ಸೋಲು ಗೆಲುವು ಒಲವು

ಭಾರತ ಮಾತ್ರವಲ್ಲದೆ ಜಾಗತಿಕ ಕ್ರೀಡಾಲೋಕದಲ್ಲಿ ಈ ವರ್ಷ ನೋವು-ನಲಿವಿಗೆ ಬರವಿರಲಿಲ್ಲ. ಕ್ರಿಕೆಟ್​ನಲ್ಲಿ ದ್ವಿಪಕ್ಷೀಯ ಸರಣಿಗಳ ಜೈತ್ರಯಾತ್ರೆ ನಡುವೆ ಚಾಂಪಿಯನ್ಸ್ ಟ್ರೋಫಿ ಫೈನಲ್ ಸೋಲು ಶಾಕ್ ನೀಡಿತು. ಮಹಿಳಾ ಕ್ರಿಕೆಟ್ ವಿಶ್ವಕಪ್​ನಲ್ಲಿ ಭಾರತ ಫೈನಲ್​ನಲ್ಲಿ ಎಡವಿದರೂ ಮಿಥಾಲಿ ರಾಜ್ ಪಡೆ ಆಟಗಾರ್ತಿಯರು ಮನೆಮಾತಾಗಿದ್ದಲ್ಲದೆ, ಭಾರಿ ಪ್ರಶಂಸೆ-ಬಹುಮಾನಗಳಿಗೆ ಪಾತ್ರರಾದರು. ಈ ನಡುವೆ ಕೊಹ್ಲಿ-ಕುಂಬ್ಳೆ, ಐಸಿಸಿ-ಬಿಸಿಸಿಐ ಭಿನ್ನಾಭಿಪ್ರಾಯವೂ ಸಾಕಷ್ಟು ಸುದ್ದಿಮಾಡಿತು. ಭಾರತೀಯ ಫುಟ್​ಬಾಲ್, ಫಿಫಾ ವಲಯದ ಮನಗೆದ್ದಿತು. ಕಬಡ್ಡಿ ಹೊಸ ಸ್ವರೂಪದೊಂದಿಗೆ ಕ್ರೇಜ್ ಹೆಚ್ಚಿಸಿಕೊಂಡರೆ, ಹಾಕಿಯಲ್ಲಿ ಸ್ಥಿರತೆ ಉಳಿಯಿತು. ಬ್ಯಾಡ್ಮಿಂಟನ್​ನಲ್ಲಿ ಗೆಲುವಿನ ‘ಶ್ರೀ’ರಕ್ಷೆ ಇದ್ದರೂ, ವಿಶ್ವ ಚಾಂಪಿಯನ್​ಷಿಪ್, ವಿಶ್ವ ಸೂಪರ್ ಸಿರೀಸ್ ಫೈನಲ್ಸ್​ನಲ್ಲಿ ‘ರಜತ ಸಿಂಧೂ’ರಕ್ಕೆ ಸಮಾಧಾನ ಪಡಬೇಕಾಯಿತು. ಅಥ್ಲೆಟಿಕ್ಸ್ ದಿಗ್ಗಜ ಉಸೇನ್ ಬೋಲ್ಟ್ ‘ಸ್ವರ್ಣ ವಿದಾಯ’ ಪಡೆಯದೆ ‘ಫೈನಲ್ ಇನ್ಸಲ್ಟ್’ ಎದುರಿಸಿದರು. ಕ್ರೀಡೆ ಎಂದ ಮೇಲೆ ಸೋಲು-ಗೆಲುವು ಸಾಮಾನ್ಯ. ಇದರೊಂದಿಗೆ ಈ ವರ್ಷ ಒಲವಿನ ಹರ್ಷವೂ ಹರಡಿತ್ತು. ಪ್ರಮುಖ ಕ್ರೀಡಾಪಟುಗಳು ಪ್ರೇಮವಿವಾಹವಾಗಿದ್ದು ವಿಶೇಷ. ವಿರಾಟ್ ಕೊಹ್ಲಿ, ಲಿಯೊನೆಲ್ ಮೆಸ್ಸಿ, ಸೆರೇನಾ ವಿಲಿಯಮ್್ಸ ಇವರಲ್ಲಿ ಪ್ರಮುಖರು.

ಹಾಕಿ ಏಷ್ಯಾಕಪ್ ಚಾಂಪಿಯನ್ಸ್

ಭಾರತ ಪುರುಷರ ಹಾಗೂ ಮಹಿಳಾ ಹಾಕಿ ತಂಡಗಳು ಏಷ್ಯಾಕಪ್​ನಲ್ಲಿ ಸ್ವರ್ಣ ಸಾಧನೆ ಮಾಡಿದವು. ಪುರುಷರ ತಂಡ ವರ್ಷಪೂರ್ತಿ ವಿಶ್ವ ನಂ.6 ಸ್ಥಾನ ಕಾಯ್ದುಕೊಂಡಿತು. ಭುವನೇಶ್ವರದಲ್ಲಿ ನಡೆದ ವಿಶ್ವ ಹಾಕಿ ಲೀಗ್ ಫೈನಲ್ಸ್​ನಲ್ಲಿ ಭಾರತ ಸತತ 2ನೇ ಬಾರಿ ಕಂಚು ಒಲಿಸಿಕೊಂಡಿತು. ಸುಲ್ತಾನ್ ಅಜ್ಲಾನ್ ಷಾ ಹಾಕಿ ಕಪ್​ನಲ್ಲಿ ಕಂಚು ಜಯಿಸಿತ್ತು.

ಯಶಸ್ವಿ ಫಿಫಾ 17 ವಯೋಮಿತಿ ವಿಶ್ವಕಪ್

ಭಾರತದ ಆತಿಥ್ಯದಲ್ಲಿ ನಡೆದ ಮೊಟ್ಟಮೊದಲ ಫಿಫಾ ಟೂರ್ನಿ ಎನ್ನುವ ಕಾರಣಕ್ಕೆ ಗಮನಸೆಳೆದಿದ್ದ ಫಿಫಾ 17 ವಯೋಮಿತಿ ವಿಶ್ವಕಪ್ ಅಕ್ಟೋಬರ್​ನಲ್ಲಿ ಯಶಸ್ವಿಯಾಗಿ ಆಯೋಜನೆಗೊಂಡಿತು. ಇಂಗ್ಲೆಂಡ್ ತಂಡ ಸ್ಪೇನ್​ಅನ್ನು ಮಣಿಸಿ ಚೊಚ್ಚಲ ಬಾರಿ ಟ್ರೋಫಿ ಗೆದ್ದುಕೊಂಡಿತು. 13 ಲಕ್ಷ ಪ್ರೇಕ್ಷಕರು ಟೂರ್ನಿಯ ಪಂದ್ಯಗಳನ್ನು ವೀಕ್ಷಿಸಿದ್ದು ದಾಖಲೆ ಎನಿಸಿತು. ಟೂರ್ನಿಯಲ್ಲಿ 3 ಲೀಗ್ ಪಂದ್ಯವಾಡಿದ ಭಾರತ ತಂಡ, ಅಮೆರಿಕ, ಘಾನಾ ಹಾಗೂ ಕೊಲಂಬಿಯಾ ವಿರುದ್ಧ ಸೋಲು ಕಂಡಿತು. ಕೊಲಂಬಿಯಾ ವಿರುದ್ಧ ಜಾಕ್ಸನ್ ಸಿಂಗ್ ಫಿಫಾ ವಿಶ್ವಕಪ್ ಇತಿಹಾಸದಲ್ಲಿ ಭಾರತ ಪರ ಮೊದಲ ಗೋಲು ದಾಖಲಿಸಿದ ಇತಿಹಾಸ ಬರೆದರು. ಅತ್ಯಂತ ಅಚ್ಚುಕಟ್ಟಾಗಿ ನಡೆದ ಟೂರ್ನಿಗೆ ಫಿಫಾ ಹಾಗೂ ವಿಶ್ವದ ಇತರ ತಂಡಗಳ ಅಧಿಕಾರಿಗಳಿಂದ ಭಾರತ ಮೆಚ್ಚುಗೆ ಪಡೆಯಿತು.

ವಿರುಷ್ಕಾ ವರ್ಷದ ಮದುವೆ

ವರ್ಷದ ಕೊನೆಯಲ್ಲಿ ಊಹಾಪೋಹಗಳ ನಡುವೆಯೂ ರಹಸ್ಯವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟವರು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮ. ಇಟಲಿಯ ಟುಸ್ಕನಿ ಐಷಾರಾಮಿ ರೆಸಾರ್ಟ್​ನಲ್ಲಿ ಅವರು 5 ವರ್ಷಗಳ ಪ್ರೀತಿಗೆ ಮದುವೆಯ ಮುದ್ರೆ ಒತ್ತಿ ಟ್ವಿಟರ್​ನಲ್ಲಿ ಅಧಿಕೃತವಾಗಿ ಪ್ರಕಟಿಸಿದರು. ದ್ರಾಕ್ಷಿತೋಟದಲ್ಲಿ ಮದುವೆಯಾಗಬೇಕೆಂಬ ಅನುಷ್ಕಾ ಕನಸು ನನಸಾಗಿಸಿದ ವಿರಾಟ್ ಬಳಿಕ ತವರಿಗೆ ಮರಳಿ ಟೀಮ್ ಇಂಡಿಯಾ ಆಟಗಾರರನ್ನು ಅರತಕ್ಷತೆಗೆ ಆಹ್ವಾನಿಸಿದರು. ಪ್ರಧಾನಿ ಮೋದಿ ಕೂಡ ದಂಪತಿಯನ್ನು ಆಶೀರ್ವದಿಸಿದ್ದು ವಿಶೇಷವಾಗಿತ್ತು.

ಮದುವೆ ವರ್ಷ: ಮಾಜಿ ವೇಗಿ ಜಹೀರ್ ಖಾನ್ ಗೆಳತಿ, ನಟಿ ಸಾಗಾರಿಕಾ ಘಾಟ್ಗೆಯನ್ನು ವರಿಸಿದರೆ, ಹಾಲಿ ವೇಗಿ ಭುವನೇಶ್ವರ್ ಕುಮಾರ್ ಬಾಲ್ಯದ ಗೆಳತಿ ನೂಪುರ್ ನಗರ್​ರನ್ನು ವಿವಾಹವಾದರು. ಫುಟ್​ಬಾಲ್ ತಾರೆ ಸುನೀಲ್ ಛೇಟ್ರಿ ಮಾಜಿ ಫುಟ್​ಬಾಲಿಗ ಸುಬ್ರತಾ ಭಟ್ಟಾಚಾರ್ಯ ಅವರ ಪುತ್ರಿ ಸೋನಮ್ನ್ನು ವರಿಸಿದರು. ಬ್ಯಾಡ್ಮಿಂಟನ್ ತಾರೆ ಅಶ್ವಿನಿ ಪೊನ್ನಪ್ಪ ತವರಿನಲ್ಲಿ ಕೊಡವ ಸಂಪ್ರದಾಯದಂತೆ ರೂಪದರ್ಶಿ ಕರಣ್ ಮೇದಪ್ಪರನ್ನು ವರಿಸಿದರು. ರಿಯೋ ಒಲಿಂಪಿಕ್ಸ್ ಪದಕ ವಿಜೇತೆ ಸಾಕ್ಷಿ ಮಲಿಕ್ ಕುಸ್ತಿಪಟುವೇ ಆಗಿರುವ ಸತ್ಯವರ್ತ್ ಕದಿಯಾನ್​ರನ್ನು ಏಪ್ರಿಲ್​ನಲ್ಲಿ ಮದುವೆಯಾದರು. ಜಾಗತಿಕವಾಗಿ ಅಮೆರಿಕ ಟೆನಿಸ್ ತಾರೆ ಸೆರೇನಾ ವಿಲಿಯಮ್್ಸ ಸೆಪ್ಟೆಂಬರ್​ನಲ್ಲಿ ಮಗುವಿಗೆ ಜನ್ಮ ನೀಡಿ ಬಳಿಕ ನವೆಂಬರ್​ನಲ್ಲಿ ಗೆಳೆಯ ರೆಡಿಟ್ ಸಹ-ಸಂಸ್ಥಾಪಕ ಅಲೆಕ್ಸಿಸ್ ಓಹಾನಿಯನ್​ರನ್ನು ವಿವಾಹವಾದರು. ಅರ್ಜೆಂಟೀನಾದ ಫುಟ್​ಬಾಲ್ ತಾರೆ ಲಿಯೊನೆಲ್ ಮೆಸ್ಸಿ ಜುಲೈನಲ್ಲಿ ದೀರ್ಘಕಾಲದ ಗೆಳತಿ ಆಂಟೊನೆಲಾ ರೊಜೊಕೊ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ದಾಖಲೆಗಳ ಸರದಾರ ವಿರಾಟ್

ವಿರಾಟ್ ಕೊಹ್ಲಿ ಟೀಮ್ ಇಂಡಿಯಾದ ಪ್ರಮುಖ ಬ್ಯಾಟ್ಸ್ ಮನ್ ಆಗಿ ಮಿಂಚಿದ್ದಲ್ಲದೆ, ನಾಯಕತ್ವದ ಜವಾಬ್ದಾರಿಯೊಂದಿಗೆ ಹಲವು ದಾಖಲೆ ನಿರ್ವಿುಸಿದರು. ಟಿ20, ಏಕದಿನ ಅಥವಾ ಟೆಸ್ಟ್ ಪಂದ್ಯವೇ ಆಗಿರಲಿ. ಪ್ರತಿಯೊಂದು ಮಾದರಿಯಲ್ಲೂ ವಿಶ್ವ ಕ್ರಿಕೆಟ್ ಲೋಕವನ್ನು ತನ್ನತ್ತ ಸೆಳೆಯುವಂತೆ ಮಾಡಿದ ಕೊಹ್ಲಿ ಒತ್ತಡದ ಸನ್ನಿವೇಶಗಳಲ್ಲಿ ಫೀಲ್ಡ್​ನಲ್ಲಿ ಸೀನಿಯರ್ ಹಾಗೂ ಮಾಜಿ ನಾಯಕ ಎಂಎಸ್ ಧೋನಿಯ ಸಲಹೆಗಳಿಂದ ಯಶಸ್ಸಿನ ಮೈಲಿಗಲ್ಲು ಸ್ಥಾಪಿಸಿದರು. ಕೊಹ್ಲಿ ಎಲ್ಲ ಮಾದರಿಯ ಕ್ರಿಕೆಟ್ ಒಳಗೊಂಡಂತೆ 46 ಪಂದ್ಯಗಳಲ್ಲಿ 68.73 ಸರಾಸರಿಯೊಂದಿಗೆ ಒಟ್ಟು 2,818ರನ್ ದಾಖಲಿಸಿ ಕ್ಯಾಲೆಂಡರ್ ವರ್ಷದಲ್ಲಿ ವಿಶ್ವ ನಂ.1 ಎನಿಸಿಕೊಂಡರು. ಈ ವರ್ಷ ಬರೋಬ್ಬರಿ 3 ದ್ವಿಶತಕ ಸಿಡಿಸಿದರು. ಜತೆಗೆ ವೃತ್ತಿಜೀವನದ ಅಂತಾರಾಷ್ಟ್ರೀಯ ಕ್ರಿಕೆಟ್ ಶತಕಗಳ ಸಂಖ್ಯೆಯನ್ನು 52ಕ್ಕೇರಿಸಿದರು. ಭಾರತವನ್ನು ವರ್ಷಾಂತ್ಯಕ್ಕೆ ಟೆಸ್ಟ್​ನಲ್ಲಿ ನಂ.1 ಮತ್ತು ಏಕದಿನ, ಟಿ20ಯಲ್ಲಿ ನಂ.2 ಪಟ್ಟಕ್ಕೇರಿಸಿದರು. ಬಾಂಗ್ಲಾದೇಶ, ಇಂಗ್ಲೆಂಡ್, ವೆಸ್ಟ್​ಇಂಡೀಸ್, ಶ್ರೀಲಂಕಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ವಿರುದ್ಧ ಆಡಿದ ಯಾವುದೇ ಮಾದರಿಯ ಕ್ರಿಕೆಟ್ ಸರಣಿಯಲ್ಲೂ ಕೊಹ್ಲಿ ಟೀಮ್ ಈ ಬಾರಿ ಸೋತಿಲ್ಲ ಅನ್ನುವುದೇ ಗಮನಾರ್ಹ ಅಂಶ. ಲಂಕಾ ಪ್ರವಾಸದ 9-0 ಸೂಪರ್​ಸ್ವೀಪ್ ಹೈಲೈಟ್ಸ್.

ಕೈಜಾರಿದ ಚಾಂಪಿಯನ್ಸ್ ಟ್ರೋಫಿ

ಭಾರತಕ್ಕೆ ನಿಗದಿತ ಓವರ್​ಗಳ ಕ್ರಿಕೆಟ್​ನಲ್ಲಿ ಹಾಲಿ ವರ್ಷ ಇದ್ದ ಅತ್ಯಂತ ದೊಡ್ಡ ಟಾಸ್ಕ್ ಎಂದರೆ ಐಸಿಸಿ ಚಾಂಪಿಯನ್ಸ್ ಟ್ರೋಫಿ ಆಗಿತ್ತು. ಇಂಗ್ಲೆಂಡ್ ಆತಿಥ್ಯದಲ್ಲಿ ಟೂರ್ನಿಯಲ್ಲಿ ಫೇವರಿಟ್ ಭಾರತ ತಂಡ ನಿರೀಕ್ಷೆಯಂತೆಯೇ ಫೈನಲ್ ಪ್ರವೇಶಿಸಿತು. ಆದರೆ, ಲೀಗ್ ಪಂದ್ಯದಲ್ಲಿ ಕಡುವೈರಿ ಪಾಕಿಸ್ತಾನವನ್ನು ಸುಲಭವಾಗಿ ಸೋಲಿಸಿದ್ದ ಭಾರತ ಪ್ರಶಸ್ತಿ ಹೋರಾಟದಲ್ಲಿ ಎಡವಿತು. ಫೈನಲ್​ನಲ್ಲಿ ಪಾಕ್ ನೀಡಿದ 339 ರನ್ ಸವಾಲು ಬೆನ್ನಟ್ಟಿದ ಭಾರತ, ಕುಸಿತ ಕಂಡಿತು. ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಸತತ ಸಿಕ್ಸರ್ ಚಚ್ಚುತ್ತಿದ್ದಂತೆ ಮತ್ತೆ ಗೆಲುವಿನ ಆಸೆ ಚಿಗುರಿತು. ಆದರೆ ಜಡೇಜಾ ಮಾಡಿದ ಎಡವಟ್ಟಿನಿಂದ ಪಾಂಡ್ಯ ರನೌಟ್ ಆದರು. ಈ ಮುನ್ನ ಆದಾಯ ಹಂಚಿಕೆ ವಿಚಾರದಲ್ಲಿ ಐಸಿಸಿ-ಬಿಸಿಸಿಐ ನಡುವೆ ಏರ್ಪಟ್ಟ ಬಿಕ್ಕಟ್ಟಿನಿಂದಾಗಿ ಭಾರತ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗವಹಿಸುವುದೇ ಅನುಮಾನವೆನಿಸಿತ್ತು. ಹರ್ಷದ ಬ್ಯಾಡ್ಮಿಂಟನ್​ಗೆ ಫೈನಲ್ ಸೋಲಿನ ವಿಘ್ನ

ಭಾರತೀಯ ಬ್ಯಾಡ್ಮಿಂಟನ್ ಪಾಲಿಗೆ ಹರ್ಷದಾಯಕ ವರ್ಷ. ಸೂಪರ್​ಸಿರೀಸ್​ಗಳಲ್ಲಿ ಏಳು ಪ್ರಶಸ್ತಿಗಳನ್ನು ಭಾರತ ಬಾಚಿಕೊಂಡಿತು. ಪಿವಿ ಸಿಂಧು (ಇಂಡಿಯಾ, ಕೊರಿಯಾ ಓಪನ್) 2 ಪ್ರಶಸ್ತಿ ಗೆದ್ದರೆ, ಕಿಡಂಬಿ ಶ್ರೀಕಾಂತ್ (ಇಂಡೋನೇಷ್ಯಾ, ಡೆನ್ಮಾರ್ಕ್, ಆಸ್ಟ್ರೇಲಿಯಾ, ಫ್ರಾನ್ಸ್) ನಾಲ್ಕು ಸೂಪರ್ ಸಿರೀಸ್ ಪ್ರಶಸ್ತಿಗಳನ್ನು ಗೆದ್ದುಕೊಂಡರು. ಸಾಯಿ ಪ್ರಣೀತ್ ಸಿಂಗಾಪುರ ಸೂಪರ್ ಸಿರೀಸ್​ನಲ್ಲಿ ಪ್ರಶಸ್ತಿ ಗೆದ್ದರು. ಹಾಗಿದ್ದರೂ, ವಿಶ್ವ ಚಾಂಪಿಯನ್​ಷಿಪ್ ಹಾಗೂ ವರ್ಲ್ಡ್ ಸೂಪರ್ ಸಿರೀಸ್ ಫೈನಲ್ಸ್​ನ ಪ್ರಶಸ್ತಿ ಸುತ್ತಿನಲ್ಲಿ ಸಿಂಧು ಸೋಲು ಕಂಡಿದ್ದು ನಿರಾಸೆಗೆ ಕಾರಣವಾಯಿತು. ವಿಶ್ವ ಚಾಂಪಿಯನ್​ಷಿಪ್​ನಲ್ಲಿ ಸಿಂಧು ಬೆಳ್ಳಿ ಜಯಿಸಿದರೆ, ಸೈನಾ ನೆಹ್ವಾಲ್ ಕಂಚಿನ ಪದಕ ಗೆದ್ದರು.

ಡಬಲ್ ಹಂಡ್ರೆಡ್ ಸ್ಪೆಷಲಿಸ್ಟ್ ರೋಹಿತ್

ಶ್ರೀಲಂಕಾ ವಿರುದ್ಧದ ಏಕದಿನ, ಟಿ20 ಸರಣಿಯಲ್ಲಿ ರೋಹಿತ್ ಶರ್ಮ ಹಂಗಾಮಿ ನಾಯಕನಾಗಿ ಮಾತ್ರವಲ್ಲದೆ ಬ್ಯಾಟ್ಸ್​ಮನ್ ಆಗಿಯೂ ವಿಶ್ವದಾಖಲೆಯೊಂದಿಗೆ ಮಿಂಚಿದರು. ಮೊಹಾಲಿಯಲ್ಲಿ ಲಂಕಾ ವಿರುದ್ದ ತಮ್ಮ 3ನೇ ಏಕದಿನ ಕ್ರಿಕೆಟ್​ದ್ವಿಶತಕ ಸಿಡಿಸಿದ್ದಲ್ಲದೆ, ಟಿ20 ಕ್ರಿಕೆಟ್​ನ ಅತ್ಯಂತ ವೇಗದ (35 ಎಸೆತ) ಶತಕದ ವಿಶ್ವದಾಖಲೆ ಸರಿಗಟ್ಟಿದರು. ಜತೆಗೆ ಕ್ಯಾಲೆಂಡರ್ ವರ್ಷವೊಂದರ ಕ್ರಿಕೆಟ್​ನಲ್ಲಿ ಅತ್ಯಧಿಕ 65 ಸಿಕ್ಸರ್ ಸಿಡಿಸಿ ದಕ್ಷಿಣ ಆಫ್ರಿಕಾದ ಎಬಿಡಿ ವಿಲಿಯರ್ಸ್​ರ (63ಸಿಕ್ಸರ್) ದಾಖಲೆ ಹಿಂದಿಕ್ಕಿದರು. ಲಂಕಾ ವಿರುದ್ಧ ಪಡೆದ ಏಕದಿನ ಮತ್ತು ಟಿ20 ಸರಣಿ ಜಯದೊಂದಿಗೆ ರೋಹಿತ್ ನಾಯಕತ್ವದ ಟಾಸ್ಕ್ ಕೂಡ ಗೆದ್ದರು.

ನಾಯಕತ್ವ ತ್ಯಜಿಸಿದ ಧೋನಿ

ವರ್ಷಾರಂಭದಲ್ಲೇ ಎಂಎಸ್ ಧೋನಿ ಟೀಮ್ ಇಂಡಿಯಾ ಸೀಮಿತ ಓವರ್ ಕ್ರಿಕೆಟ್ ನಾಯಕತ್ವಕ್ಕೆ ಗುಡ್​ಬೈ ಹೇಳಿದರು. ಆದರೆ ಆಟಗಾರನಾಗಿ ಮುಂದುವರಿದರು. ಐಪಿಎಲ್​ನಲ್ಲೂ ಪುಣೆ ಸೂಪರ್​ಜೈಂಟ್ಸ್ ನಾಯಕತ್ವದಿಂದ ಧೋನಿಯನ್ನು ಕೆಳಗಿಳಿಸಲಾಯಿತು.

ಬದಲಾದ ಮಹಿಳಾ ಕ್ರಿಕೆಟ್ ಶಕೆ

ಮಹಿಳಾ ಕ್ರಿಕೆಟ್​ಅನ್ನು ಪುರುಷರ ಕ್ರಿಕೆಟ್​ನಂತೆ ಸಮಾನ ದೃಷ್ಟಿಕೋನದಿಂದ ನೋಡಲಾರಂಭಿಸಿದ ವರ್ಷವಿದು. ಕನಿಷ್ಠ ಸೆಮಿಫೈನಲ್ ಪ್ರವೇಶಿಸುವ ಗುರಿ ಹೊಂದಿದ್ದ ಮಿಥಾಲಿ ರಾಜ್ ಸಾರಥ್ಯದ ತಂಡ ಏಕದಿನ ವಿಶ್ವಕಪ್ ಫೈನಲ್​ಗೇರಿ ಇತಿಹಾಸ ನಿರ್ವಿುಸಿತು. ಇನ್ನೊಂದು ಹೆಜ್ಜೆ ಮುಂದೆ ಹೋಗಿ ಪ್ರಶಸ್ತಿ ಗೆಲ್ಲುವ ನಿಟ್ಟಿನಲ್ಲಿ ಸ್ವಲ್ಪದರಲ್ಲಿಯೇ ಎಡವಿ ಆತಿಥೇಯ ಇಂಗ್ಲೆಂಡ್ ತಂಡಕ್ಕೆ ಶರಣಾಯಿತು. ಆದರೆ ರನ್ನರ್ ಅಪ್ ಸ್ಥಾನವೂ ಭಾರತ ಮಹಿಳಾ ಕ್ರಿಕೆಟ್​ನ ಚಿತ್ರಣವನ್ನೇ ಬದಲಾಯಿಸಿತು. ಮಹಿಳಾ ಕ್ರಿಕೆಟಿಗರೂ ಮನೆ ಮಾತಾದರು. ಕೋಟಿ ಕೋಟಿ ಬಹುಮಾನ ಮೊತ್ತವೂ ಲಭಿಸಿತು. ಹರ್ವನ್ ಪ್ರೀತ್, ಸ್ಮೃತಿ ಮಂದನಾ, ಕನ್ನಡತಿಯರಾದ ವೇದಾ ಕೃಷ್ಣಮೂರ್ತಿ, ಸ್ಪಿನ್ನರ್ ರಾಜೇಶ್ವರಿ ಗಾಯಕ್ವಾಡ್ ಸ್ಟಾರ್ ಪಟ್ಟಕ್ಕೇರಿದರು.

ಚಾನುಗೆ ಸ್ವರ್ಣ

ವಿಶ್ವದಾಖಲೆಯ 194 ಕೆಜಿ ಭಾರ ಎತ್ತುವ ಮೂಲಕ ಸೈಕೋಮ್ ಮೀರಾಬಾಯಿ ಚಾನು ಅಮೆರಿಕದ ಅನಾಹಿಮ್ಲ್ಲಿ ನಡೆದ ವಿಶ್ವ ವೇಟ್​ಲಿಫ್ಟಿಂಗ್ ಚಾಂಪಿಯನ್​ಷಿಪ್​ನಲ್ಲಿ ಸ್ವರ್ಣ ಜಯಿಸಿದರು. 1994, 1995ರಲ್ಲಿ ಕರ್ಣಂ ಮಲ್ಲೇಶ್ವರಿ ಬಳಿಕ ವಿಶ್ವ ಚಾಂಪಿಯನ್​ಷಿಪ್​ನಲ್ಲಿ ಸ್ವರ್ಣ ಪದಕ ಜಯಿಸಿದ ಭಾರತದ ಮೊದಲ ಲಿಫ್ಟರ್ ಎನ್ನುವ ಗೌರವ ಸಂಪಾದಿಸಿದರು.

ಬೋಲ್ಟ್​ಗೆ ಸಿಗದ ಬೆಸ್ಟ್ ವಿದಾಯ

ವಿಶ್ವದ ದಿಗ್ಗಜ ಸ್ಪ್ರಿ ್ರಟರ್ ಉಸೇನ್ ಬೋಲ್ಟ್ ಗೆ ಸ್ವರ್ಣದ ವಿದಾಯ ಸಿಗಲಿಲ್ಲ. ಲಂಡನ್​ನಲ್ಲಿ ನಡೆದ ವಿಶ್ವ ಚಾಂಪಿಯನ್​ಷಿಪ್ ತಮ್ಮ ಕೊನೆಯ ಟೂರ್ನಿ ಎಂದಿದ್ದ ಬೋಲ್ಟ್, 100 ಮೀಟರ್​ನಲ್ಲಿ ಕಂಚಿನ ಪದಕ ಪಡೆದರು. ಜಸ್ಟೀನ್ ಗ್ಯಾಟ್ಲಿನ್, ಬೋಲ್ಟ್​ರ ಸ್ಮರಣೀಯ ವಿದಾಯವನ್ನು ಹಾಳು ಮಾಡಿದರು. 4/100ಮೀ.ನಲ್ಲಿ ಕೊನೆಯ ಬಾರಿಗೆ ಓಡಿದ ಬೋಲ್ಟ್, ಕಾಲು ನೋವಿನಿಂದಾಗಿ ಟ್ರಾ್ಯಕ್​ನಲ್ಲಿಯೇ ಕುಸಿದು ಬಿದ್ದು ಓಟ ಪೂರ್ಣಗೊಳಿಸಲಿಲ್ಲ.

ನಿವೃತ್ತಿ: ಆಶಿಶ್ ನೆಹ್ರಾ, ಯೂನಿಸ್ ಖಾನ್, ಮಿಸ್ಬಾ ಉಲ್​ಹಕ್ (ಕ್ರಿಕೆಟ್)

ಟೀಮ್ ಇಂಡಿಯಾ ಸತತ ಗೆಲುವಿನ ದಾಖಲೆ

ಸತತ 9 ಟೆಸ್ಟ್ ಸರಣಿ ಗೆದ್ದ ಭಾರತ ಅಷ್ಟೆ ಸರಣಿ ಗೆದ್ದಿರುವ ಆಸೀಸ್, ಇಂಗ್ಲೆಂಡ್ ದಾಖಲೆ ಸರಿಗಟ್ಟಿದ್ದು, ಹೊಸ ವರ್ಷ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಇದನ್ನು ಮುರಿಯುವ ಅವಕಾಶವಿದೆ. ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸರಣಿಯ ಪುಣೆ ಟೆಸ್ಟ್​ನಲ್ಲಿ ಆಘಾತ ಎದುರಿಸಿದ ಬಳಿಕ ತಿರುಗೇಟು ನೀಡಿ ಬಾರ್ಡರ್-ಗಾವಸ್ಕರ್ ಟ್ರೋಫಿಯನ್ನು ಮರಳಿ ಪಡೆಯಿತು. ಆಸೀಸ್​ಗೆ ವರ್ಷಾಂತ್ಯದ ಆಶಸ್ ಸರಣಿ ಸಂತಸ ನೀಡಿತು. ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಸರಣಿಯನ್ನು ಇನ್ನೂ 2 ಪಂದ್ಯ ಉಳಿದಿರುವಂತೆ 3-0ಯಿಂದ ಗೆದ್ದಿತು. ದಕ್ಷಿಣ ಆಫ್ರಿಕಾದ ಡೇವಿಡ್ ಮಿಲ್ಲರ್ ಕಳೆದ ಅಕ್ಟೋಬರ್​ನಲ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಇತಿಹಾಸದ ಅತಿ ವೇಗದ ಶತಕ ಸಿಡಿಸಿದರು. ಬಾಂಗ್ಲಾದೇಶ ತಂಡದ ವಿರುದ್ಧ ಕೇವಲ 35 ಎಸೆತಗಳಲ್ಲಿ ಮಿಲ್ಲರ್ ಈ ಸಾಧನೆ ಮಾಡಿದರು. ಇದನ್ನು ರೋಹಿತ್ ಶರ್ಮ ವರ್ಷಾಂತ್ಯದಲ್ಲಿ ಸರಿಗಟ್ಟಿದರು.

ಲೀಗ್​ಗಳಲ್ಲಿ ಏನೇನಾದವು…

ಹಾಕಿ ಇಂಡಿಯಾ ಲೀಗ್: ಜನವರಿ-ಫೆಬ್ರವರಿಯಲ್ಲಿ ನಡೆದ 5ನೇ ಆವೃತ್ತಿಯ ಹಾಕಿ ಇಂಡಿಯಾ ಲೀಗ್​ನಲ್ಲಿ ಕಳಿಂಗಾ ಲ್ಯಾನ್ಸರ್ಸ್ ಚಾಂಪಿಯನ್ ಆಯಿತು. ದಬಾಂಗ್ ಮುಂಬೈ ರನ್ನರ್​ಅಪ್ ಸ್ಥಾನ ಪಡೆಯಿತು.

ಐಪಿಎಲ್: ಹತ್ತನೇ ಆವೃತ್ತಿಯ ಐಪಿಎಲ್ ಎನ್ನುವ ಕಾರಣಕ್ಕೆ ಮಹತ್ವ ಪಡೆದಿದ್ದ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡ ಚಾಂಪಿಯನ್ ಆಯಿತು. ಹೈದರಾಬಾದ್​ನಲ್ಲಿ ನಡೆದ ರೋಚಕ ಫೈನಲ್​ನಲ್ಲಿ ರೋಹಿತ್ ಶರ್ಮ ಸಾರಥ್ಯದ ಮುಂಬೈ 1 ರನ್​ನಿಂದ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡವನ್ನು ಸೋಲಿಸಿತು. ವಿರಾಟ್ ಕೊಹ್ಲಿ ಸಾರಥ್ಯದ ಆರ್​ಸಿಬಿ ಐಪಿಎಲ್​ನಲ್ಲಿ ಮೊಟ್ಟಮೊದಲ ಬಾರಿಗೆ ಕೊನೆಯ ಸ್ಥಾನದ ಅವಮಾನ ಎದುರಿಸಿತು. ಇದು ಗುಜರಾತ್ ಲಯನ್ಸ್ ಹಾಗೂ ಪುಣೆ ಸೂಪರ್​ಜೈಂಟ್ಸ್ ತಂಡಗಳ ಕೊನೆಯ ಐಪಿಎಲ್ ಆವೃತ್ತಿ ಎನಿಸಿತು.

ಪ್ರೊ ಕಬಡ್ಡಿ ಲೀಗ್: 5ನೇ ಆವೃತ್ತಿಯ ಪಿಕೆಎಲ್​ನಲ್ಲಿ ನಾಲ್ಕು ಹೊಸ ತಂಡಗಳು ಸೇರಿದ್ದರಿಂದ ಪಂದ್ಯಗಳ ಸಂಖ್ಯೆ 60 ರಿಂದ 138ಕ್ಕೆ ಏರಿಕೆಯಾದವು. ಫೈನಲ್​ನಲ್ಲಿ ಪಟನಾ ಪೈರೇಟ್ಸ್ ತಂಡ, ಗುಜರಾತ್ ಫಾರ್ಚುನ್​ಜೈಂಟ್ಸ್ ತಂಡವನ್ನು ಮಣಿಸಿ ಹ್ಯಾಟ್ರಿಕ್ ಚಾಂಪಿಯನ್ ಆಯಿತು. ಗುಜರಾತ್ ಅಲ್ಲದೆ, ಯುಪಿ ಯೋಧಾ, ತಮಿಳ್ ತಲೈವಾಸ್, ಹರಿಯಾಣ ಸ್ಟೀಲರ್ಸ್ ಲೀಗ್​ಗೆ ಸೇರಿಕೊಂಡ ಹೊಸ ತಂಡಗಳು.

ಪಿಬಿಎಲ್: 3ನೇ ಆವೃತ್ತಿಯ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್​ನಲ್ಲಿ ಚೆನ್ನೈ ಸ್ಮ್ಯಾಷರ್ಸ್ ತಂಡ ಚಾಂಪಿಯನ್ ಆಯಿತು. ಜ.1 ರಿಂದ 14ರವರೆಗೆ ನಡೆದ ಲೀಗ್​ನಲ್ಲಿ 6 ತಂಡಗಳಷ್ಟೇ ಭಾಗವಹಿಸಿದ್ದವು. ಮುಂಬೈ ರ್ಯಾಕೆಟ್ಸ್ ತಂಡ ರನ್ನರ್​ಅಪ್ ಎನಿಸಿತು.

ಐಎಸ್​ಎಲ್: 3ನೇ ಆವೃತ್ತಿಯ ಇಂಡಿಯನ್ ಸೂಪರ್ ಲೀಗ್​ನಲ್ಲಿ ಅಥ್ಲೆಟಿಕೋ ಡಿ ಕೋಲ್ಕತ ಚಾಂಪಿಯನ್ ಆಯಿತು. ಫೈನಲ್​ನಲ್ಲಿ ಕೇರಳ ಬ್ಲಾಸ್ಟರ್ಸ್ ತಂಡವನ್ನು ಪೆನಾಲ್ಟಿ ಶೂಟೌಟ್​ನಲ್ಲಿ 4-3 ರಿಂದ ಮಣಿಸಿ ಕೋಲ್ಕತ ಪ್ರಶಸ್ತಿ ಗೆದ್ದುಕೊಂಡಿತು.

ಐ-ಲೀಗ್: 10ನೇ ಆವೃತ್ತಿಯ ಐ-ಲೀಗ್​ನಲ್ಲಿ ಹೊಸ ತಂಡ ಐಜ್ವಾಲ್ ಎಫ್​ಸಿ ಚಾಂಪಿಯನ್ ಆಯಿತು. ಇದು ಹಾಲಿ ಚಾಂಪಿಯನ್ ಬೆಂಗಳೂರು ಎಫ್​ಸಿ ಆಡಿದ ಕೊನೆಯ ಐ-ಲೀಗ್ ಎನಿಸಿಕೊಂಡಿತು. ಲೀಗ್ ಮುಗಿದ ಬೆನ್ನಲ್ಲಿಯೇ ಬಿಎಫ್​ಸಿ, ಐಎಸ್​ಎಲ್​ನ ಪರಿಧಿಗೆ ಸೇರಿಕೊಂಡಿತು.

ಕೊಹ್ಲಿ-ಕುಂಬ್ಳೆ ಭಿನ್ನಮತ

ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಹಾಗೂ ಕೋಚ್ ಅನಿಲ್ ಕುಂಬ್ಳೆ ನಡುವಿನ ಭಿನ್ನಮತ ವರ್ಷದ ದೊಡ್ಡ ವಿವಾದ. ಚಾಂಪಿಯನ್ಸ್ ಟ್ರೋಫಿಗೂ ಕೆಲ ದಿನಗಳ ಮುನ್ನ ಮುಖ್ಯ ಕೋಚ್​ಗಾಗಿ ಬಿಸಿಸಿಐ ಜಾಹೀರಾತು ನೀಡಿದ್ದು, ಇದಕ್ಕೆ ಪುಷ್ಠಿ ನೀಡಿತು. ಚಾಂಪಿಯನ್ಸ್ ಟ್ರೋಫಿ ಬಳಿಕ ನಡೆದ ವಿಂಡೀಸ್ ಪ್ರವಾಸಕ್ಕೆ ಕುಂಬ್ಳೆ ಅವಧಿಯನ್ನು ಬಿಸಿಸಿಐ ಮುಂದುವರಿಸಿದರೂ, ಟೀಮ್ ಇಂಡಿಯಾ ಬಾರ್ಬಡೋಸ್​ಗೆ ತೆರಳುವ ವೇಳೆಯಲ್ಲೇ ಕುಂಬ್ಳೆ ಕೋಚ್ ಸ್ಥಾನದಿಂದ ಕೆಳಗಿಳಿದಿದ್ದರು. ಕೊಹ್ಲಿ ಆಸೆಯಂತೆ ರವಿಶಾಸ್ತ್ರಿ ಮತ್ತೆ ಕೋಚ್ ಆಗಿ 2019ರ ವಿಶ್ವಕಪ್​ವರೆಗೆ ನೇಮಕಗೊಂಡರು.

ವರ್ಷದ ವಿವಾದಗಳು

# ಡೇವಿಸ್ ಕಪ್​ನಿಂದ ಪೇಸ್ ಡ್ರಾಪ್

# ಸ್ಟೀವನ್ ಸ್ಮಿತ್ ಬ್ರೇನ್​ಫೇಡ್

# ರೋಲಾಂಟ್ ಓಲ್ಟ್​ಮನ್ಸ್ ವಜಾ

# ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಅನುರಾಗ್ ಠಾಕೂರ್ ವಜಾ

# ಎಸ್. ಶ್ರೀಶಾಂತ್ ನಿಷೇಧ ತೆರವಿಗೆ ಒಪ್ಪದ ಕೇರಳ ಹೈಕೋರ್ಟ್

ಗ್ರಾಂಡ್​ಸ್ಲಾಂ ಚಾಂಪಿಯನ್ಸ್

ಆಸ್ಟ್ರೇಲಿಯನ್ ಓಪನ್: ರೋಜರ್ ಫೆಡರರ್, ಸೆರೇನಾ ವಿಲಿಯಮ್್ಸ

ಫ್ರೆಂಚ್ ಓಪನ್: ರಾಫೆಲ್ ನಡಾಲ್, ಜೆಲೆನಾ ಒಸ್ತಾಪೆಂಕೋ

ವಿಂಬಲ್ಡನ್: ರೋಜರ್ ಫೆಡರರ್, ಗಾರ್ಬಿನ್ ಮುಗುರುಜಾ

ಯುಎಸ್ ಓಪನ್: ರಾಫೆಲ್ ನಡಾಲ್, ಸ್ಲೋವನ್ ಸ್ಟೀಫನ್ಸ್

ಗ್ರಾಂಡ್​ಸ್ಲಾಂನಲ್ಲಿ ಇಂಡಿಯನ್ಸ್

ಆಸ್ಟ್ರೇಲಿಯನ್ ಓಪನ್: ಮಿಶ್ರ ಡಬಲ್ಸ್: ಸಾನಿಯಾ ಮಿರ್ಜಾ-ಇವಾನ್ ಡೊಡಿಗ್ (ರನ್ನರ್​ಅಪ್)

ಫ್ರೆಂಚ್ ಓಪನ್: ಮಿಶ್ರ ಡಬಲ್ಸ್: ರೋಹನ್ ಬೋಪಣ್ಣ-ಗ್ಯಾಬ್ರಿಲ್ ದಬ್ರೋಸ್ಕಿ (ಚಾಂಪಿಯನ್ಸ್)

ರಣಜಿ ಎಡವಟ್ಟು

ಕರ್ನಾಟಕ ತಂಡ ರಣಜಿಯಲ್ಲಿ ಈ ಬಾರಿ ಲೀಗ್ ಹಂತದಲ್ಲಿ ಅಜೇಯವಾಗಿ ಉಳಿದಿದ್ದಲ್ಲದೆ, ಕ್ವಾರ್ಟರ್​ಫೈನಲ್​ನಲ್ಲಿ ಬಲಿಷ್ಠ ಮುಂಬೈ ತಂಡವನ್ನು ಮಣಿಸಿತ್ತು. ಆದರೆ ವಿದರ್ಭ ವಿರುದ್ಧ ಸೋಲು ಕಂಡು ಫೈನಲ್​ಗೇರುವಲ್ಲಿ ವಿಫಲವಾಯಿತು. ಮಹಾರಾಷ್ಟ್ರ ವಿರುದ್ಧ ಮಯಾಂಕ್ ಅಗರ್ವಾಲ್ 304 ರನ್ ಗಳಿಸಿದಲ್ಲದೆ, ಒಂದೇ ತಿಂಗಳಲ್ಲಿ ಸಾವಿರ ರನ್ ಸರದಾರ ಎನಿಸಿದರು.

ಮತ್ತೆರಡು ವಿಶ್ವ ಕಿರೀಟ

ಪಂಕಜ್ ಆಡ್ವಾಣಿ ಕ್ಯೂ ಕ್ರೀಡೆಯಲ್ಲಿ ಮತ್ತೆರಡು ವಿಶ್ವ ಪ್ರಶಸ್ತಿ ಗೆದ್ದು ಒಟ್ಟು ಸಂಖ್ಯೆಯನ್ನು 18ಕ್ಕೇರಿಸಿಕೊಂಡರು. ಐಬಿಎಸ್​ಎಫ್ ವಿಶ್ವ ಸ್ನೂಕರ್ ಹಾಗೂ ಬಿಲಿಯರ್ಡ್ಸ್ ಚಾಂಪಿಯನ್​ಷಿಪ್​ನಲ್ಲೂ ಚಾಂಪಿಯನ್​ಪಟ್ಟ ಅಲಂಕರಿಸಿದರು.

ವರ್ಷದ ಕಮ್್ಯಾಕ್

ಸುಶೀಲ್ ಕುಮಾರ್: ನವೆಂಬರ್​ನಲ್ಲಿ ರಾಷ್ಟ್ರೀಯ ಕುಸ್ತಿ ಮೂಲಕ ಸುಶೀಲ್ ಕುಮಾರ್ 3 ವರ್ಷಗಳ ಬಳಿಕ ಮರಳಿದರು. ಬಳಿಕ ದಕ್ಷಿಣ ಆಫ್ರಿಕಾದಲ್ಲಿ ನಡೆದ ಕಾಮನ್ವೆಲ್ತ್ ರೆಸ್ಲಿಂಗ್ ಚಾಂಪಿಯನ್​ಷಿಪ್​ನಲ್ಲಿ ಚಿನ್ನ ಗೆದ್ದು ಅಂತಾರಾಷ್ಟ್ರೀಯ ಕುಸ್ತಿಗೂ ಮರಳಿದರು.

ಮೇರಿ ಕೋಮ್ ಸ್ಟಾರ್ ಬಾಕ್ಸರ್ 35 ವರ್ಷದ ಮೇರಿ ಕೋಮ್ ನವೆಂಬರ್​ನಲ್ಲಿ ನಡೆದ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್​ಷಿಪ್​ನಲ್ಲಿ ಸ್ವರ್ಣ ಗೆದ್ದು ರಿಂಗ್​ಗೆ ಮರಳಿದರು.

Leave a Reply

Your email address will not be published. Required fields are marked *