ಸ್ವಚ್ಛ ಮೇವ ಜಯತೆಗೆ ಚಾಲನೆ

ಬೀದರ್: ಒಂದು ತಿಂಗಳು ನಡೆಯುವ ಸ್ವಚ್ಛ ಮೇವ ಜಯತೆ ಹಾಗೂ ಜಲಾಮೃತ ಜನಾಂದೋಲನಕ್ಕೆ ಮಂಗಳವಾರ ಚಾಲನೆ ನೀಡಲಾಗಿದೆ. ಸಸಿ ನೆಡುವುದು, ಪ್ರತಿಜ್ಞಾವಿಧಿ ಸ್ವೀಕಾರ, ಜಲಾಮೃತ ಕರಪತ್ರ ವಿತರಣೆ, ಸ್ವಚ್ಛತಾ ರಥ ಸೇರಿ ವಿವಿಧ ಕಾರ್ಯಕ್ರಮ ನಡೆಯಲಿವೆ.
ನಗರದ 100 ಹಾಸಿಗೆಯ ತಾಯಿ ಮತ್ತು ಮಗುವಿನ ಆಸ್ಪತ್ರೆ ಆವರಣದಲ್ಲಿ ಸಸಿ ನೆಡುವ ಮೂಲಕ ಚಾಲನೆ ನೀಡಲಾಯಿತು. ನಂತರ ಜಿಪಂ ಸಭಾಂಗಣದಲ್ಲಿ ನಡೆದ ಸ್ವಚ್ಛ ಮೇವ ಜಯತೆ ಮತ್ತು ಜಲಾಮೃತ ಜನಾಂದೋಲನ ಕಾರ್ಯಕ್ರಮದಲ್ಲಿ ಸ್ವಚ್ಛ ಮೇವ ಜಯತೆಯ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
ಜಿಪಂ ಅಧ್ಯಕ್ಷೆ ಗೀತಾ ಚಿದ್ರಿ ಮಾತನಾಡಿ, ಪರಿಸರ ನಮ್ಮ ತಾಯಿ ಮತ್ತು ಉಸಿರು ಇದ್ದಂತೆ. ಪರಿಸರ ಇರುವವರೆಗೆ ನಾವು ಇರುತ್ತೇವೆ. ಇದನ್ನರಿತು ನಮ್ಮ ಮನೆಯ ಮುಂದೆ ಕನಿಷ್ಠ ಐದು ಸಸಿಗಳನ್ನು ನೆಡಬೇಕು. ನೀರು ಅತ್ಯಂತ ಅಮೂಲ್ಯ. ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಸಾಕಷ್ಟು ತೊಂದರೆ ಎದುರಾಗಿದೆ. ಇದನ್ನು ಗಂಭೀರ ಪರಿಗಣಿಸಿ ನೀರು ಮಿತವಾಗಿ ಬಳಬೇಕು. ಸ್ವಚ್ಛತೆಗೆ ಗಮನ ಹರಿಸಬೇಕು ಎಂದರು.
ಜಿಪಂ ಉಪಾಧ್ಯಕ್ಷ ಲಕ್ಷ್ಮಣರಾವ ಬುಳ್ಳಾ ಮಾತನಾಡಿ, ರಾಜ್ಯದ ಎಲ್ಲ ಗ್ರಾಪಂಗಳಲ್ಲಿ 30 ಲಕ್ಷ ಸಸಿಗಳು ನೆಡಲು ಗುರಿ ಹೊಂದಲಾಗಿದೆ. ಜಿಲ್ಲೆಯ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ 500 ಸಸಿ ನೆಡಲು ಕ್ರಮ ಕೈಗೊಳ್ಳಲು ಸೂಚಿಸಿದರು. ಜಿಪಂ ಸಿಇಒ ಮಹಾಂತೇಶ ಬೀಳಗಿ, ಸ್ವಚ್ಛ ಭಾರತ ಮಿಷನ್ ಕಾರ್ಯಕ್ರಮ ಹೆಚ್ಚುವರಿ ಜಿಲ್ಲಾ ನೋಡಲ್ ಅಧಿಕಾರಿ ಗೌತಮ ಅರಳಿ ಮಾತನಾಡಿದರು. ಜಿಪಂ ಉಪ ಕಾರ್ಯದರ್ಶಿ ಕಿಶೋರಕುಮಾರ ದುಬೆ, ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎಂ.ಗಾಮನಗಟ್ಟಿ, ವಿವಿಧ ಇಲಾಖೆ ಅಧಿಕಾರಿಗಳಾದ ಶಿವರಾಜ ಮೇಟಿ, ರಾಚಪ್ಪ ಪಾಟೀಲ್, ಡಾ.ಎಂ.ಎ.ಜಬ್ಬಾರ್, ಮಂಜುನಾಥ, ಡಾ. ಶಾರದಾ ಸಾಂಬ್ರೇಕರ್ ಇದ್ದರು. ಸ್ವಚ್ಛ ಭಾರತ ಮಿಷನ್ ಜಿಲ್ಲಾ ಸಮಾಲೋಚಕಿ ಮಂಜುಳಾ ಕಣಜಿ ನಿರೂಪಣೆ ಮಾಡಿದರು. ಕಲಾವಿದ ದೇವಿದಾಸ ಚಿಮಕೋಡೆ ನೇತೃತ್ವದ ತಂಡವು ಪರಿಸರ ಗೀತೆ ಹಾಡಿ ಗಮನ ಸೆಳೆಯಿತು.

ಕ್ರಿಯೇಟಿವ್ ಕಾರ್ಯಕ್ರಮ: ಸ್ವಚ್ಛ ಭಾರತ ಮಿಷನ್ ಯೋಜನೆಯ ಸ್ವಚ್ಛ ಮೇವ ಜಯತೆ ಆಂದೋಲನ ಡೈನಾಮಿಕ್, ಕ್ರಿಯೇಟಿವ್ ಕಾರ್ಯಕ್ರಮವಿದೆ ಎಂದು ಜಿಪಂ ಸಿಇಒ ಮಹಾಂತೇಶ ಬೀಳಗಿ ವ್ಯಾಖ್ಯಾನಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿ, ಇದು ನೆಪಕ್ಕಾಗಿ ಮಾಡುವ ಕಾರ್ಯಕ್ರಮವಲ್ಲ. ಬೆನ್ನು ಹತ್ತಿ ಮಾಡುವ, ಮಾಡಿಸುವ ಜೀವಪರ ಕಾರ್ಯಕ್ರಮ. ಮೊದಲು ನಾನು ಬದಲಾದಾಗಲೇ ಮನೆ ಬದಲಾಗುತ್ತದೆ. ಬಳಿಕ ಓಣಿ, ಊರು, ನಾಡು ಬದಲಾಗುತ್ತದೆ. ಈ ನಿಟ್ಟಿನಲ್ಲಿ ಸ್ವಚ್ಛತೆ ಕಾರ್ಯ ಮೊದಲು ನಮ್ಮಿಂದಲೇ ಆರಂಭವಾಗಬೇಕು. ಸ್ವಚ್ಛತೆಯನ್ನು ಮೊದಲು ನಾನು ಮಾಡುವೆ. ಬಳಿಕ ಎಲ್ಲರೂ ಮಾಡಲಿ ಎನ್ನುವ ಕಳಕಳಿಯು ಪ್ರತಿಯೊಬ್ಬರಲ್ಲಿ ಬರಬೇಕಿದೆ ಎಂದರು.