ಧಾರವಾಡ: ಸ್ಪರ್ಧೆಗಳಲ್ಲಿ ಗೆಲ್ಲುವವರು ಮಾತ್ರ ಜಯಶಾಲಿಗಳಲ್ಲ. ಗೆಲ್ಲದಿರುವವರೂ ಜಯಶಾಲಿಗಳೇ. ಏಕೆಂದರೆ ಸ್ಪರ್ಧೆಗಳಿಂದ ದೂರು ಉಳಿಯದೆ ಪಾಲ್ಗೊಳ್ಳುವುದು ಸಹ ಅತಿ ಮುಖ್ಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್ ಹೇಳಿದರು.
ನಗರದ ಲೀಲಾವತಿ ಆರ್. ಚರಂತಿಮಠ ಪಬ್ಲಿಕ್ ಶಾಲೆಯ ಉಡಾನ್- 2019 ವಾರ್ಷಿಕ ಕ್ರೀಡಾಕೂಟವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ಈ ಭಾಗದಲ್ಲಿ ಶಾಲೆಯನ್ನು ಸ್ಥಾಪಿಸಿ ವಿದ್ಯಾರ್ಥಿಗಳ ಶೈಕ್ಷಣಿಕ ಏಳಿಗೆಗೆ ಶ್ರಮಿಸುತ್ತಿರುವ ಅರುಣ ಚರಂತಿಮಠ ಅವರ ಪ್ರಯತ್ನ ಶ್ಲಾಘನೀಯ ಎಂದರು.
ಪ್ರಾಚಾರ್ಯು ರಾಣಿ ಯೋಹಾನನ್ ಮಾತನಾಡಿ, ಶಾಲೆಯು ಭಾರತರತ್ನ ಸಿಎನ್ಆರ್ ರಾವ್ ಹಾಗೂ ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಹಿರಿಯ ವಿಜ್ಞಾನಿ ಕಿರಣಕುಮಾರ ಅವರಂಥ ಮೇಧಾವಿಗಳ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿದೆ. ಇಂಥ ಕ್ರೀಡಾಕೂಟಗಳಲ್ಲಿ ವಿದ್ಯಾರ್ಥಿಗಳು ಸಾಮರ್ಥ್ಯವನ್ನು ಕಂಡುಕೊಳ್ಳಲು ಮತ್ತು ಬಲಹೀನತೆಗಳನ್ನು ತಿಳಿದುಕೊಳ್ಳಲು ಅವಕಾಶಗಳಿರುತ್ತವೆ ಎಂದರು.
ವಿದ್ಯಾರ್ಥಿಗಳು ಆಕರ್ಷಕ ಕವಾಯತು ಪ್ರದರ್ಶಿಸಿದರು. ಅತ್ಯುತ್ತಮ ಪಾರಿತೋಷಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಎಆರ್ಸಿ ಫೌಂಡೇಶನ್ ಅಧ್ಯಕ್ಷ ಅರುಣ ಚರಂತಿಮಠ, ಆಡಳಿತ ಮಂಡಳಿ ಸದಸ್ಯರಾದ ಸಿದ್ದು ಬೆಟಗೇರಿ, ಗೌಡಪ್ಪಗೌಡ ಪಾಟೀಲ, ಹಿರಿಯ ಚಲನಚಿತ್ರ ಕಲಾವಿದ ಸುರೇಶ ಅಂಗಡಿ, ಉದಯಕುಮಾರ ಹಾಗೂ ಶಿಕ್ಷಕರು, ಪಾಲಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.