ಸ್ಮಶಾನ ಜಾಗದಲ್ಲಿ ಬೋಟಿಂಗ್​ಗೆ ಯತ್ನ

ದಾಂಡೇಲಿ: ಇಲ್ಲಿಯ ಪಟೇಲನಗರದ ಕಾಳಿ ನದಿ ದಂಡೆಯಲ್ಲಿರುವ ಹಿಂದು ಸ್ಮಶಾನ ಭೂಮಿ ಅತಿಕ್ರಮಿಸಿ, ಅಕ್ರಮವಾಗಿ ಪ್ರವಾಸೋದ್ಯಮ ಚಟುವಟಿಕೆ (ಬೋಟಿಂಗ್) ನಡೆಸುವ ಪ್ರಯತ್ನ ನಡೆಯುತ್ತಿದ್ದು, ಈ ಬಗ್ಗೆ ದೂರು ನೀಡಿದರೂ ನಗರಾಡಳಿತ ಹಾಗೂ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಮಾಜಿ ಶಾಸಕ ಸುನಿಲ ಹೆಗಡೆ ಆರೋಪಿಸಿದ್ದಾರೆ.

ಬುಧವಾರ ಸಂಜೆ ಪಟೇಲನಗರದ ಸ್ಮಶಾನ ಜಾಗ ಪರಿಶೀಲಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಸೂಕ್ಷ್ಮ ವಿಚಾರವಾಗಿದ್ದು, ಎರಡು ದಿನಗಳೊಳಗೆ ಸಂಬಂಧಪಟ್ಟವರ ಮೇಲೆ ಕ್ರಮ ಕೈಗೊಳ್ಳದಿದ್ದರೆ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು.

ಸಾರ್ವಜನಿಕ ಅಹವಾಲು ಪಡೆಯದೇ ಅಥವಾ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದ ಸಮ್ಮತಿಯಿಲ್ಲದೆ ಈ ರೀತಿಯ ಕೆಲಸ ಮಾಡಲು ಬರುವುದಿಲ್ಲ. ಹೀಗಿರುವಾಗ ಪ್ರವಾಸೋದ್ಯಮ ಇಲಾಖೆ ಪರವಾನಗಿ ನೀಡಲು ಹೇಗೆ ಸಾಧ್ಯ? ಪ್ರವಾಸೋದ್ಯಮದ ಹೆಸರಲ್ಲಿ ರುದ್ರಭೂಮಿಯಲ್ಲಿರುವ ಘೊರಿಗಳನ್ನು ಅಗೆಯಲಾಗಿದೆ. ಇದು ಧಾರ್ವಿುಕ ಭಾವನೆಗೆ ಅಡ್ಡಿಯುಂಟು ಮಾಡಲಿದೆ ಎಂದು ಆರೋಪಿಸಿದರು.

ಈ ಭಾಗದಲ್ಲಿ ಮರಗಳನ್ನು ಕಡಿದು ನೆಲ ಸಮತಟ್ಟ ಮಾಡಿರುವುದು ಕಾನೂನು ಬಾಹಿರ ಎಂದರು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಮುಂದಾಗುವ ಸಂಘರ್ಷಕ್ಕೆ ಅಧಿಕಾರಿಗಳೇ ಹೊಣೆ ಎಂದು ಎಚ್ಚರಿಸಿದರು.

ನಗರಸಭೆ ಸದಸ್ಯರಾದ ನರೇಂದ್ರ ಚವ್ಹಾಣ, ರೋಶನ್​ಜಿತ್, ವಿಷ್ಣು ವಾಜ್ವೆ, ದಶರಥ ಬಂಡಿವಡ್ಡರ್, ವಿಜಯ ಕೋಲೇಕರ, ಬುದವಂತಗೌಡ ಪಾಟೀಲ, ಪ್ರಮುಖರಾದ ವಾಸುದೇವ ಪ್ರಭು, ರಾಧಾಕೃಷ್ಣ ಹೆಗಡೆ, ರೋಶನ್ ನೇತ್ರಾವಳಿ, ಗುರು ಮಠಪತಿ, ಶಂಕರ ಗಣಾಚಾರಿ, ಸುಭಾಶ ಅರವೇಕರ, ವಿನೋದ ಬಾಂದೇಕರ, ರಮೇಶ ಹೊಸಮನಿ, ರಾಮದಾಸ ನಾಯ್ಕ, ಲಿಂಗಯ್ಯ ಪೂಜಾರ್, ಎಸ್.ಎಂ. ಪಾಟೀಲ, ಚಂದ್ರು ಮಾಳಿ, ಚಂದ್ರಕಾಂತ ನಡಿಗೇರ ಇತರರು ಇದ್ದರು.

Leave a Reply

Your email address will not be published. Required fields are marked *