Tuesday, 11th December 2018  

Vijayavani

Breaking News

ಸ್ವಚ್ಛ ಭಾರತ ಅಭಿಯಾನ ಅನುದಾನ ದುರ್ಬಳಕೆ

Sunday, 31.12.2017, 3:03 AM       No Comments

ಚಿಕ್ಕಮಗಳೂರು: ಸ್ವಚ್ಛ ಭಾರತ ಅಭಿಯಾನದ ಯೋಜನೆಗೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ 898.55 ಕೋಟಿ ರೂ. ಅನುದಾನವನ್ನು ರಾಜ್ಯ ಸರ್ಕಾರ ದುರ್ಬಳಕೆ ಮಾಡಿಕೊಂಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಆರೋಪಿಸಿದರು.

ಚಿಕ್ಕಮಗಳೂರಲ್ಲಿ ಶನಿವಾರ ಬಿಜೆಪಿಯ ನವ ಕರ್ನಾಟಕ ಪರಿವರ್ತನಾ ಯಾತ್ರೆ ಉದ್ಘಾಟಿಸಿ ಮಾತನಾಡಿದ ಅವರು, ಚುನಾವಣೆ ಸಮೀಪಿಸುತ್ತಿರುವಂತೆ ರಾಜ್ಯ ಸರ್ಕಾರ ಖಜಾನೆ ಲೂಟಿ ಮಾಡಲು ಆರಂಭಿಸಿದೆ ಎಂದು ವಾಗ್ದಾಳಿ ಮಾಡಿದರು.

ಸ್ವಚ್ಛ ಭಾರತ ಅಭಿಯಾನ ಯೋಜನೆಯಡಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಸಮುದಾಯ ಶೌಚಗೃಹ, ವೈಯಕ್ತಿಕ ಶೌಚಗೃಹ ನಿರ್ಮಾಣ ಹಾಗೂ ಜೈವಿಕ ಅನಿಲ ಘಟಕಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲು ಕೇಂದ್ರ ಸರ್ಕಾರ 108.55 ಕೋಟಿ ರೂ. ಒದಗಿಸಿದೆ. ಆದರೆ ರಾಜ್ಯ ಸರ್ಕಾರ ಈ ಅನುದಾನವನ್ನು ರಸ್ತೆಗಳ ನಿರ್ವಣ, ಗೋಡೆಗೆ ಬಣ್ಣ ಹಾಗೂ ಪಾದಚಾರಿ ರಸ್ತೆ ನಿರ್ವಣಕ್ಕೆ ದುರ್ಬಳಕೆ ಮಾಡಿಕೊಂಡಿದೆ ಎಂದು ದೂರಿದರು. ಶನಿವಾರ ಬಿಜೆಪಿ ಕಾರ್ಯಕರ್ತರೊಬ್ಬರು ಲೋಕಾಯುಕ್ತ, ಎಸಿಬಿ ಹಾಗೂ ಸಿಬಿಐಗೆ ದೂರು ನೀಡಿದ್ದಾರೆ ಎಂದು ತಿಳಿಸಿದರು.

ನಾಲೆ ನವೀಕರಣದಲ್ಲೂ ಭ್ರಷ್ಟಾಚಾರ: ನಾಲ್ಕು ತಿಂಗಳ ಹಿಂದೆ ಘಟಪ್ರಭ ಹಾಗೂ ಮಲಪ್ರಭ ನಾಲೆಯ ನವೀಕರಣಕ್ಕೆ 600 ಕೋಟಿ ರೂ.ಗೆ ಟೆಂಡರ್ ಕರೆಯಲು ನಿರ್ಧರಿಸಲಾಗಿತ್ತು. ಇದೀಗ ಏಕಾಏಕಿ ಕಾಲುವೆಯಲ್ಲಿ ಕಲ್ಲು ಸಿಕ್ಕಿದೆ. ಮಣ್ಣು ಸಿಕ್ಕಿದೆ ಎಂದೆಲ್ಲ ಕಾರಣ ನೀಡಿ ಟೆಂಡರ್ ಮೊತ್ತವನ್ನು 1100 ಕೋಟಿ ರೂ.ಗೆ ಹೆಚ್ಚಿಸುವ ಮೂಲಕ ಗುತ್ತಿಗೆದಾರರ ಜತೆ ಒಳ ಒಪ್ಪಂದ ಮಾಡಿಕೊಂಡು ಕೋಟ್ಯಂತರ ರೂ. ಹಣ ಲೂಟಿಗೆ ರಾಜ್ಯ ಸರ್ಕಾರ ಮುಂದಾಗಿದೆ ಎಂದು ಆರೋಪಿಸಿದರು.

Leave a Reply

Your email address will not be published. Required fields are marked *

Back To Top