ಔರಾದ್: ಶಾಸಕ ಪ್ರಭು ಚವ್ಹಾಣ್ ಶುಕ್ರವಾರ ಪಟ್ಟಣದ ವಿವಿಧ ವಾರ್ಡ್ಗಳಲ್ಲಿ ಸಂಚರಿಸಿ ಸ್ವಚ್ಛತೆ, ಚರಂಡಿ, ರಸ್ತೆ, ಕುಡಿಯುವ ನೀರು ಪೂರೈಕೆಯನ್ನು ಪರಿಶೀಲಿಸಿದರು. ಈ ವೇಳೆ ಕೆಲವೆಡೆ ಅಶುಚಿತ್ವ ಕಂಡು ಪಟ್ಟಣ ಪಂಚಾಯಿತಿ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
೨೦ ವಾರ್ಡ್ಗಳಲ್ಲಿ ಸಂಚರಿಸಿದ ಚವ್ಹಾಣ್, ವಾರ್ಡ್ ೬ ಇತರೆಡೆ ಚರಂಡಿ ತುಂಬಿ ದುರ್ನಾತ ಬೀರುವುದನ್ನು ಕಂಡು ಸಿಡಿಮಿಡಿಗೊಂಡರು. ಸ್ವಚ್ಛತೆ ಕುರಿತು ಪದೇಪದೆ ಹೇಳುತ್ತಿದ್ದರೂ ಪರಿಸ್ಥಿತಿ ಸುಧಾರಿಸಿಲ್ಲ. ಅಶುಚಿತ್ವದ ಕಾರಣ ಮಲೇರಿಯಾ, ಚಿಕೂನ್‌ಗುನ್ಯಾದಂಥ ಕಾಯಿಲೆಗಳು ಹರಡುತ್ತವೆ. ಇನ್ನಾದರೂ ಶುಚಿತ್ವಕ್ಕೆ ಆದ್ಯತೆ ಕೊಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ವಾರ್ಡ್ಗೆ ಇಬ್ಬರು ಕಾರ್ಮಿಕರ ನೇಮಿಸಿ ನಿತ್ಯ ಸ್ವಚ್ಛತಾ ಕಾರ್ಯ ಕೈಗೊಳ್ಳಬೇಕು. ಪ್ರತಿ ವಾರ್ಡ್ನಲ್ಲಿ ಸ್ವಚ್ಛತಾ ವಾಹನ ಸಂಚರಿಸಿ ಕಸ ಸಂಗ್ರಹಿಸಬೇಕು. ಬೀದಿ ದೀಪಗಳು ಸರಿಯಾಗಿ ಕೆಲಸ ನಿರ್ವಹಿಸುವಂತೆ ನೋಡಿಕೊಳ್ಳಬೇಕು ಎಂದರು.
ಕೆಲ ವಾರ್ಡ್ಗಳಲ್ಲಿ ನಿವಾಸಿಗಳು ನೀರಿನ ಸಮಸ್ಯೆ ಬಗ್ಗೆ ಶಾಸಕರ ಗಮನಕ್ಕೆ ತಂದರು. ಬೇಸಿಗೆ ಆರಂಭವಾಗಿದ್ದು, ಪಟ್ಟಣದಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ. ಎಲ್ಲ ವಾರ್ಡ್ಗಳಿಗೆ ಪ್ರತಿದಿನ ಸಮರ್ಪಕ ನೀರು ಪೂರೈಸಬೇಕು. ಎಲ್ಲೂ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಪಶು ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ಚವ್ಹಾಣ್, ಪಶು ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಗೆ ಚುರುಕು ಮುಟ್ಟಿಸಿದರು. ಆಸ್ಪತ್ರೆಯಲ್ಲಿ ಕೆಲ ಸಿಬ್ಬಂದಿ ಮಾತ್ರ ಹಾಜರಿರುವುದನ್ನು ಕಂಡು ಬೇಸರ ವ್ಯಕ್ತಪಡಿಸಿದರು.
ರೈತರಿಗೆ ಅನುಕೂಲವಾಗಬೇಕೆಂಬ ಉದ್ದೇಶದಿಂದ ನಾಲ್ಕು ಕೋಟಿ ಅನುದಾನ ತಂದು ಹೈಟೆಕ್ ಪಶು ಆಸ್ಪತ್ರೆ ನಿರ್ಮಿಸಿದ್ದೇನೆ. ಆದರೆ ವೈದ್ಯರು ಮತ್ತು ಸಿಬ್ಬಂದಿ ಇರುವುದಿಲ್ಲ ಎಂದರೆ ಏನರ್ಥ ಎಂದು ಪ್ರಶ್ನಿಸಿದರು. ಅವ್ಯವಸ್ಥೆಯನ್ನು ಕೂಡಲೇ ಸರಿಪಡಿಸಬೇಕು ಎಂದು ಸೂಚಿಸಿದರು.
ಸಿಸಿ ರಸ್ತೆ, ಬೋರ್‌ವೆಲ್, ಎಲ್‌ಇಡಿ ವಿದುತ್ ದೀಪ, ಹೈಮಾಸ್ಟ್ ದೀಪ, ವಿದ್ಯುತ್ ಕಂಬ ಅಳವಡಿಕೆ, ಬೀದಿ ದೀಪ, ಚರಂಡಿ ಸೇರಿ ಸುಮಾರು ೧.೨೩ ಕೋಟಿ ರೂ. ಮೊತ್ತದ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕರು ಭೂಮಿಪೂಜೆ ನೆರವೇರಿಸಿದರು.
ತಹಸೀಲ್ದಾರ್ ಮಲಶೆಟ್ಟಿ ಚಿದ್ರೆ, ಪಪಂ ಮುಖ್ಯಾಧಿಕಾರಿ ಸ್ವಾಮಿದಾಸ, ಪ್ರಮುಖರಾದ ರಾಮಶಟ್ಟಿ ಪನ್ನಾಳೆ, ಧೊಂಡಿಬಾ ನರೋಟೆ, ಅರಹಂತ ಸಾವಳೆ, ಶಿವರಾಜ ಅಲ್ಮಾಜೆ, ಸಚಿನ್ ರಾಠೋಡ್, ಖಂಡೋಬಾ ಕಂಗಟೆ, ಕೇರಬಾ ಪವಾರ್, ದಯಾನಂದ ಘೂಳೆ, ಶೇಷರಾವ ಕೋಳಿ, ರಾಮ ನರೋಟೆ, ಅಶೋಕ ಅಲ್ಮಾಜೆ, ಯಾದವರಾವ, ಬಾಬುರಾವ ಅಲ್ಮಾಜೆ, ಸಂಜು ವಡೆಯರ್, ಬನ್ಸಿ ನಾಯಕ್, ಗುಂಡಪ್ಪ ಮುಧಾಳೆ, ಬಾಬು ರಾಠೋಡ್, ಯಾದು ಮೇತ್ರೆ, ಶ್ರೀನಿವಾಸ ಖೂಬಾ, ವೀರೇಶ ಅಲ್ಮಾಜೆ, ಎಂ.ಡಿ. ಸಲಾವುದ್ದಿನ್, ಸಂದೀಪ್ ಪಾಟೀಲ್ ಇತರರಿದ್ದರು.
ಪೊಲೀಸ್ ಠಾಣೆಗೆ ಭೇಟಿ: ಪಟ್ಟಣದ ಪೊಲೀಸ್ ಠಾಣೆಗೆ ಬೇಟಿ ನೀಡಿ ಇಲಾಖೆ ಕೆಲಸ ಕಾರ್ಯಗಳನ್ನು ಶಾಸಕ ಪ್ರಭು ಚವ್ಹಾಣ್ ವೀಕ್ಷಿಸಿ ಹಾಜರಾತಿಯನ್ನು ಗಮನಿಸಿದರು. ಅಧಿಕಾರಿಗಳು ಪಟ್ಟಣದಲ್ಲಿ ಸುರಕ್ಷತೆಗಾಗಿ ಕೈಗೊಂಡ ಕಾರ್ಯಗಳನ್ನು ಶಾಸಕರ ಗಮನಕ್ಕೆ ತಂದರು. ಪಟ್ಟಣದಲ್ಲಿ ಅಳವಡಿಸಿರುವ ಸಿಸಿ ಟಿವಿಗಳ ದೃಶ್ಯಗಳನ್ನು ತೋರಿಸಲಾಯಿತು. ಠಾಣೆಗೆ ಅಗತ್ಯವಿರುವ ಮೂಲಸೌಕರ್ಯಗಳ ಬಗ್ಗೆ ಪಟ್ಟಿ ನೀಡಿದರೆ ಹಂತ ಹಂತವಾಗಿ ಈಡೇರಿಸುವುದಾಗಿ ಚವ್ಹಾಣ್ ಹೇಳಿದರು. ಠಾಣೆಗೆ ಎರಡು ಎಕರೆಗೂ ಹೆಚ್ಚಿನ ಜಮೀನಿದ್ದು, ಉದ್ಯಾನ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದರು. ಸಾರ್ವಜನಿಕ ಆಸ್ಪತ್ರೆಗೆ ತೆರಳಿ ವ್ಯವಸ್ಥೆ ಪರಿಶೀಲಿಸಿದರು. ಎಲ್ಲ ವೈದ್ಯರು ಸರಿಯಾಗಿ ಕೆಲಸ ಮಾಡಬೇಕು. ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಸಮರ್ಪಕ ಚಿಕಿತ್ಸೆ ನೀಡಬೇಕೆಂದು ತಾಕೀತು ಮಾಡಿದರು.
ಔರಾದ್‌ನಲ್ಲಿ ಪ್ರತಿವರ್ಷ ಎದುರಾಗುವ ನೀರಿನ ಸಮಸ್ಯೆ ಶಾಶ್ವತ ಪರಿಹರಿಸಬೇಕೆಂಬ ಉದ್ದೇಶದಿಂದ ಸಾಕಷ್ಟು ಪ್ರಯತ್ನಪಟ್ಟು ಕಾರಂಜಾ ಜಲಾಶಯದಿಂದ ಪಟ್ಟಣಕ್ಕೆ ನೀರು ಸರಬರಾಜು ಮಾಡುವ ಯೋಜನೆಯನ್ನು ೮೪ ಕೋಟಿ ರೂ. ವೆಚ್ಚದಲ್ಲಿ ಜಾರಿಗೊಳಿಸಿದ್ದು, ಕೆಲಸ ಪೂರ್ಣಗೊಂಡರೆ ನೀರಿನ ಸಮಸ್ಯೆಯೇ ಇರುವುದಿಲ್ಲ.
| ಪ್ರಭು ಚವ್ಹಾಣ್ ಶಾಸಕ