ಸ್ವಾವಲಂಬಿ ಜೀವನಕ್ಕೆ ತರಬೇತಿ ಅಗತ್ಯವಿದೆ

ಸಿದ್ದಾಪುರ: ಅಭಿವೃದ್ಧಿಪರ ಚಿಂತನೆ ನಡೆಸುವ ಸಿ.ಎಸ್.ಗೌಡರ್ ಹಾಗೂ ಆಧಾರ ಸಂಸ್ಥೆಯಂಥ ಸ್ವಯಂಸೇವಾ ಸಂಸ್ಥೆಗಳು ರಚನಾತ್ಮಕವಾದ ಕೆಲಸ ಹಾಗೂ ಸ್ವಾವಲಂಬಿ ಜೀವನ ನಡೆಸಲು ತರಬೇತಿ ನೀಡುವ ಅಗತ್ಯವಿದೆ ಎಂದು ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಪಟ್ಟಣದ ಲಯನ್ಸ್ ಬಾಲಭವನದಲ್ಲಿ ಸಿದ್ದಾಪುರದ ಆಧಾರ ಸಂಸ್ಥೆಯ ಸಂಕಲ್ಪ ದಿನಾಚರಣೆ ಉದ್ಘಾಟಿಸಿ ದಿ. ಎಂ.ಟಿ. ಕೊಡಿಯಾ ಅವರ ನೆನಪಿನಲ್ಲಿ ನೀಡುವ ಆಧಾರಶ್ರೀ ಪ್ರಶಸ್ತಿಯನ್ನು ತಾಲೂಕು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಗೌಡರ್ ಅವರಿಗೆ ಭಾನುವಾರ ಪ್ರದಾನ ಮಾಡಿ ಅವರು ಮಾತನಾಡಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸಿ.ಎಸ್. ಗೌಡರ್, ಪ್ರಶಸ್ತಿಗಿಂತ ಬದುಕು ಮುಖ್ಯ. ವ್ಯಕ್ತಿಗಿಂತ ವ್ಯಕ್ತಿತ್ವ ಮುಖ್ಯ ಎಂದು ತಿಳಿದುಕೊಂಡಿದ್ದೇನೆ. ಸಂಘಟನೆ ಹಾಗೂ ಸಂಘ-ಸಂಸ್ಥೆಗಳ ಮೂಲಕ ಸಮಾಜದ ಅಭಿವೃದ್ಧಿಯಲ್ಲಿ ನಿವೃತ್ತ ನೌಕರರು ತೊಡಗಿಕೊಳ್ಳುವುದು ಉತ್ತಮ ಬೆಳವಣಿಗೆ. ಒಳ್ಳೆಯ ಕೆಲಸಕ್ಕೆ ಯಾವತ್ತೂ ಸಹಕಾರ ನೀಡುತ್ತೇನೆ ಎಂದರು.

ವಕೀಲ ಜಿ.ಟಿ. ನಾಯ್ಕ ಮಣಕಿನಗುಳಿ ಮಾತನಾಡಿ, ಇಂದಿನ ದಿನಗಳಲ್ಲಿ ಸರ್ಕಾರಿ ನೌಕರಿಗಿಂತ ಸ್ವಾವಲಂಬನೆ ಜೀವನ ನಡೆಸುವುದಕ್ಕೆ ಮುಂದಾಗಬೇಕು. ರಾಜಕಿಯೇತರ ವ್ಯಕ್ತಿಯಾಗಿ ಸಮಾಜದಲ್ಲಿ ಬೆಳೆಯಬೇಕು ಎಂದರು.

ತಾಪಂ ಅಧ್ಯಕ್ಷ ಸುಧೀರ್ ಬಿ. ಗೌಡರ್ ಅಧ್ಯಕ್ಷತೆ ವಹಿಸಿದ್ದರು. ಎಪಿಎಂಸಿ ಅಧ್ಯಕ್ಷ ಕೆ.ಜಿ. ನಾಗರಾಜ, ಆಧಾರ ಸಂಸ್ಥೆಯ ಸಂಸ್ಥಾಪಕ ಉಪಾಧ್ಯಕ್ಷ ನಾಗರಾಜ ಕೊಡಿಯಾ, ಖಜಾಂಚಿ ಜಗದೀಶ ನಾಯ್ಕ ಉಪಸ್ಥಿತರಿದ್ದರು. ಆಧಾರ ಸಂಸ್ಥೆ ಅಧ್ಯಕ್ಷ ನಾಗರಾಜ ನಾಯ್ಕ ಮಾಳ್ಕೋಡ ಸ್ವಾಗತಿಸಿದರು. ಸುಮಿತ್ರಾ ಶೇಟ್, ಸುರೇಶ ಕಡಕೇರಿ ನಿರ್ವಹಿಸಿದರು.

Leave a Reply

Your email address will not be published. Required fields are marked *