ಸೋರುತಿಹುದು ಸರ್ಕಾರಿ ಕಾಲೇಜ್ ಛಾವಣಿ

ಕುಮಟಾ: ಕುಮಟಾದ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಸೋರುತ್ತಿದ್ದು, ವಿದ್ಯಾರ್ಥಿಗಳು ಸೋರಿಕೆ ಇಲ್ಲದ ಮೂಲೆಯಲ್ಲೇ ಕುಳಿತು ಪಾಠ ಕೇಳುವ ಪರಿಸ್ಥಿತಿ ಬಂದೊದಗಿದೆ.

ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್​ಗೆ ಸ್ವಂತ ಕಟ್ಟಡವಿನ್ನೂ ನಿರ್ಮಾಣ ಹಂತದಲ್ಲೇ ಇದೆ. ಸದ್ಯ ಡಯಟ್​ನ ಹಳೆಯ ಕಟ್ಟಡದಲ್ಲಿ ಸರ್ಕಾರಿ ಕಾಲೇಜ್ ನಡೆಯುತ್ತಿದೆ. ಕಾಲೇಜು ಆರಂಭವಾದಾಗಿನಿಂದಲೂ ಒಂದಿಲ್ಲೊಂದು ಸಮಸ್ಯೆ ಇದೆ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಸೌಲಭ್ಯ ಕಲ್ಪಿಸುವಲ್ಲಿ ಶಿಕ್ಷಣ ವ್ಯವಸ್ಥೆ ವಿಫಲವಾಗಿದೆ. ಪ್ರತಿ ವರ್ಷ ಮಳೆಗಾಲದಲ್ಲಿ ಪ್ರತಿಯೊಂದು ಕೋಣೆಯೂ ಒಂದಿಲ್ಲೊಂದು ಕಡೆ ಸೋರುವುದು ಮಾಮೂಲು ಎನ್ನಲಾಗಿದ್ದು, ಕಾಲೇಜ್​ನ ಕಾರಿಡಾರ್​ನಲ್ಲೂ ಸೋರಿಕೆ ಕಂಡುಬರುತ್ತಿದೆ.

ಕೆಲವೆಡೆ ಛಾವಣಿ ಮುರಿದಿದೆ. ಕಂಬಗಳ ಆಸರೆ ನೀಡಲಾಗಿದೆ. ಛಾವಣಿಗೆ ಅಲ್ಲಲ್ಲಿ ತಗಡಿನ ಶೀಟ್​ಗಳನ್ನು ಹಾಕಲಾಗಿದೆ. ಪರಿಸ್ಥಿತಿ ಅಯೋಮಯವಾಗಿದೆ.

ಕಾಲೇಜ್ ಪರಿಸರದಲ್ಲಿ ಇರಬೇಕಾದ ಸ್ವಚ್ಛತೆ, ಸುರಕ್ಷತೆ ಹಾಗೂ ಬದ್ಧತೆಗಳು ಎಲ್ಲೂ ಕಾಣಸಿಗುವುದಿಲ್ಲ. ಬಿಡಾಡಿ ದನಗಳ ಅಡ್ಡೆಯಂತಾಗಿದೆ.

ಡಯಟ್ ಆವಾರದಲ್ಲಿ ಕಾಲೇಜ್​ಗೆ ಹೊಸ ಕಟ್ಟಡ ನಿರ್ವಣವಾಗುತ್ತಿದೆ. ಅನುದಾನ ಕೊರತೆಯಿಂದ ವಿಳಂಬವಾಗಿ ಕೆಲಸ ಸಾಗಿದೆ. ಇಂಥ ಸ್ಥಿತಿಯಲ್ಲಿ ಅಪಾಯಕಾರಿಯಾಗಿರುವ ಈಗಿನ ಕಟ್ಟಡದ ಬಗ್ಗೆ ಶಿಕ್ಷಣ ಇಲಾಖೆ ಹಾಗೂ ಕಾಲೇಜ್ ಅಭಿವೃದ್ಧಿ ಸಮಿತಿ ಗಂಭೀರವಾಗಿ ಚಿಂತಿಸಬೇಕಾದ ಅಗತ್ಯವಿದೆ.

ಕಾಲೇಜ್​ನಲ್ಲಿ 1300 ಕ್ಕೂ ಹೆಚ್ಚು ವಿದ್ಯಾರ್ಥಿಗಳು ದಾಖಲಾತಿ ಹೊಂದಿದ್ದಾರೆ. 12 ಕೊಠಡಿಗಳಲ್ಲಿ ತರಗತಿ ನಡೆಸಲಾಗುತ್ತಿದೆ. ಪುರಸಭೆ ಎದುರಿನ ಕನ್ನಡ ಶಾಲೆಯಲ್ಲಿ ಹಾಗೂ ಡಯಟ್​ನ ಪ್ರಾಯೋಗಿಕ ಶಾಲೆಯಲ್ಲಿ ಕೆಲ ತರಗತಿಗಳನ್ನು ನಡೆಸಲಾಗುತ್ತಿದೆ. ಕಟ್ಟಡ ತೀರಾ ಹಳೆಯದ್ದು. ಛಾವಣಿ ಪೂರ್ಣ ಬದಲಾಯಿಸಬೇಕಾದಂಥ ಸ್ಥಿತಿ ಇದೆ. ದುರಸ್ತಿ ಕಷ್ಟ. ಅನುದಾನವೂ ಸಾಲುತ್ತಿಲ್ಲ. ಸ್ವಂತ ಕಟ್ಟಡ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. | ಗೀತಾ ಎಸ್. ವಾಲೀಕಾರ ಸರ್ಕಾರಿ ಪದವಿ ಪೂರ್ವ ಕಾಲೇಜ್ ಪ್ರಾಚಾರ್ಯು

Leave a Reply

Your email address will not be published. Required fields are marked *