ಸ್ವಾಮಿನಾಥನ್ ವರದಿ ಸುಳ್ಳು ಹೇಳುವ ಮೋದಿ

ವಿಜಯವಾಣಿ ಸುದ್ದಿಜಾಲ ಕಲಬುರಗಿ
ತೊಗರಿಗೆ ಕನಿಷ್ಠ 7500 ರೂ. ಸೇರಿ ರೈತರ ಕೃಷಿ ಉತ್ಪನ್ನಗಳಿಗೆ ವೆಚ್ಚದ ಶೇ.50 ಸೇರಿಸಿ ಬೆಂಬಲ ಬೆಲೆ ನೀಡಬೇಕೆಂಬ ಡಾ.ಸ್ವಾಮಿನಾಥನ್ ವರದಿ ಇದುವರೆಗೆ ಅನುಷ್ಠಾನಗೊಂಡಿಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿ ಜಾರಿಗೊಳಿಸಿದ್ದಾರೆ ಎಂದು ಸುಳ್ಳು ಹೇಳುವ ಮೂಲಕ ರೈತರು ಹಾಗೂ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಅಖಿಲ ಭಾರತ ಕಿಸಾನ್ ಸಭಾ ರಾಷ್ಟ್ರೀಯ ಅಧ್ಯಕ್ಷ ಡಾ.ಅಶೋಕ ಧಾವಲೆ ಕಿಡಿಕಾರಿದ್ದಾರೆ.
ಕರ್ನಾಟಕ ಪ್ರಾಂತ ರೈತ ಸಂಘ, ನೇಷನ್ ಫಾರ್ ಫಾರ್ಮರ್ ಸಂಘಟನೆಗಳ ಸಹಯೋಗದಡಿ ಜಗತ್ ವೃತ್ತದ ಟ್ಯಾಂಕ್ಬಂಡ್ ರಸ್ತೆಯಲ್ಲಿ ಬುಧವಾರ ಆಯೋಜಿಸಿದ್ದ ವಿಭಾಗ ಮಟ್ಟದ ಸಮಾವೇಶ ಉದ್ಘಾಟಿಸಿ ಮುಖ್ಯ ಭಾಷಣ ಮಾಡಿದ ಅವರು, ತಕ್ಷಣವೇ ಎಲ್ಲೆಡೆ ತೊಗರಿ ಖರೀದಿ ಕೇಂದ್ರಗಳನ್ನು ಆರಂಭಿಸುವ ಮೂಲಕ ರೈತರ ನೆರವಿಗೆ ಬರಬೇಕು. ಇಲ್ಲವಾದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಗುಡುಗಿದರು.
ಕಬ್ಬು ಬೆಳೆಗಾರರಿಗೆ ಬಾಕಿ ಹಣ ಪಾವತಿಸುವಂತೆ ಸಕ್ಕರೆ ಕಾರ್ಖಾನೆಗಳ ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು. ಮಾರುಕಟ್ಟೆ ಅಂಗಡಿಗಳಲ್ಲಿ ಸಕ್ಕರೆ, ಬೇಳೆ ಉದ್ರಿ ಸಿಗುವುದಿಲ್ಲ. ಆದರೆ ರೈತರು ಮಾತ್ರ ತಮ್ಮ ಉತ್ಪನ್ನಗಳನ್ನು ಕಾರ್ಖಾನೆಯವರಿಗೆ ಉದ್ರಿ ನೀಡಬೇಕೇ ಎಂದು ಪ್ರಶ್ನಿಸಿದ ಅವರು, ಕಬ್ಬಿನ ಬಾಕಿ ಕೊಡದಿದ್ದರೆ ಶರ್ಟ್​ ಕಾಲರ್ ಹಿಡಿದು ವಸೂಲಿ ಮಾಡಬೇಕಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದರು.
ಸರ್ಕಾರಿ ನೌಕರರಂತೆ 60 ವರ್ಷ ಮೀರಿದ ರೈತರಿಗೆ ಪಿಂಚಣಿ ನೀಡಬೇಕು. ಉದ್ಯೋಗ ಖಾತ್ರಿ ವೇತನ ಹೆಚ್ಚಿಸಬೇಕು. ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕವಾಗಿ ಬೆಂಬಲ ಬೆಲೆ ನಿಗದಿಪಡಿಸಬೇಕು. ರೈತರ ಬೇಡಿಕೆಗಳಿಗೆ ತಕ್ಷಣವೇ ಸ್ಪಂದಿಸಬೇಕು. ಇಲ್ಲದಿದ್ದರೆ ಮೋದಿ ಹಠಾವೋ ಹೋರಾಟ ಆರಂಭಿಸಬೇಕಾಗುತ್ತದೆ ಎಂದು ಡಾ.ಧಾವಲೆ ಹೇಳಿದರು.
ಶ್ರೀಶೈಲ ಸಾರಂಗಮಠದ ಜಗದ್ಗುರು ಶ್ರೀ ಡಾ.ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ, ಶ್ರೀ ಮಹಾಂತ ಸ್ವಾಮೀಜಿ, ಶ್ರೀ ಸಂಗಮೇಶ್ವರ ಶಿವಾಚಾರ್ಯರು ಹಿರೇಮಠ ಮುದ್ದಡಗಿ ಮೊದಲಾದ ಪೂಜ್ಯರು ಸಾನ್ನಿಧ್ಯ ವಹಿಸಿದ್ದರು.
ಕೆಪಿಆರ್ಎಸ್ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಉಪಾಧ್ಯಕ್ಷ ಮಾರುತಿ ಮಾನ್ಪಡೆ, ನೇಷನ್ ಫಾರ್ ಫಾರ್ಮರ್ ಪ್ರಮುಖ ಡಾ.ಅಲ್ತಾಫ್ ಇನಾಮದಾರ, ರೈತ ಸಂಘದ ಅಧ್ಯಕ್ಷರಾದ ಅಣ್ಣಾರಾವ ಈಳಗೇರ ವಿಜಯಪುರ, ನಿಂಗನಗೌಡ ರಾಯಚೂರು, ಗೌರಮ್ಮ ಪಾಟೀಲ್, ಗಂಗಮ್ಮ ಬಿರಾದಾರ, ಅಶೋಕ ಮ್ಯಾಗೇರಿ, ಶಾಂತಪ್ಪ ಪಾಟೀಲ್, ಪಾಂಡುರಂಗ ಮಾವಿನಕರ್, ಸುಭಾಷ ಹೊಸಮನಿ, ಸಿದ್ದಲಿಂಗಯ್ಯ ಸ್ವಾಮಿ ಯಡ್ಡಳ್ಳಿ, ಮಲ್ಲಣಗೌಡ, ಮಹಾದೇವಪ್ಪ ಬೀದರ್, ಯಲ್ಲಪ್ಪ ಚಿನ್ನೆಕರ್ ಇತರರಿದ್ದರು.
ರೈತರ ನೆರವಿಗೆ ಧಾವಿಸಿ: ಕಲಬುರಗಿ ಜಿಲ್ಲೆಯಲ್ಲಿ 13 ಲಕ್ಷ ಸೇರಿ ವಿವಿಧ ಜಿಲ್ಲೆಗಳ 65 ಲಕ್ಷ ಎಕರೆಯಲ್ಲಿ ತೊಗರಿ ಬೆಳೆದಿದ್ದು, ಕೂಡಲೇ ರೈತರ ನೆರವಿಗೆ ಧಾವಿಸಿ ಖರೀದಿ ಆರಂಭಿಸದಿದ್ದರೆ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್ಗಢದಲ್ಲಿ ರೈತರು, ಕೂಲಿಕಾರ್ಮಿಕರು ಸೇರಿ ನಿಮ್ಮ ಹೇಳ ಹೆಸರಿಲ್ಲದಂತೆ ಮಾಡುತ್ತಾರೆ ಎಂದು ಕೆಪಿಆರ್ಎಸ್ ರಾಜ್ಯ ಉಪಾಧ್ಯಕ್ಷ ಮಾರುತಿ ಮಾನ್ಪಡೆ ಕೇಂದ್ರ ಸರ್ಕಾರಕ್ಕೆ ಸಂದೇಶ ರವಾನಿಸಿದರು. ಕ್ವಿಂಟಾಲ್ ತೊಗರಿಗೆ ಕನಿಷ್ಠ 7500 ರೂ. ಸಿಗುವಂತೆ ಮಾಡಬೇಕು. 18ರೊಳಗೆ ಖರೀದಿ ಆರಂಭಿಸಬೇಕು ಎಂದು ಭಾವಾವೇಷದಲ್ಲಿ ಪ್ರಧಾನಿ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದರು. ನಿನ್ನ ಡೊಂಗಿತನ ನಡೆಯಲ್ಲ. ಮುಂದಿನ ಸಲ ಸೋಲಿಸದೆ ಬಿಡಲ್ಲ ಎಂದು ಗುಡುಗಿದರು.