ಸೌದಿಯಲ್ಲಿ ಬೀಸುತಿದೆ ಆಧುನಿಕತೆಯ ಗಾಳಿ

 | ಮುಜಫರ್​ ಹುಸೇನ್​

ಇಸ್ಲಾಂ ಸಂಪ್ರದಾಯವಾದಿ ರಾಷ್ಟ್ರಗಳ ಪೈಕಿ ಗುರುತಿಸಿಕೊಂಡಿದ್ದ ಸೌದಿ ಅರೇಬಿಯಾ ಇದೀಗ ಹಲವು ಹೊಸತುಗಳಿಗೆ ಸಾಕ್ಷಿಯಾಗುತ್ತಿದೆ. ರಾಜನಾಗಿ ಅಧಿಕಾರ ಸ್ವೀಕರಿಸಿರುವ ಮೊಹಮ್ಮದ್ ಬಿನ್ ಸಲ್ಮಾನ್ ಹಳೆಯ ನೀತಿಗಳನ್ನು ಬದಿಗೆ ಸರಿಸಿ ಹೊಸ ನಿಯಮಗಳನ್ನು ಜಾರಿಗೆ ತರುತ್ತಿದ್ದು, ಅಲ್ಲಿನ ಮಹಿಳೆಯರು ಕೂಡ ಸ್ವಾತಂತ್ರ್ಯದ ಅನುಭವ ಪಡೆಯುವಂತಾಗಿದೆ. 

ಸೌದಿ ಅರೇಬಿಯಾದ ಅಧಿಕಾರ ಚುಕ್ಕಾಣಿ ತನ್ನ ಕೈಗೆ ತೆಗೆದುಕೊಂಡಿರುವ 32 ವರ್ಷದ ಮಹಮ್ಮದ್ ಬಿನ್ ಸಲ್ಮಾನ್​ರ ಆಡಳಿತ ಸೌದಿಯಲ್ಲಿ ಹೊಸತನದ ಗಾಳಿ ಬೀಸುವಂತೆ ಮಾಡಿದೆ. ಇಸ್ಲಾಮಿ ರಾಷ್ಟ್ರವೆಂದು ಗುರುತಿಸಿಕೊಂಡಿದ್ದ ಸೌದಿ ಅರೇಬಿಯಾ ಇಸ್ಲಾಮಿ ದಂಡಸಂಹಿತೆಯಿಂದ ದೂರ ಸರಿದು ಆಧುನಿಕ ಕಾನೂನುಗಳತ್ತ ಹೊರಳುತ್ತಿದೆ.

ಕೆಲ ತಿಂಗಳ ಹಿಂದಷ್ಟೇ ರಿಯಾದ್ ಅಥವಾ ಮಕ್ಕಾ ಮದೀನಾದ ರಸ್ತೆಗಳಲ್ಲಿ ಮಹಿಳೆಯರು ಬುರ್ಖಾ ಧರಿಸಿಕೊಂಡು ಮತ್ತು ಪುರುಷರು ದೇವರ ಧ್ಯಾನ ಮಾಡುತ್ತ ನಿಂತಿರುವ ಮೈಲುಗಟ್ಟಲೇ ಉದ್ದದ ಸಾಲುಗಳನ್ನು ನೋಡಬಹುದಾಗಿತ್ತು. ಆದರೆ ಈ ಬಾರಿ ಮೆಕ್ಕಾ ಮದೀನಾದ ಯಾತ್ರೆ ನಡೆಸುವವರು ಮಹಿಳೆಯರು ಬುರ್ಖಾ ಧರಿಸದಿರುವುದನ್ನು ಕಾಣಬಹುದು ಅಷ್ಟೇ ಏಕೆ ಮಹಿಳೆಯರು ಆಧುನಿಕ ವೇಷಭೂಷಣಗಳಲ್ಲಿ ಕಂಡುಬಂದರೂ ಅಚ್ಚರಿ ಪಡಬೇಕಾಗಿಲ್ಲ. ಆದರೆ ಇಂತಹ ಅಭೂತಪೂರ್ವ ಬದಲಾವಣೆಯೊಂದು ಹೇಗಾಯಿತು ಎಂಬ ಪ್ರಶ್ನೆ ಸೌದಿಯ ಮಹಿಳೆಯರಿಗೂ ಕಾಡುತ್ತಿದೆ.

ಹೊಸ ಕಾನೂನು ಸಂಹಿತೆ: ಈಗ ಅಲ್ಲಿ ಅಪರಾಧಿಗಳಿಗೆ ಕಲ್ಲಿನಿಂದ ಹೊಡೆಯುವ, ಛಡಿಯೇಟು ನೀಡುವ ಸಂಪ್ರದಾಯವಿಲ್ಲ. ಇತ್ತೀಚಿನವರೆಗೂ ಇಸ್ಲಾಂ ದಂಡ ಸಂಹಿತೆಯನ್ವಯ ಶಿಕ್ಷೆ ವಿಧಿಸಲಾಗುತ್ತಿದ್ದ ರಾಷ್ಟ್ರದಲ್ಲಿ ಸುಧಾರಿತ ಕಾನೂನನ್ನು ಹಂತಹಂತವಾಗಿ ಜಾರಿ ಮಾಡಲಾಗುತ್ತಿದ್ದು ಅದರನ್ವಯ ದಂಡ ವಿಧಿಸಲಾಗುತ್ತಿದೆ. ಈ ಎಲ್ಲ ಬದಲಾವಣೆಗಳ ಶ್ರೇಯಸ್ಸು ಸಲ್ಲುವುದು ಸೌದಿಯ ನೂತನ ದೊರೆ ಮಹಮ್ಮದ್ ಬಿನ್ ಸಲ್ಮಾನ್​ಗೆ ಎಂಬುದು ನಿರ್ವಿವಾದ. ಸೌದಿ ಯಾವಾಗ ಈಗಿನ ರಾಜ ಮನೆತನದ ಆಡಳಿತದಡಿ ಬಂದಿತ್ತೋ ಅಂದಿನಿಂದಲೂ ಇಸ್ಲಾಂನಲ್ಲಿ ಹೇಳಿರುವ ಕಾನೂನು ಆಧರಿಸಿಯೇ ದಂಡ ವಿಧಿಸಲಾಗುತ್ತಿತ್ತು. ಕಳ್ಳತನ ಮಾಡುವವರ ಕೈ ಕಡಿಯುವುದು, ಹತ್ಯೆ ಮಾಡಿದವರನ್ನು ಸಾರ್ವಜನಿಕವಾಗಿ ಶಿರಚ್ಛೇದ ಮಾಡುವುದು ಅಲ್ಲದೆ ಇಸ್ಲಾಂನಲ್ಲಿ ‘ಹರಾಂ’ ಎಂದು ಘೋಷಿಸಿರುವ ವಸ್ತುಗಳ ಸೇವನೆ ಮತ್ತು ಕಳ್ಳತನ ಮತ್ತಿತರ ಅಪರಾಧಗಳಿಗೆ ಛಡಿಯೇಟು, ಕಲ್ಲೇಟಿನ ಶಿಕ್ಷೆ ವಿಧಿಸಲಾಗುತ್ತಿತ್ತು. ಆದರೆ ಇದೀಗ ಈ ಎಲ್ಲ ನಿಯಮಗಳನ್ನು ಬದಿಗೊತ್ತಿ ಆಧುನಿಕ ದಂಡ ಸಂಹಿತೆ ಜಾರಿಗೆ ತರಲು ಆದೇಶ ಹೊರಡಿಸಲಾಗಿದೆ. ಅಲ್ಲೀಗ ಸರ್ಕಾರದ ಮೂಲಕವೇ ಆಧುನಿಕ ಕಾನೂನಿಗೆ ಮಾನ್ಯತೆ ನೀಡಲಾಗಿದೆ. ಅಚ್ಚರಿಯ ವಿಚಾರವೆಂದರೆ, ಕಳೆದ ಕೆಲ ತಿಂಗಳೀಚೆಗೆ ಸೌದಿಯ ಭ್ರಷ್ಟ ರಾಜಕುಮಾರರನ್ನು ಬಂಧಿಯನ್ನಾಗಿ ಮಾಡಿ, ಅವರ ಬ್ಯಾಂಕ್ ಖಾತೆಗಳನ್ನೂ ಜಪ್ತಿ ಮಾಡಲಾಗಿದೆ.

ಮತ್ತೊಂದು ಕುತೂಹಲಕರ ವಿಚಾರವೆಂದರೆ ಕಾನೂನು ಪದವಿ ಪಡೆದಾತ ಇದೇ ಮೊದಲ ಬಾರಿ ಸೌದಿಯ ದೊರೆಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಈ ಹಿಂದೆಯೆಲ್ಲ ಇಲ್ಲಿನ ರಾಜಕುಮಾರರ ಡೇರೆಯಲ್ಲಿ ಹಲವು ಪತ್ನಿಯರು, ದಾಸಿಯರು ಇರುತ್ತಿದ್ದರು. ಆದರೆ ಮಹಮ್ಮದ್ ಬಿನ್ ಸಲ್ಮಾನ್​ಗೆ ಏಕೈಕ ಪತ್ನಿ ಇದ್ದಾರೆ. ಸಲ್ಮಾನ್​ರ ಪ್ರಮುಖ ಉದ್ದೇಶ-ಇಸ್ಲಾಂನಲ್ಲಿರುವ ಕಠಿಣ ನೀತಿಗಳಿಂದ ಸೌದಿಯನ್ನು ಮುಕ್ತಗೊಳಿಸುವುದಾಗಿದೆ. ಸೌದಿಯ ಆದಾಯದ ಲಾಭ ಬಡವರಿಗೆ ಹಂಚಿಕೆಯಾಗಬೇಕೆಂಬುದು ಅವರ ಪ್ರಥಮ ಲಕ್ಷ್ಯವಾಗಿದೆ. ಒಟ್ಟಿನಲ್ಲಿ ಹೇಳುವುದಾದರೆ ಸೌದಿಯ ರಾಜಮನೆತನ ಆಧುನಿಕ ಜಗತ್ತಿನ ಕಾಯ್ದೆ ಕಾನೂನುಗಳನ್ನು ಜಾರಿಗೆ ತಂದು ಆಡಳಿತ ನಡೆಸಲಿದೆ. ಈ ಪರಿವರ್ತನೆಯನ್ನು ಯಾವ ರೀತಿಯಲ್ಲಿ ಸ್ವೀಕರಿಸಲಾಗುತ್ತದೆ ಎಂಬ ಬಗ್ಗೆ ಈಗಲೇ ಏನೂ ಹೇಳಲಾಗದು. ಏಕೆಂದರೆ ಸೌದಿಯಲ್ಲಿ ಪ್ರಸಕ್ತ ಯಾವುದೇ ಸಂವಿಧಾನವಾಗಲೀ ಸಂವಿಧಾನದ ಪ್ರಕಾರದ ಸರ್ಕಾರವಾಗಲೀ ಆಡಳಿತದಲ್ಲಿ ಇಲ್ಲ. ಆದರೆ ಸೌದಿ ಜನತೆ ಮನಸ್ಸಿನಲ್ಲಿ ರಾಜನ ಬಗ್ಗೆ ಒಂದೇ ತೆರನಾದ ಅಭಿಪ್ರಾಯಗಳಿಲ್ಲ. ಸಲ್ಮಾನ್​ರನ್ನು ಟೀಕಿಸಿದರೆ ಇನ್ನೂ ಕೆಲವರು ‘ಕನಸು ಕಾಣುವ ರಾಜಕುಮಾರ’ ಎಂದು ಕರೆಯುತ್ತಿದ್ದಾರೆ. ಭವಿಷ್ಯದಲ್ಲಿ ಏನಾಗಲಿದೆ ಇದನ್ನು ಸಮಯವೇ ನಿರ್ಧರಿಸಬೇಕು. ಆದರೆ ಸಲ್ಮಾನ್​ರ ನಡೆಯತ್ತ ಜನರು ಆಸೆ ತುಂಬಿದ ನೋಟ ನೆಟ್ಟಿರುವುದಂತೂ ಹೌದು.

ಅಂತಾರಾಷ್ಟ್ರೀಯ ಮಾಧ್ಯಮಗಳ ಗಮನ: ಸೌದಿಯಲ್ಲಾಗುತ್ತಿರುವ ಬದಲಾವಣೆಗಳ ಬಗ್ಗೆ ಇತ್ತೀಚೆಗೆ ‘ನ್ಯೂಯಾರ್ಕ್ ಟೈಮ್್ಸ’ನಲ್ಲಿ ವಿಸõತ ವರದಿಯೊಂದು ಪ್ರಕಟವಾಗಿತ್ತು. ಅದರಲ್ಲಿರುವಂತೆ ಮಹಮ್ಮದ್ ಬಿನ್ ಸಲ್ಮಾನ್ ಹೊಸದೇನನ್ನೋ ಮಾಡುತ್ತಿಲ್ಲ. ಕುರಾನ್ ಮತ್ತು ಹಾದಿಸ್​ನಲ್ಲಿರುವ ಇಸ್ಲಾಮಿ ಫಿಕಾಹ್​ಗೆ ನೈತಿಕ ಕಾನೂನಿನ ರೂಪ ನೀಡುತ್ತಿದ್ದಾರೆ. ರಾಜಕುಮಾರ ಮಹಮ್ಮದ್ ಬಿನ್ ಸಲ್ಮಾನ್ ಬಳಿ ಕಾನೂನಿನ ಪದವಿ ಇದೆ. ಜತೆಗೆ ಇಸ್ಲಾಂ ಕಾನೂನಿನ ಬಗೆಗೂ ಅವರಿಗೆ ಜ್ಞಾನವಿದೆ. ಹೀಗಾಗಿ ಅವರಿಗೆ ಯಾರೂ ಮೋಸ ಮಾಡಲು ಸಾಧ್ಯವಿಲ್ಲ. ಮತ್ತು ಶಾಸನ-ಪ್ರಶಾಸನದಲ್ಲಿ ಯಾವುದೇ ಕಣ್ಣಾಮುಚ್ಚಾಲೆ ನಡೆಸಲು ಸಾಧ್ಯವಿಲ್ಲ.

ಈ ಎಲ್ಲ ಬೆಳವಣಿಗೆಗಳೂ ಇಸ್ಲಾಂ ಜಗತ್ತಿನಲ್ಲಿ ಸಂಚಲನವನ್ನೇ ಮೂಡಿಸಿವೆ. ಸೌದಿ ಅರೇಬಿಯಾದ ಬದಲಾವಣೆಗಳಿಗೆ ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳಲ್ಲಿ ಭಾರಿ ಪ್ರಚಾರ ಸಿಗುತ್ತಿದೆ. ಅಂತಾರಾಷ್ಟ್ರೀಯ ತಜ್ಞರು ಅಭಿಪ್ರಾಯಪಟ್ಟಿರುವ ಪ್ರಕಾರ, ‘ಸಾಹಸಿ ರಾಜಕುಮಾರ ಎಲ್ಲ ರೀತಿಯ ಆಡಂಬರಗಳಿಗೆ ತಿಲಾಂಜಲಿ ಇಟ್ಟು ಮೊದಲ ಬಾರಿ ನೈಜ ಸುಧಾರಳೆಗಳತ್ತ ಹೊರಳಿದ್ದಾರೆ. ಇದರ ಪ್ರಾಮುಖ್ಯವನ್ನು ಜನರೆದುರು ಪ್ರಸ್ತುಪಡಿಸಲು ನಿರ್ಧರಿಸಿದ್ದಾರೆ.ಇದು ಆರಂಭವಷ್ಟೇ. ಸಲ್ಮಾನ್​ಗೆ ಸೌದಿ ಸಾಮಾನ್ಯ ಜನರ ಬೆಂಬಲ ದೊರೆತರೆ ಆ ರಾಷ್ಟ್ರ ಮಹತ್ತರ ಸಾಮಾಜಿಕ ಸುಧಾರಣೆಗಳಿಗೆ ಸಾಕ್ಷಿಯಾಗಲಿದೆ. ಮಹಿಳೆಯರೂ ನೆಮ್ಮದಿಯ ಬದುಕು ಕಂಡುಕೊಳ್ಳಲಿದ್ದಾರೆ’.

ಮಹಿಳೆಯರ ಸ್ಥಿತಿ: ಸೌದಿ ಅರೇಬಿಯಾ ಸೇರಿದಂತೆ ಇಸ್ಲಾಂ ರಾಷ್ಟ್ರಗಳಲ್ಲಿ ಮಹಿಳೆಯರ ಸ್ಥಿತಿ, ಅವರು ಸಮಾನತೆಗಾಗಿ ನಡೆಸುತ್ತಿರುವ ಹೋರಾಟ ಎಲ್ಲವನ್ನೂ ಇದೇ ಅಂಕಣದಲ್ಲಿ ಈ ಹಿಂದೆ ಉಲ್ಲೇಖಿಸಿದ್ದೇನೆ. ವಿಪರ್ಯಾಸವೆಂದರೆ, ಇಂದಿನ ಆಧುನಿಕ ಜಗತ್ತಿನಲ್ಲೂ ಮುಸ್ಲಿಂ ಮಹಿಳೆಯರ ಸ್ಥಿತಿ ಶೋಚನೀಯವಾಗಿದೆ. ಸಣ್ಣ ಸಣ್ಣ ವಿಚಾರಗಳನ್ನು ಮಹಿಳೆಯರ ಮೇಲೆ ದರ್ಪ ತೋರಿಸಲು ಬಳಸಿಕೊಳ್ಳಲಾಗುತ್ತದೆ. ಉದಾಹರಣೆಗೆ, ಸೌದಿಯಲ್ಲಿ ಮಹಿಳೆಯರು ದಾಸ್ತಾನೆ ಎಂಬ ಹೆಸರಿನಿಂದ ಕರೆಯಲ್ಪಡುವ ಕೈ ಗವಸುಗಳನ್ನು ಧರಿಸಲೇ ಬೇಕು. ಸಾಮಾನ್ಯವಾಗಿ ಚಳಿಯ ವಾತಾವರಣದಿಂದ ರಕ್ಷಿಸಿಕೊಳ್ಳುವ ಸಲುವಾಗಿ ಕೈ ಗವಸುಗಳನ್ನು ಧರಿಸುತ್ತಾರೆ. ಆದರೆ ಸೌದಿಯಲ್ಲಿ ಕೈಗವಸುಗಳನ್ನು ಪರ್ದಾದ ಅಂಗವೆಂದು ಪರಿಗಣಿಸುತ್ತಾರೆ. ಯಾವರೀತಿಯಲ್ಲಿ ಮಹಿಳೆಯರು ತಮ್ಮ ದೇಹ ಮತ್ತು ಮುಖವನ್ನು ಮುಚ್ಚಿಡಲು ಬುರ್ಖಾದ ಬಳಕೆ ಮಾಡುತ್ತಾರೆಯೋ ಹಾಗೆಯೇ ಹಸ್ತವನ್ನು ಮುಚ್ಚಲು ಕೈ ಗವಸುಗಳನ್ನು ಬಳಸಬೇಕೆಂಬುದು ಸೌದಿಯ ನೀತಿ. ಇದನ್ನು ಅತಿ ಕಠೋರ ರೀತಿಯಲ್ಲಿ ಪಾಲಿಸಲಾಗುತ್ತದೆ. ಒಂದು ವೇಳೆ ಮಹಿಳೆಯ ಹಸ್ತ ಕಾಣಿಸಿಕೊಂಡಿತ್ತೆಂದರೆ ಅದನ್ನು ಪರ್ದಾಗೆ ಮಾಡಿದ ಅವಮಾನ ಎಂದು ಪರಿಗಣಿಸಲಾಗುತ್ತದೆ. ಇದಕ್ಕಾಗಿ ಮಹಿಳೆಯರನ್ನು ದಂಡಿಸುವುದು ಇಲ್ಲಿ ಸಾಮಾನ್ಯ ವಿಚಾರ. ಆದರೆ ಈ ಸಲ್ಮಾನ್ ಸುಧಾರಣೆಯ ಭಾಗವಾಗಿ ಕೈಗವಸುಗಳನ್ನು ಇಸ್ಲಾಮಿ ಡ್ರೆಸ್​ಕೋಡ್​ನಿಂದ ಹೊರಗಿರಿಸಿದ್ದಾರೆ. ಈಗ ಸೌದಿಯ ಮಹಿಳೆಯರು ಕೈಗವಸುಗಳನ್ನು ಧರಿಸದೆಯೇ ಇರಬಹುದಾಗಿದೆ. ಸೌದಿಯ ನಿರಂಕುಶ ಪೊಲೀಸರ ಅಧಿಕಾರದಿಂದ ಇದನ್ನು ಹೊರಗುಳಿಸಿ ಮಹಮ್ಮದ್ ಬಿನ್ ಸಲ್ಮಾನ್ ಮಹಿಳೆಯರು ಸಮಾಧಾನದ ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ. ಈಗ ಅಲ್ಲಿನ ಪೊಲೀಸರು ಕೈಗವಸು ಧರಿಸದಿರುವ ಸಂಬಂಧ ಯಾವುದೇ ವಿಚಾರಣೆ ನಡೆಸಲು ಅವಕಾಶವಿಲ್ಲ.

ಕಾರ್ ಕಾರುಬಾರು: ಸೌದಿ ಅರೇಬಿಯಾದ ರಸ್ತೆಗಳಲ್ಲೀಗ ವಿದೇಶಿ ಕಾರುಗಳು ಆವರಿಸಿಕೊಳ್ಳುತ್ತಿವೆ. ಆದರೆ ಇಲ್ಲಿಯವರೆಗೂ ಕಾರಿನ ಚಾಲಕ ಸ್ಥಾನದಲ್ಲಿ ಪುರುಷರಿಗೆ ಮಾತ್ರ ಅವಕಾಶವಿರುತ್ತಿತ್ತು. ಆದರೆ ನೂತನ ಆದೇಶದಂತೆ ಮಹಿಳೆಯರು ಕೂಡ ಕಾರು ಚಲಾಯಿಸಬಹುದಾಗಿದೆ. ಈ ಆದೇಶ ಅಲ್ಲಿನ ಮಹಿಳೆಯರ ಪಾಲಿಗೆ ಮಹತ್ವದ್ದು. ರಾಜಕುಮಾರನ ಕಡೆಯಿಂದ ಅಲ್ಲಿನ ಮಹಿಳೆಯರಿಗೆ ಸಿಕ್ಕ ಬಹುದೊಡ್ಡ ಉಡುಗೊರೆಯಿದು. ಹೀಗಾಗಿ ಸೌದಿಯ ಮಹಿಳೆಯರು ನೂತನ ರಾಜನ ಆಡಳಿತಕ್ಕೆ ಭಾರಿ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಕಳೆದ ಜನವರಿ 1ರಿಂದ ಈ ಅಧಿಕಾರ ನೀಡಲಾಗಿದೆ. ಕಳೆದ ಫೆಬ್ರವರಿಯಲ್ಲಿ ಜಿದ್ದಾದಲ್ಲಿ ಕಾರ್ವಿುಕ ಸಮ್ಮೇಳನ ನಡೆಯಿತು. ಇದನ್ನು ಇಸ್ಲಾಂ ವಿರೋಧಿ ಎಂದೇ ಪರಿಗಣಿಸಲಾಗಿತ್ತು. ಅದರ ಮೇಲೆ ವಿಧಿಸಲಾಗಿದ್ದ ನಿರ್ಬಂಧವನ್ನೂ ತೆಗೆಯಲಾಗಿದೆ.

ಇದೀಗ ಸೌದಿ ಮಹಿಳೆಯರು ಅಲ್ಲಿನ ಸರ್ಕಾರದ ಸೇವೆಯಲ್ಲಿ ಕೈ ಜೋಡಿಸಲು ಅವಕಾಶವಿದೆ. ಇಲ್ಲಿಯವರೆಗೆ ಮಹಿಳೆಯರು ಕೆಲಸ ನಿರ್ವಹಿಸುವಂತಿರಲಿಲ್ಲ. ಒಂದು ವೇಳೆ ಸರ್ಕಾರದ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಾರೆ ಎಂದಿದ್ದರೂ ಮನೆಯಲ್ಲಿರುವ ಪುರುಷರಿಂದ ಅನುಮತಿ ಪಡೆದುಕೊಳ್ಳುವುದು ಅನಿವಾರ್ಯವಾಗಿತ್ತು. ಆದರೆ ಈಗ ಯಾವ ರೀತಿಯ ನಿರ್ಬಂಧಗಳಿಲ್ಲ.

ಸೌದಿಯಲ್ಲಿ ಸಿನಿ ಉತ್ಸವ ನಡೆಸುವುದಕ್ಕೂ ಅವಕಾಶವಿದೆ. ರಿಯಾದ್ ಮತ್ತು ಜಿದ್ದಾದಲ್ಲಿ ಕಾಮಿಡಿ ಫೆಸ್ಟಿವಲ್ ಆಯೋಜಿಸಲಾಗಿದೆ. 2017ರಿಂದ ಮಹಿಳೆಯರಿಗೆ ಕ್ರೀಡಾಂಗಣಕ್ಕೆ ತೆರಳುವುದಕ್ಕೂ ಅವಕಾಶ ಕೊಡಲಾಗಿದೆ. ಸೌದಿಯಲ್ಲೀಗ ಮನೆ ಮನೆಯಲ್ಲೂ ಇಂಟರ್ನೆಟ್ ಸೌಲಭ್ಯ ಪಡೆಯಲು ಅವಕಾಶವಿದೆ. 19,200 ಕೋಟಿ ರೂಪಾಯಿ ಮೌಲ್ಯದಲ್ಲಿ ಮನೆ-ಮನೆಗೂ ಇಂಟರ್ನೆಟ್ ಸೇವೆ ಒದಗಿಸುವಂತೆ ಮಾಡಲು ನಿರ್ಧರಿಸಲಾಗಿದೆ. ಇಲ್ಲೀಗ ಸಂಗೀತವೂ ಊರ್ಜಿತವೇ. ಮಹಿಳೆಯರು ಮತ್ತು ಪುರುಷರು ಸಂಗೀತ ತರಬೇತಿ ಪಡೆದುಕೊಳ್ಳಬಹುದಾಗಿದೆ. ಮಹಿಳೆಯರನ್ನೂ ನ್ಯಾಯಾಧೀಶರ ಹುದ್ದೆಗೆ ನಿಯುಕ್ತಿಗೊಳಿಸಲು ಅವಕಾಶವಿದೆ. ಅಂತೂ ಸೌದಿಯಲ್ಲಿ ಹೊಸತನದ ಬೆಳಕು ಹರಿಯುತ್ತಿದೆ. ಇಸ್ಲಾಂ ಹೆಸರಿನಲ್ಲಿ ವಿಧಿಸಿದ್ದ ನಿರ್ಬಂಧಗಳ ಪರದೆ ಸರಿಯುತ್ತಿದೆ ಎಂಬುದು ಸಮಾಧಾನಕರ ಸಂಗತಿ.

(ಲೇಖಕರು ರಾಷ್ಟ್ರೀಯ ಉರ್ದು ವಿಕಾಸ ಪರಿಷದ್​ನ ಉಪಾಧ್ಯಕ್ಷರು ಮಧ್ಯಪ್ರಾಚ್ಯ, ಪಾಕಿಸ್ತಾನ ವಿದ್ಯಮಾನಗಳ ನುರಿತ ವಿಶ್ಲೇಷಕರು, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಖ್ಯಾತ ಬರಹಗಾರರು)

Leave a Reply

Your email address will not be published. Required fields are marked *