More

  ಸ್ಥಳೀಯ ಸಂಸ್ಥೆ ಸೇರಿ ಎಲ್ಲ ಚುನಾವಣೆಗೂ ಆಪ್ ಸ್ಪರ್ಧೆ -ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು

  ದಾವಣಗೆರೆ: ರಾಜ್ಯದಲ್ಲಿ ಮುಂಬರುವ ಜಿಪಂ, ತಾಪಂ ಹಾಗೂ ಪಾಲಿಕೆ, ಬಿಬಿಎಂಪಿ ಮೊದಲಾದ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಆಮ್ ಆದ್ಮಿ ಪಕ್ಷ ಸ್ಪರ್ಧೆ ನಡೆಸಲಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದರು.
  ಇದು ಚುನಾವಣಾ ವರ್ಷ. ಯಾವುದೇ ಸಂದರ್ಭದಲ್ಲಿ ಚುನಾವಣೆ ಬರಬಹುದು. ಹೀಗಾಗಿ, ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್‌ಗೆ ಪ್ರಬಲ ಸ್ಪರ್ಧೆಯೊಡ್ಡಲು ಪಕ್ಷದ ಸಂಘಟನೆಗೆ ರಾಜ್ಯಾದ್ಯಂತ ಪ್ರವಾಸ ನಡೆಸಲಾಗುತ್ತಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
  ರಾಜ್ಯದ ಎಲ್ಲ ಜಿಲ್ಲೆಗಳಿಗೆ ತೆರಳಿ ಎಲ್ಲ ಸೇರೋಣ, ಬನ್ನಿ ಮಾತಾಡೋಣ ಸಂವಾದ ಕಾರ್ಯಕ್ರಮದ ಮೂಲಕ ನೇರವಾಗಿ ಜನರನ್ನು ತಲುಪಿ ಶಿಕ್ಷಣದ ಗುಣಮಟ್ಟ, ಆರೋಗ್ಯ ವ್ಯವಸ್ಥೆ ಸರಿಪಡಿಸುವಿಕೆ, ರೈತರ ಶ್ರಮಕ್ಕೆ ತಕ್ಕ ಬೆಲೆ, ಮಹಿಳೆಯರಿಗೆ ಸಮಾನ ಅವಕಾಶದ ಕುರಿತಂತೆ ಚರ್ಚೆ ನಡೆಸಿ ಸಮಸ್ಯೆ ಆಲಿಸಲಾಗುವುದು ಎಂದರು.
  ಈಗಾಗಲೇ ತುಮಕೂರು, ಚಿತ್ರದುರ್ಗ ಹಾಗೂ ಶಿವಮೊಗ್ಗ ಜಿಲ್ಲೆಗಳ ಪ್ರವಾಸ ಮುಗಿಸಿ ದಾವಣಗೆರೆಗೆ ಆಗಮಿಸಿದ್ದು ಉಚಿತ ಸದಸ್ಯತ್ವ ಅಭಿಯಾನ ನಡೆಸಲಾಗುವುದು ಹಾಗೂ ಬರಲಿರುವ ಚುನಾವಣೆಗೆ ಅಭ್ಯರ್ಥಿಗಳನ್ನು ಗುರುತಿಸುವ ಕೆಲಸ ಮಾಡಲಾಗುವುದು ಎಂದು ಹೇಳಿದರು.
  ಆಮ್ ಆದ್ಮಿ ಪಕ್ಷವು ಮೈತ್ರಿಕೂಟದಲ್ಲಿ ಇರುವುದರಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ವಿಚಾರ ಕೇಂದ್ರದ ತೀರ್ಮಾನಕ್ಕೆ ಬಿಡಲಾಗುವುದು. ಆದರೆ, ರಾಜ್ಯದಲ್ಲೂ ಸ್ಪರ್ಧೆಗೆ ಅವಕಾಶ ನೀಡುವಂತೆ ಹಕ್ಕೊತ್ತಾಯ ಮಾಡಲಾಗುವುದು ಎಂದು ತಿಳಿಸಿದರು.
  ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಲೋಕಸಭಾ ಚುನಾವಣೆವರೆಗೆ ಮಾತ್ರ ಇರಲಿವೆ. ಆನಂತರ ಯಾವುದೇ ಉಚಿತ ಯೋಜನೆ ಇರುವುದಿಲ್ಲ ಎಂದು ಮುಖ್ಯಮಂತ್ರಿ ಚಂದ್ರು ಹೇಳಿದರು.
  ದೆಹಲಿಯ ಕೇಜ್ರಿವಾಲ್ ನೇತೃತ್ವದ ಸರ್ಕಾರದ ಮಾದರಿ ಕಾಪಿ ಮಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳ ಆಗುಹೋಗುಗಳ ಬಗ್ಗೆ ಯಾವುದೇ ವೈಜ್ಞಾನಿಕ ಚಿಂತನೆ ಮಾಡದೆ ಸುಮಾರು 80 ಸಾವಿರ ಕೋಟಿ ರೂ. ಸಾಲ ಮಾಡಿದೆ. ಅಭಿವೃದ್ಧಿ ಕೆಲಸಗಳು ಕುಂಠಿತಗೊಂಡಿವೆ ಎಂದು ದೂರಿದರು.
  ಕನ್ನಡ ಸಂಸ್ಕೃತಿ ಇಲಾಖೆಗೆ ಬಜೆಟ್‌ನಲ್ಲಿ 3 ಲಕ್ಷ ಕೋಟಿ ರೂ. ಮೀಸಲಿರಿಸಿದ್ದರೂ ಸರ್ಕಾರ ಮೂರು ತಿಂಗಳಿಂದ ಇಲಾಖೆಗೆ ಹಣ ನೀಡಿಲ್ಲ. ಇಲಾಖೆಯಡಿ 14 ಅಕಾಡೆಮಿ, 4 ಪ್ರಾಧಿಕಾರ ಹಾಗೂ 6 ರಂಗಾಯಣಗಳು ಬರಲಿದ್ದು, ಇವುಗಳಿಗೆ ಇದುವರೆಗೂ ಅಧ್ಯಕ್ಷರನ್ನು ನೇಮಕ ಮಾಡಿಲ್ಲ. ಇಲಾಖೆ ಹಣವನ್ನು ಉಚಿತ ಯೋಜನೆಗೆ ಹಂಚಿಕೊಳ್ಳಲಾಗಿದೆಯಾ ಎಂಬ ಬಗ್ಗೆ ಶ್ವೇತಪತ್ರ ಹೊರಡಿಸಬೇಕು ಎಂದು ಒತ್ತಾಯಿಸಿದರು.
  ಅಲ್ಲದೇ ಸಮಾಜ ಕಲ್ಯಾಣ ಇಲಾಖೆಯ 34 ಸಾವಿರ ಕೋಟಿ ಹಣದಲ್ಲಿ 11 ಸಾವಿರ ಕೋಟಿ ರೂ. ಉಚಿತ ಯೋಜನೆಗಳಿಗೆ ಬಳಸಿಕೊಳ್ಳಲಾಗಿದೆ ಎಂದು ಟೀಕಿಸಿದ ಅವರು, ಇನ್ನು 15 ದಿನಗಳಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಹಣ ನೀಡಬೇಕು ಹಾಗೂ ಅಕಾಡೆಮಿ ಮತ್ತು ಪ್ರಾಧಿಕಾರಗಳಿಗೆ ಅಧ್ಯಕ್ಷರ ನೇಮಕ ಮಾಡಬೇಕು ಎಂದು ಆಗ್ರಹಿಸಿದರು.
  ರಾಜ್ಯದಲ್ಲಿ ಮೂರು ಪಕ್ಷಗಳೂ ಖಜಾನೆ ಲೂಟಿ ಹೊಡೆದಿವೆ. ಕಾಂಗ್ರೆಸ್ ಸರ್ಕಾರ ವಿವಿಧ ಹುದ್ದೆಗಳ ನೇಮಕ, ವರ್ಗಾವಣೆ ಹಾಗೂ ಗುತ್ತಿಗೆ ಬಾಕಿ ಹಣ ಬಿಡುಗಡೆಗೆ ಸಂಬಂಧಿಸಿದಂತೆ ಲಂಚ ಪಡೆಯುತ್ತಿದೆ ಎಂದು ಆರೋಪಿಸಿದರಲ್ಲದೆ ಬರುವ ಚುನಾವಣೆಗಳಲ್ಲಿ ಜನರು ಯೋಗ್ಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು ಎಂದರು.
  ಎಎಪಿ ರಾಜ್ಯ ಉಪಾಧ್ಯಕ್ಷ ಉಮಾಶಂಕರ್, ಕೆ.ಎಲ್. ರಾಘವೇಂದ್ರ, ಜಿಲ್ಲಾಧ್ಯಕ್ಷ ಶಿವಕುಮಾರಪ್ಪ, ಪದಾಧಿಕಾರಿಗಳಾದ ಅರುಣಕುಮಾರ್, ಗಣೇಶ ದುರ್ಗದ, ಆದಿಲ್‌ಖಾನ್, ಕೆ. ರವೀಂದ್ರ ಸುದ್ದಿಗೋಷ್ಠಿಯಲ್ಲಿದ್ದರು.

  ರಾಜ್ಯೋತ್ಸವ ರಸಪ್ರಶ್ನೆ - 24

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts