ಸ್ವಪ್ನ ಸಾಕಾರಗೊಂಡಾಗ…

  • ವರುಣ್ ಹೆಗಡೆ ಬೆಂಗಳೂರು

ಒಂದು ಸಾವಿರ ರೂ. ಬಂಡವಾಳದಲ್ಲಿ ಆರಂಭವಾದ ಸುರೇಶ್ ಷಾ ಅವರ ‘ಸ್ವಪ್ನ’ ಈಗ ಸಾಕಾರಗೊಂಡಿದೆ. ಕನ್ನಡ ಪುಸ್ತಕ ಮಾರಾಟ ಹಾಗೂ ಪ್ರಕಟಣಾ ಕ್ಷೇತ್ರದಲ್ಲಿ ಮೈಲಿಗಲ್ಲು ಸ್ಥಾಪಿಸಿರುವ ‘ಸಪ್ನ ಬುಕ್ ಹೌಸ್’ ಇಂದು ಏಷ್ಯಾದಲ್ಲಿಯೇ ಅತಿ ದೊಡ್ಡ ಪುಸ್ತಕ ಮಾರಾಟ ಮಳಿಗೆ ಎಂಬ ಗೌರವಕ್ಕೆ ಭಾಜನವಾಗಿದೆ.

ಅಷ್ಟೇ ಅಲ್ಲ, 5 ಸಾವಿರಕ್ಕೂ ಅಧಿಕ ಕನ್ನಡ ಪುಸ್ತಕ ಹಾಗೂ 650ಕ್ಕೂ ಹೆಚ್ಚು ಪಠ್ಯ ಪುಸ್ತಕಗಳನ್ನು ಪ್ರಕಟಿಸಿದ ಹಿರಿಮೆ ಹೊಂದಿದೆ. ಮಕ್ಕಳಿಗೆ ಬೇಕಾದ 5 ರೂ. ಚಾರ್ಟ್​ನಿಂದ 38 ಸಾವಿರ ರೂ.ವರೆಗಿನ ಪುಸ್ತಕ ಮಳಿಗೆಯಲ್ಲಿ ಕಾಣಸಿಗುತ್ತದೆ. ಇದರ ಜತೆಗೆ ಚಾಕಲೆಟ್​ನಿಂದ ಹಿಡಿದು ಮನೆಗಳನ್ನು ಶೃಂಗರಿಸಲು ಬೇಕಾದ ಅಲಂಕಾರಿಕ ಸ್ಟೇಷನರಿ ವಸ್ತುಗಳು ರಾರಾಜಿಸುತ್ತವೆ. ಅಷ್ಟಕ್ಕೂ ಸಪ್ನ ಬುಕ್ ಹೌಸ್ ಕಟ್ಟಿ ಬೆಳೆಸುತ್ತಿರುವವರು ಗುಜರಾತಿಗಳು ಎನ್ನುವುದು ವಿಶೇಷ.

ಪುಸ್ತಕೋದ್ಯಮದಲ್ಲಿ ಹೊಸ ಶಕೆ ಆರಂಭಿಸಿದ ಸಪ್ನ ಇಂದು ಪುಸ್ತಕ ಪ್ರಿಯರ ಸ್ವರ್ಗವಾಗಿದೆ. ಇದರಿಂದಾಗಿ ಪ್ರತಿನಿತ್ಯ ಸುಮಾರು 20 ರಿಂದ 30 ಸಾವಿರ ಜನರು ಭೇಟಿ ನೀಡುತ್ತಿರುವುದು ಬುಕ್ ಹೌಸ್​ನ ಜನಸ್ನೇಹಿ ಸೇವೆಗೆ ಸಾಕ್ಷಿ. ಅಷ್ಟಕ್ಕೂ ಕಳೆದ ಜನವರಿ 26ಕ್ಕೆ 50ನೇ ವರ್ಷಕ್ಕೆ ಪದಾರ್ಪಣೆ ಮಾಡಿದ ಸಪ್ನ ಬುಕ್ ಹೌಸ್​ನ ಸುದೀರ್ಘ ಯಶಸ್ವಿ ಪ್ರಯಾಣದ ಹಿಂದೆ ಷಾ ಕುಟುಂಬದ ಪರಿಶ್ರಮ ಹಾಗೂ ಸಿಬ್ಬಂದಿಗಳ ಬದ್ಧತೆಯಿದೆ. ಇದರ ಪ್ರತಿಫಲ ಎನ್ನುವಂತೆ ಬೆಂಗಳೂರಿನಲ್ಲಿ 8 ಹಾಗೂ ಮೈಸೂರು, ಧಾರವಾಡ, ಹುಬ್ಬಳ್ಳಿ, ಮಂಗಳೂರು, ಕಲಬುರ್ಗಿ ಮತ್ತು ಕೊಯಿಮತ್ತೂರ್​ನಲ್ಲಿ ತಲಾ ಒಂದು ಮಳಿಗೆ ತಲೆಯೆತ್ತಿದೆ. ಉಳಿದ ನಗರದಲ್ಲಿ ಸಹ ಮಳಿಗೆ ಸ್ಥಾಪಿಸಲು ಬೇಡಿಕೆ ಹೆಚ್ಚುತ್ತಿದೆ. ಒಟ್ಟು 4 ಲಕ್ಷ ಚದರ ಅಡಿ ಜಾಗದಲ್ಲಿ ವಿಸ್ತರಿಸುವ ಸಪ್ನವನ್ನು ಇಂದು ನಿತಿನ್ ಷಾ, ದೀಪಕ್ ಷಾ ಹಾಗೂ ಪರೇಷ್ ಷಾ ನಡೆಸಿಕೊಂಡು ಹೋಗುತ್ತಿದ್ದಾರೆ. ಮೂಕಜ್ಜಿಯ ಕನಸು ಪ್ರಥಮ ಪ್ರಕಟಣೆ

ಗುಜರಾತಿನಲ್ಲಿ ಎಸ್ಸೆಸ್ಸೆಲ್ಸಿ ಮುಗಿಸಿದ ಸುರೇಶ್ ಷಾ ಮುಂಬೈನಲ್ಲಿ ಪುಸ್ತಕದ ಅಂಗಡಿಯೊಂದರಲ್ಲಿ ಉದ್ಯೋಗ ಆರಂಭಿಸಿದರು. ಇವರ ಕಾರ್ಯವೈಖರಿಗೆ ಬೆಂಗಳೂರಿನಲ್ಲಿ ಆರಂಭವಾಗುವ ನೂತನ ಮಳಿಗೆಗೆ ವ್ಯವಸ್ಥಾಪಕ ನಿರ್ದೇಶಕ ಹುದ್ದೆ ಒಲಿದುಬಂದಿತ್ತು. 1966ಕ್ಕೆ ಬೆಂಗಳೂರಿಗೆ ಆಗಮಿಸಿದ ಇವರಿಗೆ, ‘ಬೇರೆ ಮಳಿಗೆಯಲ್ಲಿ ಕಾರ್ಯನಿರ್ವಹಿಸುವ ಬದಲು ನಮ್ಮದೇ ಒಂದು ಸ್ವಂತ ಮಳಿಗೆ ಆರಂಭಿಸುವುದು ಉತ್ತಮ’ ಎಂಬ ಪತ್ನಿ ಭಾನುಮತಿ ಷಾ ಅವರ ಅಭಿಪ್ರಾಯ ಸರಿ ಎನಿಸಿತು. ಇದರಿಂದಾಗಿ ಗಾಂಧಿನಗರದಲ್ಲಿರುವ ಗುಪ್ತಾ ಮಾರ್ಕೆಟ್​ನಲ್ಲಿ 1967 ಜನವರಿ 26ರಂದು 40 ಚದರ ಅಡಿ ಜಾಗದಲ್ಲಿ ಷಾ ದಂಪತಿಯ ಸ್ವಪ್ನ ತಲೆಯೆತ್ತಿತ್ತು. ಮ್ಯಾಗಝಿನ್, ಪುಸ್ತಕ, ಲಾಟರಿ ಟಿಕೆಟ್ ಮಾರಾಟ ಮಾಡುತ್ತಿದ್ದ ಈ ಸಂಸ್ಥೆ 1990ರಲ್ಲಿ ಶಿವರಾಮ ಕಾರಂತರ ಕೋರಿಕೆ ಮೇರೆಗೆ ಪುಸ್ತಕ ಪ್ರಕಟಣಾ ರಂಗಕ್ಕೆ ಕಾಲಿಟ್ಟಿತು. ಆ ಪುಸ್ತಕ ಬೇರಾವುದು ಅಲ್ಲ, ಜ್ಞಾನಪೀಠ ಪ್ರಶಸ್ತಿಗೆ ಭಾಜನವಾದ ‘ಮೂಕಜ್ಜಿಯ ಕನಸುಗಳು’.

ಕಳೆದ 25ವರ್ಷಗಳಿಂದ ಸಪ್ನಕ್ಕೆ ಭೇಟಿ ನೀಡುತ್ತಿದ್ದೇವೆ. ನಮಗೆ ಬೇಕಾದ ಎಲ್ಲ ವಿಧದ ಪುಸ್ತಕ ಒಂದೇ ಮಳಿಗೆಯಲ್ಲಿ ಸಿಗುತ್ತವೆ. ಶಾಲೆಯ ಲೈಬ್ರರಿಗೆ ಬೇಕಾದ ಪುಸ್ತಕವನ್ನು ಇಲ್ಲಿಂದಲೇ ಕೊಂಡೊಯ್ಯುತ್ತೇವೆ.

| ವೇದಾವತಿ

ಶಿಕ್ಷಕಿ, ಶೇಷಾದ್ರಿಪುರಂ ಶಾಲೆ

ಸಪ್ನ 50ವರ್ಷಕ್ಕೆ ಪದಾರ್ಪಣೆ ಮಾಡಿರುವುದು ಮಗು ಹುಟ್ಟಿದಾಕ್ಷಣ ಆಗುವಷ್ಟೇ ಖುಷಿಯಾಗುತ್ತಿದೆ. ಒಂದು ಕುಟುಂಬ ನಡೆಸುತ್ತಿರುವ ಸಂಸ್ಥೆಯನ್ನು ಇಂದು ಕಾರ್ಪೆರೇಟ್ ಮಟ್ಟಕ್ಕೆ ತಲುಪಿಸಿದ್ದೇವೆ. ಇಂದು ಪುಸ್ತಕ ಓದುಗರು ಹಾಗೂ ಬರೆಯುವರ ಸಂಖ್ಯೆ ಕ್ಷಿಣಿಸಿದೆ ಎನ್ನುವ ಮಾತಿನಲ್ಲಿ ಹುರುಳಿಲ್ಲ. ಜನರ ವಿಶ್ವಾಸವನ್ನು ಕಾಯ್ದುಕೊಂಡು ಸಾಗಬೇಕಾದ ಸವಾಲು ನಮ್ಮಮುಂದಿದೆ.

| ನಿತಿನ್ ಷಾ,

ವ್ಯವಸ್ಥಾಪಕ ನಿರ್ದೇಶಕ

ಇಲ್ಲಿ ಪುಸ್ತಕವನ್ನು ವ್ಯವಸ್ಥಿತವಾಗಿ ಜೋಡಿಸಿಡಲಾಗಿದೆ. ಇದರಿಂದ ನಮಗೆ ಬೇಕಾದ ಪುಸ್ತಕ ಸುಲಭವಾಗಿ ಸಿಗುತ್ತವೆ. ಸಿಬ್ಬಂದಿ ಆತ್ಮೀಯವಾಗಿ ವರ್ತಿಸುತ್ತಾರೆ. ಬಿಡುವಿನ ಸಮಯದಲ್ಲಿ ಮಳಿಗೆಗೆ ಭೇಟಿ ನೀಡಿ, ಪುಸ್ತಕ ಖರೀದಿಸುತ್ತೇನೆ.

| ಅಭಿಷೇಕ್ ಪಾಟೀಲ್

ವಿದ್ಯಾರ್ಥಿ, ಚೇತನಾ ಪಿಯು ಕಾಲೇಜ್ ಹುಬ್ಬಳ್ಳಿ

ಪುಸ್ತಕವೇ ಕನ್ನಡ ಕಲಿಸಿತು: ಗುಜರಾತಿಗಳು ಕನ್ನಡ ಪುಸ್ತಕ ಪ್ರಕಟಣಾ ಕ್ಷೇತ್ರದಲ್ಲಿ ತೋರಿಸಿದ ಆಸಕ್ತಿ ನಿಜಕ್ಕೂ ಶ್ಲಾಘನೀಯ. ಅಷ್ಟಕ್ಕೂ ಇವರಿಗೆ ಕನ್ನಡ ಬರುತ್ತದೆಯೇ ಎಂಬ ಪ್ರಶ್ನೆ ಉದ್ಭವಿಸದೇ ಇರದು. ಷಾ ಕುಟುಂಬದ ಸದಸ್ಯರು ಕನ್ನಡವನ್ನು ಸ್ಪಷ್ಟವಾಗಿ ಮಾತನಾಡಲು ಕಲಿತದ್ದು ಪುಸ್ತಕಗಳಿಂದ ಎನ್ನುವ ಕಟುಸತ್ಯವನ್ನು ಸಪ್ನದ ವ್ಯವಸ್ಥಾಪಕ ನಿರ್ದೇಶಕ ನಿತಿನ್ ಷಾ ಅವರೇ ಸ್ಪಷ್ಟಪಡಿಸಿದ್ದಾರೆ. ‘ನಾನು ಬೆಂಗಳೂರಿನಲ್ಲಿಯೇ ಶಾಲೆ-ಕಾಲೇಜು ಓದಿದರೂ ಕನ್ನಡ ವಿಷಯ ಕಡ್ಡಾಯವಾಗಿರಲಿಲ್ಲ. ಆದ್ದರಿಂದ ತೃತೀಯ ಭಾಷೆಯಾಗಿ ಕೇವಲ 15 ಅಂಕಗಳಿಗೆ ಓದುತ್ತಿದ್ದೆವು. ಶಿಕ್ಷಕರೆ ನಮಗೆ 13 ಅಂಕ ನೀಡಿ ಪಾಸು ಮಾಡುತ್ತಿದ್ದರು. ಮಾತನಾಡಲು ಹಾಗೂ ಬರೆಯಲು ಬರುತ್ತಿರಲಿಲ್ಲ. ಬಿಡುವಿನ ಸಮಯದಲ್ಲಿ ಪುಸ್ತಕ ಓದುತ್ತಲೇ ಕನ್ನಡ ಕಲಿತೆವು’ ಎಂದು ಹೇಳುತ್ತಾರೆ.

ಆನ್​ಲೈನ್​ನಲ್ಲೂ ಪುಸ್ತಕ ಲಭ್ಯ: ಕಳೆದ 8ವರ್ಷದಿಂದ ಸಪ್ನ ಆನ್​ಲೈನ್​ನ ಮಾರಾಟ ಕ್ಷೇತ್ರಕ್ಕೂ ತೆರೆದುಕೊಂಡಿದೆ. ಠಚಟ್ಞಚಟ್ಞ್ಝ್ಞ.ಟಞನಲ್ಲಿ ಪುಸ್ತಕ ಲಭ್ಯವಾಗುತ್ತಿದ್ದು, ಈ ವಿಭಾಗವನ್ನು ನಿಜೇಶ್ ಷಾ ನೋಡಿಕೊಳ್ಳುತ್ತಿದ್ದಾರೆ. ಶೇ.5ರಷ್ಟು ಹೆಚ್ಚುವರಿ ರಿಯಾಯತಿ ಸಹ ಇಲ್ಲಿ ಲಭ್ಯ. ಅಷ್ಟೇ ಅಲ್ಲ, ಮಳಿಗೆಯಲ್ಲಿ ಸಿಗದ ಅಪರೂಪದ ಪುಸ್ತಕಗಳು ಆನ್​ಲೈನ್​ನಲ್ಲಿ ಲಭ್ಯವಿರುತ್ತವೆ.

ಪ್ರಶಸ್ತಿಯ ಮುಕುಟ:

ಕರ್ನಾಟಕ ಸರ್ಕಾರದ ಕನ್ನಡ ಪುಸ್ತಕ ಪ್ರಾಧಿಕಾರದ ‘ಅತ್ಯುತ್ತಮ ಪ್ರಕಾಶನ ಪ್ರಶಸ್ತಿ’, ‘ರಾಜ್ಯೋತ್ಸವ ಪ್ರಶಸ್ತಿ’ ಸಪ್ನ ಪ್ರಕಾಶನಕ್ಕೆ ಸಂದಿದೆ. ದಕ್ಷಿಣ ಭಾರತದ ಅತ್ಯುತ್ತಮ ಪ್ರಕಾಶನ, ಆಲ್ ಇಂಡಿಯಾ ಫೆಡರೇಶನ್ ಪ್ರಶಸ್ತಿ ಸೇರಿದಂತೆ ಹಲವಾರು ಗೌರವ ಸಪ್ನ ಬುಕ್ ಹೌಸ್ ಮುಡಿಗೇರಿದೆ.

 

Leave a Reply

Your email address will not be published. Required fields are marked *