ಸ್ಯಾಟ್​ಲೈಟ್ ಉಡಾವಣೆಯಲ್ಲಿ ಇಸ್ರೋ ಪಾರಮ್ಯ

ಧಾರವಾಡ: ಇಸ್ರೋ ಸಂಸ್ಥೆಯು ವಿಜ್ಞಾನ ಹಾಗೂ ತಂತಜ್ಞಾನವನ್ನು ಸಮರ್ಥವಾಗಿ ಬಳಸಿಕೊಂಡು ಸಾಧನೆ ಮಾಡಿದೆ. ವಿದೇಶದ 300ಕ್ಕೂ ಹೆಚ್ಚು ಸ್ಯಾಟ್​ಲೈಟ್​ಗಳನ್ನು ಇಸ್ರೋ ಉಡಾವಣೆ ಮಾಡಿರುವುದು ಹೆಮ್ಮೆಯ ಸಂಗತಿ. ಜು. 22ರಂದು ಚಂದ್ರಯಾನ ಯಶಸ್ವಿಯಾಗುವ ವಿಶ್ವಾಸವಿದೆ ಎಂದು ಇಸ್ರೋ ವಿಪತ್ತು ನಿರ್ವಹಣೆ ವಿಭಾಗದ ವಿಜ್ಞಾನಿ ಡಾ. ಪಿ.ಜಿ. ದಿವಾಕರ ಹೇಳಿದರು.
ನಗರದ ಸನ್ನಿಧಿ ಸಭಾಭವನದಲ್ಲಿ ಶನಿವಾರ ಜರುಗಿದ ವಿದ್ಯಾ ಪಿ. ಹಂಚಿನಮನಿ ಕಾಲೇಜಿನ ವಿದ್ಯಾರ್ಥಿ ಸಂಘ, ಕ್ರೀಡಾ ಹಾಗೂ ಸಾಂಸ್ಕೃತಿಕ ವಿಭಾಗಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಇಸ್ರೋ ಸಂಸ್ಥೆಯು ಹಿಮಾಲಯ, ಮರುಭೂಮಿ, ಸಮುದ್ರ, ಪರ್ವತ ಶ್ರೇಣಿಗಳ ಅಧ್ಯಯನ ನಡೆಸುತ್ತಿದೆ. 11 ಸ್ಯಾಟ್​ಲೈಟ್​ಗಳಿಂದ ಮಾಹಿತಿ ಸಂಗ್ರಹಿಸುತ್ತಿದೆ. ಅಲ್ಲದೇ ಒಟ್ಟು ಕೃಷಿ ಉತ್ಪಾದನೆಯ ಅಂಕಿ- ಅಂಶವನ್ನು ಒಕ್ಕಣೆಗೂ ತಿಂಗಳ ಮುಂಚೆ ಸಂಗ್ರಹಿಸಿ ಕೇಂದ್ರ ಸರ್ಕಾರಕ್ಕೆ ನೀಡಲಿದೆ. ಸುನಾಮಿಯ ಬಗ್ಗೆ ನಿಗಾ ವಹಿಸಿ ಮುಂಚಿತವಾಗಿಯೇ ಎಚ್ಚರಿಸುವ ಕೆಲಸ ಮಾಡಲಾಗುವುದು ಎಂದರು.
13 ರಾಜ್ಯದ ಮೀನುಗಾರಿಕೆ ಮೇಲೆ ವಿಶೇಷ ಸ್ಯಾಟ್​ಲೈಟ್ ಉಡಾವಣೆ ಮಾಡಿ ಹೆಚ್ಚು ಮೀನು ಸಿಗುವ ಸ್ಥಳದ ಬಗ್ಗೆ ಮೀನುಗಾರರಿಗೆ ಮಾಹಿತಿ ನೀಡಲಾಗುತ್ತದೆ. ಅಂತರ್ಜಲ ಮಟ್ಟ ಕುಸಿತದ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ಈ ಮೂಲಕ ಇಸ್ರೋ ದೇಶಕ್ಕೆ ನೆರವು ನೀಡುತ್ತಿದೆ ಎಂದರು.
ಓಝೋನ್ ಪದರ ಹಾನಿಯಾಗದಂತೆ ರಕ್ಷಿಸಲು ಪ್ರತಿಯೊಬ್ಬರೂ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಭೂಮಿಯಂಥ ಸ್ಥಳ ಬೇರೆ ಯಾವುದೂ ಸಿಗುವುದಿಲ್ಲ. ಅದನ್ನು ಕಾಪಾಡಲು ಪರಿಸರ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದರು.
ಕಾಲೇಜ್ ಪ್ರಾಚಾರ್ಯ ಡಾ. ಎಸ್.ಎ. ಜೋಶಿ ಅಧ್ಯಕ್ಷತೆ ವಹಿಸಿದ್ದರು. ಶಾಂತೇಶ ಎಜುಕೇಷನ್ ಸೊಸೈಟಿ ಕಾರ್ಯಾಧ್ಯಕ್ಷ ಪೊ›. ಪಿ.ಆರ್. ಹಂಚಿನಮನಿ, ಕಾರ್ಯದರ್ಶಿ ಮನೋಜ ಹಂಚಿನಮನಿ, ವಿದ್ಯಾರ್ಥಿ ಪ್ರತಿನಿಧಿಗಳಾದ ಪ್ರೇರಣಾ ನಾಡಗೌಡರ, ಅವಿನಾಶ ಹೆಗಡೆ, ಪ್ರದೀಪ ಚೌಗಲಾ, ಇತರರಿದ್ದರು.
ಗಣೇಶ ಪ್ರಾರ್ಥಿಸಿದರು. ಅಂಕಿತಾ ಮತ್ತು ವಿಂದ್ಯಾ ನಿರೂಪಿಸಿದರು.