ಸ್ಪೈಸ್​ಜೆಟ್ ವಿಮಾನ ದಿಢೀರ್ ಸ್ಥಗಿತ

ಹುಬ್ಬಳ್ಳಿ: ಪ್ರತಿದಿನ ಬೆಳಗ್ಗೆ 9.35ಕ್ಕೆ ಹುಬ್ಬಳ್ಳಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಸ್ಪೈಸ್​ಜೆಟ್ ವಿಮಾನ ಹೊಸ ವರ್ಷದಿಂದ ದಿಢೀರ್ ಸ್ಥಗಿತಗೊಂಡಿದ್ದು, ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ.

ಚೆನ್ನೈನಿಂದ ಹುಬ್ಬಳ್ಳಿಗೆ ಬಂದು ಹುಬ್ಬಳ್ಳಿಯಿಂದ ಬೆಳಗ್ಗೆ 9.35ಕ್ಕೆ ಬೆಂಗಳೂರಿಗೆ ಈ ವಿಮಾನ ಹೊರಡುತ್ತಿತ್ತು. ಎರಡು ತಿಂಗಳ ಹಿಂದೆ ಸ್ಪೈಸ್​ಜೆಟ್ ಹುಬ್ಬಳ್ಳಿ- ಹೈದರಾಬಾದ್ ನಡುವಿನ ವಿಮಾನ ಸೇವೆಯೂ ಸ್ಥಗಿತಗೊಂಡಿತ್ತು. ಇದೀಗ ಹುಬ್ಬಳ್ಳಿ- ಬೆಂಗಳೂರು ವಿಮಾನವೂ ಬಂದ್ ಆಗಿರುವುದಕ್ಕೆ ಪ್ರಯಾಣಿಕರಿಗೆ ಅಡಚಣೆ ಉಂಟಾಗಿದೆ.

ಇದೀಗ 12.30ಕ್ಕೆ ಬೆಂಗಳೂರಿನಿಂದ ಆಗಮಿಸಿ ಮುಂಬೈಗೆ ತೆರಳಿ, ಸಂಜೆ ವಾಪಸ್ ಮುಂಬೈನಿಂದ ಹುಬ್ಬಳ್ಳಿಗೆ ಬಂದು 4.25ಕ್ಕೆ ಹುಬ್ಬಳ್ಳಿಯಿಂದ ಬೆಂಗಳೂರಿಗೆ ತೆರಳುವ ಏಕೈಕ ಸ್ಪೈಸ್​ಜೆಟ್ ವಿಮಾನ ಹಾರಾಟ ಮುಂದುವರಿಸಿದೆ.

ಉಳಿದಂತೆ ಏರ್ ಇಂಡಿಯಾ, ಇಂಡಿಗೋ ಹಾಗೂ ಸ್ಪೈಸ್​ಜೆಟ್ (ಸಂಜೆ ವಿಮಾನ) ವಿಮಾನಗಳು ಬೆಂಗಳೂರು ಕಡೆ ಹಾರಾಟ ನಡೆಸಿವೆ. ಬೆಳಗ್ಗೆ ಬೆಂಗಳೂರಿಗೆ ತೆರಳುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದರೂ ಸ್ಪೈಸ್​ಜೆಟ್ ಏಕೆ ಹಾರಾಟ ನಿಲ್ಲಿಸಿದೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ಕಾರ್ಯಾಚರಣೆಗೆ ಸಂಬಂಧಿಸಿದ ಕಾರಣದಿಂದ ಜನವರಿ 1ರಿಂದ ಚೆನ್ನೈ- ಹುಬ್ಬಳ್ಳಿ- ಬೆಂಗಳೂರು ಮಧ್ಯೆ ಸಂಚರಿಸುತ್ತಿದ್ದ ವಿಮಾನ ಹಾರಾಟ ರದ್ದುಗೊಳಿಸುವುದಾಗಿ ಸ್ಪೈಸ್​ಜೆಟ್ ಸಂಸ್ಥೆ ತಿಳಿಸಿದೆ.

| ಅಹಿಲ್ಯಾ ಕಾಕೋಡ್ಕರ, ಹುಬ್ಬಳ್ಳಿ ವಿಮಾನ ನಿಲ್ದಾಣ ನಿರ್ದೇಶಕಿ