ಸ್ಟ್ರಾಂಗ್ ರೂಂಗೆ 18 ಸಿಸಿ ಕ್ಯಾಮರಾ ಕಣ್ಗಾವಲು

ಹಾವೇರಿ: ಲೋಕಸಭೆ ಚುನಾವಣೆಯ ಮತದಾನ ಪ್ರಕ್ರಿಯೆ ಮುಗಿದ ಬಳಿಕ ಮತದಾನ ಯಂತ್ರ ಹಾಗೂ ವಿವಿಪ್ಯಾಟ್​ಗಳನ್ನು ಸೂಕ್ತ ಬಂದೋಬಸ್ತ್​ನೊಂದಿಗೆ ಹಾವೇರಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್​ನಲ್ಲಿ ಸ್ಥಾಪಿಸಿರುವ ಸ್ಟ್ರಾಂಗ್ ರೂಂ.ನಲ್ಲಿ ಭದ್ರವಾಗಿಡಲಾಗಿದೆ.

ಮತ ಎಣಿಕೆ ದಿನಾಂಕದವರೆಗೆ ಸ್ಟ್ರಾಂಗ್ ರೂಂ ಕಟ್ಟಡವನ್ನು 24-7 ಭದ್ರತೆಯಲ್ಲಿಡಲು ಸೂಕ್ತ ಏರ್ಪಾಡು ಮಾಡಲಾಗಿದೆ. ಒಂದು ಸಿಆರ್​ಪಿಎಫ್ ತುಕಡಿಯು ಎಣಿಕೆ ಕೇಂದ್ರದ ಹೊರಭಾಗದಲ್ಲಿ ಕಣ್ಗಾವಲಿರಿಸಿದೆ. ಸ್ಟ್ರಾಂಗ್ ರೂಂ ಹೊರ ಭಾಗ ಹಾಗೂ ಕಾಲೇಜ್ ಕಟ್ಟಡ ಹೊರಭಾಗದಲ್ಲಿ ಸರದಿ ಪ್ರಕಾರ ಒಂದು ಕೆಎಸ್​ಆರ್​ಪಿ ತುಕಡಿ, ಮೂರು ಡಿಎಆರ್ ತುಕಡಿ, ಇಬ್ಬರು ಡಿವೈಸ್ಪಿ, ನಾಲ್ವರು ಸಿಪಿಐ, 8 ಪಿಎಸ್​ಐ, 16 ಎಎಸ್​ಐ, 52 ಮುಖ್ಯ ಪೇದೆಗಳು ಕಾವಲು ಕಾಯಲಿದ್ದಾರೆ.

ಇಂಜಿನಿಯರಿಂಗ್ ಕಾಲೇಜ್ ಕಟ್ಟಡದ ಎಲ್ಲ ದಿಕ್ಕುಗಳಲ್ಲಿ ಬಿಗಿಭದ್ರತೆ ಒದಗಿಸಲಾಗಿದೆ. ಒಂದು ಅಗ್ನಿಶಾಮಕ ವಾಹನದೊಂದಿಗೆ ಸಿಬ್ಬಂದಿಯೂ ಕಾರ್ಯನಿರತರಾಗಿದ್ದಾರೆ. ಸ್ಟ್ರಾಂಗ್ ರೂಂ ಒಳಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ಜಿಲ್ಲಾಧಿಕಾರಿ ಕೃಷ್ಣ ಬಾಜಪೈ, ಎಸ್​ಪಿ ಕೆ. ಪರಶುರಾಮ ಭದ್ರತಾ ವ್ಯವಸ್ಥೆಯ ಮೇಲೆ ನಿಗಾವಹಿಸಿದ್ದಾರೆ. 18 ಕಡೆಗಳಲ್ಲಿ ಸಿಸಿ ಕ್ಯಾಮರಾದ ವ್ಯವಸ್ಥೆ ಮಾಡಲಾಗಿದೆ.

ಪಕ್ಷಗಳ ಪ್ರತಿನಿಧಿಗಳಿಗೆ ವಸತಿಗೆ ವ್ಯವಸ್ಥೆ: ಇದೇ ಮೊದಲ ಬಾರಿಗೆ ಸ್ಟ್ರಾಂಗ್ ರೂಂ.ನ ಬಳಿಯಲ್ಲಿ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಪರ ಕಾರ್ಯಕರ್ತರಿಗೆ ಸ್ಟ್ರಾಂಗ್ ರೂಂನ ಭದ್ರತೆ ಪರಿಶೀಲನೆ ಹಾಗೂ ವಸತಿಗೆ ವ್ಯವಸ್ಥೆ ಮಾಡಲಾಗಿದೆ.

ದೇವಗಿರಿಯ ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್​ನಲ್ಲಿ ಸ್ಥಾಪಿಸಿರುವ ಸ್ಟ್ರಾಂಗ್ ರೂಂ.ಗೆ ವ್ಯಾಪಕ ಭದ್ರತೆ ಒದಗಿಸಲಾಗಿದ್ದು, ದಿನದ 24 ಗಂಟೆಯೂ ಸರದಿ ಪ್ರಕಾರ ಸಿಆರ್​ಪಿಎಫ್, ಕೆಸ್​ಆರ್​ಪಿ ಹಾಗೂ ಪೊಲೀಸ್ ಸಿಬ್ಬಂದಿ ಭದ್ರತೆ ನೀಡಲಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಯ ದೃಢೀಕರಣದೊಂದಿಗೆ ಆಯಾ ಪಕ್ಷದ ಕಾರ್ಯಕರ್ತರು ಸ್ಟ್ರಾಂಗ್ ರೂಂಗೆ ಒದಗಿಸಿರುವ ಭದ್ರತೆಯನ್ನು ನೋಡಬಹುದು. ಆಸಕ್ತಿ ಇದ್ದರೆ ಅಲ್ಲಿಯೇ ವಸತಿ ಮಾಡಲು ಅವಕಾಶವಿದೆ.
| ಕೆ. ಪರಶುರಾಮ, ಎಸ್​ಪಿ ಹಾವೇರಿ