ಬೀರೂರು: ಸರ್ಕಾರ ಜಾರಿಗೊಳಿಸಿರುವ ಸೌರಘರ್, ಕುಸುಮ್-ಬಿ ಹಾಗೂ ಕುಸುಮ್-ಸಿ ಎಂಬ ನೂತನ ಯೋಜನೆಗಳನ್ನು ರೈತರು ಬಳಸಿಕೊಳ್ಳಬೇಕು ಎಂದು ಮೆಸ್ಕಾಂ ಇಇ ಎಂ.ಎಚ್.ಲಿಂಗರಾಜ್ ತಿಳಿಸಿದರು.
ಮೆಸ್ಕಾಂ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಮಾತನಾಡಿ, ಸೌರಘರ್‌ನಲ್ಲಿ ಗೃಹ ಬಳಕೆ ವಿದ್ಯುತ್ ಉತ್ಪಾದಿಸಲು ಮನೆಗಳ ಆರ್‌ಸಿಸಿ ಮೇಲೆ ಘಟಕ ಸ್ಥಾಪಿಸುವುದು, ರೈತರು ಕೃಷಿಗೆ ಬಳಸಿಕೊಳ್ಳುವ ಪಂಪ್‌ಸೆಟ್‌ಗೆ ಜಮೀನಿನಲ್ಲಿಯೇ ಸೋಲಾರ್ ಘಟಕ ಸ್ಥಾಪಿಸುವುದು ಕುಸುಮ್-ಬಿ ಯೋಜನೆಯಾಗಿದೆ. ಯೋಜನೆಗಳಿಗೆ ಸರ್ಕಾರ ಶೇ.60 ಸಹಾಯಧನ ನೀಡುತ್ತದೆ. ಕುಸುಮ್-ಸಿ ಯೋಜನೆಯಲ್ಲಿ ರೈತ ಯಾವುದೇ ಬೆಳೆ ಬೆಳೆಯದೆ ಪಾಳುಬಿಟ್ಟಿರುವ 5 ಎಕರೆ ಭೂಮಿಯಲ್ಲಿ ಸೋಲಾರ್ ಘಟಕ ಸ್ಥಾಪಿಸಿ ವಿದ್ಯುತ್ ಪೂರೈಕೆಗೆ ನೀಡುವುದಾಗಿದೆ. ಇದಕ್ಕೆ ವಾರ್ಷಿಕ 25 ಸಾವಿರ ರೂ. ಬಾಡಿಗೆಯನ್ನು ಸರ್ಕಾರ ನೀಡುತ್ತದೆ. ಜಮೀನು ನೀಡುವ ರೈತರು ಅರ್ಜಿ ಸಲ್ಲಿಸಬಹುದು ಎಂದು ಮಾಹಿತಿ ನೀಡಿದರು.
ಹೊಗರೇಹಳ್ಳಿ ಗ್ರಾಮದ ಪ್ರತಿ ಮನೆಗಳಿಗೆ ನವೆಂಬರ್‌ನಲ್ಲಿ ಸಾವಿರಾರು ರೂಪಾಯಿಗಳ ವಿದ್ಯುತ್ ಬಿಲ್ ಬಂದಿದೆ. ನಾವೆಲ್ಲ ಗೃಹಜ್ಯೋತಿ ಮತ್ತು ಸೋಲಾರ್‌ಗಳ ಫಲಾನುಭವಿಗಳಾಗಿದ್ದರೂ ಏಕೆ ಹೆಚ್ಚಿನ ಮೊತ್ತದ ಬಿಲ್ ಬರುತ್ತಿದೆ ಎಂದು ಗ್ರಾಮದ ಮಲ್ಲಪ್ಪ ಪ್ರಶ್ನಿಸಿದರು. ಹೊಗರೇಹಳ್ಳಿ ಮುದ್ದೆಮನೆ ಶಿವಣ್ಣ ಮಾತನಾಡಿ, ತೋಟಕ್ಕೆ ಹಾದು ಬಂದಿರುವ 11ಕೆವಿ ಲೈನ್‌ನ ತಂತಿಗಳು ತುಂಬ ಹಳೇಯದಾಗಿವೆ. ಅದನ್ನು ಬದಲಿಸಿಕೊಡಿ ಎಂದು ಅರ್ಜಿ ನೀಡಿದರೆ, ಅದನ್ನು ಬಿಟ್ಟು ಬೇರೆ ಮೋಟಾರ್ ಚಲಿಸುವ ಲೈನ್ ಬದಲಿಸಿದ್ದಾರೆ. ಇದಕ್ಕೆ 2 ವರ್ಷಗಳಿಂದ ಅರ್ಜಿ ಸಲ್ಲಿಸುತ್ತಿದ್ದೇನೆ. ಇಲ್ಲಿಯವರೆಗೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು. ಎಇಇ ಎಂ.ಎಸ್.ನಂದೀಶ್ ಪ್ರತಿಕ್ರಿಯಿಸಿ, ಹೊಗರೇಹಳ್ಳಿಯ ಮನೆಗಳಿಗೆ ವಿದ್ಯುತ್ ಬಿಲ್ ಹೆಚ್ಚಾಗಿರುವ ಬಗ್ಗೆ ಪರಿಶೀಲನೆಗೆ ಸೂಚಿಸಿದರು. ಗ್ರಾಮದಲ್ಲಿ ಕಿಲೋಮೀಟರ್ ಉದ್ದದ ವಿದ್ಯುತ್ ತಂತಿ ಬದಲಿಸಲು ಅಂದಾಜು ಪಟ್ಟಿ ತಯಾರಿಸಿ ಶೀಘ್ರದಲ್ಲಿ ಬಗೆಹರಿಸಿಕೊಡಲಾಗುವುದು ಎಂದು ತಿಳಿಸಿದರು.
ನನ್ನ ತೋಟದ ಬಳಿ ಟಿಸಿ ಅಳವಡಿಸಿಕೊಡಿ ಎಂದು 2 ತಿಂಗಳ ಹಿಂದೆ ಅರ್ಜಿ ನೀಡಿದ್ದೇನೆ. ಆದರೆ ಇಲಾಖೆ ಗಮನಹರಿಸುತ್ತಿಲ್ಲ ಎಂದು ಬೀರೂರಿನ ಗೌತಮ್ ದೂರಿದರು. ಪಟ್ಟಣ ವ್ಯಾಪ್ತಿಯಲ್ಲಿ ಜೋತುಬಿದ್ದಿರುವ ವಿದ್ಯುತ್ ಲೈನ್ ಸರಿಪಡಿಸಿ. ಅಗತ್ಯವಿದ್ದಲ್ಲಿ ಎರಡು ಕಂಬಗಳ ನಡುವೆ ಮತ್ತೊಂದು ಕಂಬ ನೆಟ್ಟು ಮತ್ತು ಕಂಬಗಳಿಂದ ವಿದ್ಯುತ್ ಲೈನ್‌ವರೆಗೂ ಬೆಳೆದಿರುವ ಬಳ್ಳಿಗಳನ್ನು ಕತ್ತರಿಸಿ ಎಂದು ಒತ್ತಾಯಿಸಿದರು. ಎಇಇ ಎಂ.ಎಸ್.ನಂದೀಶ್ ಪ್ರತಿಕ್ರಿಯಿಸಿ, ಟಿಸಿ ಅಳವಡಿಸಲು ತೋಟ ಪಟ್ಟಣಕ್ಕೆ ಹೊಂದಿಕೊಂಡಂತಿರುವುದರಿಂದ ನೀವು ಗ್ರಾಮೀಣ ವಿದ್ಯುತ್ ಸಂಪರ್ಕ ಪಡೆಯಲು ಹೊಸ ಆರ್‌ಆರ್ ನಂಬರ್ ನೋಂದಾಯಿಸಿಕೊಳ್ಳಬೇಕು ಎಂದರು. ಹೊಸ ಪರಿವರ್ತಕವನ್ನು ಬೇಗನೆ ಅಳವಸಿಕೊಡುವುದಾಗಿ ಹೇಳಿದರು.
ಎಇ ವಿಜಯಕುಮಾರ್, ಎಸ್.ಜಿ.ರಮೇಶ್, ಟಿ.ವಿ.ವಸಂತ, ಹಿರೇನಲ್ಲೂರು ಜೆಇ ಕಿಶೋರ್‌ರಾಜ್, ಬಿ.ಟಿ.ಓಂಕಾರಮ್ಮ ಹಾಗೂ ಗ್ರಾಹಕರು ಇದ್ದರು.