ಬೆಂಗಳೂರು: ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕೆ ಮರುಮೀಸಲಾತಿ ನಿಗದಿಯಾಗಿದ್ದು, ಈ ಪ್ರಸ್ತಾವನೆಗೆ ಸಚಿವರ ಅನುಮೋದನೆ ಸಿಕ್ಕ ಕೂಡಲೇ ಅಧಿಸೂಚನೆ ಹೊರಬೀಳಲಿದೆ. ಒಂದೂವರೆ ವರ್ಷದಿಂದ ಅಧಿಕಾರವೂ ಇಲ್ಲದೇ, ಇತ್ತ ಜನರಿಗೆ ಉತ್ತರಿಸಲೂ ಆಗದಂತಿದ್ದ ಚುನಾಯಿತರ ಅತಂತ್ರ ಸ್ಥಿತಿ ಕೊನೆಗೊಳ್ಳಲಿದೆ.
ಮೀಸಲು ತಕರಾರು ಅರ್ಜಿ ವಿಚಾರಣೆ ಸಂದರ್ಭ ದಲ್ಲಿ ಹೈಕೋರ್ಟ್ಗೆ ಸರ್ಕಾರ ತಿಳಿಸಿದಂತೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲು ನಿಗದಿ ಪಡಿಸಲಾಗಿದೆ ಎಂದು ನಗರಾಭಿವೃದ್ಧಿ ಇಲಾಖೆ ಉನ್ನತ ಮೂಲಗಳು ತಿಳಿಸಿವೆ. ಮೊದಲ ಹಂತದಲ್ಲಿ ಚುನಾಯಿತ ಆಡಳಿತ ಮಂಡಳಿ ಅವಧಿ ಮುಗಿದ 108 ನಗರ ಸ್ಥಳೀಯ ಸಂಸ್ಥೆಗಳಿಗೆ 2018ರ ಆ.31ರಂದು ಚುನಾವಣೆ ನಡೆದಿತ್ತು. ಆದರೆ, ಅಧ್ಯಕ್ಷ-ಉಪಾಧ್ಯಕ್ಷರ ಮೀಸಲು ಪ್ರಶ್ನಿಸಿ ಕೆಲವರು ಕೋರ್ಟ್ ಮೆಟ್ಟಿಲೇರಿದ್ದರಿಂದ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಸ್ಥಗಿತಗೊಂಡಿತ್ತು. ಚುನಾವಣೆ ನಡೆದು ಒಂದೂವರೆ ವರ್ಷವಾದರೂ ಈ ಸಂಸ್ಥೆಗಳಿಗೆ ಅಧ್ಯಕ್ಷ-ಉಪಾಧ್ಯಕ್ಷರಿಲ್ಲ.
ಏಕ ಸದಸ್ಯ ಪೀಠದ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್ ವಿಚಾರಣೆ ಕೈಗೆತ್ತಿಕೊಂಡ ಸಂದರ್ಭದಲ್ಲಿ ನಿಯಮಾವಳಿ ಪ್ರಕಾರ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಮೀಸಲು ನಿಗದಿಪಡಿಸುವುದಾಗಿ ಸರ್ಕಾರ ತಿಳಿಸಿತ್ತು. ನಂತರ 2019ರ ಮೇ ತಿಂಗಳಲ್ಲಿ 65, ನವೆಂಬರ್ನಲ್ಲಿ ಚುನಾವಣೆ ನಡೆದಿರುವ 14 ನಗರ ಸ್ಥಳೀಯ ಸಂಸ್ಥೆಗಳಿಗೂ ಅಧ್ಯಕ್ಷ-ಉಪಾಧ್ಯಕ್ಷ ಭಾಗ್ಯ ಸಿಕ್ಕಿಲ್ಲ.
ಸ್ಥಳೀಯ ಆಡಳಿತ ಮರೆತ ಸರ್ಕಾರ!: ಸಮ್ಮಿಶ್ರ ಸರ್ಕಾರ ಪತನ, ಬಿಜೆಪಿಗೆ ಆಡಳಿತದ ಚುಕ್ಕಾಣಿ, ಶಾಸಕರ ರಾಜೀನಾಮೆ, ಅನರ್ಹತೆ, ಉಪ ಚುನಾವಣೆ ಮುಗಿದ ನಂತರ ಸಚಿವ ಸಂಪುಟ ಕಸರತ್ತು ಶುರುವಾಗಿದೆ. ಇದರಿಂದಾಗಿ ನಗರ, ಪಟ್ಟಣ ಸ್ಥಳೀಯ ಸಂಸ್ಥೆಗಳ ಆಡಳಿತವನ್ನೇ ಸರ್ಕಾರ ಮರೆತಿದೆ ಎಂಬ ಬೇಸರ ಚುನಾಯಿತ ಪ್ರತಿನಿಧಿಗಳದ್ದು. ಶೀಘ್ರ ಮರುಮೀಸಲಾತಿ ಅಧಿಸೂಚನೆ ಪ್ರಕಟವಾದರೆ ಸ್ಥಳೀಯ ಜನಪ್ರತಿನಿಧಿಗಳ ಅತಂತ್ರ ಸ್ಥಿತಿ ಕೊನೆಗೊಳ್ಳಲಿದೆ.
ಅಭಿವೃದ್ಧಿ ಕಾರ್ಯಕ್ಕೆ ಹಿನ್ನಡೆ
ಚುನಾವಣೆ ನಡೆದಿರುವ ಕಡೆ ಅಧ್ಯಕ್ಷ- ಉಪಾಧ್ಯಕ್ಷರು ಇಲ್ಲದೆ ಚುನಾಯಿತ ನಾಲ್ಕು ಸಾವಿರ ಸ್ಥಳೀಯ ಜನಪ್ರತಿನಿಧಿಗಳ ಕೈಗೆ ಅಧಿಕಾರ ಸಿಕ್ಕಿಲ್ಲ. ಹೀಗಾಗಿ ಆಡಳಿತಾಧಿಕಾರಿಗಳದ್ದೇ ದರ್ಬಾರ್. ಒಬ್ಬೊಬ್ಬರು ಒಂದಕ್ಕಿಂತ ಹೆಚ್ಚು ಕಡೆ ಜವಾಬ್ದಾರಿ ವಹಿಸಿಕೊಂಡಿದ್ದು, ಆಡಳಿತ ಹಾಗೂ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಅತ್ತ ಅಧಿಕಾರವಿಲ್ಲ, ಇತ್ತ ಜನರಿಗೆ ಉತ್ತರಿಸಲಾಗದೇ ಚುನಾಯಿತರು ಹೈರಾಣಾಗಿದ್ದಾರೆ.
ಮುಗಿದ ಗಡುವು
ರಾಜ್ಯದ 58 ನಗರಸಭೆ, 116 ಪುರಸಭೆ ಹಾಗೂ 92 ಪಟ್ಟಣ ಪಂಚಾಯಿತಿ ಸೇರಿ ಒಟ್ಟು 226 ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲು ನಿಗದಿಪಡಿಸಿ 2018ರ ಸೆ.3ರಂದು ಹೊರಡಿಸಿದ್ದ ಮೂಲ ಅಧಿಸೂಚನೆಯನ್ನು ಹಿಂಪಡೆಯಲಾಗುವುದು.
ಮೀಸಲು ಮರುನಿಗದಿಪಡಿಸಿ ಒಂದು ತಿಂಗಳಲ್ಲಿ ಹೊಸ ಅಧಿಸೂಚನೆ ಹೊರಡಿಸಲಾಗುವುದು ಎಂದು 2019ರ ನ.7ರಂದು ರಾಜ್ಯ ಸರ್ಕಾರ ಹೈಕೋರ್ಟ್ಗೆ ಹೇಳಿತ್ತು. ಈ ಕುರಿತಂತೆ ಸಲ್ಲಿಸಲಾಗಿದ್ದ ಹಲವು ಮೇಲ್ಮನವಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ಹಾಗೂ ನ್ಯಾ. ಎಸ್.ಆರ್.ಕೃಷ್ಣಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠವು ಸರ್ಕಾರದ ಪರ ವಾದ ಮಂಡಿಸಿದ್ದ ಅಡ್ವೋಕೇಟ್ ಜನರಲ್ ಪ್ರಭುಲಿಂಗ ಕೆ. ನಾವದಗಿ ನೀಡಿದ್ದ ಹೇಳಿಕೆ ದಾಖಲಿಸಿಕೊಂಡಿತ್ತು.
ಮೇಲ್ಮನವಿ ವಿಲೇವಾರಿ ಮಾಡಿ, ಏಕಸದಸ್ಯ ನ್ಯಾಯಪೀಠ ನೀಡಿದ್ದ ಪ್ರತ್ಯೇಕ ಆದೇಶ ರದ್ದು ಮಾಡಿ ವಿಭಾಗೀಯ ನ್ಯಾಯಪೀಠ ಆದೇಶಿಸಿತ್ತು. ಆದರೆ ಸರ್ಕಾರ ಹೇಳಿದಂತೆ ಅಧಿಸೂಚನೆ ಹೊರಡಿಸಲು ಒಂದು ತಿಂಗಳ ಕಾಲಮಿತಿಯೂ ಮುಗಿದಿದೆ.
ಹಿಂದಿನ ಸರ್ಕಾರ ಮಾಡಿದ ಎಡವಟ್ಟಿನಿಂದ ವಿಳಂಬವಾಗಿದೆ. ಹೈಕೋರ್ಟ್ ನಿರ್ದೇಶನದಂತೆ ಮೀಸಲು ಪಟ್ಟಿ ಅಂತಿಮಗೊಳಿಸಿದ್ದು, ಶೀಘ್ರವೇ ಅಧಿಸೂಚನೆ ಹೊರಡಿಸಲಾಗುವುದು.
| ಆರ್.ಅಶೋಕ್ ಪೌರಾಡಳಿತ ಸಚಿವ