಪರಿಸ್ಥಿತಿ ಜವರಾಯ ಯಾರಿಗೂ ತರಬಾರದು ಎಂದು ಅಲ್ಲಿದ್ದವರೆಲ್ಲ ಮಮ್ಮಲ ಮರುಗಿದ್ದರು.

ಮಂಗಳವಾರ ತಡರಾತ್ರಿ ಏಳು ಮೃತ ದೇಹಗಳನ್ನು ಹೊತ್ತು ತಂದಾಗ ಇಡೀ ಗ್ರಾಮ ಬೆಚ್ಚಿಬಿದ್ದಿತ್ತು. ಆದರೂ, ಆ ಬದುಕುಳಿದು ಬಂದ ಮಗುವನ್ನು ಕಾಣುವ ಹಂಬಲ ಎಲ್ಲರಲ್ಲೂ ಕಾಣ ಸಿಗುತ್ತಿತ್ತು. ಬಂದವರೆಲ್ಲ ಗಣೇಶ ಎಲ್ಲಿ ಎಂದು ಹುಡುಕುತ್ತಿದ್ದರು. ಇಬ್ಬರು ಸಹೋದರರ ಇಡೀ ಕುಟುಂಬ ಮೌನಕ್ಕೆ ಶರಣಾಗಿದ್ದರೆ, ಬದುಕುಳಿದ ಆ ಮಗು ಇಡೀ ಗ್ರಾಮದ ಮಗು ಎಂಬಂತಾಗಿತ್ತು. ಒಂದೆಡೆ ಕಳೆಬರಹಗಳ ಅಂತ್ಯಕ್ರಿಯೆ ತಯಾರಿ ನಡೆದರೆ, ಇನ್ನೊಂದೆಡೆ ಕಾಣಸಿಗದ ಇನ್ನೆರಡು ಮಕ್ಕಳ ಬಗೆಗಿನ ಮಾಹಿತಿ ಪಡೆಯುತ್ತಿದ್ದವರು ಕಣ್ಣೀರಿಡುತ್ತಿದ್ದ ದೃಶ್ಯ ಮನಕಲಕುವಂತಿತ್ತು.

ದೋಣಿ ಅವಘಡದಲ್ಲಿ ಸಾವಿಗೀಡಾಗಿದ್ದ ಒಂದೇ ಕುಟುಂಬದ ಏಳು ಜನರ ಶವಗಳನ್ನು ಮಂಗಳವಾರ ತಡರಾತ್ರಿ ಹೊಸೂರು ಗ್ರಾಮಕ್ಕೆ ತರಲಾಗಿತ್ತು. ನಂತರ ಒಂದೇ ಚಿತೆಯಲ್ಲಿಟ್ಟು ಅಗ್ನಿ ಸಂಸ್ಕಾರ ನೀಡಲಾಯಿತು. ಕಂದಾಯ ಮತ್ತು ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಅಂತ್ಯಕ್ರಿಯೆ ನೆರವೇರಿತು.

ಮೊದಲ ಭೇಟಿ ಮಸಣಕ್ಕೆ ಒಯ್ತು

ದೋಣಿ ಚಾಲಕರಾಗಿರುವ ಸಂಬಂಧಿಕರೊಬ್ಬರ ಕರೆಯ ಮೇರೆಗೆ ನರಸಿಂಹ ದೇವರ ಜಾತ್ರೆಗೆ ತೆರಳಿದ್ದ ಹೊಸೂರಿನ ಬೆಳವಲಕೊಪ್ಪ ಕುಟುಂಬದ ಹತ್ತು ಜನ ಇದು ದೇವರ ಯಾತ್ರೆಯಲ್ಲ, ನಮ್ಮ ಮಸಣದ ಯಾತ್ರೆ ಎಂಬುದನ್ನು ಊಹಿಸಿರಲಿಕ್ಕೂ ಸಾಧ್ಯವಿಲ್ಲ. ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿ ಗ್ರಾಮಕ್ಕೆ ಹಿಂತಿರುಗಬೇಕು ಎನ್ನುವಷ್ಟರಲ್ಲಿ ಜವರಾಯನ ಅಟ್ಟಹಾಸಕ್ಕೆ ಸಹೋದರರಿಬ್ಬರ ಕುಟುಂಬ ಸಂಪೂರ್ಣ ಬಲಿಯಾಗಿದೆ.