ಸ್ವಾವಲಂಬಿ ಜೀವನಕ್ಕೆ ವೀಳ್ಯದೆಲೆ ಕೃಷಿ

ಕುದೂರು: ‘‘ತಲೆಮೇಲೆ ಬಂದದ್ದು, ಎಲೆ ಮೇಲೆ ಹೋಗಲಿ’ ಎನ್ನುವ ಗಾದೆ ಮಾತಿನಂತೆ ಪ್ರತಿಯೊಂದು ಶುಭ ಕಾರ್ಯವಾಗಲಿ, ಅಶುಭ ಕಾರ್ಯವಾಗಲಿ ವೀಳ್ಯದೆಲೆ ಇರಲೇಬೆಕು.

ಮಾಗಡಿ ತಾಲೂಕು ಕುದೂರು ಹೋಬಳಿಯ ರಂಗಯ್ಯನಪಾಳ್ಯ, ಕಾಗಿಮಡು ಗ್ರಾಮಗಳು ವೀಳ್ಯದೆಲೆ ಕೃಷಿಯಲ್ಲಿ ಹೆಸರುವಾಸಿ. ಇಲ್ಲಿನ 120 ಕುಟುಂಬಗಳು ವೀಳ್ಯದೆಲೆ ನಂಬಿಯೇ ಜೀವನ ಸಾಗಿಸುತ್ತಿವೆ.

ಇಲ್ಲಿ ಬೆಳೆಯುವ ವೀಳ್ಯದೆಲೆಗೆ ಯಾವುದೇ ರಾಸಾಯನಿಕ ಬಳಸುವುದಿಲ್ಲ. ಬದಲಾಗಿ ಕೊಟ್ಟಿಗೆ ಗೊಬ್ಬರ ಬಳಕೆ ಮಾಡಲಾಗುತ್ತದೆ. ಸಾಮಾನ್ಯವಾಗಿ ವೀಳ್ಯದೆಲೆಯನ್ನು ಲಕ್ಷ್ಮೀಗೆ ಹೋಲಿಕೆ ಮಾಡುತ್ತಾರೆ. ಆದ್ದರಿಂದ ವೀಳ್ಯದೆಲೆ ಕೃಷಿ ಈ ಭಾಗದ ರೈತರ ಬ್ಯಾಂಕ್ ಇದ್ದಂತೆ. ರೈತರು ವೀಳ್ಯದೆಲೆ ತೋಟಕ್ಕೆ ಕಾಲಿಡುವಾಗ ಚಪ್ಪಲಿ ಧರಿಸುವುದಿಲ್ಲ. ಇಲ್ಲಿ ಬೆಳೆಯುವ ವೀಳ್ಯದೆಲೆ ಬೆಂಗಳೂರು, ತುಮಕೂರು, ದೊಡ್ಡಬಳ್ಳಾಪುರ ಮತ್ತು ತಮಿಳುನಾಡಿನ ಮಧುರೈ, ಧರ್ಮಪುರಿ ಜಿಲ್ಲೆಗಳಲ್ಲಿ ಹೆಚ್ಚು ಮಾರಾಟವಾಗುತ್ತದೆ.

ವಿಶೇಷ ದಿನಗಳಲ್ಲಿ ಬೆಲೆ ಹೆಚ್ಚು: 100 ಎಲೆಗಳ ಒಂದು ಕಟ್ಟಿಗೆ ಮಾಮೂಲು ದಿನಗಳಲ್ಲಿ 20ರಿಂದ 30 ರೂ. ಇದ್ದರೆ, ಹಬ್ಬದ ಹರಿದಿನಗಳಲ್ಲಿ 80ರಿಂದ 100 ರೂ. ವರೆಗೆ ಮಾರಾಟವಾಗುತ್ತದೆ. ವರಮಹಾಲಕ್ಷ್ಮಿ ಮತ್ತು ಗಣೇಶಹಬ್ಬದಲ್ಲಿ ಎಲೆಗಳಿಗೆ ಬೇಡಿಕೆ ಹೆಚ್ಚು ಮತ್ತು ಬೆಲೆಯೂ ಹೆಚ್ಚು.

ಬೆಳವಣಿಗೆ ಹಂತಗಳು: ಹದ ಮಾಡಿದ ಭೂಮಿಯಲ್ಲಿ ವೀಳ್ಯದೆಲೆ ಬಳ್ಳಿ ನೆಟ್ಟು ಅಡಕೆ ಮರ ಅಥವಾ ಮರದ ದಿಮ್ಮಿಯ ಆಶ್ರಯ ನೀಡಿ, ಸ್ವಾಭಾವಿಕ ಗೊಬ್ಬರ ನೀಡಿದರೆ, ವರ್ಷದೊಳಗೆ ಬಳ್ಳಿಗಳು ಹಬ್ಬಿ ಕಟಾವಿಗೆ ಬರುತ್ತವೆ. ನಂತರ ಒಂದೂವರೆ ತಿಂಗಳಿಗೊಮ್ಮೆ ಎಲೆಗಳ ಕಟಾವು ಮಾಡಬಹುದಾಗಿದೆ.

ವೀಳ್ಯದೆಲೆ ವಿಧಗಳು: ನಾಟಿ, ಅಂಬಾಡಿ, ರಾಣಿಬೆನ್ನೂರು ಹೀಗೆ ಮೂರುವಿಧದ ಎಲೆಗಳನ್ನು ಇಲ್ಲಿ ಬೆಳೆಯಲಾಗುತ್ತಿದೆ. ನಾಟಿ ಎಲೆ ಆರೋಗ್ಯಕ್ಕೆ ಒಳ್ಳೆಯದಾಗಿದ್ದು ಕಟಾವಿನ ನಂತರ ಒಂದು ವಾರದವರೆಗೂ ಒಣಗದೆ ಹಸಿರಾಗಿರುತ್ತದೆ. ಆದ್ದರಿಂದ ಮಾರುಕಟ್ಟೆಯಲ್ಲಿ ಈ ಎಲೆಗೆ ಹೆಚ್ಚು ಬೇಡಿಕೆಯಿದೆ.

ರಾಣಿಬೆನ್ನೂರು ಎಲೆಯಲ್ಲಿ ಹಸಿರು ಕಡಿಮೆ, ಬಿಳಿ-ಹಸಿರು ಮಿಶ್ರ ಬಣ್ಣದಲ್ಲಿರುತ್ತದೆ. ಕಟಾವಿನ ನಂತರ ಒಂದು ದಿನ ಮಾತ್ರ ಹಸಿರಾಗಿದ್ದು ನಂತರ ಒಣಗುತ್ತದೆ. ಅಂಗಡಿ, ದೇವಾಲಯಗಳಲ್ಲಿ ಮತ್ತು ಅಲಂಕಾರಕ್ಕಾಗಿ ಈ ಎಲೆ ಹೆಚ್ಚು ಬಳಸಲ್ಪಡುತ್ತದೆ.

ಅಂಬಾಡಿ ಎಲೆ ಶುಭ ಸಮಾರಂಭಗಳು ಹಾಗೂ ಮಾರುಕಟ್ಟೆಗಳಲ್ಲಿ ಬೀಡಾ ತಯಾರಿಕೆಗೆ ಉಪಯೋಗಿಸಲಾಗುತ್ತದೆ. ಈ ಎಲೆಗೆ ಮಾರುಕಟ್ಟೆಯಲ್ಲಿ ಬೇಡಿಕೆ ಜಾಸ್ತಿ ಇದೆ.

ವೀಳ್ಯದೆಲೆ ಕೃಷಿ ಮಾಡಿ ಜೀವನದಲ್ಲಿ ಸೋತಿದ್ದು ಕಂಡಿಲ್ಲ. ರೈತರ ಪಾಲಿಗೆ ವೀಳ್ಯದೆಲೆ ಲಕ್ಷ್ಮಿಯಿದ್ದಂತೆ. ಕೃಷಿ ಇಲಾಖೆಯವರೂ ನಮ್ಮ ಗ್ರಾಮದ ಹೊಲಗಳಿಗೆ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

| ಆರ್.ಎನ್. ರವಿಕುಮಾರ್, ರೈತ, ರಂಗಯ್ಯಪಾಳ್ಯ

 

ವೀಳ್ಯದೆಲೆ ಕೃಷಿ ಈ ಗ್ರಾಮಗಳ ರೈತರ ಬದುಕಿಗೆ ಬೆಳಕಾಗಿದೆ. ಅತೀವೃಷ್ಟಿ, ಅನಾವೃಷ್ಟಿ ಸಮಯದಲ್ಲೂ ಬೆಳೆ ಕುಗ್ಗಿಲ್ಲ. ಇಂತಹ ಗ್ರಾಮಗಳನ್ನು, ಕೃಷಿಕರನ್ನು ಸರ್ಕಾರ ಗುರುತಿಸಿ, ಪ್ರೋತ್ಸಾಹಿಸಬೇಕಾಗಿದೆ.

| ಮಂಜುನಾಥ್, ಅಧ್ಯಕ್ಷರು, ಹಸಿರು ಸೇನೆ, ಕುದೂರು ಹೋಬಳಿ ಘಟಕ

Leave a Reply

Your email address will not be published. Required fields are marked *