ಸ್ವಕ್ಷೇತ್ರದಲ್ಲೂ ಲೀಡ್ ಪಡೆಯದ ಆನಂದ, ಇತಿಹಾಸ ಬರೆದ ಅನಂತ

ಶಿರಸಿ: ಜೆಡಿಎಸ್ ಅಭ್ಯರ್ಥಿ ಆನಂದ ಅಸ್ನೋಟಿಕರ್ ತಮ್ಮ ಸ್ವಕ್ಷೇತ್ರ ಕಾರವಾರ ಅಂಕೋಲಾದಲ್ಲಿಯೂ ಲೀಡ್ ಪಡೆಯುವಲ್ಲಿ ವಿಫಲರಾಗಿದ್ದಾರೆ. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಇಲ್ಲಿ ಪ್ರಚಾರ ನಡೆಸಿದ್ದರೂ 37,337 ಮತಗಳಿಗೆ ಅಸ್ನೋಟಿಕರ್ ತೃಪ್ತಿಪಟ್ಟುಕೊಳ್ಳಬೇಕಾಗಿದೆ. ಎಲ್ಲ 8 ವಿಧಾನಸಭೆ ಕ್ಷೇತ್ರದಲ್ಲಿಯೂ ಆನಂದ ಆಸ್ನೋಟಿಕರ್ ಅವರಿಗೆ ಹಿನ್ನಡೆ ಉಂಟಾಗಿದೆ.

ಕಾರವಾರ ಅಂಕೋಲಾ ಕ್ಷೇತ್ರದಲ್ಲಾದರೂ ಅನಂತಕುಮಾರ ಹೆಗಡೆ ಅವರಿಗೆ ಅಸ್ನೋಟಿಕರ್ ಸ್ಪರ್ಧೆ ಒಡ್ಡಬಹುದು ಎಂಬ ಸಾರ್ವಜನಿಕರ ನಿರೀಕ್ಷೆ ಹುಸಿಯಾಗಿದೆ. ಈ ಕ್ಷೇತ್ರದಲ್ಲಿ ಅನಂತಕುಮಾರ ಹೆಗಡೆ ಪ್ರಾಬಲ್ಯ ಮೆರೆದಿದ್ದು, 1,13,135 ಮತ ಪಡೆಯುವ ಮೂಲಕ 75,786 ಮತಗಳ ಮುನ್ನಡೆ ಪಡೆದಿದ್ದಾರೆ. ಕಾಂಗ್ರೆಸ್ ಪ್ರಮುಖ ಸತೀಶ ಸೈಲ್ ಅವರೊಂದಿಗಿನ ಅಸ್ನೋಟಿಕರ್ ಅವರ ವಿರಸದಿಂದಾಗಿ ಈ ಹಿನ್ನಡೆ ಉಂಟಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಕಿತ್ತೂರು ಮತ್ತು ಖಾನಾಪುರದಲ್ಲಿ ಮರಾಠ ಹಿಂದುಗಳ ಮತಗಳು ಅನಂತಕುಮಾರ ಹೆಗಡೆ ಅವರ ಗೆಲುವಿನ ಅಂತರವನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸಿದೆ. ಇನ್ನೊಂದೆಡೆ ಜಿಲ್ಲಾ ಉಸ್ತುವಾರಿ ಸಚಿವ ಆರ್. ವಿ. ದೇಶಪಾಂಡೆ ಅವರ ತವರಾದ ಹಳಿಯಾಳ ಜೊಯಿಡಾದಲ್ಲಿ ಆನಂದ ಅಸ್ನೋಟಿಕರ್ ಅವರಿಗೆ ಹೆಚ್ಚಿನ ಮತಗಳು ಬರಬಹುದು ಎಂದು ನಿರೀಕ್ಷಿಸಲಾಗಿತ್ತು. ಇಲ್ಲೂ 41 ಸಾವಿರಕ್ಕೂ ಅಧಿಕ ಮತಗಳ ಹಿನ್ನಡೆ ಉಂಟಾಗಿದೆ.

ಕಾರವಾರ ವರದಿ: ಬಿಜೆಪಿಯ ಅನಂತ ಕುಮಾರ ಹೆಗಡೆ 6 ನೇ ಬಾರಿಗೆ ಸಂಸದರಾದ ಅವರು ನಿರಂತರ ನಾಲ್ಕನೇ ಬಾರಿ ಆಯ್ಕೆಯಾಗುವ ಮೂಲಕ ಕ್ಷೇತ್ರದಲ್ಲಿ ದೇವರಾಯ ನಾಯ್ಕ ಅವರ ಸಾಧನೆಯನ್ನು ಸರಿಗಟ್ಟಿದ್ದಾರೆ. ಕ್ಷೇತ್ರದ ಚುನಾವಣಾ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಸಂಸದರಾದ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕಾಂಗ್ರೆಸ್​ನ ಜೋಕಿಂ ಆಳ್ವಾ ಮೂರು ಬಾರಿ ಸಂಸದರಾಗಿದ್ದರು. ಕಾಂಗ್ರೆಸ್​ನ ದೇವರಾಯ ನಾಯ್ಕ 1980 ರಿಂದ 1991 ರವರೆಗೆ ನಿರಂತರ ನಾಲ್ಕು ಬಾರಿ ಸಂಸದರಾಗಿದ್ದರು. ದೇವರಾಯ ನಾಯ್ಕ ಅವರ ಗೆಲುವಿನ ಓಟಕ್ಕೆ 1996 ರಲ್ಲಿ ಅನಂತ ಕುಮಾರ ಹೆಗಡೆ ತಡೆಯೊಡ್ಡಿ ಮೊದಲ ಬಾರಿ ಬಿಜೆಪಿಯಿಂದ ಆಯ್ಕೆಯಾಗಿದ್ದರು. 1998 ರಲ್ಲಿ ಮತ್ತೊಮ್ಮೆ ಆಯ್ಕೆಯಾದರು. ಆದರೆ, ಅನಂತ ಕುಮಾರ ಹೆಗಡೆ ಹ್ಯಾಟ್ರಿಕ್ ಗೆಲುವಿಗೆ 1999 ರಲ್ಲಿ ಕಾಂಗ್ರೆಸ್​ನ ಮಾರ್ಗರೇಟ್ ಆಳ್ವಾ ತಡೆಯೊಡ್ಡಿದ್ದರು. 2004 ರಿಂದ ಸತತವಾಗಿ ಗೆದ್ದು, ದಾಖಲೆ ಬರೆದಿದ್ದಾರೆ.

Leave a Reply

Your email address will not be published. Required fields are marked *