Wednesday, 12th December 2018  

Vijayavani

ಮಧ್ಯಪ್ರದೇಶದಲ್ಲಿ ಸರ್ಕಾರ ರಚನೆ ಕಸರತ್ತು -ಕೈಗೆ ಬೆಂಬಲ ಘೋಷಿಸಿದ ಮಾಯಾವತಿ -ಶಾಸಕಾಂಗ ಪಕ್ಷದ ಸಭೆ ಕರೆದ ಕಾಂಗ್ರೆಸ್        ಪಾನ್ ಬ್ರೋಕರ್ ಡೀಲ್ ಪ್ರಕರಣದ ತನಿಖೆ ಚುರುಕು -ಸಹಕಾರ ಇಲಾಖೆಯಿಂದ ನೋಟಿಸ್ -ಇದು ದಿಗ್ವಿಜಯ ನ್ಯೂಸ್ ವರದಿ ಫಲಶ್ರುತಿ        ಋಣ ಸಂದಾಯಕ್ಕೆ ಮುಂದಾದ ರಾಮಲಿಂಗಾರೆಡ್ಡಿ -ಬಿಜೆಪಿ ಕಾರ್ಪೋರೇಟರ್ ಗೆ ಸ್ಥಾಯಿ ಸಮಿತಿ ಅಧ್ಯಕ್ಷ ಪಟ್ಟ -ಪುತ್ರಿ ಗೆಲುವಿಗೆ ಸಹಕರಿಸಿದ್ದಕ್ಕೆ ಗಿಫ್ಟ್        ಸರ್ಕಾರದ ವಿರುದ್ಧ ಇಂದು ಬರಾಸ್ತ್ರ -ಸಿಎಂಗೆ ಬಿಸಿ ಮುಟ್ಟಿಸಲು ಬಿಎಸ್‌ವೈ ರಣತಂತ್ರ -ಅತ್ತ ಭದ್ರತೆಗೆ ಬಂದ ಎಸ್ಪಿಗೆ ಕೈಕೊಟ್ಟ ಕಾರು        ಕಿಡ್ನಾಪರ್ಸ್ ಹಿಡಿಯಲು ಪ್ರೇಮಿಗಳ ವೇಷ -ಆಂಧ್ರಕ್ಕೆ ಆಗಿ ಹೋದ ಪೊಲೀಸರು -ಶಿವಾಜಿನಗರ ಠಾಣೆ ಪೊಲೀಸರಿಂದ ಕಿರಾತಕರಿಗೆ ಕೋಳ        ಮುಂಬೈನಲ್ಲಿಂದು ಅಂಬಾನಿ ಮಗಳ ಅದ್ಧೂರಿ ವಿವಾಹ -ಹಿಲರಿ ಕ್ಲಿಂಟನ್ ಸೇರಿ ಗಣ್ಯಾತಿಗಣ್ಯರು ಭಾಗಿ - ಸ್ಯಾಂಡಲ್‌ವುಡ್‌ನಲ್ಲಿ ದಿಗಂತ್, ಐಂದ್ರಿತಾ ಮದುವೆ ಸಂಭ್ರಮ       
Breaking News

ಸೌದಿಯ ಸುಲ್ತಾನ

Sunday, 12.11.2017, 3:02 AM       No Comments

| ಉಮೇಶ್​ಕುಮಾರ್ ಶಿಮ್ಲಡ್ಕ

ಈಗ್ಗೆ ಎಂಟು ದಿನಗಳ ಹಿಂದಿನ ಮಾತು. ನವೆಂಬರ್ 4. ಸೌದಿ ಅರೇಬಿಯಾದಲ್ಲಿ ಅತಿಶ್ರೀಮಂತ ರಾಜಕುಮಾರ ಅಲ್ ವಾಲೀದ್ ಬಿನ್ ತಲಾಲ್ ಸೇರಿ 11 ರಾಜಕುಮಾರರು, ಮಾಜಿ ಸಚಿವರನ್ನು ಭ್ರಷ್ಟಾಚಾರದ ಆರೋಪದ ಮೇಲೆ ಬಂಧಿಸಲಾಯಿತು. 2009ರಲ್ಲಿ ಜೆಡ್ಡಾ ಪ್ರವಾಹ ಪರಿಹಾರ ಕಾರ್ಯದಲ್ಲಿ ಇವರೆಲ್ಲ ಭ್ರಷ್ಟಾಚಾರ ನಡೆಸಿದ್ದರೆಂಬುದು ಆರೋಪ. ಯಾರಿಗೂ ಅಲ್ಲೇನಾಗುತ್ತಿದೆ ಎಂಬ ಸ್ಪಷ್ಟ ಅರಿವಿಲ್ಲ. ಕೆಲವರು ಈ ವಿದ್ಯಮಾನವನ್ನು ರಾಜಕೀಯ ಕ್ರಾಂತಿ ಎಂದರು, ಇನ್ನು ಕೆಲವರು ಇದನ್ನು ಪ್ರತಿಕ್ರಾಂತಿ ಎಂದರೆ, ಮತ್ತೆ ಕೆಲವರು ವ್ಯವಸ್ಥೆಯ ಶುದ್ಧೀಕರಣ ಎಂದು ವ್ಯಾಖ್ಯಾನಿಸಿದರು. ಬಂಧಿತರಲ್ಲಿ ರಾಜಕುಮಾರ ಅಲ್​ವಾಲೀದ್ ಬಿನ್ ತಲಾಲ್ ಯುವರಾಜ ಪಟ್ಟದ ಮೇಲೆ ಕಣ್ಣಿರಿಸಿದ್ದವರು ಅಲ್ಲದೆ, ರಾಜಕುಮಾರ ಮುತಾಯಿಬ್ ಬಿನ್ ಅಬ್ದುಲ್ಲಾಗೆ ಪ್ರತಿಸ್ಪರ್ಧಿಯಾಗಿದ್ದವರು. ಇವರೆಲ್ಲರ ನಡುವೆ ಪವರ್ ಪ್ಲೇ ರಾಜಕಾರಣ ಮಾಡಿದ್ದು ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್, ಸೌದಿ ಅರೇಬಿಯಾದ ದೊರೆ ಸಲ್ಮಾನ್(81)ರ ಪುತ್ರ. ಕಳೆದ ವಾರದ ದಿಢೀರ್ ರಾಜಕೀಯ ಬೆಳವಣಿಗೆಗೆ ಕಾರಣವಾಗಿದ್ದೂ ಇದೇ ಯುವರಾಜ ಮೊಹಮ್ಮದ್.

ವಯಸ್ಸು ಮೂವತ್ತೆರಡು. ‘ಎಂಬಿಎಸ್’ ಎಂದೇ ಪ್ರಸಿದ್ಧರು. ದೇಶದ ಉಪಪ್ರಧಾನಿಯ ಹೊಣೆಗಾರಿಕೆ ಜತೆಗೆ ರಕ್ಷಣಾ ಖಾತೆಯನ್ನೂ ನಿಭಾಯಿಸುತ್ತಿದ್ದಾರೆ. ಅಲ್ಲದೆ, ಆರ್ಥಿಕ ಮತ್ತು ಅಭಿವೃದ್ಧಿ ವ್ಯವಹಾರಗಳ ಕೌನ್ಸಿಲ್​ನ ಮುಖ್ಯಸ್ಥರೂ ಹೌದು. ಇದಕ್ಕೂ ಮುನ್ನ ಅವರು ಸೌದಿಯ ರಾಯಲ್ ಕೋರ್ಟ್​ನ ಮುಖ್ಯಸ್ಥರಾಗಿದ್ದರು. ಇಂಥ ಎಂಬಿಎಸ್ ಯುವರಾಜ ಪಟ್ಟಕ್ಕೇರಿದ ಸನ್ನಿವೇಶವೂ ನಾಟಕೀಯ ಬೆಳವಣಿಗೆಯದ್ದೇ ಆಗಿತ್ತು. ಸೌದಿ ಅರೇಬಿಯಾದಲ್ಲಿ ದಶಕಗಳಿಂದ ಆಳ್ವಿಕೆ ನಡೆಸುತ್ತಿರುವುದು ರಾಜಕುಟುಂಬವೇ. ಸೌದಿ ರಾಜ ಅಬ್ದೆಲ್ ಅಜೀಜ್​ನ ಪುತ್ರರು, ಅವರ ಮಕ್ಕಳು, ಮರಿಮಕ್ಕಳು ಸರ್ಕಾರದ ವಿವಿಧ ಹೊಣೆಗಾರಿಕೆಗಳನ್ನು ನಿಭಾಯಿಸುತ್ತಿದ್ದಾರೆ. 2015 ಜನವರಿ 23ರಂದು ಅಂದಿನ ದೊರೆ ಅಬ್ದುಲ್ಲಾ(90) ಅನಾರೋಗ್ಯ ಪೀಡಿತರಾಗಿ ಕೊನೆಯುಸಿರೆಳೆದರು. ಆಗ ರಾಜಪಟ್ಟಕ್ಕೇರಿದವರು ಸಲ್ಮಾನ್ ಬಿನ್ ಅಬ್ದುಲ್ ಅಜೀಜ್(79). ಸಲ್ಮಾನ್ ರಾಜಕೀಯ ಸುಧಾರಣೆ ಮತ್ತು ಸಾಮಾಜಿಕ ಬದಲಾವಣೆ ಬಗ್ಗೆ ಸಾಂಪ್ರದಾಯಿಕ ದೃಷ್ಟಿಕೋನ ಹೊಂದಿದವರು. 2015ರ ಜನವರಿ 30ರಂದು ಸಚಿವ ಸಂಪುಟ ಪುನಾರಚಿಸಿದ ಸಲ್ಮಾನ್, ಪುತ್ರ ಮೊಹಮ್ಮದ್ ಜತೆಗೂಡಿ ಸರ್ಕಾರಿ ಆಡಳಿತ ಯಂತ್ರವನ್ನು ಸರಿದಾರಿಗೆ ತರುವ ಕ್ರಮ ಕೈಗೊಂಡರು. ದೊರೆ ಅಬ್ದುಲ್ಲಾ ನಿಧನರಾದಾಗ 11 ಸಚಿವಾಲಯಗಳಿದ್ದವು. ಅವೆಲ್ಲವನ್ನೂ ರದ್ದುಗೊಳಿಸಿ, ಡೆಪ್ಯುಟಿ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ನಯೀಫ್ ನೇತೃತ್ವದಲ್ಲಿ ಕೌನ್ಸಿಲ್ ಆಫ್ ಪೊಲಿಟಿಕಲ್ ಆಂಡ್ ಸೆಕ್ಯುರಿಟಿ ಅಫೇರ್ಸ್ ಮತ್ತು ರಾಯಲ್ ಕೋರ್ಟ್ ಮುಖ್ಯಸ್ಥರಾಗಿದ್ದ ಮೊಹಮ್ಮದ್ ನೇತೃತ್ವದಲ್ಲಿ ಆರ್ಥಿಕ ಮತ್ತು ಅಭಿವೃದ್ಧಿ ವ್ಯವಹಾರಗಳ ಕೌನ್ಸಿಲ್ ರಚಿಸಿದರು. ಅದೇ ವರ್ಷ ಏಪ್ರಿಲ್​ನಲ್ಲಿ ಸೋದರ ಸಂಬಂಧಿ ಮುಹಮ್ಮದ್ ಬಿನ್ ನಯೀಫ್​ರನ್ನು ಹೊಸ ಯುವರಾಜನನ್ನಾಗಿ ಘೋಷಿಸಿದರು. ತನ್ನ ಪುತ್ರ ಮೊಹಮ್ಮದ್​ರನ್ನು ಡೆಪ್ಯುಟಿ ಕ್ರೌನ್ ಪ್ರಿನ್ಸ್ ಆಗಿ ನಿಯೋಜಿಸಿದರು. ಎಲ್ಲ ಅಧಿಕಾರಗಳೂ ಈ ಇಬ್ಬರ ನಡುವೆ ಹಂಚಲ್ಪಟ್ಟವು.

ಏತನ್ಮಧ್ಯೆ ಮಧ್ಯಪ್ರಾಚ್ಯದಲ್ಲಿ ನಾಟಕೀಯ ರಾಜಕೀಯ ಬೆಳವಣಿಗೆಗಳಾದವು. ಹಂತ ಹಂತವಾಗಿ ಸೌದಿಯಲ್ಲಿ ಬದಲಾವಣೆಗಳು ಕಾಣಿಸಿಕೊಂಡವು. ಇದರ ಬೆನ್ನಲ್ಲೆ, ಸೌದಿ ಅರೇಬಿಯಾದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆ ಅರಬ್ ರಾಷ್ಟ್ರಗಳನ್ನು ಅಲ್ಲೋಲಕಲ್ಲೋಲ ಮಾಡಲಿದೆ ಎಂದೂ ಕೆಲವರು ಎಚ್ಚರಿಸಿದ್ದರು. ವಿಶೇಷವಾಗಿ, ಯೆಮೆನ್​ನಲ್ಲಿನ ಅಂತರ್ಯುದ್ಧದ ವಿಚಾರದಲ್ಲಿ ಡೆಪ್ಯುಟಿ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ನಡೆ ಅಪಾಯಕಾರಿ ಎಂದು ವಿಶ್ಲೇಷಿಸಲಾಗಿತ್ತು. ಈ ವರದಿ ಬಹಿರಂಗವಾಗುತ್ತಲೇ, ದೊರೆ ಸಲ್ಮಾನ್ 2017ರ ಜೂನ್ 21ರಂದು ಮೊಹಮ್ಮದ್ ಬಿನ್ ನಯೀಫ್(58) ಅವರನ್ನು ಯುವರಾಜ ಪಟ್ಟದಿಂದ ಕಿತ್ತೊಗೆದು, ಪುತ್ರ ಎಂಬಿಎಸ್​ರನ್ನು ಯುವರಾಜನೆಂದು ಘೋಷಿಸಿದರು. ತಂದೆಯನ್ನೂ ಮೀರಿಸುವಂತೆ ಮಗನ ರಾಜಕೀಯ ಮಹತ್ವಾಕಾಂಕ್ಷೆ ವ್ಯಕ್ತವಾಗಿದೆ. ಇದರ ಪರಿಣಾಮವೇ, ದಾಯಾದಿಗಳನ್ನು ಮಟ್ಟಹಾಕಲು ಎಂಬಿಎಸ್ ಹೊಸದಾಗಿ ಭ್ರಷ್ಟಾಚಾರ ತಡೆ ಸಮಿತಿ ರಚಿಸಿದ್ದಲ್ಲದೆ, ರಾಜಕೀಯವಾಗಿ ತನಗೆ ಸವಾಲಾಗಬಲ್ಲ ರಾಜಕುಮಾರರನ್ನು ಜೈಲಿಗಟ್ಟಿದರು. ಈ ಸನ್ನಿವೇಶಗಳನ್ನು ವಿಶ್ಲೇಷಿಸಿರುವ ಅಂಕಣಕಾರ ಹುಸೇನ್ ಜಾವೇದ್, ‘ಯುವರಾಜ ಎಂಬಿಎಸ್’ ಎಲ್ಲ ರೀತಿಯಲ್ಲೂ ಇರಾಕ್​ನ ಸದ್ದಾಂ ಹುಸೇನ್​ರನ್ನು ಮೀರಿಸುವಂತಹ ಸರ್ವಾಧಿಕಾರಿಯಾಗಿ ಹೊರಹೊಮ್ಮುವುದು ಖಚಿತ. ಸದ್ದಾಂನಂತೆಯೇ ಎಂಬಿಎಸ್ ಕೂಡ ಇರಾನ್-ವಿರೋಧಿ ನೀತಿ ಹೊಂದಿದ್ದಾರೆ. ಯೆಮೆನ್ ಮತ್ತು ಸಿರಿಯಾ ವಿಚಾರದಲ್ಲಿ ರಾಜತಾಂತ್ರಿಕ ಮಟ್ಟದಲ್ಲಿ ಶಾಂತಿ, ಸೌಹಾರ್ದಯುತ ಪರಿಹಾರ ಕಂಡುಕೊಳ್ಳುವುದನ್ನು ಕಡೆಗಣಿಸಿದ್ದಾರೆ. ಇರಾನ್, ಯೆಮೆನ್, ಸಿರಿಯಾಗಳ ಆಂತರಿಕ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡುತ್ತ ಛಾಯಾಸಮರ ನಡೆಸುತ್ತಿದ್ದಾರೆ’ ಎಂದಿದ್ದಾರೆ.

ಎಂಬಿಎಸ್ ಬಗ್ಗೆ ಹೇಳುವುದಾದರೆ, ಜೆಡ್ಡಾದಲ್ಲಿ 1985 ಆಗಸ್ಟ್ 31ರಂದು ಜನನ. ದೊರೆ ಸಲ್ಮಾನ್​ನ ಮೂರನೇ ಪತ್ನಿಯ ಕೊನೆಯ ಪುತ್ರ. ಸಹೋದರ ತುರ್ಕಿ ಬಿನ್ ಸಲ್ಮಾನ್. ಎಂಬಿಎಸ್ ಕಿಂಗ್ ಸೌದ್ ಯೂನಿವರ್ಸಿಟಿಯಿಂದ ಕಾನೂನು ಪದವಿ ಪಡೆದಿದ್ದಾರೆ. ಖಾಸಗಿ ವಲಯದಲ್ಲಿ ಕೆಲವು ವರ್ಷ ಕಾಲ ಕೆಲಸ ಮಾಡಿದ ಅವರು ಬಳಿಕ, ತಂದೆಗೆ ಸಹಾಯಕನಾಗಿ ಸೌದಿ ಕ್ಯಾಬಿನೆಟ್​ನ ಎಕ್ಸ್​ಪರ್ಟ್ಸ್ ಕಮಿಷನ್​ನ ಕನ್ಸಲ್ಟಂಟ್ ಆಗಿದ್ದರು. 2009ರ ಡಿ.15ರಂದು ರಾಜಕೀಯ ಪ್ರವೇಶಿಸಿದ ಎಂಬಿಎಸ್ ಅಂದು ರಿಯಾದ್ ಪ್ರಾಂತ್ಯದ ಗವರ್ನರ್ ಆಗಿದ್ದ ಸಲ್ಮಾನ್​ರಿಗೆ ವಿಶೇಷ ಸಲಹೆಗಾರರಾಗಿ ನೇಮಕಗೊಂಡಿದ್ದರು. ಅಲ್ಲಿಂದಾಚೆಗೆ ಅವರು, ಆಡಳಿತ ವ್ಯವಸ್ಥೆಯಲ್ಲಿ ಹಂತ ಹಂತವಾಗಿ ಬೆಳೆಯುತ್ತ ಸಾಗಿದರು. 2011ರಲ್ಲಿ ಅಂದಿನ ಯುವರಾಜ ಸುಲ್ತಾನ್ ಬಿನ್ ಅಬ್ದುಲ್ ಅಜೀಜ್ ಮೃತಪಟ್ಟಾಗ, ಈಗಿನ ದೊರೆ ಸಲ್ಮಾನ್​ರಿಗೆ ಯುವರಾಜ ಪಟ್ಟ ಕಟ್ಟಲಾಗಿತ್ತು. ಆಗ ಎಂಬಿಎಸ್, ಸಲ್ಮಾನ್​ಗೆ ಖಾಸಗಿ ಸಲಹೆಗಾರರಾಗಿ ಕೆಲಸ ಮಾಡಿದ್ದರು.

ಮೊಹಮ್ಮದ್ ಬಿನ್ ಸಲ್ಮಾನ್ ದು ಐಷಾರಾಮಿ ಜೀವನ ಶೈಲಿ. ಪತ್ನಿ ಸಾರಾ ಬಿನ್ಟ ಮಶೂರ್ ಬಿನ್ ಅಬ್ದುಲ್ ಅಜೀಜ್ ಅಲ್ ಸೌದ್. ಜೂನ್ ತಿಂಗಳಲ್ಲಿ ಯುವರಾಜ ಪಟ್ಟಕ್ಕೇರಿದ ಎಂಬಿಎಸ್, ವಿಷನ್ 2030ಯನ್ನು ಈಗಾಗಲೇ ಪ್ರಕಟಿಸಿದ್ದು, ಆರ್ಥಿಕ ಸುಧಾರಣಾ ಕ್ರಮಗಳ ವಿವರವನ್ನು ದೇಶದ ಎದುರು ಇರಿಸಿದ್ದಾರೆ. 2030ರ ವೇಳೆಗೆ ದೇಶದ ಕಾರ್ವಿುಕ ಶಕ್ತಿಯಲ್ಲಿ ಶೇಕಡ 22ರಷ್ಟಿರುವ ಮಹಿಳಾ ಶಕ್ತಿಯನ್ನು ಶೇ.30ಕ್ಕೇರಿಸುವ ಭರವಸೆ ನೀಡಿದ್ದಾರೆ. ಅಲ್ಲದೆ, ಸಾಮಾಜಿಕ ಮತ್ತು ಸಾಂಸ್ಕೃತಿಕ ಬದಲಾವಣೆಗಳ ಮುನ್ನೋಟವನ್ನೂ ನೀಡಿದ್ದಾರೆ. ಮಹಿಳೆಯರಿಗೆ ಚಾಲನಾ ಪರವಾನಗಿ ನೀಡತೊಡಗಿರುವುದು ಇಂಥದ್ದೇ ಸುಧಾರಣಾ ಕ್ರಮಗಳ ಸಾಲಿನಲ್ಲೇ ಸೇರುತ್ತದೆ.

ಈ ಹಿಂದೆ ಯುವರಾಜ ಪಟ್ಟಕ್ಕೇರಿದ ಮೂವರು ರಾಜಕುಮಾರರನ್ನು ಗಮನಿಸಿದರೆ, ಅವರ ವಯಸ್ಸು ಆ ಸಂದರ್ಭದಲ್ಲಿ 57, 80, 79 ಈ ರೀತಿ ಇತ್ತು. ಆದರೆ, ಎಂಬಿಎಸ್ ವಯಸ್ಸು ಇನ್ನೂ 32. ಅವರು ಸುಧಾರಣಾವಾದಿ. ಸೌದಿಯ ಅಭಿವೃದ್ಧಿ ಯೋಜನೆ ಮತ್ತು ವಿಷನ್ 2030ರ ಹಿಂದೆ ಎಂಬಿಎಸ್ ಚಿಂತನೆ ಇದೆ. ಅಲ್ಲಿನ ರಾಜತಾಂತ್ರಿಕರ ವಲಯದಲ್ಲವರು ‘ಮಿಸ್ಟರ್ ಎವರಿಥಿಂಗ್’ ಎಂದೇ ಪ್ರಸಿದ್ಧರು. ಹೀಗಾಗಿ, ಅವರ ಮೇಲಿನ ನಿರೀಕ್ಷೆ ಒಂದೆಡೆಯಾದರೆ, ಚಿಕ್ಕವಯಸ್ಸಿನಲ್ಲೇ ಉನ್ನತ ಸ್ಥಾನಕ್ಕೇರಿದ ಕಾರಣ ಸರ್ವಾಧಿಕಾರಿಯಾಗಿಬಿಟ್ಟರೆ ಎಂಬ ಆತಂಕವೂ ಇದೆ.

Leave a Reply

Your email address will not be published. Required fields are marked *

Back To Top