ಶಿವಮೊಗ್ಗ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಸ್ವಚ್ಛ ಭಾರತ್ ಮಿಷನ್ನಲ್ಲೂ ಹಣದ ದುರುಪಯೋಗ ಆಗಿದೆಯೇ? ಜಿಲ್ಲೆಯಲ್ಲಿ ಸ್ವಚ್ಛ ಮೇವ ಜಯತೆ ಕಾರ್ಯಕ್ರಮದ ಮೂಲಕ 22.95 ಲಕ್ಷ ರೂ. ಅವ್ಯವಹಾರ ನಡೆದಿದೆಯೇ? ಇಂಥದ್ದೊಂದು ಪ್ರಶ್ನೆ ಶುಕ್ರವಾರ ಜಿಪಂ ಸಾಮಾನ್ಯ ಸಭೆಯಲ್ಲಿ ಪ್ರತಿಧ್ವನಿಸಿತು. ಅಂತಿಮವಾಗಿ ಇದರ ಬಗ್ಗೆ ಅಧಿಕಾರಿಗಳ ಹಂತದಲ್ಲಿ ತನಿಖೆ ನಡೆಸಲು ನಿರ್ಧರಿಸಲಾಯಿತು.
2019-20ರಲ್ಲಿ ಸ್ವಚ್ಛ ಮೇವ ಜಯತೆ ಕಾರ್ಯಕ್ರಮದ ಮೂಲಕ ಜನರಲ್ಲಿ ಸ್ವಚ್ಛತೆ ಅರಿವು ಮೂಡಿಸಲು ಕರಪತ್ರ, ಪ್ರಚಾರ ವಾಹನದ ಬಳಕೆಗೆ ಹಣ ಬಳಸುವ ವೇಳೆ ಮಾನದಂಡಗಳನ್ನು ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ ಎಂದು ಹಲವು ಸದಸ್ಯರು ಆರೋಪಿಸಿದರು.
ಸ್ವಚ್ಛ ಮೇವ ಜಯತೆ ಕಾರ್ಯಕ್ರಮಕ್ಕೆ ಹಣ ವ್ಯಯಿಸುವ ಪ್ರಕ್ರಿಯೆಯಲ್ಲಿ ಲೋಪ ಕಂಡುಬಂದಿದೆ. ಜಿಪಂ ಹಿರಿಯ ಅಧಿಕಾರಿಗಳ ಸೂಚನೆಯಂತೆ ಹಣ ಖರ್ಚು ಮಾಡಿದ್ದೇವೆ ಎಂದು ಎಲ್ಲ ತಾಪಂ ಇಒಗಳು ಹೇಳಿರುವುದು ಆಶ್ಚರ್ಯ ಮೂಡಿಸಿದೆ ಎಂದು ಕಾಂಗ್ರೆಸ್ ಸದಸ್ಯೆ ಶ್ವೇತಾ ಬಂಡಿ ಹೇಳಿದರು.
ಸರ್ಕಾರದ ಯಾವುದೇ ಯೋಜನೆಯ ಹಣ ಬಳಸಲು ಅದರದ್ದೇ ಆದ ಮಾನದಂಡಗಳು ಇರುತ್ತವೆ. ಜಿಪಂ ಹಿರಿಯ ಅಧಿಕಾರಿಗಳು ಹೇಳಿದ ಮಾತ್ರಕ್ಕೆ ಮಾನದಂಡಗಳ ಉಲ್ಲಂಘನೆ ಸರಿಯೇ? ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ತಪ್ಪು ಎಸಗಿದವರನ್ನು ಗುರುತಿಸಿ ಹಣ ವಸೂಲಿ ಮಾಡಬೇಕೆಂದು ಒತ್ತಾಯಿಸಿದರು.
ಇದಕ್ಕೆ ದನಿಗೂಡಿಸಿದ ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನಕುಮಾರ್, ಅಧಿಕಾರಿಗಳು ಉಡಾಫೆಯಿಂದ ವರ್ತಿಸುವುದು ಸರಿಯಲ್ಲ. ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವ ಸಂದರ್ಭದಲ್ಲೂ ಹಣ ದುರುಪಯೋಗ ಆಗಿದೆ ಎಂಬ ಆರೋಪ ಗಂಭೀರವಾದದ್ದು. ಇದಕ್ಕೆ ರ್ತಾಕ ಅಂತ್ಯ ಸಿಗಲೇಬೇಕು ಎಂದು ಆಗ್ರಹಿಸಿದರು.
ಟೆಂಡರ್ ಕರೆಯಬೇಕಿತ್ತು: ಸ್ವಚ್ಛ ಮೇವ ಜಯತೆ ಕಾರ್ಯಕ್ರಮಕ್ಕೆ ಗರಿಷ್ಠ 1 ಲಕ್ಷ ರೂ. ಖರ್ಚು ಮಾಡಲು ತಾಪಂ ಇಒಗಳಿಗೆ ಅವಕಾಶವಿದೆ. ಅದಕ್ಕಿಂತ ಹೆಚ್ಚು ಹಣ ಬಳಕೆಗೆ ಟೆಂಡರ್ ಕರೆಯಲೇಬೇಕು. ಆದರೆ ಇಲ್ಲಿ ಟೆಂಡರ್ ಕರೆಯುವ ಬದಲು ಹಂತ ಹಂತವಾಗಿ ಹಣ ಬಳಕೆ ಮಾಡಿಕೊಂಡಿದ್ದಾರೆ. ಇದು ಪ್ರಕ್ರಿಯೆಯ ಉಲ್ಲಂಘನೆ ಎಂದರು.
ಅಂತಿಮವಾಗಿ ಅಧಿಕಾರಿಗಳ ಹಂತದಲ್ಲಿ ತನಿಖೆ ನಡೆಸಲು ನಿರ್ಧರಿಸಲಾಯಿತು. ಜಿಪಂ ಅಧ್ಯಕ್ಷೆ ಜ್ಯೋತಿ ಎಸ್.ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ವೇದಾ ವಿಜಯಕುಮಾರ್, ಶಾಸಕ ಹರತಾಳು ಹಾಲಪ್ಪ ಸಭೆಯಲ್ಲಿ ಪಾಲ್ಗೊಂಡಿದ್ದರು.
ಜನವಸತಿ ಪ್ರದೇಶದಲ್ಲಿರಲಿ ನೀರಿನ ಘಟಕ: ಶುದ್ಧ ಕುಡಿಯುವ ನೀರಿನ ಘಟಕ ಆದಷ್ಟು ಜನವಸತಿ ಪ್ರದೇಶಗಳಲ್ಲಿರುವಂತೆ ನೋಡಿಕೊಳ್ಳಬೇಕು. ಎಲ್ಲೋ ಜಾಗ ಇದೆಯೆಂದು ನೀರಿನ ಘಟಕ ಆರಂಭಿಸಿದರೆ ಅದು ಪ್ರಯೋಜನಕ್ಕೆ ಬರುವುದಿಲ್ಲ. ಹೀಗಾಗಿ ನೀರಿನ ಘಟಕ ಸ್ಥಾಪನೆಗೂ ಮುನ್ನ ಸ್ಥಳೀಯ ಗ್ರಾಪಂನಿಂದ ಮಾಹಿತಿ ಪಡೆಯಬೇಕೆಂದು ಬಿಜೆಪಿ ಸದಸ್ಯೆ ಅಪೂರ್ವಾ ಶರಧಿ ಪೂರ್ಣೆಶ್ ಒತ್ತಾಯಿಸಿದರು.
ಹಲವೆಡೆ ಜನರ ಉಪಯೋಗಕ್ಕೆ ಬಾರದೇ ಶುದ್ಧ ಕುಡಿಯುವ ನೀರಿನ ಘಟಕಗಳು ಶೋಚನೀಯ ಸ್ಥಿತಿ ತಲುಪಿವೆ. ಕೋಣಂದೂರಿನಲ್ಲಿರುವ ನೀರಿನ ಘಟಕದ ಬಾಗಿಲು ಮುರಿದಿದೆ. ಇದಕ್ಕೆಲ್ಲ ಯಾರು ಹೊಣೆ? ಎಂದು ಪ್ರಶ್ನಿಸಿದರು.
ನೀರಿನ ಘಟಕ ತನಿಖೆ ಆರಂಭ: ಶುದ್ಧ ಕುಡಿಯುವ ನೀರಿನ ಘಟಕಗಳ ವಸ್ತುಸ್ಥಿತಿ ತಿಳಿಯಲು ರಾಜ್ಯ ಸರ್ಕಾರ ಇಪೋಪ್ಸ್ ರೀಸರ್ಚ್ ಸೆಂಟರ್ ಎಂಬ ಸಂಸ್ಥೆಯನ್ನು ನೇಮಕ ಮಾಡಿದೆ. ನಮ್ಮ ಜಿಲ್ಲೆಯಲ್ಲಿ ಈ ಸಂಸ್ಥೆ ತಡವಾಗಿ ಅಧ್ಯಯನ ಆರಂಭಿಸಿದೆ. ಬಹುಶಃ ಇನ್ನು 20 ದಿನಗಳಲ್ಲಿ ನಮ್ಮ ಜಿಲ್ಲೆಯ ಶುದ್ಧ ಕುಡಿಯುವ ನೀರಿನ ಘಟಕದ ವಸ್ತುಸ್ಥಿತಿ ಬಗ್ಗೆ ಈ ಸಂಸ್ಥೆ ನೇರವಾಗಿ ಗ್ರಾಮೀಣಾಭಿವೃದ್ಧಿ ಇಲಾಖೆ ಆಯುಕ್ತರಿಗೆ ವರದಿ ನೀಡಲಿದೆ ಎಂದು ಜಿಪಂ ಸಿಇಒ ಎಂ.ಎಲ್.ವೈಶಾಲಿ ಸಭೆಗೆ ಮಾಹಿತಿ ನೀಡಿದರು.
ನರಸಿಂಗ ನಾಯ್ಕ-ಬಿಜೆಪಿ ಜಟಾಪಟಿ: ಶಿಕಾರಿಪುರ ತಾಲೂಕಿನಲ್ಲಿ ಕೊಪ್ಪ ಕೆರೆ ಏತ ನೀರಾವರಿ ಯೋಜನೆ ಕಳಪೆಯಾಗಿದೆ. ಕ್ಷೇತ್ರದ ಶಾಸಕರು ಸಿಎಂ ಆಗಿರುವ ಕಾರಣ ಅವರನ್ನು ಸಂರ್ಪಸಲು ಸಾಧ್ಯವಾಗುತ್ತಿಲ್ಲ. ಲೋಕಸಭಾ ಸದಸ್ಯರೂ ಸಿಗುತ್ತಿಲ್ಲ. ಗುತ್ತಿಗೆದಾರ, ಇಂಜಿನಿಯರ್ ಸ್ಥಳಕ್ಕೆ ಬಂದಿಲ್ಲ ಎಂದು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ಪಿ.ನರಸಿಂಗ ನಾಯ್ಕ ಹೇಳಿದ್ದು ಸಭೆಯಲ್ಲಿ ವಾಗ್ವಾದಕ್ಕೆ ಕಾರಣವಾಯಿತು.
ಸಿಎಂ ಬಗ್ಗೆ ಪ್ರಸ್ತಾಪಿಸಿದ್ದಕ್ಕೆ ಬಿಜೆಪಿಯ ಕೆ.ಇ.ಕಾಂತೇಶ್, ವೀರಭದ್ರಪ್ಪ ಪೂಜಾರ್, ಸುರೇಶ್ ಸ್ವಾಮಿರಾವ್ ಮುಂತಾದವರು ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಮಧ್ಯ ಪ್ರವೇಶಿಸಿದ ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನಕುಮಾರ್, ನರಸಿಂಗ ನಾಯ್ಕ ಸಮಸ್ಯೆ ಹೇಳಿಕೊಂಡಿದ್ದಾರೆ. ಅವರು ಸಿಎಂಗೆ ಅವಮಾನ ಮಾಡಿಲ್ಲ. ನಮ್ಮೆಲ್ಲರಿಗೂ ಸಿಎಂ ಬಗ್ಗೆ ಒಳ್ಳೆಯ ಅಭಿಪ್ರಾಯವಿದೆ ಎಂದರು. ನರಸಿಂಗ ನಾಯ್ಕ ಇದಕ್ಕೆ ದನಿಗೂಡಿಸಿದರು. ಕ್ರಮೇಣ ಪರಿಸ್ಥಿತಿ ತಿಳಿಯಾಯಿತು.
ಜಿಲ್ಲೆಯ ಹಲವೆಡೆ ಮೆಡಿಕಲ್ ಶಾಪ್ ನಡೆಸಲು ಪರವಾನಗಿ ಪಡೆದ ವ್ಯಕ್ತಿಯೇ ಬೇರೆ, ಶಾಪ್ ನಡೆಸುವವರೇ ಬೇರೆಯವರಾಗಿರುತ್ತಾರೆ. ಇದು ಪರವಾನಗಿ ದುರುಪಯೋಗವೂ ಹೌದು. ಇಂತಹ ಪ್ರಕರಣಗಳಲ್ಲಿ ಗಂಭೀರ ಕ್ರಮ ಜರುಗಿಸಬೇಕು. ಇಂತಹ ಮೆಡಿಕಲ್ ಶಾಪ್ಗಳ ನೈಜತೆಯನ್ನೂ ಪತ್ತೆ ಮಾಡಬೇಕು.
| ಸುರೇಶ್ ಸ್ವಾಮಿ ರಾವ್, ಜಿಪಂ ಬಿಜೆಪಿ ಸದಸ್ಯ