ಮಂಜುನಾಥ ಅ್ಯಯಸ್ವಾಮಿ ಹೊಸಪೇಟೆ
ರಾಜ್ಯ ಸರ್ಕಾರದಿಂದ ಎರಡು ಅಕ್ಕ ಕೆಫೆ ಅನುಮೋದನೆಯಾಗಿದ್ದು, ಹಂಪಿ ವಿಜಯವಿಠಲ ದೇಗುಲದ ಬಳಿ ಹಾಗೂ ಹಗರಿಬೊಮ್ಮನಹಳ್ಳಿಯಲ್ಲಿ ಆರಂಭ ಮಾಡಲು ಜಿಲ್ಲಾ ಪಂಚಾಯಿತಿಯಿAದ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ವಿಶ್ವ ಪರಂಪರೆ ತಾಣ ಹಂಪಿಯ ಕೆಲ ಸ್ಮಾರಕಗಳ ಬಳಿ ವಾಣಿಜ್ಯ ಚಟುವಟಿಕೆ ಸಂಪೂರ್ಣ ಸ್ತಬ್ಧವಾಗಿದ್ದು, ಪ್ರವಾಸಿಗರು ಮತ್ತೆ ಪರದಾಡುವಂತಾಗಿದೆ. ಅದರಲ್ಲೂ ವಿಜಯವಿಠಲ ದೇಗುಲದ ಬಳಿ ಹೆಚ್ಚಿನ ಸಮಸ್ಯೆ ಕಾಣುತ್ತದೆ. ಇದರಿಂದ ಪ್ರವಾಸಿಗರಿಗೆ ಕುಡಿವ ನೀರು, ಉಪಹಾರ, ಊಟ ಮಾಡಬೇಕು ಎಂದರೆ ಕಮಲಾಪುರಕ್ಕೆ ಬರಬೇಕಾದ ಅನಿವಾರ್ಯತೆಯಿದೆ. ಮೂಲಸೌಕರ್ಯವಿಲ್ಲದೇ ಪರದಾಡುವ ಪ್ರವಾಸಿಗರ ಅನುಕೂಲಕ್ಕಾಗಿ ಜಿಲ್ಲಾ ಪಂಚಾಯಿತಿ ಅಕ್ಕ ಕೆಫೆ ಆರಂಭದ ಹೊಸದೊಂದು ಪ್ರಯತ್ನಕ್ಕೆ ಕೈ ಹಾಕಿದೆ.
ಈಗಾಗಲೇ ಕೇಂದ್ರ ಪುರಾತತ್ವ ಇಲಾಖೆ ಜತೆ ಜಿಲ್ಲಾಡಳಿತ ಕೂಡ ಚರ್ಚೆ ಮಾಡಿದೆ. ಆದರೆ, ಅಲ್ಲಿ ಕಟ್ಟಡ ನಿರ್ಮಾಣ ಮಾಡಲು ಅವಕಾಶ ಇಲ್ಲದೇ ಇರುವದರಿಂದ ಮೊಬೈಲ್ ಕ್ಯಾಂಟಿನ್ ಮೂಲಕ ಅಕ್ಕ ಕೆಫೆ ಆರಂಭ ಮಾಡಲು ರಾಜ್ಯ ಸರ್ಕಾರಕ್ಕೆ ಪ್ರಾಸ್ತವನೆ ಸಲ್ಲಿಸಲಾಗಿದೆ. ಇದು ಅನುಮೋದನೆ ದೊರೆತರೆ ವಿಜಯವಿಠಲದಲ್ಲಿ ಆರಂಭ ಮಾಡಲು ಸಿದ್ದತೆ ನಡೆಯಲಿದೆ. ಇದರಿಂದ ಪ್ರವಾಸಿಗರಿಗೆ ಹೆಚ್ಚಿನ ಅನುಕೂಲ ಆಗಲಿದೆ.
ಅಕ್ಕ ಕೆಫೆ ರಾಜ್ಯ ಹಲವು ಜಿಲ್ಲೆಯಲ್ಲಿ ಈಗಾಗಲೇ ಆರಂಭವಾಗಿದೆ. ವಿಜಯನಗರ ಜಿಲ್ಲೆಯಲ್ಲಿ ಎರಡು ಕೆಫೆ ಆರಂಭ ಮಾಡಲು ಅನುಮೋದನೆ ಸಿಕ್ಕಿದೆ. ಒಂದು ಕೆಫೆ ನಿರ್ಮಾಣಕ್ಕೆ ಅಂದಾಜು 10 ಲಕ್ಷ ರೂ. ಅನುದಾನ ಬರಲಿದೆ. ಒಟ್ಟು ಕೆಫೆಗೆ 20 ಲಕ್ಷ ರೂ. ಸಿಗಲಿದೆ. ಹಂಪಿಯಲ್ಲಿ ಕಟ್ಟಡ ನಿರ್ಮಾಣದ ಅವಕಾಶ ಇಲ್ಲದೇ ಇರುವುದರಿಂದ ಮೊಬೈಲ್ ಕ್ಯಾಂಟಿನ್ ಮೂಲಕ ಅಕ್ಕ ಕೆಫೆ ಆರಂಭಕ್ಕೆ ಅಧಿಕಾರಿಗಳು ತಿರ್ಮಾನ ಮಾಡಿದ್ದಾರೆ. ಮೊಬೈಲ್ ಕ್ಯಾಂಟಿನ್‌ಗಾಗಿ 5 ಲಕ್ಷ ರೂ. ಹೆಚ್ಚುವರಿ ಅನುದಾನ ನೀಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುಮೋದನೆ ಬಂದ ಕೂಡಲ ಸ್ಥಳೀಯ ಗ್ರಾಮ ಪಂಚಾಯಿತಿಗೆ ಸ್ವಸಹಾಯ ಸಂಘದ ಮೂಲಕ ಆರಂಭ ಮಾಡುವ ಹೊಣೆ ನೀಡಲಿದೆ.
ಎಚ್.ಬಿ.ಹಳ್ಳಿಯಲ್ಲಿಯೂ ಸಿದ್ದತೆ
ವಿಜಯನಗರ ಜಿಲ್ಲೆಯ ಆರಂಭವಾಗುವ ಎರಡು ಅಕ್ಕ ಕೆಫೆ ಆರಂಭಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರಲ್ಲಿ ಹಂಪಿಯ ವಿಜಯವಿಠಲ ದೇಗುಲ ಹಾಗೂ ಹಗರಿಬೊಮ್ಮನಹಳ್ಳಿಯ ಬಸವೇಶ್ವರ ಬಜಾರ್‌ನಲ್ಲಿ ಆರಂಭ ಮಾಡಲು ಸ್ಥಳ ಗುರುತಿಸಲಾಗಿದೆ. ಹಂಪಿ ಮೊಬೈಲ್ ಕ್ಯಾಂಟಿನ್ ಮೂಲಕ ಅಕ್ಕ ಕೆಫೆ ಮಾಡಲು ಕಳಿಸಿರುವ ಪ್ರಸ್ತಾವನೆ ಸಿಕ್ಕರೆ ಹಗರಿಬೊಮ್ಮನಹಳ್ಳಿಯಲ್ಲಿ ಕೂಡ ಆರಂಭ ಮಾಡಲು ಸಿದ್ದತೆ ನಡೆಸಲಾಗುತ್ತದೆ ಎಂದು ಅಧಿಕಾರಿಗಳು ತಿಳಸಿದರು.
ಹಂಪಿಯ ವಿಜಯವಿಠಲ ದೇಗುಲದ ಬಳಿ ನೀರು, ಉಪಹಾರ ಮಾರಾಟ ಮಾಡಲು ಅವಕಾಶ ಇಲ್ಲದ ಕಾರಣ ಸರ್ಕಾರದಿಂದ ಅಕ್ಕ ಕೆಫೆ ಆರಂಭಕ್ಕೆ ಸಿದ್ಧತೆ ನಡೆಸಲಾಗುತ್ತದೆ. ಇದರಿಂದ ಪ್ರವಾಸಿಗರಿಗೆ ಅನುಕೂಲ ಆಗಲಿದೆ.
ಎಂ.ಎಸ್.ದಿವಾಕರ, ಜಿಲ್ಲಾಧಿಕಾರಿ, ವಿಜಯನಗರ
ಹಂಪಿ ಮತ್ತು ಹಗರಿಬೊಮ್ಮನಹಳ್ಳಿಯಲ್ಲಿ ಅಕ್ಕ ಕೆಫೆ ಆರಂಭಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುಮೊದನೆ ಸಿಕ್ಕ ನಂತರ ಕೆಫೆ ಆರಂಭವಾಗಲಿದೆ. ಪ್ರವಾಸಿಗರ ಅನುಕೂಲಕ್ಕಾಗಿ ಹಂಪಿಯಲ್ಲಿ ಆರಂಭ ಮಾಡಲು ಸರ್ಕಾರದ ಗಮನ ಸೆಳೆಯಲಾಗಿದೆ.
ನೋಂಗ್ಜಾಯ್ ಮೊಹಮ್ಮದ್ ಅಲಿ ಅಕ್ರಮ್ ಶಾ, ಜಿ.ಪಂ. ಸಿಇಒ, ವಿಜಯನಗರ