Wednesday, 12th December 2018  

Vijayavani

Breaking News

ಸ್ಟಾರ್ಟಪ್ ಇಂಡಿಯಾಕ್ಕೆ ವರುಷ

Tuesday, 17.01.2017, 4:00 AM       No Comments

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಸ್ಟಾರ್ಟಪ್ ಇಂಡಿಯಾ-ಸ್ಟ್ಯಾಂಡಪ್ ಇಂಡಿಯಾ ಯೋಜನೆಗೆ ಭರ್ತಿ ಒಂದು ವರ್ಷ. ಕಳೆದ ವರ್ಷ ಜ.16ರಂದು ನವದೆಹಲಿಯ ವಿಜ್ಞಾನ ಭವನದ ಸಭಾಂಗಣದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಈ ಯೋಜನೆಯನ್ನು ಉದ್ಘಾಟಿಸಿದ್ದರು. ಐತಿಹಾಸಿಕ ಸ್ಟಾರ್ಟಪ್ ಇಂಡಿಯಾ ಆಕ್ಷನ್ ಪ್ಲ್ಯಾನ್ ಕೂಡ ಘೊಷಣೆಯಾಗಿತ್ತು. ವರ್ಷದ ಅವಧಿಯಲ್ಲಿ ಈ ಯೋಜನೆ ನಿರೀಕ್ಷಿತ ಪ್ರಗತಿ ದಾಖಲಿಸಿಲ್ಲ ಎನ್ನುವುದು ವಾಸ್ತವ. ಯೋಜನೆಯ ಮುಖ್ಯಾಂಶ ಹಾಗೂ ಮಿಶ್ರಸಾಧನೆಗೆ ಕಾರಣಗಳೇನು ಎಂಬುದರ ಅವಲೋಕನ ಇಲ್ಲಿದೆ.

 ರ್ಷದ ಹಿಂದೆ 10,000 ಕೋಟಿ ರೂಪಾಯಿ ಸಾಲ ನಿಧಿ ಹೊಂದಿದ ‘ಸ್ಟಾರ್ಟಪ್ ಇಂಡಿಯಾ-ಸ್ಟ್ಯಾಂಡಪ್ ಇಂಡಿಯಾ’ ಯೋಜನೆ ಘೊಷಣೆಯಾದ ಸಂದರ್ಭದಲ್ಲಿ ಕೈಗಾರಿಕೋದ್ಯಮ ರಂಗದಲ್ಲಿ ಒಂದಷ್ಟು ಸಂಚಲನ ಉಂಟಾಗಿತ್ತು. ಹಾಗೆಯೇ ಬಹಳಷ್ಟು ನಿರೀಕ್ಷೆಗಳೂ ಹುಟ್ಟಿಕೊಂಡಿದ್ದವು. ಇದಕ್ಕೆ ಕಾರಣಗಳೂ ಇಲ್ಲದಿಲ್ಲ. ಅದುವರೆಗೂ ಸ್ಟಾರ್ಟಪ್ ಎಂಬ ಪದಕ್ಕೆ ಒಂದು ವ್ಯಾಖ್ಯಾನ ಇರಲಿಲ್ಲವಾದರೂ, ಸ್ಟಾರ್ಟಪ್​ಗಳಿಗೆ ಸಂಬಂಧಿಸಿದ ಭಾರತವು ಜಗತ್ತಿನ ಗಮನವನ್ನು ತನ್ನೆಡೆ ಸೆಳೆಯಲಾರಂಭಿಸಿತ್ತು. ಭಾರಿ ಸಂಖ್ಯೆಯಲ್ಲಿ ನವೋದ್ಯಮಗಳು ಆರಂಭಗೊಳ್ಳುತ್ತಿದ್ದುದಷ್ಟೆ ಅಲ್ಲ, 2015ರಲ್ಲಿ ಭಾರತವು 4,200 ಸ್ಟಾರ್ಟಪ್​ಗಳನ್ನು ಹೊಂದುವ ಮೂಲಕ ಜಾಗತಿಕವಾಗಿ ಮೂರನೇ ಸ್ಥಾನದಲ್ಲಿತ್ತು. 2014ಕ್ಕೆ ಹೋಲಿಸಿದರೆ, 2015ರಲ್ಲಿ ಸ್ಟಾರ್ಟಪ್​ಗಳ ಸಂಖ್ಯೆ ಶೇಕಡ 40 ಏರಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ 2016ರಲ್ಲಿ ಇನ್ನೂ 1,200-1,500 ಸ್ಟಾರ್ಟಪ್​ಗಳು ಆರಂಭಗೊಂಡು ಅತಿಹೆಚ್ಚು ಸ್ಟಾರ್ಟಪ್​ಗಳನ್ನು ಹೊಂದಿದ ವಿಶ್ವದ ಎರಡನೇ ರಾಷ್ಟ್ರವಾಗಬಹುದು ಭಾರತ ಎಂಬ ನಿರೀಕ್ಷೆಯೂ ಇತ್ತು. ಆದಾಗ್ಯೂ, ಹೂಡಿಕೆದಾರರು ದೇಶೀಯ ಸ್ಟಾರ್ಟಪ್​ಗಳ ಮೇಲೆ ಭರವಸೆ ಕಳೆದುಕೊಳ್ಳುತ್ತಿರುವುದು ಕಂಡುಬಂದಿದೆ. ಕೆಲ ವೆಂಚರ್ ಕ್ಯಾಪಿಟಲ್ ಮತ್ತು ಈಕ್ಟಿಟಿ ಫಮರ್್​ಗಳು ಭಾರತದ ಸ್ಟಾರ್ಟಪ್​ಗಳ ಮೇಲಿನ ಹೂಡಿಕೆಯನ್ನು ಹಿಂಪಡೆದುಕೊಂಡಿರುವುದು ಈ ಮಾತಿಗೆ ಸಾಕ್ಷಿ.

ಹೂಡಿಕೆ ಕುಸಿತ

ಕೆಪಿಎಂಜಿ ಮತ್ತು ಸಿಬಿ ಇನ್​ಸೈಟ್ಸ್​ಗಳ ಜಂಟಿ ವರದಿ ಪ್ರಕಾರ, 2016ರ ಜನವರಿಯಿಂದ ಮಾರ್ಚ್​ವರೆಗಿನ ಮೂರು ತಿಂಗಳ ಅವಧಿಯಲ್ಲಿ ಭಾರತೀಯ ಸ್ಟಾರ್ಟಪ್​ಗಳ ಮೇಲೆ 1.15 ಬಿಲಿಯನ್ ಡಾಲರ್(7658 ಕೋಟಿ ರೂ.) ಹೂಡಿಕೆಯಾಗಿದೆ. ಆದರೆ 2015ರ ಡಿಸೆಂಬರ್​ವರೆಗಿನ ತ್ರೖೆಮಾಸಿಕ ಅವಧಿಯ ಹೂಡಿಕೆಗೆ ಹೋಲಿಸಿದರೆ ಸ್ಟಾರ್ಟಪ್​ಗಳಿಂದ ಶೇ.24ರಷ್ಟು ಹೂಡಿಕೆಯನ್ನು ಹಿಂಪಡೆದುಕೊಳ್ಳಲಾಗಿದೆ. ಸತತ ಎರಡನೇ ತ್ರೖೆಮಾಸಿಕ ಅವಧಿಯಲ್ಲಿ ಹೂಡಿಕೆ ಇಳಿಕೆಯಾಗಿದ್ದು, 2015ರ ಜುಲೈನಿಂದ ಸೆಪ್ಟೆಂಬರ್​ನ ಅವಧಿಯಲ್ಲಿ 2.58 ಬಿಲಿಯನ್ ಡಾಲರ್(17,178 ಕೋಟಿ ರೂ.)ನಷ್ಟಿದ್ದ ಹೂಡಿಕೆ ಅಕ್ಟೋಬರ್​ನಿಂದ ಡಿಸೆಂಬರ್​ನ ಅವಧಿಯಲ್ಲಿ 1.51 ಬಿಲಿಯನ್ ಡಾಲರ್ (10,054 ಕೋಟಿ ರೂ.)ಗೆ ಇಳಿಕೆಯಾಗುವ ಮೂಲಕ ಶೇ.48ರಷ್ಟು ಕುಸಿದಿತ್ತು.

ಕಾರಣವೇನು?

ಜಾಗತಿಕ ಮಾರುಕಟ್ಟೆಯಲ್ಲಿ 2015ರಲ್ಲಾದ ಏರಿಳಿತಗಳು, ಚೀನಾ ಷೇರುಪೇಟೆ ಕುಸಿತ ಹೂಡಿಕೆ ಹಿಂಪಡೆಯಲು ಕಾರಣವಾಗಿತ್ತು. ಇನ್ನೊಂದೆಡೆ ಸ್ಟಾರ್ಟಪ್ ಆರಂಭ ವಿಳಂಬವಾಗುತ್ತಿರುವ ಕಾರಣದಿಂದಾಗುವ ನಷ್ಟವೂ ಕೂಡ ಅನೇಕ ಸ್ಟಾರ್ಟಪ್​ಗಳು ಮುಚ್ಚುವುದಕ್ಕೆ ಕಾರಣವಾಗಿದೆ. ಬಹುತೇಕ ಭಾರತೀಯ ಸ್ಟಾರ್ಟಪ್​ಗಳು ನಷ್ಟದಲ್ಲೇ ನಡೆಯುತ್ತಿದ್ದು ಇದೇ ಕಾರಣದಿಂದ ಹೂಡಿಕೆದಾರರು ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ ಎಂಬುದು ತಜ್ಞರ ಅಭಿಪ್ರಾಯ.

ಹೀಗಿದೆ ಪರಿಸ್ಥಿತಿ…

ಸರ್ಕಾರದ ಸ್ಥಿತಿಗತಿ ವರದಿ ಪ್ರಕಾರ, ಕಳೆದ ಒಂದು ವರ್ಷದ ಅವಧಿಯಲ್ಲಿ ನವೋದ್ಯಮ ವಿಭಾಗದಲ್ಲಿ 1,368 ಅರ್ಜಿಗಳು ಬಂದಿದ್ದು, ಈ ಪೈಕಿ 502 ಅರ್ಜಿಗಳನ್ನಷ್ಟೇ ಕೈಗಾರಿಕಾ ನೀತಿ ಮತ್ತು ಉತ್ತೇಜನ ಇಲಾಖೆ ‘ನವೋದ್ಯಮ’ ವಿಭಾಗದ್ದು ಎಂದು ಪರಿಗಣಿಸಿದೆ. ಒಟ್ಟು ಸಲ್ಲಿಕೆಯಾದ ಅರ್ಜಿಗಳ ಪೈಕಿ 111 ಅರ್ಜಿಗಳಿಗಷ್ಟೇ ತೆರಿಗೆ ವಿನಾಯಿತಿ (2016ರ ಏ.1ರಿಂದೀಚಿಗಿನ) ಲಭ್ಯವಾಗಿದೆ. ಅಂತರ್ ಸಚಿವಾಲಯ ಮಂಡಳಿ ಕೇವಲ ಎಂಟು ಸ್ಟಾರ್ಟಪ್​ಗಳಿಗೆ ತೆರಿಗೆ ವಿನಾಯಿತಿ ಘೊಷಿಸಿದೆ.

ಟ್ರಾಕ್ಸನ್ ಟೆಕ್ನಾಲಜೀಸ್ ವರದಿ ಪ್ರಕಾರ, 2015ರಲ್ಲಿ ಶೇಕಡ 87ರಷ್ಟು ಹೂಡಿಕೆ ಸ್ಟಾರ್ಟಪ್​ಗಳಲ್ಲಾಗಿದ್ದರೆ, 2016ರಲ್ಲಿ ಈ ಪ್ರಮಾಣ ಶೇಕಡ 67ಕ್ಕೆ ಇಳಿಕೆಯಾಗಿದೆ. ಇಪ್ಪತ್ತು ಸ್ಟಾರ್ಟಪ್​ಗಳು ಆರಂಭದ ಎಂಟು ತಿಂಗಳೊಳಗೇ ಮುಚ್ಚಿ ಹೋಗಿವೆ. ಇದಕ್ಕೇನು ಕಾರಣ ಎಂಬುದನ್ನು ಪತ್ತೆ ಹಚ್ಚಿ ಉತ್ತೇಜನ ನೀಡಬೇಕಾದ್ದು ಸದ್ಯದ ಅನಿವಾರ್ಯತೆ ಎನ್ನುತ್ತಾರೆ ಮಾರುಕಟ್ಟೆ ತಜ್ಞರು.

ಸ್ಟಾರ್ಟಪ್​ಗಳ ಮುಚ್ಚುವಿಕೆ, ಅದರಿಂದಾಗಿ ಹೆಚ್ಚಾಗಬೇಕಾಗಿದ್ದ ನವೋದ್ಯಮಗಳ ಪ್ರಗತಿ ಕುಂಠಿತವಾಗಿರುವುದು ಶೋಚನೀಯ. ಸ್ಟಾರ್ಟಪ್ ಇಂಡಿಯಾ ಯೋಜನೆ ಘೊಷಿಸಿದ ನಂತರದಲ್ಲಿ ಇಂತಹ ಬೆಳವಣಿಗೆ ಆಗಿರುವುದರಿಂದ ಸರ್ಕಾರ ಈ ಬಗ್ಗೆ ಮುತುವರ್ಜಿ ವಹಿಸಬೇಕು. ಸ್ಟಾರ್ಟಪ್​ಗಳ ನೀತಿ, ನಿಯಮಗಳನ್ನು ಇನ್ನಷ್ಟು ಸರಳೀಕರಿಸಬೇಕು. ಅಷ್ಟೇ ಅಲ್ಲ, ತ್ವರಿತಗತಿಯಲ್ಲಿ ಸ್ಟಾರ್ಟಪ್ ಆರಂಭಿಸುವುದಕ್ಕೆ ಅವಶ್ಯ ಕ್ರಮಗಳನ್ನೂ ಕೈಗೊಂಡು, ಅವುಗಳಿಗೆ ಆರಂಭಿಕ ಮಾರ್ಗದರ್ಶನ ನೀಡುವ ವ್ಯವಸ್ಥೆಯೂ ಆಗಬೇಕು ಎನ್ನುತ್ತಾರೆ ನವೋದ್ಯಮ ಹೂಡಿಕೆ ತಜ್ಞರು.

ಬಜೆಟ್​ನಲ್ಲಿದೆ ಬಂಪರ್!

ಸ್ಟಾರ್ಟಪ್ ಇಂಡಿಯಾ ಯೋಜನೆಗೆ ಒಂದು ವರ್ಷವಾದ ಹಿನ್ನೆಲೆಯಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ವಾಣಿಜ್ಯ ಮತ್ತು ಕೈಗಾರಿಕಾ ಸಚಿವೆ ನಿರ್ಮಲಾ ಸೀತಾರಾಮನ್, ಫೆ.1ರಂದು ಮಂಡನೆಯಾಗುವ ಬಜೆಟ್​ನಲ್ಲಿ ಸ್ಟಾರ್ಟಪ್​ಗಳಿಗೆ ಹೆಚ್ಚುವರಿ ಪ್ರಯೋಜನಗಳನ್ನು ನಿರೀಕ್ಷಿಸಬಹುದು. ವಿತ್ತ ಸಚಿವಾಲಯವು ನವೋದ್ಯಮಿಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಈಗಿರುವ ತೆರಿಗೆ ವಿನಾಯಿತಿಯ ಅವಧಿಯನ್ನು ಮೂರು ವರ್ಷದಿಂದ ಏಳುವರ್ಷಕ್ಕೆ ಏರಿಸುವ ಬಗ್ಗೆ ಚಿಂತನೆ ನಡೆಸಿದೆ. ಇದಲ್ಲದೇ ಇನ್ನೂ ಹಲವು ಪ್ರಯೋಜನಗಳನ್ನು, ಉತ್ತೇಜಕ ಕ್ರಮಗಳನ್ನು ಸರ್ಕಾರ ತೆಗೆದುಕೊಳ್ಳಲಿದೆ ಎಂದು ತಿಳಿಸಿದರು. ಈ ಹೇಳಿಕೆ ಉದ್ಯಮವಲಯದಲ್ಲಿ ಹೊಸ ಆಶಾಭಾವನೆ ಮೂಡಿಸಿದೆ.

 

ಸರ್ಕಾರ ತೆಗೆದುಕೊಂಡ ಕ್ರಮ

* ಹೂಡಿಕೆ ಮೇಲೆ ವಿಧಿಸಲಾಗುತ್ತಿದ್ದ ಏಂಜೆಲ್ ತೆರಿಗೆ(ಷೇರು ಮಾರುಕಟ್ಟೆಯಲ್ಲಿ ನೋಂದಣಿಯಾಗದ ಸಂಸ್ಥೆಗಳು ಹೂಡಿಕೆಯಿಂದ ಗಳಿಸುವ ಆದಾಯದ ಮೇಲೆ ವಿಧಿಸುವ ತೆರಿಗೆ)ರದ್ದು

* ಮೊದಲ ಮೂರು ವರ್ಷಗಳ ಅವಧಿಯಲ್ಲಿ ಕಾರ್ವಿುಕ ಪರಾಮರ್ಶೆ ಇಲ್ಲ.

* ಸ್ಟಾರ್ಟಪ್ ಇಂಡಿಯಾ ಪೋರ್ಟಲ್, ಮೊಬೈಲ್ ಆಪ್ ಬಿಡುಗಡೆ

* ಕಾರ್ವಿುಕ ಮತ್ತು ಪರಿಸರ ಕಾನೂನುಗಳಿಗೆ ಅನುಗುಣವಾಗಿ ಸ್ಟಾರ್ಟಪ್​ಗೆ ಸ್ವಯಂ ಪ್ರಮಾಣಪತ್ರ ವ್ಯವಸ್ಥೆ

* ಅಟಲ್ ಇನೋವೇಶನ್ ಮಿಷನ್ ಅಡಿಯಲ್ಲಿ 500 ಪ್ರಮಾಣೀಕರಣ ಲ್ಯಾಬ್, ಇನ್​ಕ್ಯುಬೇಶನ್ ಕೇಂದ್ರ ಸ್ಥಾಪನೆ

* ಮುಂದಿನ 4 ವರ್ಷಗಳಲ್ಲಿ ಸ್ಟಾರ್ಟಪ್​ಗಳಿಗೆ ಕ್ರೆಡಿಟ್ ಗ್ಯಾರಂಟಿ ಯೋಜನೆ, ಪ್ರತಿ ವರ್ಷ 500 ಕೋಟಿ ರೂ. ಆರ್ಥಿಕ ನೆರವು

* ದೇಶ ಆಯ್ದ ನಗರಗಳಲ್ಲಿ ಸ್ಟಾರ್ಟಪ್ ಹಬ್ ನಿರ್ಮಾಣ

* ಸರಳ ಅರ್ಜಿಯ ಮೂಲಕ ನೋಂದಣಿಗೆ ಅವಕಾಶ

* ಸ್ಟಾರ್ಟಪ್​ಗಳ ಪೇಟೆಂಟ್ ಶುಲ್ಕದಲ್ಲಿ ಶೇ.80 ರಿಯಾಯಿತಿ

* ಪೇಟೆಂಟ್ ಅರ್ಜಿ ಸಲ್ಲಿಕೆ ಸರಳೀಕರಣ

* ಸ್ಟಾರ್ಟಪ್​ಗಳಿಗೆ 10 ಸಾವಿರ ಕೋಟಿ ರೂ. ಸಾಲ ನಿಧಿ

* 5 ಲಕ್ಷ ಶಾಲೆಗಳಲ್ಲಿ ಸಂಶೋಧನೆ ಉತ್ತೇಜನ ಕಾರ್ಯಕ್ರಮ

ಹೆಚ್ಚು ನವೋದ್ಯಮಗಳಿರುವ ನಗರ

* ಬೆಂಗಳೂರು

* ದಿಲ್ಲಿ

* ಮುಂಬೈ

* ಚೆನ್ನೈ

* ಹೈದರಾಬಾದ್

* ಅಹಮದಾಬಾದ್

Leave a Reply

Your email address will not be published. Required fields are marked *

Back To Top