ಸ್ವಚ್ಛ ನಗರ ಪಟ್ಟಿಗೆ ಸೇರಲು ಕೆಪಿಎಂಜಿ ನೆರವು: ಲೋಪದೋಷಗಳಿಲ್ಲದೇ ಕೇಂದ್ರಕ್ಕೆ ವರದಿ ನೀಡಲು ಮಾರ್ಗದರ್ಶನ

ಬೆಂಗಳೂರು: ‘ಸ್ವಚ್ಛ ಭಾರತ’ ಅಭಿಯಾನದ ಭಾಗವಾಗಿ ದೇಶದ ಸ್ವಚ್ಛ ನಗರ ಸ್ಪರ್ಧೆಯಲ್ಲಿ ಈ ಬಾರಿ ಬೆಂಗಳೂರು ಉತ್ತಮ ರ್ಯಾಂಕ್ ಪಡೆಯಲು ಬಿಬಿಎಂಪಿ ಎಲ್ಲ ತಯಾರಿ ನಡೆಸುತ್ತಿದ್ದು, ಅದಕ್ಕಾಗಿ ‘ಕೆಪಿಎಂಜಿ’ ಸಂಸ್ಥೆಯನ್ನು ಸಲಹಾ ಸಂಸ್ಥೆಯನ್ನಾಗಿ ನೇಮಿಸಿಕೊಂಡಿದೆ.

10ಕ್ಕೂ ಅಧಿಕ ನಗರಗಳು ಕೆಪಿಎಂಜಿಯನ್ನು ಸಲಹಾ ಸಂಸ್ಥೆ ಯನ್ನಾಗಿಸಿ, ಉತ್ತಮ ರ್ಯಾಂಕ್ ಪಡೆದಿವೆ. ಪುಣೆ ಈ ಹಿಂದಿನ ಅಭಿಯಾನದಲ್ಲಿ ಉತ್ತಮ ರ್ಯಾಂಕ್​ಗೆ ಪಾತ್ರವಾಗಿದ್ದನ್ನು ಸ್ಮರಿಸಬಹುದು.

ಒಡಿಎಫ್ ಪರಿಶೀಲನೆ: ರ್ಯಾಂಕ್ ಪಟ್ಟಿಯಲ್ಲಿ ಉತ್ತಮ ಅಂಕವನ್ನು ಗಳಿಸಬೇಕೆಂದರೆ ಬಯಲು ಬಹಿರ್ದೆಸೆ (ಒಡಿಎಫ್) ಮುಕ್ತವಾಗಿಸಬೇಕು. ಈ ಹಿಂದಿನ ಒಡಿಎಫ್ ವರದಿಯಲ್ಲಿ ಹಲವು ವಾರ್ಡ್​ಗಳಲ್ಲಿ ಇನ್ನೂ ಬಯಲು ಬಹಿರ್ದೆಸೆಯಿದೆ ಎಂದು ಹೇಳಲಾಗಿತ್ತು. ಆದರೆ, ಈಗ ಆ ಬಗ್ಗೆ ಸಮರ್ಪಕವಾಗಿ ಸರ್ವೆ ನಡೆಸಲಾಗುತ್ತಿದೆ. ಅದರಂತೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಶೇ.100 ಬಯಲು ಬಹಿರ್ದೆಸೆ ಮುಕ್ತವಾಗಲಿದೆ ಎಂದು ಅಧಿಕಾರಿಗಳು ಆಶಾಭಾವ ವ್ಯಕ್ತಪಡಿಸಿದ್ದಾರೆ.

6 ತಿಂಗಳು ಬಹುಮುಖ್ಯ: ಸ್ವಚ್ಛ ಸರ್ವೆಕ್ಷಣ್ ಆರಂಭವಾದಂದಿನಿಂದ ಪ್ರತಿ ವರ್ಷ ನಗರಾಡಳಿತಗಳು ಆಯಾ ನಗರಗಳಲ್ಲಿ ಸ್ವಚ್ಛತೆಗಾಗಿ ಕೈಗೊಂಡ ಕ್ರಮಗಳ ಕುರಿತು ನೀಡಿದ ವರದಿ, ಕೇಂದ್ರ ನಿಯೋಜಿ ಸುವ ತಂಡ ನಡೆಸುವ ಸರ್ವೆ ವರದಿ, ಸಾರ್ವಜನಿಕರ ಅಭಿಪ್ರಾಯ ಆಧರಿಸಿ ರ‍್ಯಾಂಕಿಂಗ್ ನಿರ್ಧರಿಸಲಾಗುತ್ತಿತ್ತು. ಆದರೆ, 2020ರ ಅಭಿಯಾನದಲ್ಲಿ ಅದನ್ನು ಬದಲಿಸಲಾಗಿದೆ. 2019ರ ಎಪ್ರಿಲ್​ನಿಂದ ಡಿಸೆಂಬರ್​ವರೆಗೆ ಪ್ರತಿ 3 ತಿಂಗಳಿಗೊಮ್ಮೆ ಸ್ಥಳೀಯ ನಗರಾಡಳಿತ ಕೈಗೊಂಡಿರುವ ಕ್ರಮಗಳು ಸೇರಿ ಸ್ವಚ್ಛತೆಗೆ ಸಂಬಂಧಿಸಿದ ಇನ್ನಿತರ ವಿಷಯಗಳನ್ನು ಕೇಂದ್ರದ ವೆಬ್​ಸೈಟ್​ನಲ್ಲಿ ಅಪ್​ಲೋಡ್ ಮಾಡಬೇಕಿದೆ.

ಅಭಿಯಾನ ಆರಂಭವಾಗಿ 3 ತಿಂಗಳು ಕಳೆದಿವೆ. ಅದೇ ರೀತಿ ಆಗಸ್ಟ್ನಿಂದ ನವೆಂಬರ್ ಮತ್ತು ಡಿಸೆಂಬರ್​ನಿಂದ ಫೆಬ್ರವರಿವರೆಗಿನ ಪ್ರಕ್ರಿಯೆ ಅಭಿಯಾನದ ಪ್ರಮುಖ ಘಟ್ಟವಾಗಿದೆ. ದಾಖಲೆಗಳನ್ನು ಸಿದ್ಧಪಡಿಸುವುದು, ಅದನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸುವುದು ಮುಖ್ಯವಾಗಿದೆ. ಇದನ್ನು ಲೋಪದೋಷಗಳಿರದಂತೆ ಮಾಡಬೇಕಿದೆ. ಕೆಪಿಎಂಜಿ ಸಂಸ್ಥೆ ಈ ವಿಚಾರವಾಗಿ ಸೂಕ್ತ ಮಾರ್ಗದರ್ಶನ ನೀಡಲಿದೆ.

ಜನ ಜಾಗೃತಿಗೆ ಪ್ರತ್ಯೇಕ ಸಂಸ್ಥೆ ನೇಮಕ

ಸ್ವಚ್ಛ ಸರ್ವೆಕ್ಷಣ್ ಅಭಿಯಾನಕ್ಕೆ ಸಂಬಂಧಿಸಿದಂತೆ ಜನಜಾಗೃತಿ ಮೂಡಿಸುವುದು ಅಗತ್ಯ. ಈವರೆಗೆ ಬಿಬಿಎಂಪಿಯಿಂದಲೇ ಪ್ರಚಾರ ಕಾರ್ಯ ಕೈಗೊಳ್ಳಲಾಗುತ್ತಿತ್ತು. ಆದರೆ, ಇದೀಗ ಪ್ರತ್ಯೇಕ ಸಂಸ್ಥೆಯನ್ನು ಪ್ರಚಾರಕ್ಕೆ ನಿಯೋಜಿಸಲು ನಿರ್ಧರಿಸಲಾಗಿದೆ. ಆ ಸಂಸ್ಥೆ ಜಾಹೀರಾತುಗಳನ್ನು ನೀಡುವುದು ಸೇರಿ ಇನ್ನಿತರ ವಿಧಾನದ ಮೂಲಕ ಸ್ವಚ್ಛತೆ ಕುರಿತು ಪಾಲಿಕೆ ಕೈಗೊಂಡಿರುವ ಕ್ರಮಗಳ ಕುರಿತು ಜನರಿಗೆ ತಿಳಿಸಿಕೊಡಬೇಕಿದೆ.

| ಗಿರೀಶ್ ಗರಗ

 

ಸ್ವಚ್ಛ ಸರ್ವೆಕ್ಷಣ ಅಭಿಯಾನದಲ್ಲಿ ಉತ್ತಮ ರ್ಯಾಂಕ್ ಪಡೆಯಲು ಈ ಬಾರಿ ಸಲಹಾ ಸಂಸ್ಥೆಯನ್ನು ನೇಮಿಸಲಾಗುತ್ತಿದೆ. ಈಗಾಗಲೆ ಹಲವು ನಗರಗಳಲ್ಲಿ ಕೆಲಸ ಮಾಡಿರುವ ಕೆಪಿಎಂಜಿ ಸಂಸ್ಥೆಗೆ ಆ ಕಾರ್ಯ ವಹಿಸಲಾಗುತ್ತಿದೆ.
| ರಂದೀಪ್ ಬಿಬಿಎಂಪಿ ಘನತ್ಯಾಜ್ಯ ವಿಭಾಗದ ಅಪರ ಆಯುಕ್ತ

Leave a Reply

Your email address will not be published. Required fields are marked *