ಸ್ಥಳೀಯರಿಗೆ ಕೆಲಸ ನೀಡದ್ದಕ್ಕೆ ವಿರೋಧ

ಮುಂಡಗೋಡ: ತಾಲೂಕಿನ ಬಾಚಣಕಿ ಗ್ರಾ.ಪಂ. ವ್ಯಾಪ್ತಿಯ ಮಜ್ಜಿಗೇರಿ ಗ್ರಾಮದ ಅರಣ್ಯದಲ್ಲಿ ಅರಣ್ಯ ಇಲಾಖೆಯಿಂದ ಸಸಿ ನೆಡಲು ಹಾಗೂ ಅದಕ್ಕೆ ಗುಂಡಿಗಳನ್ನು ತೋಡುವ ಕೆಲಸವನ್ನು ಬೇರೆ ತಾಲೂಕಿನ ಕೂಲಿಕಾರರಿಗೆ ನೀಡಲಾಗಿದೆ ಎಂದು ಆರೋಪಿಸಿ ಅರಣ್ಯ ಸಮಿತಿಯವರು ಹಾಗೂ ಕೆಲ ಗ್ರಾಮಸ್ಥರು ಸಸಿ ನೆಡುವ ಕಾರ್ಯಕ್ಕೆ ತಡೆಯೊಡ್ಡಿ ಕೆಲಸಗಾರರನ್ನು ಮರಳಿ ಕಳಿಸಿದ ಘಟನೆ ಶನಿವಾರ ನಡೆದಿದೆ.

ಈ ಹಿಂದೆ ಸರ್ವೆ ನಂ. 102ರಲ್ಲಿ ಅರಣ್ಯ ಇಲಾಖೆಯವರು ಸಸಿ ನೆಡಲು ಗುಂಡಿಗಳನ್ನು ತೋಡಿಸಲಾಗಿದೆ. ಬೇರೆ ತಾಲೂಕಿನಿಂದ ಕೂಲಿಕಾರರನ್ನು ಕರೆ ತಂದು ಗುಂಡಿಗಳನ್ನು ತೋಡಿಸಿದ್ದೀರಿ. ಈಗ ಸಸಿ ನೆಡಲು ಬಂದಿದ್ದೀರಿ. ಈ ವಿಷಯ ನಮಗೇಕೆ ತಿಳಿಸಿಲ್ಲ ಎಂದು ಅರಣ್ಯ ಸಮಿತಿಯವರು ಉಪ ವಲಯ ಅರಣ್ಯಾಧಿಕಾರಿ ಬಸವಾರ ಪೂಜಾರ ಅವರಿಗೆ ಪ್ರಶ್ನಿಸಿದರು.

ಪ್ರತಿಕ್ರಿಯಿಸಿದ ಬಸವರಾಜ ಪೂಜಾರ, ಇದು ಇಲಾಖೆಗೆ ಸಂಬಂಧಿಸಿದ್ದು, ನಿಮಗೆ ಸಂಬಂಧಿಸಿದ ವಿಷಯವಲ್ಲ ಎಂದು ಏಕ ವಚನದಲ್ಲಿ ವಾಗ್ವಾದಕ್ಕೆ ಇಳಿದರು ಎಂದು ತಿಳಿದು ಬಂದಿದೆ.

ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಮತ್ತು ಅರಣ್ಯ ಸಮಿತಿಯವರು ಮೇಲಧಿಕಾರಿಗಳಿಗೆ ಈ ವಿಷಯ ತಿಳಿಸಿದರು. ಸ್ಥಳಕ್ಕೆ ಬಂದ ವಲಯ ಅರಣ್ಯಾಧಿಕಾರಿ ಸುರೇಶ ಕುಳ್ಳೊಳ್ಳಿ ಸಮಿತಿಯವರು ಹಾಗೂ ಗ್ರಾಮಸ್ಥರನ್ನು ಸಮಾಧಾನಪಡಿಸಲು ಯತ್ನಿಸಿದರಾದರೂ, ಗ್ರಾಮಸ್ಥರು ‘ಉಪ ವಲಯ ಅರಣ್ಯಾಧಿಕಾರಿ ಗ್ರಾಮದ ಹಿರಿಯರಿಗೆ, ಮಹಿಳೆಯರೊಂದಿಗೆ ಗೌರವದಿಂದ ಮಾತನಾಡುವುದಿಲ್ಲ. ಆದಷ್ಟು ಬೇಗ ಅವರನ್ನು ಈ ಭಾಗದಿಂದ ಬೇರೆ ಕಡೆ ವರ್ಗಾವಣೆ ಮಾಡಬೇಕು. ಇಲ್ಲವಾದರೆ ಹೋರಾಟ ಮಾಡಬೇಕಾಗುತ್ತದೆ’ ಎಂದು ಪಟ್ಟು ಹಿಡಿದರು.

‘2-3 ದಿನಗಳಲ್ಲಿ ಅವರನ್ನು ವರ್ಗಾವಣೆ ಮಾಡುತ್ತೇನೆ ಹಾಗೂ ಸ್ಥಳೀಯ ಕೂಲಿಕಾರರಿಗೆ ಕೆಲಸ ನೀಡಲಾಗುವುದು’ ಎಂದು ಗ್ರಾಮಸ್ಥರಿಗೆ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.

ಉಪ ವಲಯ ಅರಣ್ಯಾಧಿಕಾರಿ ತಮ್ಮದೇ ಆದ ದರ್ಬಾರ ನಡೆಸಿದ್ದಾರೆ. ಅವರ ಕಾರ್ಯ ವೈಖರಿಯ ಬಗ್ಗೆ ನಮಗೆ ಅಸಮಾಧಾನವಿದೆ. ಕೂಡಲೆ ಬಸವರಾಜ ಪೂಜಾರ ಅವರನ್ನು ವರ್ಗಾವಣೆ ಮಾಡಬೇಕು ಇಲ್ಲವೇ ಅಮಾನತು ಮಾಡಬೇಕು.
| ಶಿವಾನಂದ ದೊಡ್ಡಮನಿ, ಬಾಚಣಕಿ ಗ್ರಾಮಸ್ಥ

ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸಿದ್ದು, ಮೇಲಧಿಕಾರಿಗಳಿಗೆ ಈ ಬಗ್ಗೆ ವರದಿ ಸಲ್ಲಿಸಲಾಗುವುದು. ಇನ್ನು ಮುಂದೆ ಸ್ಥಳೀಯ ಕೂಲಿಕಾರರಿಗೆ ಕೆಲಸ ನೀಡಲಾಗುವುದು.
| ಸುರೇಶ ಕುಳ್ಳೊಳ್ಳಿ, ಆರ್.ಎಫ್.ಒ. ಮುಂಡಗೋಡ