ಸ್ವೀಟ್ ಜಾನ್ ಗೂಳಿ ರಣವೀರ್!

ಬಾಲಿವುಡ್​ನ ಜಾನ್ ಅಬ್ರಹಾಂ, ರಣವೀರ್ ಸಿಂಗ್ ಮುಂತಾದವರ ಕಟ್ಟುಮಸ್ತಾದ ಮೈಕಟ್ಟು ಕಂಡು ಎಲ್ಲರೂ ಹುಬ್ಬೇರಿಸುತ್ತಾರೆ. ಅಂತಹ ಹತ್ತಾರು ಸೆಲೆಬ್ರಿಟಿಗಳಿಗೆ ಕಸರತ್ತು ಹೇಳಿಕೊಟ್ಟವರೇ ಬಿಲ್ಲಿ ಗಾರ್ನಾನ್. ಐರ್ಲೆಂಡ್ ಮೂಲದ ಈ ಫಿಟ್ನೆಸ್ ಟ್ರೇನರ್ ಸದ್ಯ ಬಾಲಿವುಡ್ ಮಂದಿಗೆ ವ್ಯಾಯಾಮ ಪಾಠ ಹೇಳಿಕೊಡುತ್ತ ಭಾರತದಲ್ಲೇ ಸೆಟ್ಲ್ ಆಗಿದ್ದಾರೆ. ‘ದಿಗ್ವಿಜಯ 24×7 ನ್ಯೂಸ್’ ವಾಹಿನಿಗೆ ಅವರು ನೀಡಿದ ಸಂದರ್ಶನ ಇಲ್ಲಿದೆ.

| ಹರ್ಷವರ್ದನ್ ಬ್ಯಾಡನೂರು ಬೆಂಗಳೂರು

# ನೀವು ಭಾರತಕ್ಕೆ ಬಂದಿದ್ದು ಹೇಗೆ?

ನಾನು 16ನೇ ವಯಸ್ಸಿನಿಂದಲೇ ಫಿಟ್ನೆಸ್ ತರಬೇತಿ ನೀಡುತ್ತಿದ್ದೇನೆ. ಐರ್ಲೆಂಡ್, ಅಮೆರಿಕ, ಬ್ರಿಟನ್, ದುಬೈ ಸೇರಿ ಹಲವೆಡೆ ತರಬೇತಿ ನೀಡಿದ್ದೇನೆ. ಬಾಲಿವುಡ್ ನಟ ಜಾಕಿ ಭಗ್ನಾನಿ ಅವರಿಗೆ ತರಬೇತಿ ನೀಡಲು 2012ರಲ್ಲಿ ಮೊದಲ ಬಾರಿಗೆ ಭಾರತಕ್ಕೆ ಬಂದೆ. ‘ಅಜಬ್ ಗಜಬ್ ಲವ್’ ಚಿತ್ರದ ‘ಬೂಮ್ ಬೂಮ್ ಬೂಮ್.’ ಹಾಡಿನಲ್ಲಿ ಜಾಕಿ ಶರ್ಟ್​ಲೆಸ್ ಆಗಿ ಬಾಡಿ ತೋರಿಸುತ್ತಾರೆ. ಆ ಸನ್ನಿವೇಶಗಳಿಗಾಗಿ ಅವರಿಗೆ ಟ್ರೇನಿಂಗ್ ನೀಡಿದ್ದೆ.

# ಯಾವೆಲ್ಲ ಸೆಲೆಬ್ರಿಟಿಗಳಿಗೆ ಫಿಟ್ನೆಸ್ ಪಾಠ ಹೇಳಿಕೊಟ್ಟಿದ್ದೀರಿ?

ಜಾಕಿ ಭಗ್ನಾನಿ, ಜಾನ್ ಅಬ್ರಹಾಂ, ರಣವೀರ್ ಸಿಂಗ್, ನಿರ್ದೇಶಕ ಕರಣ್ ಜೋಹರ್ ಸೇರಿ ಇನ್ನೂ ಕೆಲವರಿಗೆ ತರಬೇತಿ ನೀಡಿದ್ದೇನೆ. ಈಗಲೂ ಅವ ರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದೇನೆ. ಆಹಾರ, ಡಯೆಟ್, ವರ್ಕೌಟ್, ಫಿಟ್ನೆಸ್ ಬಗ್ಗೆ ಅವರಿಗೆ ಏನೇ ಗೊಂದಲವಿದ್ದರೂ ನನ್ನನ್ನು ಕೇಳುತ್ತಾರೆ.

# ಸಾಮಾನ್ಯ ಜನರಿಗೆ ಫಿಟ್ನೆಸ್ ಟಿಪ್ಸ್ ಹೇಗೆ ನೀಡುತ್ತೀರಿ?

ಕ್ರಿಯಾಶೀಲರಾಗಿರಿ, ಚುರುಕಾಗಿರಿ ಅಂತ ಹೇಳಲು ಇಷ್ಟಪಡುತ್ತೇನೆ. ವಯಸ್ಸು ಹೆಚ್ಚಾದಂತೆ ಕ್ರಿಯಾಶೀಲತೆ ಕಳೆದುಕೊಳ್ಳುತ್ತೀರಿ ಅಂತೆಲ್ಲ ಅಂದುಕೊಳ್ಳಬೇಡಿ. ಪ್ರತಿದಿನ ಕಡಿಮೆ ಅಂದರೂ 30 ನಿಮಿಷ ವ್ಯಾಯಾಮ ಮಾಡಿ. ಸಣ್ಣಮಟ್ಟದಲ್ಲಿ ವ್ಯಾಯಾಮ ಶುರು ಮಾಡಿ ಕ್ರಮೇಣ ಸಮಯ ಹೆಚ್ಚಿಸುತ್ತ ಹೋಗಿ. ಅದು ನಿಮ್ಮ ಆರೋಗ್ಯಕ್ಕೆ ವರದಾನವಾಗುವುದರಲ್ಲಿ ಸಂಶಯವಿಲ್ಲ.

# ಜಾನ್ ಅಬ್ರಹಾಂ ಮತ್ತು ರಣವೀರ್ ಸಿಂಗ್ ಅವರಿಗೆ ಫಿಟ್ನೆಸ್ ತರಬೇತಿ ನೀಡಿದ ಅನುಭವ ಹೇಗಿತ್ತು?

ವರ್ಕೌಟ್ ಮತ್ತು ಡೆಡಿಕೇಷನ್ ವಿಷಯಗಳಲ್ಲಿ ಇಬ್ಬರೂ ಒಂದೇ ರೀತಿ. ಪ್ರತಿದಿನ ತಾಸುಗಟ್ಟಲೆ ದೇಹ ದಂಡಿಸಿ, ಬೆವರು ಹರಿಸಿ ಸುಸ್ತಾದ ಬಳಿಕ ಆಗೊಮ್ಮೆ ಈಗೊಮ್ಮೆ ಚೆನ್ನಾಗಿ ತಿನ್ನುತ್ತಾರೆ. ಕೆಲವೊಮ್ಮೆ ತುಂಬ ಕಠಿಣ ವರ್ಕೌಟ್ ಆದರಂತೂ ಒಂದು ದಿನ ಹೆಚ್ಚು ವಿಶ್ರಾಂತಿ ಪಡೆದಿದ್ದೂ ಇದೆ. ಜತೆಗೆ ತಮ್ಮ ಪಾತ್ರಕ್ಕೆ ಯಾವ ರೀತಿಯ ದೇಹ ಬೇಕೋ ಅದನ್ನು ಸಾಧಿಸುವವರೆಗೂ ಸುಮ್ಮನೆ ಕೂರುವುದಿಲ್ಲ.

# ನೀವು ಕಂಡಂತೆ ಜಾನ್ ವ್ಯಕ್ತಿತ್ವ ಎಂಥದ್ದು?

ಜಾನ್ ತುಂಬ ಸ್ವೀಟ್ ಅನಿಸುತ್ತಾರೆ. ನಾನು ಹೇಳುವ ಯಾವುದೇ ವ್ಯಾಯಾಮವನ್ನೂ ಆಗಲ್ಲ ಅಂತ ಹೇಳುವುದಿಲ್ಲ. ಆದರೆ ಲೆಗ್ ವರ್ಕೌಟ್ ಮಾಡುವಾಗ ಹಿಂದೆ ಮುಂದೆ ನೋಡುತ್ತಾರಾದರೂ, ಆಗಲ್ಲ ಅಂತ ಹೇಳುವುದಿಲ್ಲ. ಹೀಗಾಗಿಯೇ ಜಾನ್ ಹಲವು ವರ್ಷಗಳಿಂದ ಒಂದೇ ರೀತಿ ಬಾಡಿ ಮೇಂಟೇನ್ ಮಾಡಲು ಸಾಧ್ಯವಾಗಿದೆ.

# ರಣವೀರ್ ಸಿಂಗ್ ಬಗ್ಗೆ ನಿಮ್ಮ ಅಭಿಪ್ರಾಯ..?

ಅವರು ಗೂಳಿಯಿದ್ದಂತೆ. ಅಷ್ಟು ಶಕ್ತಿ ಅವರಲ್ಲಿದೆ. ಅವರು ವರ್ಕೌಟ್ ಮಾಡುವುದನ್ನು ನೋಡಿದರೆ, ಎಂಥವರೂ ಆಶ್ಚರ್ಯ ಪಡುತ್ತಾರೆ. ನನ್ನಿಂದ ಇನ್ನೇನೂ ಆಗಲ್ಲ ಎನ್ನುವವರೆಗೂ, ದೇಹದ ಅಳಿದುಳಿದ ಶಕ್ತಿ ಖಾಲಿ ಆಗುವವರೆಗೂ ವರ್ಕೌಟ್ ಮಾಡುತ್ತಾರೆ. ನನ್ನ ಶಿಕ್ಷಣವನ್ನು ಗಮನಿಸಿಯೋ ಅಥವಾ ಅನುಭವವನ್ನು ನೋಡಿಯೋ ಗೊತ್ತಿಲ್ಲ ಅವರು ತುಂಬ ಗೌರವ ಕೊಡುತ್ತಾರೆ.

# ವರ್ಕೌಟ್ ಮಾಡುವಾಗ ಡಯಟ್ ಯಾಕೆ ಮುಖ್ಯ?

ಆರೋಗ್ಯಕರವಾಗಿರಲು ಯಾವಾಗಲೂ ಡಯಟ್ ಮಾಡುತ್ತಿರಬೇಕು ಅಂತೇನಿಲ್ಲ. ಹಾಗೇ ಆರೋಗ್ಯಕರ ಸಮತೋಲಿತ ಆಹಾರವನ್ನು ಸೇವಿಸುವುದು ಅಸಾಧ್ಯವಲ್ಲ. ನಮ್ಮ ಆಯ್ಕೆಗಳೇನು ಮತ್ತು ಅದಕ್ಕೆ ಸ್ಥಿರವಾಗಿರಲು ನಮ್ಮಲ್ಲಿ ಬಯಕೆ ಎಷ್ಟಿದೆ ಎಂಬ ಅಂಶಗಳನ್ನು ಗಮನದಲ್ಲಿರಿಸಿಕೊಂಡರೆ ಸಾಕು. ನಾವು ಸೇವಿಸುವ ಸಮತೋಲಿತ ಜೀವನಶೈಲಿ ಆಹಾರ, ಅದ್ಭುತ ಫಲಿತಾಂಶ ನೀಡುತ್ತದೆ.

# ದಪ್ಪಗಿರುವವರು ಯಾವ ರೀತಿ ವರ್ಕೌಟ್ ಮಾಡಿದರೆ ಒಳ್ಳೆಯದು?

ದಪ್ಪಗಾಗಲು ಹಲವು ಕಾರಣಗಳಿರುತ್ತವೆ. ಆ ಕಾರಣವನ್ನು ಮೊದಲು ನಾವು ಕಂಡುಹಿಡಿದರೆ, ನಂತರ ವರ್ಕೌಟ್ ಪ್ಲಾ್ಯನ್ ಮಾಡಬಹುದು. ಅವರ ಆರೋಗ್ಯಕ್ಕೆ ಸಮಸ್ಯೆಯಾಗದಂತೆ ಪರಿಣಾಮಕಾರಿಯಾಗಿ ಕ್ಯಾಲರಿ ಬರ್ನ್ ಮಾಡಿ, ತೂಕ ಇಳಿಸಿಕೊಳ್ಳಬಹುದಾದ ವರ್ಕೌಟ್ ಮಾಡಿಸಬಹುದು.

# ಹಾಗೇ ಸಣ್ಣಗಿರುವವರು ತೂಕ ಹೇಗೆ ಹೆಚ್ಚಿಸಿಕೊಳ್ಳಬಹುದು?

ಸಣ್ಣಗಿರುವವರು, ಚಿಂತೆ ಮಾಡುವುದನ್ನು ಬಿಟ್ಟು, ಚೆನ್ನಾಗಿ ತಿನ್ನಬೇಕು. ಭಾರತದಲ್ಲಿ ಹೆಚ್ಚು ಸಸ್ಯಾಹಾರಿಗಳಿರುವ ಕಾರಣ, ದೇಹಕ್ಕೆ ಪೊ›ಟೀನ್ ಸೇರುತ್ತಿರುತ್ತದೆ. ತೂಕ ಕಡಿಮೆ ಅಂತನ್ನಿಸಿದರೆ, ಪ್ರತಿದಿನಕ್ಕಿಂತ ಸ್ವಲ್ಪ ಹೆಚ್ಚು ತಿನ್ನಿ.

Leave a Reply

Your email address will not be published. Required fields are marked *