Monday, 19th November 2018  

Vijayavani

ರಾಜಧಾನಿಯಲ್ಲಿ ಹಸಿರು ಕ್ರಾಂತಿ-ಸಿಎಂ ಎಚ್​ಡಿಕೆ, ಡಿಸಿಎಂ ಪರಮೇಶ್ವರ್​ಗೆ ಡೆಡ್​​ಲೈನ್-ಕೂಡಲೇ ಸ್ಥಳಕ್ಕೆ ಬರುವಂತೆ ರೈತರ ಪಟ್ಟು        ಸೈಟ್ ಕೇಳ್ತಿಲ್ಲ, BMW ಕಾರೂ ಕೇಳ್ತಿಲ್ಲ-ನಾವು ಕೇಳ್ತಿರೋದು ಬೆಳೆದ ಬೆಲೆಗೆ ಬೆಲೆಯಷ್ಟೇ-ಸಚಿವ ಕಾಶಂಪೂರ್​​ಗೆ ಮನವಿ ಸಲ್ಲಿಕೆ        ರೈತರು, ಹೆಣ್ಮಕ್ಕಳ ವಿಚಾರದಲ್ಲಿ ಗೌರವ ಇದೆ-ನನ್ನ ಹೇಳಿಕೆಯಲ್ಲಿ ಯಾವುದೇ ದುರುದ್ದೇಶ ಇಲ್ಲ-ಸಿಎಂ ಹೇಳಿಕೆ ಬಿಡುಗಡೆ        ಸಿಎಂ ಕೂಡಲೇ ಕ್ಷಮೆ ಕೇಳಬೇಕು-ನಾಳಿನ ಕೋರ್​​​ ಕಮಿಟಿ ಸಭೆಯಲ್ಲಿ ಹೋರಾಟದ ನಿರ್ಧಾರ-ಸರ್ಕಾರದ ವಿರುದ್ಧ ಗುಡುಗಿದ ಬಿಜೆಪಿ        ₹3,300 ಕೋಟಿ, 132 ಕಿ.ಮೀ. ದೂರ-ಗುರಗಾಂವ್​​ನಲ್ಲಿ ಎಕ್ಸ್​​ಪ್ರೆಸ್​​ ಹೈವೇ ಲೋಕಾರ್ಪಣೆಗೊಳಿಸಿದ ಪ್ರಧಾನಿ        ರೈಲು ಬರುವ ವೇಳೆ ಹಳಿ ಮಧ್ಯೆ ಮಲಗಿದ ಭೂಪ-ಪ್ರಾಣದ ಹಂಗು ತೊರೆದು ಹುಚ್ಚು ಸಾಹಸ-ಹೈದ್ರಾಬಾದ್​ನಲ್ಲೊಂದು ಮಿರ‍್ಯಾಕಲ್       
Breaking News

ಸ್ವರ್ಗ-ನರಕಗಳೆರಡೂ ನಮ್ಮಲ್ಲೇ ಇವೆ

Sunday, 12.02.2017, 9:24 AM       No Comments

ಬೆಟ್ಟವನ್ನು ಕೇವಲ ನೋಡಿದ ಮಾತ್ರಕ್ಕೆ ಏರಿದಂತಾಗುವುದಿಲ್ಲ. ಕೇವಲ ಆಸೆಯಿಂದಲೇ ಮನಸ್ಸಿನ ಮೇಲೆ ಪ್ರಭುತ್ವ ಸಾಧಿಸಲು ಸಾಧ್ಯವಿಲ್ಲ. ಸೋಮಾರಿತನದ ಹಳಿಗಳ ಮೇಲೆಯೇ ಸೋಲಿನ ರೈಲು ಓಡುತ್ತದೆ. ಮನಸ್ಸನ್ನು ನಿಯಂತ್ರಿಸಲು ವ್ಯಕ್ತಿ ಶ್ರಮ ಪಡದೆ ಸೋಮಾರಿಯಾದರೆ ಅದು ನರಕವನ್ನು ಸೃಷ್ಟಿಸುತ್ತದೆ. ಸೋಮಾರಿತನವನ್ನು ತ್ಯಜಿಸದೆ ಸ್ವರ್ಗವನ್ನು ಸೃಷ್ಟಿಸಲು ಸಾಧ್ಯವಿಲ್ಲ. ಮನಸ್ಸು ಹೇಗೆ ನರಕವನ್ನು ಸೃಷ್ಟಿಸುತ್ತದೆ ಎನ್ನುವುದು ಸೂಕ್ಷ್ಮಗ್ರಾಹಿಗಳಾದಾಗ ತಿಳಿಯುತ್ತದೆ.

ನಿಮ್ಮ ಉಪನ್ಯಾಸಗಳಲ್ಲೂ, ಪುಸ್ತಕಗಳಲ್ಲೂ ‘ಮನಸ್ಸೇ ಸ್ವರ್ಗ, ಮನಸ್ಸೇ ನರಕ’ ಎನ್ನುತ್ತೀರಿ. ಅದರ ಅರ್ಥವೇನು?

ಮನಸ್ಸು ತನ್ನಷ್ಟಕ್ಕೇ ಮಾತನಾಡುವ ಯಂತ್ರ. ನಿಮ್ಮ ಬದುಕಿನ ಗುಣಮಟ್ಟ ನಿಮ್ಮ ಸಂವಹನದ ಗುಣಮಟ್ಟವಾಗಿರುತ್ತದೆ. ನೀವು ನಿಮ್ಮೊಳಗೇ ‘ನಾನು ದುಃಖದಲ್ಲಿದ್ದೇನೆ, ಸಂಕಟಪಡುತ್ತಿದ್ದೇನೆ, ನಿರಾಶನಾಗಿದ್ದೇನೆ’ ಎಂದು ಹೇಳಿಕೊಳ್ಳುತ್ತಿದ್ದರೆ ನಿಮ್ಮ ಬದುಕು ಹಾಗೆಯೇ ಆಗುತ್ತದೆ. ನಾವು ಇನ್ನೊಬ್ಬರೊಡನೆ ಹೇಗೆ ಸಂವಹನ ಮಾಡಬೇಕೆನ್ನುವ ಕುರಿತು ತುಂಬ ತಲೆಕೆಡಿಸಿಕೊಳ್ಳುತ್ತೇವೆ. ಆದರೆ ನಮ್ಮೊಳಗೇ ಮಾಡಿಕೊಳ್ಳುವ ಸಂವಹನದ ಬಗ್ಗೆ ಚಿಂತಿಸುವುದಿಲ್ಲ. ಸನ್ನಿವೇಶಕ್ಕಿಂತಲೂ ಅದನ್ನು ನಾವು ವ್ಯಾಖ್ಯಾನಿಸುವ ರೀತಿ ನಮ್ಮ ಅನುಭವವನ್ನು ರೂಪಿಸುತ್ತದೆ.

ಉದಾಹರಣೆಗೆ ಯಾರೋ ನಿಮ್ಮನ್ನು ಬೈಯುತ್ತಾರೆಂದು ಇಟ್ಟುಕೊಳ್ಳೋಣ. ಅದನ್ನು ಭಾರಿ ದುಃಖದ ಸಂಗತಿಯೆಂದು ನೀವು ಮನಸ್ಸಿನಲ್ಲಿರಿಸಿಕೊಂಡರೆ, ದುಃಖವನ್ನೇ ಅನುಭವಿಸುತ್ತೀರಿ. ನೀವು ಆ ಬೈಗುಳದ ಮಾತನ್ನು ಆ ವ್ಯಕ್ತಿಯು ತನ್ನ ಯಾವುದೋ ಒತ್ತಡವನ್ನು ಇಳಿಸಿಕೊಳ್ಳಲು ಮಾಡುತ್ತಿರುವ ಪ್ರಯತ್ನ ಎಂಬ ನೆಲೆಯಲ್ಲಿ ನಿಂತು ನೋಡಿದರೆ, ಆತನ ಬಗ್ಗೆ ಸಹಾನುಭೂತಿ ಸಾಧ್ಯವಾಗಬಹುದು. ಪ್ರತಿಯೊಬ್ಬ ವ್ಯಕ್ತಿಯೂ ತನ್ನೊಳಗೇ ಹೋರಾಟದಲ್ಲಿ ಮಗ್ನನಾಗಿರುತ್ತಾನೆ ಎನ್ನುವುದು ಸದಾ ನೆನಪಿರಲಿ.

ಮನಸ್ಸಿನ ನಿರ್ವಹಣೆಯಲ್ಲಿ ಸಮಯ ಹಾಳುಮಾಡುವುದೇಕೆ?

ಸಾಮಾನ್ಯ ಮನಸ್ಸು ಅನವಶ್ಯಕ ಅಗತ್ಯಗಳನ್ನು ಪೂರೈಸುವುದರಲ್ಲಿ ನಿರತವಾಗಿರುತ್ತದೆ. ಯಾವುದು ಮುಖ್ಯ, ಯಾವುದು ಗೌಣ ಎನ್ನುವುದರ ಅರಿವೇ ವಿವೇಕ ಎನ್ನುತ್ತಾನೆ ಭಗವಾನ್ ಮಹಾವೀರ. ಕೆಲವರು ಜಾಗತಿಕ ದಾಖಲೆಗಳನ್ನು ಮುರಿಯುವುದಕ್ಕಾಗಿ ಶ್ರಮಪಡುವುದನ್ನು ಕಂಡಾಗ ಅದೊಂದು ಹುಚ್ಚುತನವಾಗಿ ಕಾಣುತ್ತದೆ. ಅತಿಕಡಿಮೆ ಸಮಯದಲ್ಲಿ ಅತಿಹೆಚ್ಚು ಹುಳುಗಳನ್ನು ತಿನ್ನುವವರು ಯಾರು? ಮೈತುಂಬ ಅತಿಹೆಚ್ಚು ಸೂಜಿಗಳನ್ನು ಚುಚ್ಚಿಸಿಕೊಳ್ಳುವವರ್ಯಾರು? ಇದರಿಂದ ಏನು ಮಹಾ ಸಾಧಿಸಿದಂತಾಯಿತು? ಅನೇಕ ಮಂದಿ ಈ ರೀತಿ ಕೆಲಸಕ್ಕೆ ಬಾರದ ಅಮುಖ್ಯ ಸಂಗತಿಗಳಲ್ಲೇ ಕಳೆದುಹೋಗುತ್ತಾರೆ. ಯಾವುದು ನಿಜವಾಗಿಯೂ ಪ್ರಯೋಜನಕಾರಿ, ಯಾವುದು ಅಲ್ಲ ಎನ್ನುವ ಬಗ್ಗೆ ನಮಗೆ ಸ್ಪಷ್ಟವಾದ ದೃಷ್ಟಿ ಇರುವುದಿಲ್ಲ. ಅದನ್ನು ಪಡೆಯುವುದಕ್ಕಾಗಿ ನಾವು ಮನಸ್ಸನ್ನು ಜಯಿಸುವುದು ಅತ್ಯಗತ್ಯ.

ವೈಯಕ್ತಿಕ ಸಂಬಂಧಗಳಲ್ಲಿ ನಾವು ಏಕೆ ಕಷ್ಟ ಅನುಭವಿಸುತ್ತೇವೆ?

ಈ ಕತೆಯ ಕುರಿತು ವಿಚಾರಮಾಡಿ- ಒಬ್ಬ ವ್ಯಕ್ತಿ ಜೀವಮಾನವಿಡೀ ಸತ್ಕಾರ್ಯಗಳನ್ನು ಮಾಡಿ ಏಳನೇ ಸ್ವರ್ಗಕ್ಕೆ ಹೋದ. ಸ್ವರ್ಗ ನಂಬಲಾಗದಷ್ಟು ಸುಂದರವಾಗಿತ್ತು. ಅಲ್ಲಿದ್ದ ದೇವತೆಯೊಬ್ಬ ಈ ವ್ಯಕ್ತಿಗೆ ‘ಇಲ್ಲಿ ಕೆಲಸ ಮಾಡದೇ ಏನು ಬೇಕಾದರೂ ಪಡೆಯಬಹುದು’ ಎಂದು ಹೇಳಿದ. ಆತ ಏನು ಬಯಸುವನೋ ಅದು ತಕ್ಷಣ ಅವನ ಮುಂದೆ ಪ್ರತ್ಯಕ್ಷವಾಗುತ್ತಿತ್ತು. ಸುಮಾರು ಒಂದು ವಾರ ಕಾಲ ಇದೊಂದು ಇಂದ್ರಜಾಲದಂತೆ ನಡೆಯಿತು. ಅನಂತರ ಈ ಪ್ರಕ್ರಿಯೆಯಲ್ಲಿ ಯಾವುದೇ ಸವಾಲು ಇಲ್ಲವಾದುದರಿಂದ ಬೇಸರವಾಗತೊಡಗಿತು.

ಆಗ ದೇವತೆ ಪ್ರತ್ಯಕ್ಷನಾಗಿ ‘ಏನು ಬೇಕು?’ ಎಂದು ಕೇಳಿದ. ‘ನನಗೆ ಮಾಡಲು ಏನಾದರೂ ಕೆಲಸ ಬೇಕಾಗಿದೆ. ಕೆಲಸವಿಲ್ಲದೆ ನನ್ನ ಬಯಕೆಗಳನ್ನು ಈಡೇರಿಸಿಕೊಳ್ಳುವುದರಲ್ಲಿ ಏನೂ ಸ್ವಾರಸ್ಯವಿಲ್ಲ’ ಎಂದ ಆ ವ್ಯಕ್ತಿ. ಅದಕ್ಕೆ ಆ ದೇವತೆ ‘ಈ ಸ್ವರ್ಗದಲ್ಲಿ ಅದು ಸಾಧ್ಯವಿಲ್ಲ’ ಎಂದ. ಇದನ್ನು ಕೇಳಿದ ಆ ವ್ಯಕ್ತಿಗೆ ಸ್ವರ್ಗವೇ ನರಕದಂತಾಯಿತು. ಇದೇ ರೀತಿ ನಿಮ್ಮ ಸಂಬಂಧಗಳು ಸ್ವರ್ಗಸಮಾನವಾಗಿರಬಹುದು. ಆದರೆ, ನಿಮ್ಮ ಮನಸ್ಸಿನಲ್ಲಿ ಸುಖ, ದುಃಖಗಳನ್ನು ವ್ಯಾಖ್ಯಾನಿಸುವ ನಿಮ್ಮದೇ ಆದ ನಿಯಮಗಳಿರುತ್ತವೆ. ನೀವು ನಿಮ್ಮ ವ್ಯಾಖ್ಯಾನಗಳ ಬಂಧಿಯಾಗಿದ್ದೀರಿ. ಹಾಗೆ ನಿಮ್ಮ ವ್ಯಾಖ್ಯಾನಗಳಿಗೆ ಬಲಿಯಾಗಬೇಡಿ. ಆಗ ಮಾತ್ರ ಸ್ವರ್ಗವನ್ನು ಸ್ವರ್ಗವಾಗಿಯೇ ಅನುಭವಿಸುತ್ತೀರಿ.

ಸಂತೋಷವಾಗಿರುವುದರಿಂದ ಲಾಭವೇನು? ಅದಕ್ಕಿಂತಲೂ ಅನ್ಯರಿಗೆ ಪ್ರಯೋಜನಕಾರಿಯಾಗಿರುವುದು ಮುಖ್ಯವಲ್ಲವೇ?

ಆಕಾಶ ನಿಷ್ಪ್ರಯೋಜಕವಾಗಿ ಕಾಣುತ್ತದೆ, ಅಲ್ಲವೇ? ಅದಕ್ಕಿಂತ ಇತರ ವಸ್ತುಗಳು ಹೆಚ್ಚು ಉಪಯುಕ್ತವಾಗಿ ಕಾಣುತ್ತವೆ. ಆದರೆ ಅವಕಾಶವಿಲ್ಲದಿದ್ದರೆ ಯಾವ ವಸ್ತುವಿನಿಂದಲೂ ಉಪಯೋಗವಿಲ್ಲ. ಅವಕಾಶವು ಇತರ ವಸ್ತುಗಳು ಉಪಯೋಗವಾಗುವುದಕ್ಕೆ ಅವಕಾಶ ನೀಡುತ್ತವೆ. ಸಂತೋಷದ ವಿಷಯದಲ್ಲೂ ಈ ಮಾತಿನ ಕುರಿತು ಆಳವಾಗಿ ಯೋಚಿಸಿನೋಡಿ. ಯಾವುದು ಪ್ರಯೋಜನಕಾರಿ, ಯಾವುದು ಅಲ್ಲ ಎನ್ನುವುದು ಹೆಚ್ಚಾಗಿ ನಮ್ಮ ಸಾಮಾಜಿಕ ಸಂಸ್ಕಾರವನ್ನವಲಂಬಿಸಿರುತ್ತದೆ. ಭಯೋತ್ಪಾದಕನು ಒಂದು ಸಾಮಾಜಿಕ ಧ್ಯೇಯಕ್ಕಾಗಿ ಭಯೋತ್ಪಾದಕನಾಗಿರುವುದೇ ಪ್ರಯೋಜನಕಾರಿ ಎಂದು ಭಾವಿಸುತ್ತಾನೆ. ಪ್ರಯೋಜನಕಾರಿ ಆಗಬಾರದೆಂದೇನೂ ನಾನು ಹೇಳುವುದಿಲ್ಲ. ಸಂತೋಷ ಹಾಗೂ ಸಜ್ಜನಿಕೆ ನಿಮ್ಮ ಜೀವನದ ಆಧಾರವಾಗಿರಲಿ. ಆಗ ಪ್ರಯೋಜನಕಾರಿಯಾಗುವುದು ಅನ್ಯರನ್ನು ಸಂತುಷ್ಟರೂ, ಸಜ್ಜನರೂ ಆಗಿ ಮಾಡುವುದರ ವಿಸ್ತರಣೆಯಾಗುತ್ತದೆ.

(ಲೇಖಕರು ಅಂತಾರಾಷ್ಟ್ರೀಯ ಮ್ಯಾನೇಜ್​ವೆುಂಟ್ ಗುರುಗಳು)

Leave a Reply

Your email address will not be published. Required fields are marked *

Back To Top