ಮೈಸೂರು: ಸ್ವಾಮಿ ವಿವೇಕಾನಂದರು ಸನ್ಯಾಸಿಯಾಗಿದ್ದರೂ ಸಮಾಜವಾದಿಯಾಗಿದ್ದರು. ಅವರಲ್ಲಿ ಸಾಮಾಜಿಕ ಪ್ರಜ್ಞೆ ಅಪಾರವಾಗಿತ್ತು ಎಂದು ಸಾಹಿತಿ ಡಾ.ಸಿ.ಪಿ. ಕೃಷ್ಣಕುಮಾರ್ ಹೇಳಿದರು.
ಶ್ರೀ ರಾಮಕೃಷ್ಣ ಜಾತ್ರಾ ಮಹೋತ್ಸವ ಸಮಿತಿ ವತಿಯಿಂದ ರಾಮಕೃಷ್ಣನಗರದ ರಾಮಕೃಷ್ಣ ವೃತ್ತದಲ್ಲಿ ಮಂಗಳವಾರ ಶ್ರೀ ರಾಮಕೃಷ್ಣ ಪರಮಹಂಸರ 188ನೇ ಜನ್ಮದಿನೋತ್ಸವ ಪ್ರಯುಕ್ತ ‘ವಿವೇಕಾನಂದರ ಸಾಹಿತ್ಯದಲ್ಲಿ ಆಧ್ಯಾತ್ಮ’ ವಿಷಯದ ಕುರಿತು ಏರ್ಪಡಿಸಿದ್ದ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿ, ನಾನು ಸಮಾಜವಾದಿ ಎಂದು ಸ್ವತಃ ವಿವೇಕಾನಂದರೇ ಹೇಳಿಕೊಂಡಿದ್ದರು. ಈ ಕಾರಣಕ್ಕೆ ಅವರು ಸಮಾಜದ ದುಃಖ ಪರಿಹರಿಸುವ ಕಡೆಗೆ ಹೆಚ್ಚಿನ ಒತ್ತು ನೀಡಿದ್ದರು ಎಂದು ಹೇಳಿದರು.
ವಿವೇಕಾನಂದರು ಆಧ್ಯಾತ್ಮಲೋಲರಾಗಿ ಉಳಿಯದೆ ಸಮಾಜ ಸೇವೆಗಾಗಿ ತಮ್ಮ ಬದುಕನ್ನು ಮುಡಿಪಾಗಿಟ್ಟರು. ಅವರು ಆಧ್ಯಾತ್ಮಲೊ ೀಲುಪತೆ ತಿರಸ್ಕರಿಸಿ ಬಡಜನರ ಉದ್ಧಾರಕ್ಕೆ ದುಡಿದರು. ‘ದರಿದ್ರ ದೇವೋಭವ’ ಘೋಷಣೆಯ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಯ ಉದ್ಧಾರಕ್ಕೆ ಶ್ರಮಿಸಿದರು. ಸ್ವಾಮಿ ವಿವೇಕಾನಂದ ಜೀವನ ಮಾನವ ಸೇವೆಯ ಬೃಹತ್ ಗೀತೆ ಇದ್ದ ಹಾಗೆ ಎಂದು ಅಭಿಪ್ರಾಯಪಟ್ಟರು.
ಆಧ್ಯಾತ್ಮಕ್ಕಿಂತ ಅನ್ನ ಮುಖ್ಯ ಎಂಬುದನ್ನು ವಿವೇಕಾನಂದರು ಪ್ರತಿಪಾದಿಸಿದ್ದರು. ಮೊದಲು ಆಹಾರ ಆ ನಂತರ ಬ್ರಹ್ಮವಿಹಾರ ಇರ ಬೇಕು, ಹಸಿದ ವ್ಯಕ್ತಿಗೆ ಧರ್ಮ ಬೋಧನೆ ಮಾಡುವುದು ಪಾಪದ ಕೆಲಸ. ಜನರ ಹಸಿವು, ಅನಾರೋಗ್ಯ, ಅಜ್ಞಾನ ಪರಿಹರಿಸಲು ಮೊದಲ ಆದ್ಯತೆ ನೀಡಬೇಕು, ನಂತರದ ಆದ್ಯತೆಯನ್ನು ವೇದಾಂತಕ್ಕೆ ನೀಡಬೇಕು. ಪ್ರತಿಯೊಂದು ಜೀವಿಯಲ್ಲೂ ಶಿವ ಇದ್ದಾನೆ ಎಂದು ತಿಳಿದು ಎಲ್ಲರ ಸೇವೆ ಮಾಡಬೇಕು ಎಂಬುದು ವಿವೇಕಾಂದರ ಅಭಿಪ್ರಾಯವಾಗಿತ್ತು ಎಂದರು.
ವೇದಿಕೆಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಡಿ. ಮಾದೇಗೌಡ, ಸುಯೋಗ್ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ.ಎಸ್.ಪಿ. ಯೋಗಣ್ಣ, ರಾಮಕೃಷ್ಣ ಸೇವಾ ಸಂಘದ ಅಧ್ಯಕ್ಷ ಎಂ. ಪಾಪೇಗೌಡ, ಶ್ರೀದೇವಿ ಮಹಿಳಾ ಮಂಡಳಿ ಅಧ್ಯಕ್ಷೆ ಮಂಜುಳಾ ಬಸವರಾಜ್, ರಾಮಕೃಷ್ಣ ವಿದ್ಯಾಕೇಂದ್ರದ ಕಾರ್ಯನಿರ್ವಾಹಕ ಅಧಿಕಾರಿ ಪ್ರೊ.ಜಿ. ಚಂದ್ರಶೇಖರ್ ಇದ್ದರು.