ಸ್ವಚ್ಛತೆ ದಾಖಲೆಗಷ್ಟೇ ಸೀಮಿತವೆ?

ಕೈಲಾಂಚ: ಗ್ರಾಮಗಳ ಅಭಿವೃದ್ಧಿ ಜತೆಗೆ ಸ್ವಚ್ಛತೆಗೂ ಗ್ರಾಮ ಪಂಚಾಯಿತಿಗಳು ಮಹತ್ವ ನೀಡಿವೆ. ಗ್ರಾಮಸಭೆ, ವಾರ್ಡ್ ಸಭೆಗಳಲ್ಲಿ ಸ್ವಚ್ಛತೆ ವಿಷಯವೇ ಚರ್ಚೆಯ ವಿಷಯವಾಗಿರುತ್ತದೆ. ಆದರೆ, ಇದು ಕೇವಲ ದಾಖಲೆ ಅಥವಾ ಹೇಳಿಕೆಗಳಿಗಷ್ಟೇ ಸೀಮಿತವಾಯಿತೇ ಎನ್ನುವುದು ಈಗ ಚರ್ಚೆಗೆ ಗ್ರಾಸವಾಗಿದೆ.

ಇದಕ್ಕೆ ಇಂಬುಕೊಡುವಂತೆ ವಿಭೂತಿಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚನ್ನಮಾನಹಳ್ಳಿ ಗ್ರಾಮದ ರಸ್ತೆಯ ಇಕ್ಕೆಲಗಳಲ್ಲಿ ಕಸದ ರಾಶಿ ಹೆಚ್ಚುತ್ತಿದ್ದು, ಸಮಸ್ಯೆ ಕಣ್ಣಿಗೆ ರಾಚುತ್ತಿದ್ದರೂ ಸ್ಥಳೀಯ ಗ್ರಾಪಂ ಕಣ್ಮುಚ್ಚಿ ಕುಳಿತಿದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಚನ್ನಮಾನಹಳ್ಳಿ ಗ್ರಾಮ ನಗರ ಪ್ರದೇಶಕ್ಕೆ ಕೂಗಳತೆ ದೂರದಲ್ಲಿದೆ. ದಿನದಿಂದ ದಿನಕ್ಕೆ ಕಸದ ಸಮಸ್ಯೆ ಉಲ್ಬಣಿಸುತ್ತಿದೆ. ಗ್ರಾಮ ಪಂಚಾಯಿತಿ ತನ್ನ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ಕಸ ವಿಲೇವಾರಿಗೆ ಯಾವುದೇ ಸ್ಥಳ ಗುರುತಿಸಿಲ್ಲ ಹಾಗೂ ಸಮಸ್ಯೆ ನೀಗಿಸಲು ಯಾವ ಕ್ರಮವನ್ನು ಕೈಗೊಂಡಿಲ್ಲ ಎನ್ನುವುದನ್ನು ಚನ್ನಮಾನಹಳ್ಳಿ – ಬನ್ನಿಕುಪ್ಪೆ ಮುಖ್ಯರಸ್ತೆಯ ಬದಿ ಸಂಗ್ರಹವಾಗಿರುವ ಕಸದ ರಾಶಿಗಳೇ ಸಾರುತ್ತಿವೆ.

ರೈಲ್ವೆ ಬ್ರಿಡ್ಜ್​ನಿಂದ ಆರಂಭವಾಗಿ ರಸ್ತೆಯ ಎರಡೂ ಬದಿ ಪ್ಲಾಸ್ಟಿಕ್ ಕವರ್​ಗಳು, ಕಾಗದ, ಹಳೇ ಪ್ಲಾಸ್ಟಿಕ್, ಒಡೆದ ಗಾಜು, ಹಳೇ ಬಟ್ಟೆ ಮತ್ತಿತರ ಅನುಪಯುಕ್ತ ವಸ್ತುಗಳ ಜತೆ ಕಸ ಕಡ್ಡಿ, ಕೊಳತೆ ವಸ್ತುಗಳು ಸೇರುತ್ತಿವೆ. ದಿನದಿಂದ ದಿನಕ್ಕೆ ಕಸದ ಸಂಗ್ರಹ ಹೆಚ್ಚುತ್ತಿದೆ. ಇದರಿಂದ ದುರ್ವಾಸನೆ ಹರಡುತ್ತಿದ್ದು, ಅಕ್ಕಪಕ್ಕದ ನಿವಾಸಿಗಳು ಗಬ್ಬುವಾಸನೆ ಜತೆಗೆ ರೋಗದ ಭೀತಿಯಲ್ಲಿ ಜೀವನ ಸಾಗಿಸುವ ಸ್ಥಿತಿ ನಿರ್ವಣವಾಗಿದೆ. ಕೂಡಲೇ ಗ್ರಾಪಂ ವತಿಯಿಂದ ಗ್ರಾಮದ ಪ್ರಮುಖ ಸ್ಥಳಗಳಲ್ಲಿ ಕಸದ ತೊಟ್ಟಿ ನಿರ್ವಿುಸಿ ರಸ್ತೆ ಸಮಸ್ಯೆಗೆ ಮುಕ್ತಿ ಹಾಡಬೇಕೆಂದು ಗ್ರಾಮದ ಕುಮಾರ್, ಶಶಿ, ಅರ್ಕೆಶ್, ವೆಂಕಟೇಶ್, ಮನು, ನಾಗೇಶ್ ಮತ್ತಿತರರು ಒತ್ತಾಯಿಸಿದ್ದಾರೆ.

ಗ್ರಾಮ ದಿನೇದಿನೆ ವಿಸ್ತರಿಸುತ್ತಿದೆ. ಜನಸಂಖ್ಯೆಯೂ ಹೆಚ್ಚುತ್ತಿದೆ. ಗ್ರಾಮದಲ್ಲಿ ಕಸ ಹಾಕಲು ಗ್ರಾಪಂನವರು ಇದುವರೆಗೂ ನಿಗದಿತ ಜಾಗ ಗುರುತಿಸಿಲ್ಲ. ಹೀಗಾಗಿ ಜನ ಎಲ್ಲೆಂದರಲ್ಲಿ ಕಸ ಎಸೆಯುತ್ತಿದ್ದಾರೆ. ಕೂಡಲೇ ಗ್ರಾಪಂನವರು ನಿಗದಿತ ಸ್ಥಳದಲ್ಲಿ ಕಸ ಹಾಕುವ ವ್ಯವಸ್ಥೆ ಮಾಡಬೇಕು.

| ಅರ್ಕೆಶ್ ಚನ್ನಮಾನಹಳ್ಳಿ

 

ಸ್ವಚ್ಛತೆಗೆ ಮೊದಲ ಆದ್ಯತೆ ನೀಡಲಾಗಿದೆ. ಪ್ರತಿ ಗ್ರಾಮದಲ್ಲೂ ಕಸದ ತೊಟ್ಟಿ ನಿರ್ಮಾಣ ಮಾಡುವಂತೆ ಸಾರ್ವಜನಿಕರು ಗಮನಕ್ಕೆ ತಂದಿದ್ದಾರೆ. ಮುಂದಿನ ಸಭೆಯಲ್ಲಿ ಈ ಬಗ್ಗೆ ರ್ಚಚಿಸಿ ಕ್ರಮ ಜರುಗಿಸಲಾಗುವುದು.

| ಆರ್. ಶಿವಾನಂದ ಗ್ರಾಪಂ ಅಧ್ಯಕ್ಷ, ವಿಭೂತಿಕೆರೆ