ಸ್ಟ್ರಾಂಗ್ ರೂಮ್ಲ್ಲಿ ಮತಯಂತ್ರಗಳು ಭದ್ರ

ಕುಮಟಾ: ಸಾರ್ವತ್ರಿಕ ಚುನಾವಣೆ 2019ರ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಎಲ್ಲ 8 ತಾಲೂಕುಗಳ ಮತಗಟ್ಟೆಗಳ ಮತಯಂತ್ರ, ವಿವಿ ಪ್ಯಾಟ್ ಯಂತ್ರಗಳನ್ನು ಇಲ್ಲಿನ ಡಾ. ಬಾಳಿಗಾ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಸ್ಟ್ರಾಂಗ್ ರೂಮ್ಳಲ್ಲಿ ಬುಧವಾರ ಭದ್ರಪಡಿಸಲಾಗಿದೆ.

ಎಲ್ಲ ತಾಲೂಕುಗಳಿಂದ 1,922 ಮತಗಟ್ಟೆಗಳ ಮತಯಂತ್ರಗಳನ್ನು ಆಯಾ ತಾಲೂಕಿಗೆ ನಿಗದಿಪಡಿಸಿದ ಕೊಠಡಿಗಳಲ್ಲಿ ಮಂಗಳವಾರ ರಾತ್ರಿ ಇರಿಸಲಾಗಿತ್ತು. ಬುಧವಾರ ಬೆಳಗ್ಗೆಯಿಂದ ಜಿಲ್ಲಾಧಿಕಾರಿ ಡಾ. ಹರೀಶ ಕುಮಾರ ಕೆ. ಅವರ ಉಪಸ್ಥಿತಿಯಲ್ಲಿ ಎಲ್ಲ ಸ್ಟ್ರಾಂಗ್ ರೂಮ್ಳನ್ನು ಮುಚ್ಚಿ, ಅವುಗಳಿಗೆ ಹಲಗೆ ಹೊಡೆದು, ಬೀಗ ಹಾಕಿ, ಸೀಲ್ ಮಾಡಲಾಯಿತು. ಮತಯಂತ್ರವಿರುವ ಪ್ರತಿ ಕೊಠಡಿಗೂ ಸಶಸ್ತ್ರ ಸಿಬ್ಬಂದಿಯನ್ನು ಕಾವಲಿಗೆ ನಿಯೋಜಿಸಲಾಗಿದೆ. ಕಟ್ಟಡದ ಸುತ್ತ ಬೇಲಿ ಹಾಕಲಾಗಿದ್ದು, ಎಲ್ಲೆಡೆ ಸಿಸಿಟಿವಿ ಕಣ್ಗಾವಲು ಇಡಲಾಗಿದೆ. ಒಬ್ಬ ಎಸ್​ಪಿ, ಡಿವೈಎಸ್​ಪಿ, ನಾಲ್ವರು ಸಿಪಿಐ, 6 ಜನ ಪಿಎಸ್​ಐ, 150 ಸಿವಿಲ್ ಪೊಲೀಸ್, 100 ಜನರಲ್ ಪೊಲೀಸ್, 100 ಮೀಸಲು ಪೊಲೀಸ್ ಹಾಗೂ 80 ಮಂದಿ (1 ತುಕಡಿ) ಅರೆ ಸೇನಾ ಪಡೆಯ ಸಿಬ್ಬಂದಿ ಕಾವಲು ಇರಲಿದೆ.

ಈ ವೇಳೆ ಪತ್ರಕರ್ತರೊಂದಿಗೆ ಮಾತನಾಡಿದ ಜಿಪಂ ಸಿಇಒ ಎಂ.ರೋಷನ್, ‘ಎಲ್ಲರ ಸಹಕಾರ ಹಾಗೂ ಜಿಲ್ಲಾಡಳಿತ, ಸ್ವೀಪ್ ಸಮಿತಿ ಪ್ರಯತ್ನದಿಂದ ಈ ಬಾರಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಮತದಾನವಾಗಿದೆ. ಅಂಗವಿಕಲರು ಕೂಡ ಶೇ. 97ರಷ್ಟು ಮತದಾನ ಮಾಡಿರುವುದು ಖುಷಿ ತಂದಿದೆ. ಜಿಲ್ಲೆಯ ಮತದಾರರು ದೇಶದ ಪ್ರಜಾಪ್ರಭುತ್ವವನ್ನು ಬಲಪಡಿಸುವ ಪ್ರಯತ್ನಕ್ಕೆ ಉತ್ತಮ ಸಹಕಾರ ನೀಡಿದ್ದಾರೆ’ ಎಂದರು.

Leave a Reply

Your email address will not be published. Required fields are marked *