ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಿ

ವಿಜಯಪುರ: ನಗರದಲ್ಲಿ ಶೇ.40ರಷ್ಟು ಪ್ರದೇಶಗಳಿಗೆ ಪಾಲಿಕೆಯ ಕಸ ಸಂಗ್ರಹಣೆಗೆ ಆಗುತ್ತಿಲ್ಲ. ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಗಮನಹರಿಸಿ ನಗರದ ಎಲ್ಲೆಡೆ ಕಸ ಸಂಗ್ರಹಕ್ಕೆ ಕ್ರಮ ತೆಗೆದುಕೊಳ್ಳಬೇಕು ಎಂದು ಪಾಲಿಕೆ ಸದಸ್ಯೆ ಲಕ್ಷಿ್ಮ ಕನ್ನೊಳ್ಳಿ ಹೇಳಿದರು.

ನಗರದ ಎಸ್.ಬಿ.ಎಸ್ ಮಹಿಳಾ ಕಾಲೇಜ್​ನಲ್ಲಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ, ಕ್ಷೇತ್ರ ಜನಸಂಪರ್ಕ ಕಾರ್ಯಾಲಯ, ಮಹಾನಗರ ಪಾಲಿಕೆ ಸಂಯುಕ್ತಾಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸ್ವಚ್ಛತೆ ಕುರಿತ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಾವು ನಮ್ಮ ದೇಹವನ್ನು ಸ್ಚಚ್ಛವಾಗಿಟ್ಟುಕೊಳ್ಳುವಂತೆ ಸುತ್ತಲಿನ ಪರಿಸರವನ್ನು ಶುಚಿಯಾಗಿಟ್ಟುಕೊಳ್ಳಬೇಕು.ಅದರಲ್ಲಿ ಮಹಿಳೆಯರ ಪಾತ್ರ ಹೆಚ್ಚಿನದಿದ್ದು ಮುಂದಿನ ಎರಡು ವರ್ಷಗಳಲ್ಲಿ ವಿಜಯಪುರ ನಗರವನ್ನು ಶುಚಿ ಮತ್ತು ಸುಂದರವನ್ನಾಗಿ ಮಾಡಲು ಗುರಿಯಿಟ್ಟುಕೊಳ್ಳಲಾಗಿದ್ದು ಸಾರ್ವಜನಿಕರು ಸಹಕರಿಸಬೇಕು ಎಂದು ತಿಳಿಸಿದರು.

ಬಿಎಲ್​ಡಿಇ ಸಂಸ್ಥೆಯ ಆಡಳಿತಾಧಿಕಾರಿ ಬಿ.ಆರ್. ಪಾಟೀಲ ಮಾತನಾಡಿ, ನಿಸರ್ಗವನ್ನು ಕಾಪಾಡಿಕೊಳ್ಳದಿದ್ದರೆ ಜೀವ ಸಂಕುಲಕ್ಕೆ ಉಳಿಗಾಲವಿಲ್ಲ. ಆದ್ದರಿಂದ ಪರಿಸರವನ್ನು ಶುಚಿಯಾಗಿಟ್ಟುಕೊಳ್ಳುವ ಮೂಲಕ ಎಲ್ಲಾ ಜೀವ ಸಂತತಿಯನ್ನು ಉಳಿಸಬೇಕಿದೆ. ಅದರಲ್ಲಿ ಮಾನವನ ಪಾತ್ರ ಬಹಳ ಮುಖ್ಯವಾಗಿದ್ದು. ಪ್ರತಿಯೊಬ್ಬರು ಜವಾಬ್ದಾರಿಯಿಂದ ಕಸ ವಿಲೇವಾರಿಯಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.

ಪಾಲಿಕೆ ಪರಿಸರ ಅಭಿಯಂತರ ಜಗದೀಶ್ ಮಾತನಾಡಿ, ನಗರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಸ ಉತ್ಪತ್ತಿಯಾಗುತ್ತಿ್ತುವುದರಿಂದ ಭೂಮಿಗೆ ಕಸವನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅದರ ಪರಿಣಾಮವಾಗಿ ನೈಸರ್ಗಿಕ ವಿಕೋಪಗಳು ಹೆಚ್ಚುತ್ತಿದೆ. ಆದ್ದರಿಂದ ಸಾರ್ವಜನಿಕರು ಅನಾವಶ್ಯಕ ತ್ಯಾಜ್ಯವನ್ನು ಕಡಿಮೆಗೊಳಿಸಬೇಕು ಎಂದು ಮನವಿ ಮಾಡಿದರು.

ಕಸ ನಿರ್ವಹಣೆಗಾಗಿಯೇ ಪಾಲಿಕೆಯಿಂದ 14 ರಿಂದ 16 ಕೋಟಿ ರೂ. ಹಣ ವ್ಯಯವಾಗುತ್ತಿದ್ದು ಅದನ್ನು ತಗ್ಗಿಸಿ ಸಾರ್ವಜನಿಕರ ತೆರಿಗೆ ಹಣವನ್ನು ಇತರ ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಳ್ಳಲು ಅನುಕೂಲವಾಗಲಿದೆ ಎಂದರು.

ಪಾಲಿಕೆ ಮೇಯರ್ ಶ್ರೀದೇವಿ ಲೋಗಾವಿ ಕಾರ್ಯಕ್ರಮ ಉದ್ಘಾಟಿಸಿದರು. ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಸಮಾಜ ಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಕಲಾವತಿ ಕಾಂಬಳೆ, ಕ್ಷೇತ್ರ ಪ್ರಚಾರಾಧಿಕಾರಿ ಜಿ.ತುಕಾರಾಮಗೌಡ, ಪ್ರಾಚಾರ್ಯ ಪಿ.ಎಸ್. ಹೂಗಾರ, ಅನ್ನಪೂರ್ಣ ಕುಬಕಟ್ಟಿ, ಜೆ.ವಿ.ನಾವದಗಿ, ವಿ.ಎಸ್.ತಿಮ್ಮನಗೌಡರ, ಬಿ.ಬಿ.ಹಚಡದ, ಗಿರೀಶ ಅಕಮಂಚಿ, ನರೇಶ ಪೊದ್ದಾರ, ಶ್ವೇತಾ ಘಂಟಿ ಇನ್ನಿತರರಿದ್ದರು.