ಸ್ಮಶಾನ ಭೂಮಿಯಲ್ಲಿ ಅಕ್ರಮ ಮರಳು ದಂಧೆ

ಲಕ್ಷ್ಮೇಶ್ವರ: ಎರಡು ಕೋಮಿನ ಯುವಕರ ಮಧ್ಯೆ ಸ್ಮಶಾನ ಭೂಮಿಯಲ್ಲಿ ಅಕ್ರಮವಾಗಿ ಮರಳು ತೆಗೆಯುವ ಸಂಬಂಧ ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ತಿರುಗಿ ಕೋಮು ಸಂಘರ್ಷಕ್ಕೆ ಕಾರಣ ಎನ್ನಲಾದ ಘಟನೆ ಬುಧವಾರ ತಾಲೂಕಿನ ಪುಟಗಾಂವ್ ಬಡ್ನಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದಲ್ಲಿ ಬುಧವಾರ ಒಂದು ಕೋಮಿನ ಯುವಕ ಹಿಂದು ಸ್ಮಶಾನದಲ್ಲಿ ಮರಳು ತೆಗೆದರೆ ನಾನು ನಿಮ್ಮ ಖಬರಸ್ತಾನದಲ್ಲಿನ ಕಲ್ಲುಗಳನ್ನು ಹೇರುತ್ತೇನೆ ಎಂದಿದ್ದಾನೆ. ಇದು ವಿಕೋಪಕ್ಕೆ ತಿರುಗಿದೆ. ಮುಸ್ಲಿಂ ಯುವಕ ಜಿದ್ದಿಗೆ ಬಿದ್ದು ಟ್ರ್ಯಾಕ್ಟರ್​ನಲ್ಲಿ ಸ್ಮಶಾನ ಭೂಮಿಯಲ್ಲಿರುವ ಮರಳು ತೆಗೆಯಲು ಹೋಗುತ್ತಿದ್ದಂತೆಯೇ ಇತ್ತ ಹಿಂದು ಯುವಕನು ಟ್ರ್ಯಾಕ್ಟರ್ ತೆಗೆದುಕೊಂಡು ಗ್ರಾಮದ ಹೊರವಲಯದಲ್ಲಿರುವ ಹಳೆಯ ಖಬರಸ್ತಾನಕ್ಕೆ ಹೋಗಿ ಅಲ್ಲಿನ ಕಲ್ಲುಗಳನ್ನು ಹೇರಿಕೊಂಡು ಹಳೇ ಪಂಚಾಯಿತಿ ಕಟ್ಟಡದ ಮುಂದೆ ತಂದು ಸುರುವಿದ್ದಾನೆ.

ಈ ಸುದ್ದಿ ಗ್ರಾಮದಲ್ಲೆಲ್ಲ ಹರಡಿ ಪೊಲೀಸರಿಗೂ ತಲುಪಿದೆ. ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿ ಅವಲೋಕಿಸಿ ಯಾವುದೇ ಅಹಿತಕರ ಘಟನೆಗಳಾಗದಂತೆ ಮುಂಜಾಗೃತೆ ಕ್ರಮ ಕೈಗೊಂಡಿದ್ದಾರೆ. ಘಟನೆ ಕುರಿತಂತೆ ಯಾವುದೇ ದೂರು ದಾಖಲಾಗಿಲ್ಲ.

ಎಚ್ಚೆತ್ತುಕೊಳ್ಳಬೇಕಿದೆ ಜಿಲ್ಲಾಡಳಿತ

ಸ್ಮಶಾನ ಭೂಮಿಯಲ್ಲಿ ಹತ್ತಾರು ವರ್ಷಗಳಿಂದ ಎಗ್ಗಿಲ್ಲದೇ ನಡೆಯುತ್ತಿರುವ ಅಕ್ರಮ ಮರಳು ದಂಧೆ ತಡೆಗಟ್ಟುವಂತೆ ಗ್ರಾಪಂನವರು 2019 ರ ಜನವರಿ 11 ರಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಆದರೂ ಅಕ್ರಮ ಮರಳು ದಂಧೆ ಮುಂದುವರಿದಿದೆ. ಅಲ್ಲದೆ, ಬುಧವಾರ ಕೋಮು ಸೌಹಾರ್ಧಕ್ಕೆ ಧಕ್ಕೆ ತರುವ ವಾತಾವರಣ ನಿರ್ವಿುಸಿದಂತಾಗಿದೆ. 6 ಎಕರೆ ವಿಸ್ತಾರದ ಹಿಂದು ರುದ್ರಭೂಮಿಯಲ್ಲಿ ಅಕ್ರಮ ಮರಳು ದಂಧೆಕೋರರು ಎಲ್ಲೆಂದರಲ್ಲಿ ಮರಳು ತೆಗೆಯುತ್ತಿದ್ದಾರೆ. ಈ ವೇಳೆ ಅಲ್ಲಿ ಹೂತಿರುವ ಶವಗಳ ಅಸ್ಥಿಪಂಜರಗಳು ಮೇಲೆ ಬರುತ್ತಿವೆ. ಈ ಕುರಿತಂತೆ ತಾಲೂಕಿನ ಬಡ್ನಿ, ಬಟ್ಟೂರು, ಅಕ್ಕಿಗುಂದ, ಯತ್ನಳ್ಳಿ, ಹುಲ್ಲೂರು, ನಾದಿಗಟ್ಟಿ, ಚನ್ನಪಟ್ಟಣ, ಬೂದಿಹಾಳ, ಕೂಗನೂರು, ಗೋವನಕೊಪ್ಪ, ತಂಗೋಡ, ಹೆಬ್ಬಾಳ ಸೇರಿ ಸುತ್ತಲಿನ ಪ್ರದೇಶದಲ್ಲಿ ಹರಿದಿರುವ ಹಳ್ಳ, ಹಳ್ಳದ ಪಕ್ಕದ ಮಾಲ್ಕಿ ಜಮೀನಿನಲ್ಲಿ ನೈಸರ್ಗಿಕವಾಗಿ ಸಂಗ್ರಹವಾಗಿರುವ ಮರಳನ್ನು ಅಕ್ರಮವಾಗಿ ಸಾಗಿಸುವ ದಂಧೆ ಹತ್ತಾರು ವರ್ಷಗಳಿಂದ ನಡೆಯುತ್ತಲೇ ಇವೆ. ಈ ಕುರಿತು ಸಾಕಷ್ಟು ಬಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ. ಇದನ್ನು ತಡೆಗಟ್ಟಲು ಇನ್ನಾದರೂ ಜಿಲ್ಲಾಡಳಿತ ಎಚ್ಚೆತ್ತು ಕ್ರಮ ಜರುಗಿಸಿತೇ ಎಂಬುದನ್ನು ಕಾದು ನೋಡಬೇಕಿದೆ.

Leave a Reply

Your email address will not be published. Required fields are marked *