ವಿಜಯಪುರ: ಸರ್ಕಾರದ ಮಹತ್ವಾಕಾಂಕ್ಷಿ ಯೋಜನಗಳೆಲ್ಲ ಮಣ್ಣು ಪಾಲು ಮಾಡಿದ್ದಲ್ಲದೇ, ಈ ಬಗ್ಗೆ ಮಾಹಿತಿ ಕೇಳಿದರೆ ಸಾಕು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮೈ ಪರಚಿಕೊಳ್ಳುತ್ತಿದ್ದಾರೆ !
ಹೌದು, ಸಿಂದಗಿ ತಾಲೂಕಿನ ಹಂದಿಗನೂರ ಗ್ರಾಮದಲ್ಲಿ ಮಹತ್ತರ ಯೋಜನೆಗಳೆಲ್ಲವೂ ಮಣ್ಣು ಪಾಲಾಗಿವೆ. ಗ್ರಾಮದಲ್ಲಿ ನೀರು ಶುದ್ದೀಕರಿಸುವ ಯೋಜನೆಗೆ ಸಂಬಂಧಿಸಿದಂತೆ ಕಳಪೆ ಕಾಮಗಾರಿ ನಡೆದಿರುವುದರ ಬಗ್ಗೆ “ವಿಜಯವಾಣಿ”ಯಲ್ಲಿ ಹಂದಿಗನೂರ ಗ್ರಾಮದಲ್ಲಿ ಏನಿದು ಹಗರಣ? ಎಂಬ ತಲೆ ಬರಹದಡಿ ವಿಸ್ತೃತ ವರದಿ ಪ್ರಕಟಿಸಲಾಯಿತು. ವರದಿ ಬಗ್ಗೆ ಜಿಲ್ಲಾ ಪಂಚಾಯಿತಿ ಸಿಇಒ ಅವರು ಸಹ ಗಂಭೀರವಾಗಿ ಪರಿಶೀಲಿಸಿದ್ದು ಪರಿಶೀಲಿಸುವುದಾಗಿ ತಿಳಿದ್ದಾರೆ.
ಆದರೆ, ವರದಿಯ ಮುಂದುವರಿದ ಭಾಗವಾಗಿ ಗ್ರಾಮದಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿದ ಉದ್ಯಾನ ಸಹ ಹಾಳಾಗಿದ್ದು ಕಳಪೆ ಕಾಮಗಾರಿಗೆ ಕೈಗನ್ನಡಿಯಾಗಿದೆ. ನೆಲಹಾಸು ಕಿತ್ತು ಹೋಗಿದ್ದು, ಮುಳುಕಂಟಿಗಳಿಂದ ಆವೃತವಾದ ಉದ್ಯಾನ ಸ್ಮಶಾನ ಸದೃಶವಾಗಿ ಗೋಚರಿಸುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ಕೇಳಿದಾಕ್ಷಣ ಕೆಂಡಾಮಂಡಲಗೊಂಡ ಪಿಡಿಒ ವಿರೂಪಾಕ್ಷಿ ನಾಡಗೌಡರು ಒಂದೇ ಸಮ ಅಬ್ಬರಿಸಿದರಲ್ಲದೇ ದೂರು ಕೊಟ್ಟವನು ಯಾವನು? ಎಂದು ಒಂದೇ ಸಮ ಪ್ರಶ್ನಿಸತೊಡಗಿದರು. ಯಾರಾದರೂ ಯಾಕೆ ದೂರು ದೂರು ಕೊಡಬೇಕು, ಅಗತ್ಯವಿದ್ದರೆ ಪ್ರತಿಕ್ರಿಯೆ ನೀಡಬಹುದು ಇಲ್ಲದೇ ಹೋದರೆ ಸಂಬಂಧಿಸಿದ ಹಿರಿಯ ಅಧಿಕಾರಿಗಳಿಂದ ಪಡೆಯಲಾಗುವುದು ಎಂದರೂ ಪಿಡಿಒ ಮಾತ್ರ ಸಿಟ್ಟು ತಣ್ಣಗಾಗಿಸಿಕೊಳ್ಳಲಿಲ್ಲ.
ಕೊನೆಗೆ ಜಿಲ್ಲಾ ಪಂಚಾಯತಿ ಸಿಇಒ ರಿಷಿ ಆನಂದ ಅವರನ್ನು ಸಂಪರ್ಕಿಸಲಾಗಿ ಹಂದಿಗನೂರ ಪ್ರಕರಣದ ತನಿಖೆ ನಡೆಸಲಾಗುವುದಲ್ಲದೇ ಪಿಡಿಒಗೆ ಸಾರ್ವಜನಿಕರು ಹಾಗೂ ಮಾಧ್ಯಮದವರೊಂದಿಗೆ ಸಭ್ಯವಾಗಿ ವರ್ತಿಸುವಂತೆ ಸೂಚಿಸುವುದಾಗಿ ಪ್ರತಿಕ್ರಿಯಿಸಿದರು. ಅಲ್ಲದೇ, ಮಾಹಿತಿ ಪೂರೈಸುವುದಾಗಿ ತಿಳಿಸಿದರು.
ಇನ್ನು ಗ್ರಾಮದಲ್ಲಿನ ಕಾಮಗಾರಿಗಳ ವಿಚಾರಕ್ಕೆ ಬರುವುದಾದರೆ ಬಹುತೇಕ ಕಾಮಗಾರಿಗಳು ಕಳಪೆ ಗುಣಮಟ್ಟದಿಂದ ಕೂಡಿರುವುದು ಮೇಲ್ನೋಟಕ್ಕೆ ಗೋಚರಿಸುತ್ತಿದೆ. ಅಮೃತ ಯೋಜನೆಯಡಿ ನಿರ್ಮಿಸಿದ ಶಾಲೆ ಶೌಚಗೃಹದಿಂದ ಹಿಡಿದು, ಎಲ್ ಡಬ್ಲುಎಂ ಸಹಿತ ಹಲವು ಕಾಮಗಾರಿಗಳು ಕಳಪೆಯಾಗಿದ್ದು, ಮಾಹಿತಿ ನೀಡದೇ ನುಣುಚಿಕೊಳ್ಳುತ್ತಿರುವ ಮತ್ತು ಆಕ್ರೋಶ ಹೊರಹಾಕುತ್ತಿರುವ ಪಿಡಿಒ ನಡೆ ಅನುಮಾನಕ್ಕೆ ಎಡೆ ಮಾಡಿದೆ.