ಸ್ಯಾಂಡಲ್​ವುಡ್ ತಾರೆಯರ ಸಂಕ್ರಮಣ ಸಡಗರ

 

ಮೊನ್ನೆಯಷ್ಟೇ ಹೊಸ ವರ್ಷವನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲಾಗಿತ್ತು. ಆ ಕ್ಷಣಗಳನ್ನು ಮೆಲುಕು ಹಾಕುತ್ತಿರುವಾಗಲೇ ನಮ್ಮೆದುರು ಸಂಕ್ರಾಂತಿ ಹಬ್ಬ ಬಂದುಬಿಟ್ಟಿದೆ. ವರ್ಷದ ಮೊದಲ ಹಬ್ಬವಾದ್ದರಿಂದ ಆಚರಣೆಯಲ್ಲಿ ಏನೋ ಒಂಥರಾ ಹುಮ್ಮಸ್ಸು. ಸಾಮಾನ್ಯರಿಂದ ಸೆಲೆಬ್ರಿಟಿಗಳವರೆಗೆ ಎಲ್ಲರೂ ಸಂಕ್ರಾಂತಿಯನ್ನು ಎಂಜಾಯ್ ಮಾಡಲು ಸಜ್ಜಾಗಿದ್ದಾರೆ. ಚಂದನವನದ ತಾರೆಗಳ ಪೈಕಿ ಒಬ್ಬೊಬ್ಬರದ್ದು ಒಂದೊಂದು ರೀತಿಯ ಆಚರಣೆ. ಕೆಲವರು ಬಿಡುವು ಮಾಡಿಕೊಂಡು ಹಬ್ಬದ ಮಜಾ ಸವಿದರೆ, ಮತ್ತೆ ಕೆಲವರದ್ದು ಶೂಟಿಂಗ್ ಬಿಜಿಯ ನಡುವೆಯೇ ಸಣ್ಣ ಸೆಲೆಬ್ರೇಷನ್. ಬಾಲ್ಯದ ನೆನಪಿನ ಪುಟಗಳಲ್ಲಿ ಎದ್ದು ಕಾಣುವ ಹೊಸ ಬಟ್ಟೆ, ರಂಗೋಲಿ, ವಿಶೇಷ ಅಡುಗೆ, ಎಳ್ಳು-ಬೆಲ್ಲ, ಬಣ್ಣ ಬಣ್ಣದ ಸಂಕ್ರಾಂತಿ ಕಾಳು ಇತ್ಯಾದಿ ಅಂಶಗಳನ್ನು ಎಲ್ಲ ತಾರೆಯರೂ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಸ್ಯಾಂಡಲ್​ವುಡ್​ನಲ್ಲಿ ಈ ಬಾರಿ ನಟಿಯರು ಸಂಕ್ರಮಣವನ್ನು ಯಾವ ರೀತಿ ಆಚರಿಸುತ್ತಿದ್ದಾರೆ ಎಂಬುದಕ್ಕೆ ಇಲ್ಲಿದೆ ಉತ್ತರ.

 

ಸಕ್ಕರೆ ಅಚ್ಚು ಸಂಗ್ರಹಿಸಿ ತಿನ್ನುತ್ತಿದ್ದೆ

ಸಂಕ್ರಾಂತಿ ಅಂದಮೇಲೆ ಎಳ್ಳು-ಬೆಲ್ಲ ಹಂಚುವುದು ಸಹಜ. ಅದೇ ರೀತಿ ನಮ್ಮ ಮನೆಯಲ್ಲೂ ತುಂಬ ಸಿಂಪಲ್ ಆಗಿ ಹಬ್ಬದಾಚರಣೆ ಮಾಡುತ್ತೇವೆ. ಆದರೆ ಚಿಕ್ಕಂದಿನಲ್ಲಿ ಇದೇ ಸಂಕ್ರಾಂತಿಯನ್ನು ಜೋರಾಗಿ ಆಚರಣೆ ಮಾಡುತ್ತಿದ್ದೆ. ಆವಾಗೆಲ್ಲ ಸಣ್ಣ ಸಣ್ಣ ಬೆಲ್ಲದಚ್ಚುಗಳನ್ನು ಶೇಖರಣೆ ಮಾಡುವುದೇ ಒಂದು ರೀತಿಯ ಸಂಭ್ರಮ. ರಸ್ತೆ ಪಕ್ಕದಲ್ಲಿ ವಿವಿಧ ಬಗೆಯ ಸಕ್ಕರೆ ಅಚ್ಚುಗಳನ್ನು ಸಂಗ್ರಹಿಸಿ ವಾರವಿಡೀ ಅದನ್ನು ಸವಿಯುವುದೆಂದರೆ ಎಲ್ಲಿಲ್ಲದ ಸಡಗರ. ಅದಷ್ಟೇ ಅಲ್ಲ, ಓರಗೆಯವರೆಲ್ಲ ಸೇರಿ ಯಾರ ಬಳಿ ಹೆಚ್ಚು ಬೆಲ್ಲದಚ್ಚಿವೆ, ಯಾರ ಬಳಿ ಕಮ್ಮಿ ಇದೆ ಎಂದೆಲ್ಲ ಲೆಕ್ಕಹಾಕುತ್ತಿದ್ದೆವು. ಅದೇ ರೀತಿ ಕಬ್ಬು ಸಹ ತಿನ್ನುತ್ತಲೇ ಇರ್ತಿದ್ವಿ. ಈಗಲೂ ಕಬ್ಬು ತಿನ್ನುವುದು ಕಡಿಮೆ ಆಗಿಲ್ಲ. ಕೈಗೆ ಸಿಕ್ಕಾಗಲೆಲ್ಲ ಸವಿಯುತ್ತಿರುತ್ತೇನೆ. ಆದರೆ ಆವಾಗಿನಷ್ಟು ಸಡಗರ ಈಗಿಲ್ಲ. ಬೆಳಗ್ಗೆ ಬೇಗ ಎದ್ದು ಎಣ್ಣೆ ಸ್ನಾನ ಮಾಡಿ, ದೇವಸ್ಥಾನಗಳಿಗೆ ಹೋಗಿ ಬರುತ್ತೇವೆ. ಪೂಜೆ ನಡೆಯುತ್ತದೆ. ಒಳ್ಳೊಳ್ಳೆಯ ಸಿಹಿ ಅಡುಗೆ ಮಾಡಿ ಸವಿಯುತ್ತೇವೆ. ಇದಿಷ್ಟನ್ನು ಹೊರತುಪಡಿಸಿದರೆ, ಹೊಸ ವರ್ಷ ಅಂತ ಯಾವುದನ್ನೂ ಪ್ಲಾ್ಯನ್ ಪ್ರಕಾರ ಮಾಡಲ್ಲ. ಏನೆಲ್ಲ ಆಗಬೇಕೋ ಅದೆಲ್ಲ ಆಗುತ್ತಲಿರುತ್ತದೆ.

| ಸಿಂಧೂ ಲೋಕನಾಥ್

***************

ಒಂದು ದಿನ ಮೊದಲೇ ಹಬ್ಬ ಆರಂಭ

ಸಂಕ್ರಾಂತಿ ಹಬ್ಬದ ಹಿಂದಿನ ದಿನ, ಅಂದರೆ ಇಂದು (ಜ. 13) ನನ್ನ ಜನ್ಮದಿನ. ಹೀಗಾಗಿ ನನ್ನ ಬರ್ತ್​ಡೇ ಆಚರಣೆಗೆ ಕುಟುಂಬದವರೆಲ್ಲ ಒಂದೆಡೆ ಸೇರುತ್ತಾರೆ. ಹೀಗಾಗಿ ನನಗೆ ಒಂದು ದಿನ ಮೊದಲೇ ಹಬ್ಬ ಆರಂಭವಾಗುತ್ತದೆ. ಕಳೆದ ಮೂರು ವರ್ಷಗಳಲ್ಲಿ ನಾನು ಸಂಕ್ರಾಂತಿ ಹಬ್ಬವನ್ನು ಮಿಸ್ ಮಾಡಿಕೊಂಡಿದ್ದೆ. ಅದಕ್ಕೆ ಕಾರಣ ಶೂಟಿಂಗ್. ಆದರೆ ಈ ವರ್ಷ ಫ್ರೀ ಆಗಿದ್ದೇನೆ. ಹೀಗಾಗಿ ಹಬ್ಬವನ್ನು ತುಂಬ ವಿಶೇಷವಾಗಿ ಆಚರಿಸಿಕೊಳ್ಳುವ ಪ್ಲಾ್ಯನ್ ಇದೆ. ಈ ಬಾರಿ ನಾನೇ ವಿಶೇಷ ತಿಂಡಿಗಳನ್ನು ಮಾಡಬೇಕು ಎಂದುಕೊಂಡಿದ್ದೇನೆ. ಕಡಬು ನನಗೆ ಇಷ್ಟ. ಹೀಗಾಗಿ ಅದಕ್ಕೆ ಮೊದಲ ಆದ್ಯತೆ. ಕೈಲಾಗದವರಿಗೆ ಸಹಾಯ ಮಾಡಬೇಕೆಂಬ ಆಸೆಯೂ ನನಗಿದೆ. ಹೀಗಾಗಿ ಸಂಕ್ರಮಣದಂದು ಅದಕ್ಕೆ ಪೂರಕ ಯೋಜನೆಗಳನ್ನು ಹಾಕಿಕೊಳ್ಳುತ್ತೇನೆ. ನನ್ನ ಬಾಲ್ಯ ವನ್ನು ತುಂಬಾನೇ ಮಿಸ್ ಮಾಡಿಕೊಳ್ಳುತ್ತಿದ್ದೇನೆ.

| ಅದಿತಿ ಪ್ರಭುದೇವ

***************

ನಮ್ಮನೆಯಲ್ಲಿ ಡಬಲ್ ಸಂಭ್ರಮ

ಜನವರಿ ಬಂತೆಂದರೆ ನಮ್ಮ ಮನೆಯಲ್ಲಿ ಡಬಲ್ ಸಂಭ್ರಮ. ಯಾಕೆಂದರೆ ಅಪ್ಪನ ಮನೆಯ ಸಂಪ್ರದಾಯದಂತೆ ಪೊಂಗಲ್ ಆಚರಿಸುತ್ತೇವೆ. ಹಾಗೆಯೇ ತಾಯಿ ಮನೆ ಸಂಪ್ರದಾಯದ ಪ್ರಕಾರ ಸಂಕ್ರಾಂತಿ ಹಬ್ಬವನ್ನೂ ಮಾಡುತ್ತೇವೆ. ಈ ಹಬ್ಬದಲ್ಲಿ ನನಗೆ ಸದಾ ಬಾಲ್ಯ ನೆನಪಾಗುತ್ತದೆ. ಹೊಸ ರೇಷ್ಮೆ ಬಟ್ಟೆ ಧರಿಸಿ ಖುಷಿಪಡುತ್ತಿದ್ದೆವು. ಚಿಕ್ಕ ವಯಸ್ಸಿನಲ್ಲಿ ಎಲ್ಲರ ಮನೆಗೂ ಹೋಗುತ್ತಿದ್ದೆ. ಮಕ್ಕಳಿಗಾಗಿಯೇ ಎಳ್ಳು-ಬೆಲ್ಲದ ಜತೆ ಬಣ್ಣ ಬಣ್ಣದ ಸಂಕ್ರಾಂತಿ ಕಾಳುಗಳನ್ನು ಆಕರ್ಷಕವಾದ ಚಿಕ್ಕ ಡಬ್ಬಿಗಳಲ್ಲಿ ಹಾಕಿ ಕೊಡುತ್ತಿದ್ದರು. ಆ ಡಬ್ಬಿಗೋಸ್ಕರವೇ ಎಲ್ಲರ ಮನೆಗೆ ಹೋಗುತ್ತಿದ್ದೆ. ಆದರೆ ಈಗ ಎಲ್ಲಿಗೂ ಹೋಗಲ್ಲ. ಒಂದುವೇಳೆ ಹೋದರೆ ಬರೀ ಸಿನಿಮಾ ಮತ್ತು ಸೀರಿಯಲ್ ಬಗ್ಗೆ ಕೇಳುತ್ತಾರೆ. ಹಾಗಾಗಿ ಬಾಲ್ಯದ ಹಬ್ಬವನ್ನು ಈಗ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಈಗ ಫ್ಯಾಮಿಲಿ ಜತೆ ಇಡೀ ದಿನ ಕಳೆಯುತ್ತೇನೆ. ಬಗೆಬಗೆಯ ಅಡುಗೆ ಮಾಡುತ್ತೇವೆ. ಕಬ್ಬು ತಿನ್ನುವುದೇ ವಿಶೇಷ.

| ರಂಜನಿ ರಾಘವನ್

***************

ಕಿಚ್ಚು ಹಾಯಿಸುವುದನ್ನು ನೋಡುವುದೇ ಸೊಗಸು

ನನಗೆ ಸಂಕ್ರಾಂತಿ ಹಬ್ಬದ ವೇಳೆ ಮೊದಲು ನೆನಪಿಗೆ ಬರುವುದು ಕಿಚ್ಚು ಹಾಯಿಸುವುದು. ಹಬ್ಬದ ದಿನದಂದು ಮನೆಯನ್ನೆಲ್ಲ ಅಲಂಕಾರ ಮಾಡಿ ಪೂಜೆ ಮಾಡುವುದು ಮೊದಲಿಂದ ನಡೆದುಕೊಂಡು ಬಂದ ಸಂಪ್ರದಾಯ. ಇದೆಲ್ಲದರ ಜತೆಗೆ ಹೋರಿಗಳಿಂದ ಕಿಚ್ಚು ಹಾಯಿಸುವುದನ್ನು ನೋಡುವುದೇ ಒಂದು ಸೊಗಸು. ಹಬ್ಬದ ಸಂದರ್ಭದಲ್ಲಿ ಕಿಚ್ಚು ಹಾಯಿಸುವುದನ್ನು ನೋಡುವ ಸಲುವಾಗಿಯೇ ಕಾದು ಕುಳಿತಿರುತ್ತಿದ್ದೆ. ಚಿಕ್ಕಂದಿನಲ್ಲಿ ಹಬ್ಬ ಇನ್ನೂ 10 ದಿನ ಇದೆ ಅಂದಾಗ ತಯಾರಿ ಶುರುವಾಗುತ್ತಿತ್ತು. ಸಕ್ಕರೆ ಅಚ್ಚು ಮಾಡುವ ಸಲುವಾಗಿ 2-3 ಮನೆಯವರು ಒಂದೆಡೆ ಸೇರಿ ಸಕ್ಕರೆ ಅಚ್ಚು ತಯಾರಿಸುತ್ತಿದ್ದರು. ಈಗ ಕಾಲ ಬದಲಾಗಿದೆ. ರೆಡಿಮೇಡ್ ಅಚ್ಚು ತಂದು ಮಾಡ್ತಾರೆ. ಕಳೆದ 10 ವರ್ಷದಿಂದ ಈಚೆಗೆ ನಾನು ಕಿಚ್ಚು ಹಾಯಿಸುವುದನ್ನು ನೋಡಿಲ್ಲ. ಹೀಗಾಗಿ ಆರ್​ಆರ್ ನಗರದ ಬಳಿ ‘ಸಂಕ್ರಾಂತಿ ಸಂತೆ’ ಎಂಬ ವಿಶೇಷ ಕಾರ್ಯಕ್ರಮ ಮಾಡುತ್ತಿದ್ದೇವೆ. ಮೂರು ದಿನಗಳ ಕಾಲ ನಡೆಯುವ ಹಬ್ಬದಲ್ಲಿ ಹಳ್ಳಿಯ ದೃಶ್ಯವನ್ನು ಅನಾವರಣ ಮಾಡಲಿದ್ದೇವೆ. ರೈತರು ಬೆಳೆದ ಬೆಳೆ, ಸಾವಯವ ಗೊಬ್ಬರ, ಕಿಚ್ಚು ಹಾಯಿಸುವುದು ಹೀಗೆ ಎಲ್ಲ ಸಂಪ್ರದಾಯಗಳನ್ನು ಆಚರಿಸಲಿದ್ದೇವೆ. ಅಕ್ಕಿ ಹಣ್ಣುಗಳನ್ನು ಸಿದ್ಧಪಡಿಸಿಕೊಂಡು ಗೋವು ಪೂಜೆ ಮಾಡಲಾಗುತ್ತದೆ.

| ಅಮೂಲ್ಯ

***************

ಎಲ್ಲರೂ ಒಟ್ಟಿಗೆ ಸೇರುವುದೇ ದೊಡ್ಡ ಖುಷಿ

ಸಂಕ್ರಾಂತಿ ಹಬ್ಬ ಎಂದಾಕ್ಷಣ ನೆನಪಿಗೆ ಬರುವುದು ಬಾಲ್ಯ. ಮನೆಗೆ ಹೊಸವರ್ಷದ ಕ್ಯಾಲೆಂಡರ್ ತಂದ ತಕ್ಷಣ ಸಂಕ್ರಾಂತಿ ಹಬ್ಬ ಬಂದ ದಿನವನ್ನು ಗುರುತು ಹಾಕಿಕೊಳ್ಳುತ್ತಿದ್ದೆವು. ಅದಕ್ಕೆ ಮುಖ್ಯ ಕಾರಣ, ಸಂಕ್ರಮಣದಂದು ಶಾಲೆಗೆ ರಜೆ ಇರುತ್ತದೆ ಎಂಬುದು. ಆದಿನ ಹೊಸ ಬಟ್ಟೆ ಧರಿಸಿ, ಗೆಳೆಯರ ಜತೆ ಆಟ ಆಡಿ ಸಂಭ್ರಮಿಸುತ್ತಿದ್ದೆವು. ಬಾಲ್ಯವನ್ನು ತುಂಬಾನೇ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಈಗ ಮನೆ ಸದಸ್ಯರೆಲ್ಲ ಒಂದೆಡೆ ಸೇರಲು ಹಬ್ಬ ಒಂದು ಒಳ್ಳೆಯ ನೆವ. ಎಲ್ಲರೂ ಒಟ್ಟಿಗೆ ಸೇರುತ್ತೇವೆ ಎಂಬುದೇ ದೊಡ್ಡ ಖುಷಿ. ನನಗೆ ದೇವರ ಮೇಲೆ ಭಕ್ತಿ ಜಾಸ್ತಿ. ಹೀಗಾಗಿ ದೇವರ ಮನೆಗೆ ಅಲಂಕಾರ ಮಾಡುವುದರಲ್ಲಿ ನಾನು ಮುಂದೆ ನಿಲ್ಲುತ್ತೇನೆ. ದೇವಸ್ಥಾನಕ್ಕೆ ತೆರಳಿ ಅಲ್ಲಿ ಪೂಜೆ ಮಾಡಿಸುತ್ತೇವೆ. ಸ್ವೀಟ್ಸ್ ಎಂದರೆ ನಾನು ಸ್ವಲ್ಪ ದೂರ. ಆದರೆ ಸಿಹಿತಿಂಡಿ ತಯಾರಿಸುವುದಕ್ಕೆ ಅಮ್ಮನಿಗೆ ನನ್ನ ಸಹಕಾರ ಇದ್ದೇ ಇರುತ್ತದೆ. ಶಾಪಿಂಗ್ ಮಾಡುವುದು ನನ್ನ ಫೇವರೆಟ್. ಹೀಗಾಗಿ ಹಬ್ಬದಂದು ಮನೆಗೆ ಬೇಕಾದ ಎಲ್ಲ ವಸ್ತುಗಳನ್ನು ಕೊಂಡು ತರುವ ಜವಾಬ್ದಾರಿ ನನ್ನದು. ಈವರೆಗೆ ನಾನು ಸಂಕ್ರಮಣವನ್ನು ಮಿಸ್ ಮಾಡಿಕೊಂಡಿಲ್ಲ. ಮುಂದಿನ ದಿನಗಳಲ್ಲಿ ಏನಾಗುತ್ತದೋ ನೋಡಬೇಕು. ಹೊಸ ವರ್ಷದ ಮೊದಲ ಹಬ್ಬ ಸಂಕ್ರಾಂತಿ. ಹೀಗಾಗಿ ವರ್ಷಪೂರ್ತಿ ಚೆನ್ನಾಗಿರಲಿ. ಸಂಕ್ರಾಂತಿ ಕಾಳುಗಳ ರೀತಿ ಬದುಕಿನಲ್ಲಿ ಸಿಹಿಯೇ ಹೆಚ್ಚು ಸಿಗಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತೇನೆ.

| ಅಮೃತಾ ರಾವ್

***************

ಕಬ್ಬು ತಿನ್ನುವುದೇ ದೊಡ್ಡ ಕೆಲಸ

ಹಬ್ಬ ಎಂದರೆ ನನಗೆ ಮೊದಲಿಂದಲೂ ತುಂಬ ಇಷ್ಟ. ಒಂದೊಂದು ಹಬ್ಬದ ಆಚರಣೆ, ಸಂಪ್ರದಾಯ ಎಲ್ಲವೂ ವಿಭಿನ್ನ. ಹೀಗಾಗಿ ಹಬ್ಬದ ಸಮಯದಲ್ಲಿ ಕೆಲಸಗಳನ್ನೆಲ್ಲ ಬದಿಗೊತ್ತಿ ಆಚರಣೆಯಲ್ಲಿ ಹೆಚ್ಚು ಕಾಲ ಕಳೆಯುತ್ತೇನೆ. ಅದೇ ರೀತಿ ಸಂಕ್ರಮಣ ಅಂದ ತಕ್ಷಣ ನನಗೆ ಕಬ್ಬು ನೆನಪಾಗುತ್ತದೆ. ಊಟ ಬಿಟ್ಟು ಹೊಟ್ಟೆ ತುಂಬ ಕಬ್ಬು ತಿಂದಿದ್ದು ಉಂಟು. ಹಬ್ಬ ಬಂತೆಂದರೆ ನಾನು ಅಡುಗೆ ಮನೆಯತ್ತ ಹೋಗುವುದು ತೀರಾ ವಿರಳ. ಹಾಗಂತ ಅಡುಗೆ ಮಾಡಲು ಬರಲ್ಲ ಅಂತಲ್ಲ. ಹಬ್ಬದ ಅಡುಗೆ ಅಮ್ಮ ಮಾಡುತ್ತಾರೆ. ಒಬ್ಬಟ್ಟು ಮಾಡುವಾಗ ಅಮ್ಮನಿಗೆ ಸಹಾಯ ಮಾಡುತ್ತೇನೆ. ಅದಾದ ಮೇಲೆ ಡೆಕೋರೇಟ್ ಅಂತ ಬಂದರೆ ಎಲ್ಲ ಉಸ್ತುವಾರಿ ನನ್ನದೆ. ತಳಿರು ತೋರಣ ಕಟ್ಟುವುದು, ಪೂಜಾ ಅಲಂಕಾರ ಮಾಡುವುದು, ರಂಗೋಲಿ ಬಿಡಿಸುವುದು ನನ್ನ ಕೆಲಸ. ಹಬ್ಬದ ದಿನದಂದು ಮನೆಗೆ ನೆಂಟರು ಬರುವುದರಿಂದ ಒಟ್ಟಿಗೆ ಸೇರಿ ಹಬ್ಬ ಮಾಡುತ್ತೇವೆ. ಸಂಕ್ರಾಂತಿಗಿಂತ ಯುಗಾದಿ ನಮ್ಮ ಮನೆಯಲ್ಲಿ ತುಂಬ ಜೋರು. ಅದೇ ರೀತಿ ‘ಸಂಕ್ರಾಂತಿ’ ವರ್ಷದ ಮೊದಲ ಹಬ್ಬ ಎಂಬ ಖುಷಿ ಒಂದೆಡೆಯಾದರೆ, ಈ ವರ್ಷ ಹಬ್ಬದ ದಿನದಂದು ಹೊಸದಾಗಿ ವಸ್ತ್ರ ವಿನ್ಯಾಸ (ಕ್ಲಾಥ್ ಡಿಸೈನಿಂಗ್) ಸ್ಟುಡಿಯೋ ತೆರೆಯು ತ್ತಿದ್ದೇನೆ

| ಶ್ರಾವ್ಯಾ

***************

ಅಕ್ಕನ ಮಗಳ ಮೊದಲ ಸಂಕ್ರಮಣ

ಹಿಂದಿನ ಸಂಕ್ರಮಣಕ್ಕೆ ಹೋಲಿಸಿದರೆ ಈ ಬಾರಿ ಸಂಕ್ರಾಂತಿ ಜೋರಾಗಿಯೇ ಇದೆ. ಅಕ್ಕ ಮತ್ತು ಅಕ್ಕನ ಮಗಳು ಲಂಡನ್​ನಲ್ಲಿರುತ್ತಾರೆ. ಅವರು ಹಬ್ಬಕ್ಕೆ ಈ ಬಾರಿ ಭಾರತಕ್ಕೆ ಬಂದಿದ್ದಾರೆ. ಇದು ಅಕ್ಕನ ಮಗಳ ಮೊದಲ ಸಂಕ್ರಮಣ. ಹೀಗಾಗಿ ಮನೆಯಲ್ಲಿ ಹಬ್ಬ ಗ್ರಾ್ಯಂಡ್ ಆಗಿ ಮಾಡುತ್ತಿದ್ದೇವೆ. ಕಳೆದ ವರ್ಷ ಶೂಟಿಂಗ್ ಇದ್ದ ಕಾರಣ ಎಲ್ಲ ಹಬ್ಬಗಳು ಮಿಸ್ ಆಗಿದ್ದವು. ಈ ಬಾರಿ ವರ್ಷದ ಮೊದಲ ಹಬ್ಬದಂದು ಮನೆಯಲ್ಲೇ ಇರುವುದು ಸಂತಸದ ವಿಚಾರ. ನಮ್ಮ ಸಮುದಾಯದಲ್ಲಿ ಸಂಕ್ರಾಂತಿ ಮಾತ್ರವಲ್ಲ ಎಲ್ಲ ಹಬ್ಬವನ್ನೂ ಗ್ರಾ್ಯಂಡ್ ಆಗಿಯೇ ಆಚರಿಸುತ್ತಾರೆ. ನನಗೆ ಪೂಜೆ ಮಾಡುವುದೆಂದರೆ ಇಷ್ಟ. ಅಕ್ಕ-ಪಕ್ಕದ ಮನೆಗೆ ತೆರಳಿ, ಕಬ್ಬು, ಎಳ್ಳು-ಬೆಲ್ಲದ ಜತೆಗೆ ಗೆಣಸು, ಕಡ್ಲೆಕಾಯಿಂದ ಮಾಡಿದ ತಿನಿಸುಗಳನ್ನು ಹಂಚುತ್ತೇವೆ. ನಮ್ಮ ಊರು ಹೊಸಕೋಟೆ. ಚಿಕ್ಕವರಿದ್ದಾಗ ನಾವು ಹಬ್ಬಕ್ಕೆ ಊರಿಗೆ ಹೋಗುತ್ತಿದ್ದೆವು. ಅಲ್ಲಿ ಕಿಚ್ಚು ಹಾಯಿಸುವುದನ್ನು ನೋಡುವುದೇ ಒಂದು ಸಂಭ್ರಮ. ಈಗ ಊರಿನಲ್ಲಿ ಕುಟುಂಬದವರು ಯಾರೂ ಇಲ್ಲ. ಹೀಗಾಗಿ ಅಲ್ಲಿಗೆ ಹೋಗುವ ಅಗತ್ಯವೇ ಬರುತ್ತಿಲ್ಲ. ಅದನ್ನೆಲ್ಲ ತುಂಬಾನೇ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಅದರ ಜತೆಗೆ ನನಗೆ ಸಂಕ್ರಾಂತಿ ಎಂದಾಕ್ಷಣ ಹಳೇ ದಿನಗಳು ನೆನಪಿಗೆ ಬರುತ್ತವೆ. ನನ್ನ ಹಾಲುಹಲ್ಲು ಉದುರಿದ್ದು ಸಂಕ್ರಾಂತಿ ಹಬ್ಬದಂದು. ಆ ದಿನ ಅಚ್ಚಳಿಯದೆ ನೆನಪಿನಲ್ಲಿ ಉಳಿದಿದೆ.

| ಕಾವ್ಯಾ ಗೌಡ

***************

ಅಜ್ಜಿ ಮನೆಯನ್ನು ಮಿಸ್ ಮಾಡಿ ಕೊಳ್ಳುತ್ತಿದ್ದೇನೆ

ವರ್ಷದ ಮೊದಲ ಹಬ್ಬ ಸಂಕ್ರಾಂತಿ. ಪ್ರತಿ ವರ್ಷ ಇದನ್ನು ಮನೆಯಲ್ಲಿಯೇ ಆಚರಿಸುವುದು ವಾಡಿಕೆಯಾಗಿತ್ತು. ಆದರೆ ಕೆಲಸದ ಒತ್ತಡ ಇರುವ ಕಾರಣ ಈ ಬಾರಿ ಮನೆಗೆ ಹೋಗಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಮನೆಯನ್ನು ತುಂಬಾನೇ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಹಾಗಂದ ಮಾತ್ರಕ್ಕೆ ನಾನು ಹಬ್ಬ ಮಾಡುತ್ತಿಲ್ಲ ಎಂದಲ್ಲ. ನನ್ನ ಆಂಟಿ ಮನೆಯಲ್ಲಿ ಸಂಕ್ರಾಂತಿಯನ್ನು ಗ್ರಾ್ಯಂಡ್ ಆಗಿ ಆಚರಿಸುತ್ತಾರೆ. ಅಲ್ಲಿಗೆ ಹೋಗಿ ಹಬ್ಬ ಆಚರಿಸುವ ಯೋಚನೆ ಇದೆ. ಆಂಟಿ ಸಂಬಂಧಿಕರೆಲ್ಲ ಬಹುತೇಕ ಒಂದೇ ಏರಿಯಾದಲ್ಲೇ ಇದ್ದಾರೆ. ಹೀಗಾಗಿ ಮನೆ ಮನೆಗೆ ತೆರಳಿ ಸಂಕ್ರಾಂತಿ ಕಾಳು, ಕಬ್ಬನ್ನು ನೀಡಿ ಬರುತ್ತೇವೆ. ಹಬ್ಬ ಮಿಸ್ ಮಾಡಿಕೊಂಡಾಗೆಲ್ಲ ಬಾಲ್ಯದ ನೆನಪಾಗುತ್ತದೆ. ಸಂಕ್ರಮಣದಂದು ಅಜ್ಜಿಯ ಮನೆಗೆ ಹೋಗುತ್ತಿದ್ದೆವು. ಹಳ್ಳಿಯ ವಾತಾವರಣಕ್ಕೆ ಹಬ್ಬದ ಸಂಭ್ರಮ ಸೇರಿದರೆ ಅದರ ಮಜವೇ ಬೇರೆ. ಮನೆ ಮಂದಿಯೆಲ್ಲ ಸೇರಿ 20 ಜನ ಒಟ್ಟಿಗೆ ಸೇರುತ್ತಿದ್ದೆವು. ಕವಡೆ, ಲಗೋರಿ ಈ ಎರಡು ಆಟವನ್ನು ತಪ್ಪದೆ ಆಡುತ್ತಿದ್ದೆವು. ಆದರೆ ಈ ಬಾರಿ ಮನೆಗಿಂತ ಅಜ್ಜಿಮನೆಗೆ ಹೋಗಲಾಗುವುದಿಲ್ಲ ಎಂಬ ಬೇಸರವಿದೆ. ಈ ಬಾರಿ ಶಕ್ತಿಪೀಠಗಳಲ್ಲಿ ಒಂದು ಕಡೆ ಹೋಗಬೇಕೆಂಬ ಯೋಜನೆಯೂ ಇದೆ.

| ಕೃತಿಕಾ ರವೀಂದ್ರ

***************

ಸಿನಿಫ್ಯಾಮಿಲಿ ಜತೆಯೇ ಹಬ್ಬ

ನಾನು ಶೂಟಿಂಗ್​ನಲ್ಲಿ ಬಿಜಿಯಾಗಿದ್ದೇನೆ. ಹೀಗಾಗಿ ಮನೆಯಲ್ಲಿ ಸಂಕ್ರಾಂತಿ ಹಬ್ಬ ಆಚರಿಸಿಕೊಳ್ಳಲಾಗುತ್ತಿಲ್ಲ. ಹಾಗಂತ ಸಂಪೂರ್ಣವಾಗಿ ಹಬ್ಬದ ಆಚರಣೆ ಮಿಸ್ ಮಾಡಿಕೊಳ್ಳುತ್ತಿಲ್ಲ. ನನಗೆ ಸಿನಿಮಾ ತಂಡ ಮತ್ತೊಂದು ಕುಟುಂಬದಂತಾಗಿದೆ. ಹೀಗಾಗಿ ಈ ಬಾರಿ ಸಿನಿಕುಟುಂಬದ ಜತೆ ಸಂಕ್ರಾಂತಿ ಹಬ್ಬಆಚರಿಸಿಕೊಳ್ಳುತ್ತಿರುವ ಸಂಭ್ರಮವಿದೆ. ಶೂಟಿಂಗ್ ವೇಳೆ ಎಲ್ಲರಿಗೂ ಕಬ್ಬು ಕೊಡಿಸುವ ಯೋಚನೆ ಇದೆ. ಇದರ ಜತೆಗೆ ಅಮ್ಮ ಸಕ್ಕರೆ ಅಚ್ಚು ತಂದೇ ತರುತ್ತಾರೆ. ಅದನ್ನು ಎಲ್ಲರಿಗೂ ಹಂಚಿ, ಚಿತ್ರೀಕರಣದಲ್ಲೇ, ಸಂಕ್ರಾಂತಿ ಸಂಭ್ರಮಾಚರಣೆ ಮಾಡಲು ಪ್ಲಾ್ಯನ್ ಹಾಕಿಕೊಂಡಿದ್ದೇನೆ. ಏನನ್ನಾದರೂ ಕಲಿಯುತ್ತಿರಬೇಕು, ಸಮಯ ವ್ಯರ್ಥಮಾಡಬಾರದು. ಸಾಕಷ್ಟು ಬುಕ್​ಗಳನ್ನು ಓದಬೇಕೆಂಬ ಯೋಜನೆಯನ್ನು ವರ್ಷದ ಮೊದಲ ಹಬ್ಬದಂದು ಹಾಕಿಕೊಳ್ಳುತ್ತಿದ್ದೇನೆ. ಹಬ್ಬ ಎಂದಾಕ್ಷಣ ನೆನಪಿಗೆ ಬರುವುದು ಅಜ್ಜಿಮನೆ. ಸಂಕ್ರಾಂತಿ ಬಂತೆಂದರೆ ನಾವು ಒಂದಿಪ್ಪತ್ತು ಸೋದರ ಸಂಬಂಧಿಗಳು ಒಟ್ಟಿಗೆ ಸೇರುತ್ತಿದ್ದೆವು. ಸಾಕಷ್ಟು ಕಬ್ಬನ್ನು ತಿನ್ನುತ್ತಿದ್ದೆವು. ಆದರೆ ಈಗ ಎಲ್ಲರೂ ಬೇರೆಬೇರೆ ಕಡೆ ಸೆಟ್ಲ್ ಆಗಿದ್ದಾರೆ. ಮೊದಲಿನಂತೆ ಎಲ್ಲರೂ ಒಟ್ಟಿಗೆ ಸೇರಿ ಸಂಭ್ರಮಿಸಿದ ದಾಖಲೆಯೇ ಇಲ್ಲ. ನಾವು ಮತ್ತೆ ಮೊದಲಿನಂತೆ ಸೇರಬೇಕೆಂದು ಬಯಸುತ್ತೇನೆ. ಹಬ್ಬ ಬಂದಾಗೆಲ್ಲ ಆ ನೆನಪುಗಳು ದಟ್ಟವಾಗಿ ಕಾಡುತ್ತವೆ.

| ಸೋನು ಗೌಡ

 

Leave a Reply

Your email address will not be published. Required fields are marked *