ಸ್ವಯಂಪ್ರೇರಿತ ಹಳಿಯಾಳ ಬಂದ್

ಹಳಿಯಾಳ:ಜಮ್ಮುವಿನ ಪುಲ್ವಾಮದಲ್ಲಿ ನಡೆದ ಉಗ್ರರ ಪೈಶಾಚಿಕ ದಾಳಿ ಖಂಡಿಸಿ ಹಾಗೂ ದೇಶದ ಯೋಧರಿಗೆ ನೈತಿಕ ಬೆಂಬಲ ಸಾರುವ ಉದ್ದೇಶದಿಂದ ಭಾನುವಾರ ನಡೆದ ಸ್ವಯಂಪ್ರೇರಿತ ಹಳಿಯಾಳ ಬಂದ್ ಸಂಪೂರ್ಣ ಯಶಸ್ವಿಯಾಯಿತು.

ಬಸ್ ಸಂಚಾರ, ಆರ್ಥಿಕ ವಹಿವಾಟು ಸ್ಥಗಿತಗೊಳ್ಳುವುದರ ಜೊತೆಗೆ ವಾರದ ಸಂತೆಯೂ ರದ್ದುಗೊಳಿಸಲ್ಪಟ್ಟಿದ್ದರಿಂದ ಹಳಿಯಾಳ ಸ್ತಬ್ಥವಾದಂತೆ ಕಂಡು ಬಂದಿತು.

ಶನಿವಾರ ಗಣೇಶ ಕಲ್ಯಾಣ ಮಂಟಪದಲ್ಲಿ ಮಾಜಿ ಶಾಸಕ ಸುನೀಲ ಹೆಗಡೆ ಕರೆದ ಸಭೆಯಲ್ಲಿ ಪಾಲ್ಗೊಂಡ ಸರ್ವ ಪಕ್ಷಗಳು, ಸಂಘಟನೆಗಳು ಹಾಗೂ ಸರ್ವ ಧರ್ಮೀಯರು ಹಳಿಯಾಳ ಬಂದ್ ನಡೆಸಲು ಕೈಗೊಂಡ ತೀರ್ವನವನ್ನು ಪಟ್ಟಣ ವಾಸಿಗಳು ಒಮ್ಮತದಿಂದ ಬೆಂಬಲಿಸಿದ್ದಾರೆಂಬುದಕ್ಕೆ ಹಳಿಯಾಳ ಬಂದ್ ಸಾಕ್ಷಿಯಾಯಿತು.

ಬೆಳಗ್ಗೆಯಿಂದಲೇ ಬಸ್, ಆಟೋ ಹಾಗೂ ಖಾಸಗಿ ವಾಹನಗಳ ಸಂಚಾರ ಸ್ಥಗಿತಗೊಂಡಿತ್ತು. ಹೋಟೆಲ್, ಕಿರಾಣಿ, ದಿನಸಿ, ಬಟ್ಟೆ, ತರಕಾರಿ,ಗೂಡಂಗಡಿ, ಬೀಡಾಂಗಡಿ, ಬಾರ್, ವೈನ್ ಸೆಂಟರ್, ಇತ್ಯಾದಿ ವಹಿವಾಟ ಅನ್ನು ನಿಲ್ಲಿಸಿದ್ದರು. ಮೀನು, ಮಾಂಸ, ಚಿಕನ್ ಮಾರಾಟ ಮೊದಲ ಬಾರಿಗೆ ಸ್ಥಗಿತಗೊಂಡಿದ್ದು, ವಿಶೇಷವಾಗಿತ್ತು. ಮುಖ್ಯ ಮಾರುಕಟ್ಟೆ ಬೀದಿಯಲ್ಲಿ ಬಹುತೇಕ ಅಂಗಡಿಗಳ ಎದುರು ಹುತಾತ್ಮ ಯೋಧರಿಗೆ ಗೌರವ ಸೂಚಿಸುವ ಬ್ಯಾನರಗಳನ್ನು ಹಾಕಿ ವ್ಯಾಪಾರಸ್ಥರು ಶ್ರದ್ಧಾಂಜಲಿ ಸಲ್ಲಿಸಿದರು.

ಸ್ಥಳೀಯ ತರಕಾರಿ-ಹಣ್ಣುಹಂಪಲು ಮಾರಾಟಗಾರರು ಭಾನುವಾರದ ಸಂತೆ ವಹಿವಾಟಕ್ಕೆ ಬರುವ ವ್ಯಾಪಾರಸ್ಥರಿಗೆ ವಾರದ ಸಂತೆಯನ್ನು ರದ್ದು ಪಡಿಸಿದ ಸುದ್ದಿಯನ್ನು ಮುಂಚಿತವಾಗಿ ತಿಳಿಸಿ ಬಂದ್ ಯಶಸ್ವಿಯಾಗಲು ಸಹಕರಿಸಿದರು.

ಪ್ರಾರ್ಥನೆ: ಹಳಿಯಾಳದ ಮಿಲಾಗ್ರಿಸ್ ಚರ್ಚ್​ನಲ್ಲಿ ಗುರು ಜ್ಞಾನಪ್ರಕಾಶ ಅವರ ಸಾನ್ನಿಧ್ಯದಲ್ಲಿ ಹುತಾತ್ಮ ಯೋಧರಿಗಾಗಿ ವಿಶೇಷ ಪ್ರಾರ್ಥನೆಯೊಂದಿಗೆ ಶ್ರದ್ಧಾಂಜಲಿ ಸಲ್ಲಸಲಾಯಿತು. ಗುರು ಡೊಮನಿಕ್, ಗುರು ರೋಮಿಯೋ ಪಾಲ್ಗೊಂಡಿದ್ದರು. ಇಲ್ಲಿಯ ಶ್ರೀ ಗ್ರಾಮದೇವಿ ದೇವಸ್ಥಾನದಲ್ಲಿಯೂ ಪೂಜಾ ಕಾರ್ಯಕ್ರಮಗಳು ನಡೆದವು. ಗಣೇಶ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಘಟಕ, ಪಿಶ್ ಮಾರ್ಕೆಟ್ ಕ್ರಾಸ್​ನಲ್ಲಿ ಸ್ಥಳೀಯ ಚಿಕನ್ ಮಾರಾಟಗಾರರು ಶ್ರದ್ಧಾಂಜಲಿಯನ್ನು ಸಲ್ಲಿಸಿದರು.

ಹಳ್ಳಿಗಳಲ್ಲೂ ಶ್ರದ್ಧಾಂಜಲಿ: ತಾಲೂಕಿನ ತೇರಗಾಂವ ಹಾಗೂ ಜನಗಾ ಗ್ರಾಮದಲ್ಲಿ ಶನಿವಾರ ರಾತ್ರಿ ಪಂಜಿನ ಮೆರವಣಿಗೆ ನಡೆಸಿ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ಬಹುಶಃ ಹಳಿಯಾಳದ ಇತಿಹಾಸದಲ್ಲಿಯೇ ಸ್ವಯಂ ಪ್ರೇರಿತರಾಗಿ ಹಳಿಯಾಳ ಬಂದ್ ಆಗಿದ್ದು ಇದೇ ಮೊದಲು. ಈ ಒಕ್ಕೋರಲಿನ ಬಂದ್ ಮೂಲಕ ಹಳಿಯಾಳದ ಜನ ತಮ್ಮ ದೇಶಪ್ರೇಮವನ್ನು ಹಾಗೂ ಯೋಧರಿಗೆ ನೈತಿಕ ಸ್ಥೈರ್ಯವನ್ನು ತುಂಬಿದ್ದಾರೆ.

| ಸುನೀಲ ಹೆಗಡೆ, ಮಾಜಿ ಶಾಸಕ