ಸ್ಟ್ರಿಕ್ಟ್ ಡಯಟ್ಟು ಫಿಟ್​ನೆಸ್ ಗುಟ್ಟು

|ಶ್ವೇತಾ ನಾಯ್ಕ್​ ಬೆಂಗಳೂರು

ಗರು ಸಿನಿಮಾಗೂ ಮುಂಚೆ ತ್ರಿವೇಣಿ ರಾವ್ ಸಾಕಷ್ಟು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದರು. ಆದರೆ ಇವರನ್ನು ಯಾರೂ ಅಷ್ಟಾಗಿ ಗುರುತಿಸಿರಲಿಲ್ಲ. ಟಗರು ಸಿನಿಮಾದ ಕಾನ್​ಸ್ಟೆಬಲ್ ಸರೋಜಾ ಪಾತ್ರ ತ್ರಿವೇಣಿಯನ್ನು ಯಶಸ್ಸಿನ ಶಿಖರಕ್ಕೆ ಕೊಂಡೊಯ್ದಿತ್ತು. ಡಾಲಿ ಪ್ರೇಯಸಿಯಾಗಿ ಪೊಲೀಸ್ ದಿರಿಸಿನಲ್ಲಿ ತೆರೆಮೇಲೆ ಬಂದಿದ್ದ ಆರಡಿ ಉದ್ದದ ಈ ಚೆಲುವೆಗೆ ಬೌಲ್ಡ್ ಆಗದವರೇ ಇಲ್ಲ. ಟಗರು ಸಿನಿಮಾ ಯಶಸ್ಸಿನಲ್ಲಿ ಇವರದೂ ಒಂದು ಪಾಲಿದೆ. ಹೀಗೆ ಫೇಮ್ ಸಿಕ್ಕ ಬೆನ್ನಲ್ಲೇ ಪಾತ್ರಗಳೂ ಅರಸಿಬಂದವು. ಆಗಲೇ ಶುರುವಾಗಿದ್ದು ಫಿಟ್​ನೆಸ್ ಮಂತ್ರ. ಫಿಟ್ ಆಗಿದ್ದರಷ್ಟೇ ನಟನೆಗೆ ಅವಕಾಶ. ಮೊದಲೇ ಡಯಟ್ ವಿಷಯದಲ್ಲಿ ಸ್ಟ್ರಿಕ್ಟ್ ಆಗಿದ್ದ ತ್ರಿವೇಣಿ ಅವಕಾಶಗಳು ಅರಸಿ ಬಂದಮೇಲೆ ಇನ್ನಷ್ಟು ಚುರುಕಾದರು. ತಮಗಿಷ್ಟದ, ತಮಗೆ ಬೇಕಾದ ಡಯಟ್ ಪದಾರ್ಥಗಳನ್ನು ತಾವೇ ಮಾಡಿಕೊಳ್ಳುವ ತ್ರಿವೇಣಿ ಆಹಾರಪ್ರಿಯೆಯೂ ಹೌದು. ಆದರೆ ಆರೋಗ್ಯವಾಗಿರುವುದನ್ನೇ ಸೇವಿಸುತ್ತಾರೆ. ತಾವು ಮಾಡುವ ಡಯಟ್ ಅಡುಗೆಯ ವಿವರ ನೀಡಿರುವ ಅವರು ಅದರ ರೆಸಿಪಿಯನ್ನೂ ಪರಿಚಯಿಸಿದ್ದಾರೆ.

ಹೈದರಾಬಾದಿಗೆ ಹೋದ್ಮೇಲೆ ಆಹಾರದ ಮಹತ್ವ ಗೊತ್ತಾಯ್ತು

ಮನೆಯಲ್ಲಿ ಇದ್ದಾಗ ಅಡುಗೆ ಮಾಡೋಕೆ ಬರ್ತಿತ್ತು ನಿಜ. ಆದ್ರೆ ಒಮ್ಮೆಯೂ ಅಮ್ಮ ಅಡುಗೆಮನೆಗೆ ಹೋಗೋಕೆ ಬಿಡ್ತಾ ಇರ್ಲಿಲ್ಲ. ನಾನು ತೆಲುಗು ಚಿತ್ರಗಳಲ್ಲಿ ನಟಿಸಲು ಪ್ರಾರಂಭಿಸಿದ ಮೇಲೆ ಹೈದರಾಬಾದಿನಲ್ಲೇ ನೆಲೆಸುತ್ತಿದ್ದೆ. ಪ್ರಾರಂಭದಲ್ಲಿ ಪಿಜಿಯಲ್ಲಿದ್ದೆ. ಅಲ್ಲಿನ ಊಟ ತಿನ್ನುವಾಗ ಅಮ್ಮ ನೆನಪಾಗ್ತಿದ್ರು. ನಂತರ ತಮ್ಮನೊಂದಿಗೆ ಸೇರಿ ಮನೆ ಮಾಡಿ ನಾನೇ ಅಡುಗೆ ಮಾಡಿಕೊಳ್ಳೋಕೆ ಪ್ರಾರಂಭಿಸಿದ್ದೆ. ಆಗಲೇ ನನಗೆ ಅಮ್ಮ, ಅಡುಗೆ ಮಹತ್ವ ಗೊತ್ತಾಗಿದ್ದು.

ಖಾರ ಹಾಕದೇ ಉಪ್ಪಿಟ್ಟು ಮಾಡಿದ್ದೆ

ನಾನು ಎಷ್ಟು ಆಹಾರ ಪ್ರಿಯೆಯೋ ಅಷ್ಟೇ ಡಯಟ್ ಮಾಡುವವಳು. ಮೊದಲು ಅಡುಗೆ ಕಲಿಯುವಾಗಲೇ ಡಯಟ್ ಫುಡ್ ಕಲಿಯೋಕೆ ಪ್ರಯತ್ನಿಸಿದ್ದೆ. ಫ್ರೆಂಡ್ ಒಬ್ಬರು ಬ್ರೋಕ್ ವೀಟ್ ಉಪ್ಪಿಟ್ಟು ಹೇಳಿದ್ದರು. ಮಾಡೋಕೆ ಪ್ರಯತ್ನಿಸಿದ್ದೆ. ಆದ್ರೆ ಮೆಣಸಿನಕಾಯಿ ಹಾಕದೆಯೇ ಮಾಡಿದ್ದೆ. ಸಾಲದ್ದಕ್ಕೆ ಉಪು್ಪ ಜಾಸ್ತಿ. ನಂತರವೂ ಬಹಳಷ್ಟು ಅಡುಗೆ ಹಾಳು ಮಾಡಿದ್ದೇನೆ. ಕಲಿಯೋ ಸಮಯದಲ್ಲಿ ಇದೆಲ್ಲಾ ಇದ್ದದ್ದೆ ಅಲ್ವಾ?

ಹೈಜಿನ್ ಆಗಿದ್ರೆ ಎಲ್ಲಾದ್ರೂ ಓಕೆ.

ನಾನು ಫೈವ್ ಸ್ಟಾರ್ ಹೋಟೆಲ್, ರೋಡ್ ಸೈಡ್ ಚಾಟ್ಸ್ ಅಂತಲ್ಲ. ಹೈಜೀನ್ ಆಗಿರುವ ಯಾವ ಆಹಾರವಾದ್ರೂ ನಂಗಿಷ್ಟವೇ. ನಾನು ಇಂಥದ್ದೇ ಹೋಟೆಲ್​ಗೆ ಹೋಗಬೇಕು, ಇಲ್ಲೇ ತಿನ್ನಬೇಕು ಅನ್ನುವ ಸ್ವಭಾವದವಳಲ್ಲ. ಇಷ್ಟ ಆದ್ರೆ, ಕ್ಲೀನ್ ಆಗಿದ್ರೆ ರೋಡ್ ಸೈಡ್ ಆದ್ರೂ ತಿನ್ನೋಳು. ಸಿಕ್ಕ ಸ್ಟಾಲ್​ನಲ್ಲಿದ್ರೂ ಅವರು ಕೊಡುವ ಆಹಾರ ಎಷ್ಟು ಕ್ಲೀನಾಗಿದೆ ಅನ್ನೋದನ್ನ ನೋಡಿ ತಿನ್ನಿ.

ಫಿಟ್ ಆಗಿರೋಕೆ ಡಯಟ್ ಮಾಡ್ಲೇಬೇಕು

ನಾವು ಇಷ್ಟಪಟ್ಟಿದ್ದನ್ನು ತಿಂದುಬಿಡಬಹುದು. ಆದ್ರೆ ಅದನ್ನು ಕರಗಿಸೋದು ಬಹಳ ಕಷ್ಟ. ಹಾಗಾಗಿ ತಿನ್ನುವಾಗ್ಲೇ ಜಾಗೃತೆಯಿಂದ ಇರಬೇಕು. ನಾನು ಡಯಟ್ ಫಾಲೋ ಮಾಡ್ತೇನೆ. ಅಂತಹ ಆಹಾರಗಳನ್ನೇ ಹೆಚ್ಚು ತಿನ್ನುವುದು. ಎಷ್ಟು ತಿಂತೀನೋ ಅಷ್ಟು ವರ್ಕ್​ಔಟ್ ಮಾಡ್ತೇನೆ. ತುಂಬಾ ಸಲ ತಿನ್ನಲೇಬೇಕು ಅನ್ನಿಸೋದು ಇದೆ. ಅಂತಹ ಸಮಯದಲ್ಲಿ ಫಿಟ್ ಆಗಿರ್ಬೇಕು ಅನ್ನೋದು ತಲೆಗೆ ಬಂದುಬಿಡತ್ತೆ. ಆಗ ತಿನ್ನೋದನ್ನು ಅಲ್ಲಿಗೇ ನಿಲ್ಲಿಸ್ತೇನೆ.

ನಾನು ಉತ್ತಮ ಕುಕ್

ಸಾಮಾನ್ಯವಾಗಿ ಯಾರೂ ಹೀಗೆ ಹೇಳಿಕೊಳ್ಳುವುದಿಲ್ಲ. ಆದ್ರೆ ನನಗಂತೂ ತುಂಬಾ ಚೆನ್ನಾಗಿ ಅಡುಗೆ ಬರತ್ತೆ. ಮೊದಲಿನಿಂದಲೂ ಅಡುಗೆ ಬರುತ್ತಿತ್ತು. ಆದ್ರೆ ಅಮ್ಮ ಮಾಡೋಕೆ ಬಿಡುತ್ತಿರಲಿಲ್ಲ. ಈಗ ತಮ್ಮನ ಜೊತೆ ಹೈದರಾಬಾದ್​ನಲ್ಲಿ ಇರುವುದರಿಂದ ನನ್ನ ಅಡುಗೆಯನ್ನು ನಾನೇ ಮಾಡಿಕೊಳ್ತೇನೆ. ಹವ್ಯಾಸ ಅನ್ನುವುದಕ್ಕಿಂತ ಇಷ್ಟದ ಅಡುಗೆಯನ್ನು ನಾವೇ ಮಾಡಿಕೊಂಡು ತಿನ್ನುವುದರಲ್ಲಿ ತೃಪ್ತಿ ಸಿಗುತ್ತದೆ. ಸಮಯ ಸಿಕ್ಕಾಗೆಲ್ಲ ಹೊಸ ಪ್ರಯೋಗ ಮಾಡುತ್ತೇನೆ. ಮನೆಗೆ ನೆಂಟರು ಬಂದರೂ ನಾನೇ ಮಾಡಿ ಬಡಿಸಿದ ಉದಾಹರಣೆಗಳೂ ಇವೆ.

ಮನಸಿಗೆ ಬಂದದ್ದು ತಿನ್ನದಿರಿ

ನಾನು ಫುಡ್ಡಿ ಇರಬಹುದು. ಹಾಗಂತ ಸಿಕ್ಕಿದ್ದೆಲ್ಲ ತಿನ್ನೋದಿಲ್ಲ. ಅದರಿಂದ ಆರೋಗ್ಯವೂ ಹಾಳು. ಫಿಟ್ ಆಗಿರೋದೂ ಕಷ್ಟ. ಏನೇ ಇಷ್ಟಪಟ್ಟರೂ ಅದನ್ನು ಇನ್ನೂ ತಿನ್ನಬೇಕು ಅನ್ನಿಸುವಂತೆ ಸೇವಿಸಿ. ಬದುಕಬೇಕು ಅಂದ್ರೆ ಆಹಾರ ಸೇವಿಸಲೇಬೇಕು. ಹಾಗಂತ ಅದರಲ್ಲಿ ಒಂದು ಲಿಮಿಟ್ ಇಟ್ಟುಕೊಳ್ಳದಿದ್ದರೆ ಕಷ್ಟ. ಸೇವಿಸುವುದನ್ನೇ ಹಿತ-ಮಿತವಾಗಿ ಸೇವಿಸಬೇಕು. ಕೆಲವೊಮ್ಮೆ ಡಯಟ್​ನಲ್ಲಿ ಇದ್ದಾಗ ಏನೂ ಸೇವಿಸದೆ ಕಣ್ಣು ಸುತ್ತು ಬರುವುದೂ ಇದೆ. ಆದ್ರೆ ನಟಿ ಎಂದ ಮೇಲೆ ಫಿಟ್ ಆಗಿರಲೇಬೇಕಲ್ವಾ? ಹಾಗಾಗಿ ಇದೆಲ್ಲ ಲೆಕ್ಕಕ್ಕೆ ಬರುವುದಿಲ್ಲ.

ಬ್ರೋಕನ್ ವೀಟ್ ಉಪ್ಪಿಟ್ಟು

ಸಾಮಗ್ರಿ: ಬ್ರೋಕನ್ ವೀಟ್ (ತರಿ ತರಿಯಾಗಿ ಪುಡಿ ಮಾಡಿದ ಗೋಧಿ), ಈರುಳ್ಳಿ, ಟೊಮ್ಯಾಟೊ, ಹಸಿಮೆಣಸಿನಕಾಯಿ, ಸಾಸಿವೆ, ಎಣ್ಣೆ, ಉಪು್ಪ, ಕೊತ್ತಂಬರಿ ಸೊಪು್ಪ, ಕರಿಬೇವು

ಮಾಡುವ ವಿಧಾನ: ಒಂದು ಪಾತ್ರೆಯಲ್ಲಿ ನೀರು ಕಾಯಿಸಲು ಇಡಬೇಕು. ಇನ್ನೊಂದು ಬಾಣಲೆಗೆ ಎಣ್ಣೆ, ಸಾಸಿವೆ, ಕರಿಬೇವು, ಈರುಳ್ಳಿ, ಟೊಮ್ಯಾಟೊ, ಉಪು್ಪ ಹಾಕಿ ಸ್ವಲ್ಪ ಸಮಯ ಬಿಟ್ಟು ಗೋಧಿ ಹುಡಿ ಹಾಕಿ ಚೆನ್ನಾಗಿ ಮಿಶ್ರಣವಾದಮೇಲೆ ಬಿಸಿ ನೀರು ಹಾಕಿ ಸಣ್ಣ ಉರಿಯಲ್ಲಿ ಬೇಯಿಸಿ, ಕೊನೆಯಲ್ಲಿ ಕೊತ್ತಂಬರಿ ಸೊಪು್ಪ ಸೇರಿಸಬೇಕು.

ಅಕ್ಕಿ ರೊಟ್ಟಿ

ಸಾಮಗ್ರಿ: ಅಕ್ಕಿ ಹಿಟ್ಟು, ಈರುಳ್ಳಿ, ಜೀರಿಗೆ, ಉಪು್ಪ, ಎಣ್ಣೆ, ಕೊತ್ತಂಬರಿ ಸೊಪು್ಪ, ಕ್ಯಾರೆಟ್

ಮಾಡುವ ವಿಧಾನ: ನೀರು ಕಾಯಲು ಇಟ್ಟು ಅದಕ್ಕೆ ಚಿಟಿಕೆ ಉಪು್ಪ ಸೇರಿಸಿ ಕುದಿಬಂದ ಮೇಲೆ ಅಕ್ಕಿ ಹಿಟ್ಟು ಸೇರಿಸಿ ಬೇಯಿಸಬೇಕು. ಅದನ್ನು ಚೆನ್ನಾಗಿ ನಾದಿ ಉಪು್ಪ, ಈರುಳ್ಳಿ (ಸಣ್ಣಗೆ ಹೆಚ್ಚಿದ್ದು), ಜೀರಿಗೆ, ಕೊತ್ತಂಬರಿ ಸೊಪು್ಪ ಸೇರಿಸಿ ಎಣ್ಣೆ ಹಚ್ಚಿ ತೆಳುವಾಗಿ ತಟ್ಟಿ ಮೇಲೆ ಕ್ಯಾರೆಟ್ ತುರಿ ಉದುರಿಸಿ ಬೇಯಿಸಬೇಕು.

Leave a Reply

Your email address will not be published. Required fields are marked *