ಸ್ಥಳೀಯ ಕಲಾವಿದರ ಸಾಧನೆ ದಾಖಲೀಕರಿಸಲಿ

ಶೃಂಗೇರಿ: ಮಲೆನಾಡಿನ ಶ್ರೇಷ್ಠ ಸಾಹಿತಿಗಳ ವಿಶಿಷ್ಟ ಸಣ್ಣ ಕಥೆಗಳ ವಿಭಿನ್ನ ಪಾತ್ರಗಳಿಗೆ ಜೀವ ತುಂಬಿದ ಬಿ.ಎಲ್.ರವಿಕುಮಾರ್ ಶ್ರೇಷ್ಠ ರಂಗಕಲಾವಿದ. ಇಂತಹ ಎಲೆಮರೆಯ ಪ್ರತಿಭೆಗಳ ಸಾಧನೆ ದಾಖಲೀಕರಿಸುವ ಅಗತ್ಯವಿದೆ ಎಂದು ಸಾಹಿತಿ ಎಚ್.ಎಂ.ನಾಗರಾಜರಾವ್ ಕಲ್ಕಟ್ಟೆ ತಿಳಿಸಿದರು.

ಪಟ್ಟಣದ ಡಾ. ಗೌರಿಶಂಕರ್ ಸಭಾಂಗಣದಲ್ಲಿ ಶ್ರೀ ಭಾರತೀತೀರ್ಥ ಸಾಂಸ್ಕೃತಿಕ ಮತ್ತು ಜಾನಪದ ಅಧ್ಯಯನ ಕೇಂದ್ರ ಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಏರ್ಪಡಿಸಿದ್ದ ಮಲೆನಾಡು ಉತ್ಸವ ಕಾರ್ಯಕ್ರಮದಲ್ಲಿ ಹಿರಿಯ ರಂಗನಟ ಬಿ.ಎಲ್.ರವಿಕುಮಾರ್ ಅವರ ರಂಗಾಭಿನಂದನೆಯಲ್ಲಿ ಮಾಡಿದರು.

ವಯಸ್ಸಿನ ಹಂಗಿಲ್ಲದೆ ವಿವಿಧ ರೀತಿಯ ಪಾತ್ರ ನಿರ್ವಹಿಸಿದ ಕೀರ್ತಿ ರವಿಕುಮಾರ್ ಅವರದ್ದು. ಸಿ.ಆರ್.ಸಿಂಹ ಅವರ ಕರ್ಣ ಮತ್ತು ಭಾಸಮಹಾಕವಿಯ ಕರ್ಣಭಾರ ನಾಟಕದಲ್ಲಿ ಕರ್ಣನ ಪಾತ್ರದಲ್ಲಿ ಅಭಿನಯಿಸಿ ರಾಜ್ಯಮಟ್ಟದಲ್ಲಿ ಪ್ರಸಿದ್ಧರಾದರು ಎಂದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ರವಿಕುಮಾರ್, ಶೃಂಗೇರಿಯ ಸಾಂಸ್ಕೃತಿಕ ವಲಯ ಹೆಚ್ಚು ಶ್ರೀಮಂತವಾದ ಕಾರಣಕ್ಕೆ ನನ್ನಂತಹ ಕಲಾವಿದರು ಬೆಳೆದಿದ್ದೇವೆ ಎಂದರು.

ರಮೇಶ್ ಬೇಗಾರ್ ನೇತೃತ್ವದಲ್ಲಿ ಮಲೆನಾಡ ಕಲಾವಿದರು ಅಸ್ತಿತ್ವ ಕಂಡುಕೊಳ್ಳುತ್ತಿದ್ದಾರೆ. ಮತ್ತಷ್ಟು ರಂಗಭೂಮಿ ಕೆಲಸವನ್ನು ನಿರ್ವಹಿಸಲು ಈ ಅಭಿನಂದನೆ ನನಗೆ ಎಚ್ಚರಿಕೆಯ ಕರೆಗಂಟೆ ಎಂದು ತಿಳಿಸಿದರು.

ಕೌರಿ ಪ್ರಕಾಶ್ ಮಾತನಾಡಿ, ಗ್ರಾಮೀಣ ಪ್ರದೇಶದ ಯುವ ಜನತೆ ಕೃಷಿಯನ್ನು ಪ್ರೀತಿಸಿ ಬೆಳೆಸಬೇಕು ಎಂದರು.

ಜಿಪಂ ಸದಸ್ಯ ಬಿ.ಶಿವಶಂಕರ್ ಮಾತನಾಡಿ, ಕಲೆಯ ಎಲ್ಲ ಪ್ರಕಾರಗಳನ್ನು ಒಂದೇ ಸೂರಿನಡಿ ತರುವ ಪರಿಕಲ್ಪನೆಯ ಮಲೆನಾಡು ಉತ್ಸವ ರಾಜ್ಯದ ಅರ್ಥಪೂರ್ಣ ಉತ್ಸವದಲ್ಲಿ ಒಂದಾಗಿದೆ. ಮುಖ್ಯವಾಗಿ ಜಾನಪದ ಕಲೆಯ ರಕ್ಷಣೆಗೆ ಕಟಿಬದ್ಧವಾದ ಭಾರತೀತೀರ್ಥ ಕಲ್ಚರಲ್ ಟ್ರಸ್ಟ್ ಅಭಿನಂದನಾರ್ಹ ಎಂದರು.

ಗುಡ್ಡೇತೋಟ ನಟರಾಜ್​ವಾತನಾಡಿ, ಸಮಾಜದ ಬಹುಮುಖಿ ಚಿಂತನೆಯ ವಿಶಿಷ್ಟ ಉತ್ಸವ ಇದಾಗಿದ್ದು, ಕಲಾವಿದರು, ಸಮಾಜ ಸೇವಕರು, ಮಹಿಳೆ ಮತ್ತು ಕೃಷಿ ಕ್ಷೇತ್ರದ ಅನುಪಮ ಸಾಂಗತ್ಯವನ್ನು ಇಲ್ಲಿ ಸರಿದೂಗಿಸಿ ಹೋಗಲಾಗುತ್ತಿದೆ ಎಂದು ತಿಳಿಸಿದರು.

ಪ್ರಗತಿಪರ ಕೃಷಿಕ ಕೌರಿ ಪ್ರಕಾಶ್ ಅವರಿಗೆ ಕಲ್ಕುಳಿ ದೇವೇಂದ್ರ ಹೆಗಡೆ ಕೃಷಿ ಪ್ರಶಸ್ತಿ, ಉಡುಪಿಯ ಸಮಾಜ ಸೇವಕ ಪ್ರಫುಲ್ಲಚಂದ್ರರಾವ್​ಗೆ ಎಲ್.ಎಂ.ಭಟ್ ಸ್ಮಾರಕ ಸದ್ಭಾವನಾ ಪ್ರಶಸ್ತಿ ಪ್ರದಾನ ಮಾಡಲಾಯಿತು. 

ಜಾನಪದ ಮೆರಗು: ಎಂ.ಕೆ.ಶ್ರೀನಿಧಿಯವರ ಸಂಯೋಜನೆಯಲ್ಲಿ ಜಾನಪದ ಗಾಯಕ ಅಪ್ಪಗೆರೆ ತಿಮ್ಮರಾಜು ಮತ್ತು ಸ್ಥಳೀಯ ಪ್ರತಿಭೆ ಭಾಗ್ಯಶ್ರೀ ಗೌಡ ಜಾನಪದ ಗೀತೆ ಹಾಡಿ ಪ್ರೇಕ್ಷಕರ ಮನ ತಣಿಸಿದರು. ತಿಮ್ಮರಾಜು ಸೂಕ್ತ ವಿವರಣೆಯೊಂದಿಗೆ ಅಭಿನಯ ಸಹಿತ ಪ್ರಸ್ತುತಪಡಿಸಿದ ಗೀತೆಗಳು ಜಾನಪದದ ಮಹತ್ವ ತಿಳಿಸಿತು. ಶುದ್ಧ ದೇಸೀ ವಾದ್ಯಗಳನ್ನೇ ಹಿನ್ನೆಲೆಯಾಗಿ ಬಳಸಿದ್ದು ಕಾರ್ಯಕ್ರಮದ ವಿಶೇಷ. ನಂತರ ಮಿಮಿಕ್ರಿ ಗೋಪಿ ಅಣುಕು ಕಲೆ ಪ್ರದರ್ಶಿಸಿ ಜನರನ್ನು ರಂಜಿಸಿದರು.

Leave a Reply

Your email address will not be published. Required fields are marked *