ನಿಪ್ಪಾಣಿ: ಬಾನೆತ್ತರದಲ್ಲಿ ಗಾಳಿಪಟ ಹಾರಿಸುವುದು ಒಂದು ಕಲೆಯಾಗಿದ್ದು, ನಗರದ ಜನತೆಯ ಮನರಂಜನೆಗಾಗಿ ಜೊಲ್ಲೆ ದಂಪತಿ ಹಮ್ಮಿಕೊಂಡಿರುವ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಮನಸ್ಸಿಗೆ ಉಲ್ಲಾಸ ನೀಡುತ್ತದೆ ಎಂದು ಶಾಸಕ ಅಭಯ ಪಾಟೀಲ ಹೇಳಿದರು.
ಸ್ಥಳೀಯ ಶಿವಶಂಕರ ಜೊಲ್ಲೆ ಪಬ್ಲಿಕ್ ಸ್ಕೂಲ್ ಮೈದಾನದಲ್ಲಿ ಜೊಲ್ಲೆ ಗ್ರೂಪ್ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ರಾಜಕಾರಣದ ಜತೆಜತೆಗೆ ಜನತೆಗಾಗಿ ವಿವಿಧ ಸಾಂಸ್ಕೃತಿಕ, ಧಾರ್ಮಿಕ, ಕ್ರೀಡೆಯಂತಹ ಹಲವು ಕಾರ್ಯಕ್ರಮ ಉಣಬಡಿಸುತ್ತಿರುವುದು ಶ್ಲಾಘನೀಯ. ಯುವವರ್ಗ ಇಂತಹ ಕಾರ್ಯಕ್ರಮಗಳಿಂದ ಸ್ಫೂರ್ತಿ ಪಡೆಯುತ್ತ್ತದೆ. ಅಂತಾರಾಷ್ಟ್ರೀಯ ಉತ್ಸವಗಳ ಸೊಬಗನ್ನು ಸ್ಥಳೀಯರು ಸವಿಯಬೇಕು ಎಂದು ಸಲಹೆ ನೀಡಿದರು.
ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ಚುನಾವಣೆ ಸಂದರ್ಭದಲ್ಲಿ ರಾಜಕಾರಣ ಮಾಡೋಣ. ಉಳಿದ ಸಮಯದಲ್ಲಿ ಪಕ್ಷಗಳ ಹಂಗಿಲ್ಲದೆ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ಗಾಳಿಪಟ ಹಾರಿಸುವುದು ವಿಶೇಷ ಕಲೆ. ಅದನ್ನು ಯುವ ಪೀಳಿಗೆ ಅಳವಡಿಸಿಕೊಳ್ಳಬೇಕು ಎಂದರು.
ಎರಡು ದಿನಗಳ ಕಾಲ ನಡೆದ ಉತ್ಸವದಲ್ಲಿ ಬಣ್ಣಬಣ್ಣದ ಗಾಳಿಪಟಗಳು ಆಗಸದಲ್ಲಿ ರಾರಾಜಿಸಿದವು. ನಾಗರಿಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಅಂತಹ ದಶ್ಯಗಳನ್ನು ನೋಡಿ ಕಣ್ಥುಂಬಿಕೊಂಡರು. ಸ್ವಿಟ್ಜರ್ಲೆಂಡ್, ಇಂಗ್ಲಂಡ್, ಲಿಥೋಪಿಯಾ, ಎಸ್ಟೋನಿಯಾ ಹಲವು ದೇಶ ಹಾಗೂ ಮಹಾರಾಷ್ಟ್ರ, ಪಂಜಾಬ್, ಗುಜರಾತ, ಹರಿಯಾಣ, ರಾಜಸ್ಥಾನ, ದೆಹಲಿ, ಒಡಿಶಾ ಸೇರಿ ವಿವಿಧ ರಾಜ್ಯಗಳ ಸ್ಪರ್ಧಿಗಳು ಉತ್ಸವದಲ್ಲಿ ಭಾಗವಹಿಸಿದರು.
ಮ್ಯಾಗ್ನಂ ಟ್ ಇಂಡಿಯಾ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಬಸವಪ್ರಸಾದ ಜೊಲ್ಲೆ, ಸಹಕಾರ ರತ್ನ ಚಂದ್ರಕಾಂತ ಕೋಠಿವಾಲೆ, ನಗರಸಭೆ ಅಧ್ಯಕ್ಷ ಜಯವಂತ ಭಾಟಲೆ, ರಾಷ್ಟ್ರೀಯ ಗಾಳಿಪಟ ಮಹಾಮಂಡಳಿಯ ಸಂಯೋಜಕ ಸಂದೇಶ ಕಟ್ಟಿ, ಅಶೋಕ ನಾಯಿಕ, ಹಾಲ್ಸ್ ಉಪಕಾರ್ಯಾಧ್ಯಕ್ಷ ಮಲಗೊಂಡ ಪಾಟೀಲ, ನಗರಸಭೆ ಉಪಾಧ್ಯಕ್ಷೆ ನೀತಾ ಬಾಗಡೆ, ಸ್ಥಾಯಿ ಸಮಿತಿ ಚೇರ್ಮನ್ ರಾಜೇಂದ್ರ ಗುಂಡೆಶಾ, ಸುರೇಶ ಶೆಟ್ಟಿ, ಮಹಾಲಿಂಗೇಶ ಕೋಠಿವಾಲೆ, ಪ್ರತಾಪ ಪಟ್ಟಣಶೆಟ್ಟಿ, ಗ್ರೂಪ್‌ನ ಇವೆಂಟ್ ನಿರ್ದೇಶಕ ವಿಜಯ ರಾವುತ ಇತರರು ಇದ್ದರು.