ಸ್ಥಳೀಯ ಸಂಸ್ಥೆಗಳಲ್ಲೂ ಅರಳಲಿದೆ ಕಮಲ

ಶಿವಮೊಗ್ಗ: ಲೋಕಸಭೆ ಫಲಿತಾಂಶ ಸ್ಥಳೀಯ ಸಂಸ್ಥೆಗಳ ಚುನಾವಣೆ ಮೇಲೂ ಪರಿಣಾಮ ಬೀರಲಿದ್ದು, ಮೈತ್ರಿ ಪಕ್ಷದಲ್ಲಿ ಭಯ ಹುಟ್ಟಿಸಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ರುದ್ರೇಗೌಡ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅಲೆಯಲ್ಲಿ ದೇಶಾದ್ಯಂತ ಬಿಜೆಪಿ ಹವಾ ಸೃಷ್ಟಿಸಿದೆ. ಇದೀಗ ಕೇಂದ್ರದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಸ್ಥಳೀಯ ಸಂಸ್ಥೆಗಳಲ್ಲೂ ಕಮಲ ಅರಳಲಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಕಳೆದ 5 ಚುನಾವಣೆಗಳನ್ನು ಯಶಸ್ವಿಯಾಗಿ ನಡೆಸಿದ್ದು, 5ರಲ್ಲೂ ಬಿಜೆಪಿ ಬಹುಮತ ಪಡೆದಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಅತ್ಯಧಿಕ ಎಂಪಿ ಸ್ಥಾನಗಳನ್ನು ಪಡೆದಿದೆ. ಇದೀಗ ಸ್ಥಳೀಯ ಸಂಸ್ಥೆಗಳ ಸರದಿ ಎದುರಾಗಿದ್ದು, ಬಿಜೆಪಿ ಗೆಲುವು ನಿಶ್ಚಿತವಾಗಿ ಗೆಲುವು ಸಾಧಿಸಲಿದೆ ಎಂದರು.

ಗಾಬರಿ ಹುಟ್ಟಿಸಿದ್ದ ಮೈತ್ರಿ ನಡೆ:ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲುವ ಸಂಪೂರ್ಣ ವಿಶ್ವಾಸವಿತ್ತು. ಆದರೆ ಮೈತ್ರಿ ಸರ್ಕಾರವೇ ಬಂದು ಠಿಕಾಣಿ ಹೂಡಿತ್ತು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಸಿಎಂ ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್ ಕೂಡ ಶಿವಮೊಗ್ಗದಲ್ಲಿ ಪ್ರಚಾರ ನಡೆಸಿ ಹೋಗಿದ್ದರಿಂದ ಎಲ್ಲೋ ಒಂದು ಕಡೆ ಮೈತ್ರಿ ನಡೆ ಭಯ ಹುಟ್ಟಿಸಿತ್ತು. ಆದರೆ ಮೋದಿ ಮತ್ತು ಯಡಿಯೂರಪ್ಪ ಅವರ ಅಲೆ ಮುಂದೆ ಭಯ ಮರೆಯಾಯಿತು ಎಂದು ಹೇಳಿದರು.

ಈ ನಡುವೆ ಸಮ್ಮಿಶ್ರ ಸರ್ಕಾರದ ಮಲತಾಯಿ ಧೋರಣೆ ಮತ್ತು ಜಾತೀಯತೆಯಿಂದ ಲೋಕಸಭೆಯಲ್ಲಿ ಬಿಜೆಪಿ ಗೆಲ್ಲುವುದಕ್ಕೆ ಸಹಕಾರಿ ಆಯಿತು. ದೇಶದ ರಕ್ಷಣೆಗೆ ನಿಂತ ಪ್ರಧಾನಿ ನರೇಂದ್ರ ಮೋದಿ ಪರವಾಗಿ ಇಡೀ ದೇಶದ ಜನತೆ ನಿಂತರು ಎಂದರು.

ಕಾರ್ಯಕರ್ತರ ಹಿತ ಕಾಪಡಲು ಬದ್ಧ:ಚುನಾವಣೆಯಲ್ಲಿ ಭಾರಿ ಅಂತರದ ಗೆಲುವು ತಂದುಕೊಟ್ಟ ಕಾರ್ಯಕರ್ತರನ್ನು ಅಭಿನಂದಿಸಿದ ರುದ್ರೇಗೌಡ, ಮುಂಬರುವ ದಿನಗಳಲ್ಲಿ ಕಾರ್ಯಕರ್ತರು ಮತ್ತು ಅವರ ಕುಟುಂಬದವರ ಹಿತ ಕಾಪಾಡುವಲ್ಲಿ ನಮ್ಮ ನಾಯಕರು ಬದ್ಧರಿದ್ದಾರೆ ಎಂದರು.

ಭದ್ರಾವತಿಯ ವಿಐಎಸ್​ಎಲ್, ಎಂಪಿಎಂ ಕಾರ್ಖಾನೆಗಳು, ಅರ್ಧಕ್ಕೆ ಸ್ಥಗಿತಗೊಂಡಿರುವ ವಿಮಾನ ನಿಲ್ದಾಣ ಕಾಮಗಾರಿ, ಕೈಗಾರಿಕಾ ಕ್ಷೇತ್ರದತ್ತ ನೂತನ ಸಂಸದರು ಗಮನಹರಿಸಲಿದ್ದು, ಯುವಕರ ಉದ್ಯೋಗಕ್ಕೂ ಆದ್ಯತೆ ನೀಡಲಿದ್ದಾರೆ ಎಂದು ಭರವಸೆ ನೀಡಿದರು.

ಎಂಎಲ್​ಸಿ ಆಯನೂರು ಮಂಜುನಾಥ್, ರಾಜ್ಯ ರೈತ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಎಸ್.ದತ್ತಾತ್ರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ಎಸ್.ಅರುಣ್, ಎಸ್.ಎನ್.ಚನ್ನಬಸಪ್ಪ, ಉಪಾಧ್ಯಕ್ಷ ಬಿ.ಎನ್.ಕೃಷ್ಣಮೂರ್ತಿ, ಕಾಪೋರೇಟರ್ ಅನಿತಾ ರವಿಶಂಕರ್ ಇದ್ದರು.

Leave a Reply

Your email address will not be published. Required fields are marked *